ನಮ್ಮ ಸಮಾಜದ ಸುತ್ತಮುತ್ತಲು ನಡೆಯುವ ಅಪರಾಧ ಪ್ರಕರಣಗಳ ನೈಜ ಘಟನೆಗಳನ್ನು ಆಧರಿಸಿ ಸಿರೀಸ್ ರೂಪದಲ್ಲಿ ತೋರಿಸುತ್ತಿರುವ ಕಲರ್ಸ್ ಕನ್ನಡ ವಾಹಿನಿಯ ‘ಶಾಂತಂ ಪಾಪಂ’ ಟೀಂ, ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಕೊಲೆಯಾಗಿದ್ದಾರೆ ಎನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಇಟ್ಟುಕೊಂಡು ಸ್ಕಿಟ್ ಮಾಡಿದೆ ಎನ್ನಲಾಗಿದೆ.
ಶಾಂತಂ ಪಾಪಂ ನಲ್ಲಿ ಅಪರಾಧ ಲೋಕವನ್ನು ವೈಭವೀಕರಿಸದೆ ಇದ್ದಿದನ್ನು ಇದ್ದಹಾಗೆ ನೈಜ ಕಥೆಗಳನ್ನು ಅನಾವರಣಗೊಳಿಸಲಾಗುತ್ತಿದೆ. ಅಪರಾಧ ಜಗತ್ತಿನ ಹಿಂದಿರುವ ಮನಸ್ಥಿತಿಯಿಂದ ಉಂಟಾಗುವ ಅವಘಡಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಇಂತಹ ತಂಡ ಈಗ ನಟ ದರ್ಶನ್ ಅಂಡ್ ಗ್ಯಾಂಗ್ ಪ್ರಕರಣವನ್ನು ಸ್ಕಿಟ್ ಮಾಡಿದ್ದು ಅದಕ್ಕೆ ‘ಡೇರ್ ಡೆವಿಲ್ ದೇವದಾಸ್’ ಎಂದು ಹೆಸರಿಡಲಾಗಿದೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಕೊಲೆಯಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಸುತ್ತ ನಡೆಯುವ ಘಟನೆಗಳ ಬಗ್ಗೆ ಕಲರ್ಸ್ ಕನ್ನಡದ ಶಾಂತಂ ಪಾಪಂ ಶೋನಲ್ಲಿ ಇಂದು ಜೂನ್ 27ರ ಶುಕ್ರವಾರ ರಾತ್ರಿ 10;30ಕ್ಕೆ ತೋರಿಸಿಕೊಡಲಿದೆ ಎನ್ನಲಾಗಿದೆ. ಇವು ಪಾಪದ ಕತೆಗಳು, ಆದ್ರೆ ಪಾಠ ಕಲಿಸುವ ಕತೆಗಳು ಎಂದು ಹೇಳಲಿದೆ.
2017ರಲ್ಲಿ ಶುರುವಾದ ಈ ಶೋ ,ಇಂದಿಗೂ ಜನಪ್ರಿಯತೆಯನ್ನು ಕಾಯ್ದುಕೊಂಡಿದೆ. ಬಡವರಿಗೆ ಶ್ರೀಮಂತರಿಗೆ ಒಂದೇ ಕಾನೂನು. ಇಲ್ಲಿ ನ್ಯಾಯ ಸಿಗುವುದು ತಡವಾಗಬಹುದು ಆದರೆ ಸತ್ಯ ಎಂದಾದರೂ ಹೊರ ಬಂದೆ ಬರುತ್ತದೆ. ಅಪರಾಧಿಗಳಿಗೆ ಶಿಕ್ಷೆ ಖಂಡಿತ ಆಗುತ್ತದೆ ಎಂಬ ನ್ಯಾಯದ ಹೋರಾಟಕ್ಕೆ ಸ್ಪೂರ್ತಿ ತುಂಬುವ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ.
ನೈಜ್ಯ ಕತೆಗಳನ್ನೇ ಇಟ್ಟುಕೊಂಡು ಸಮಾಜದಲ್ಲಿ ಏನು ಮಾಡಬಾರದು, ಕಾನೂನು ಮೀರಿ ಏನನ್ನಾದರೂ ಮಾಡಿದರೆ ಏನೆಲ್ಲ ಆಗುತ್ತದೆ ಎಂಬ ಸ್ಕಿಟ್ಗಳನ್ನು ಮಾಡುತ್ತ ಜನರನ್ನು ಎಚ್ಚರಿಸುತ್ತ ಬಂದಿರುವ ಶಾತಂ ಪಾಪಂ ಟೀಂ ಈಗ ದರ್ಶನ್ ಘಟನೆಯನ್ನು ಸ್ಕಿಟ್ ಮಾಡಿದೆ ಎಂದು ಮಾಹಿತಿ ತಿಳಿದುಬಂದಿದೆ.