ಚೆನ್ನೈ: ಮಧ್ಯಪ್ರದೇಶ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಕ್ಕಳ ಸರಣಿ ಸಾವಿಗೆ ಕಾರಣವಾದ ಕೋಲ್ಡ್ ರಿಫ್ ಕೆಮ್ಮಿನ ಸಿರಪ್ ತಯಾರಿಸುವ ಶ್ರೇಸನ್ ಫಾರ್ಮಾಸ್ಯುಟಿಕಲ್ಸ್ ಕಾರ್ಖಾನೆ ಮುಖ್ಯಸ್ಥ ಎಸ್.ರಂಗನಾಥನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಪ್ರಕರಣ ದಾಖಲಾದ ನಂತರ ಮೊನ್ನೆಯಿಂದಲೇ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದರು.
ಈ ದುರಂತ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಮಧ್ಯಪ್ರದೇಶ ಪೊಲೀಸರು, ಚೆನ್ನೈ ಪೊಲೀಸರ ಸಹಕಾರದಿಂದ ರಂಗನಾಥನ್ ಅವರನ್ನು ಇಂದು ಬೆಳಗಿನ ಜಾವ ಬಂಧಿಸಿದ್ದಾರೆ. ನಂತರ ಅವರನ್ನು ಸುಂಗುವರಚತ್ರಂ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಧ್ಯ ಪೊಲೀಸ್ ವಶದಲ್ಲಿರುವ ರಂಗನಾಥನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮಧ್ಯಪ್ರದೇಶದ ಛಿಂದ್ವಾರಕ್ಕೆ ಸ್ಥಳಾಂತರಿಸಲು ಪೊಲೀಸರು ಅನುಮತಿ ಕೋರಲಿದ್ದಾರೆ. ಮಧ್ಯಪ್ರದೇಶದಲ್ಲಿ ಮಕ್ಕಳ ಸರಣಿ ಸಾವು ಸಂಭವಿಸುತ್ತಿದ್ದಂತೆ ಚೆನ್ನೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ, ಕಾಂಚಿಪುರಂ ಜಿಲ್ಲೆಯ ಸುಂಗುವರಚತ್ರಂನಲ್ಲಿರುವ ಶ್ರೇಸನ್ ಫಾರ್ಮಾಸ್ಯುಟಿಕಲ್ಸ್ ಕಾರ್ಖಾನೆಗೆ ತಮಿಳುನಾಡು ಸರ್ಕಾರ ಬೀಗ ಜಡಿದು ಕಂಪನಿಗೆ ಶೋಕಾಸ್ ನೋಟಿಸ್ ನೀಡಿತ್ತು.
ವಿಷಕಾರಿ ದ್ರಾವಣವಾದ ಡೈಎಥಿಲಿನ್ ಗ್ಲೈಕಾಲ್ (ಡಿಇಜಿ) ಮತ್ತು ಎಥಿಲಿನ್ ಗ್ಲೈಕಾಲ್ (ಇಜಿ) ಮಿಶ್ರಣ ಮಾಡಲಾಗಿದ್ದ ಸಿರಪ್ ಸೇವಿಸಿದ 20 ಮಕ್ಕಳು ಮೂತ್ರಪಿಂಡ ಸೋಂಕಿನಿಂದ ಮೃತಪಟ್ಟಿದ್ದರು. ಈ ಸಿರಪ್ ನೀಡಲಾದ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೆಲವು ಮಕ್ಕಳು ಅಸುನೀಗಿದ್ದರೆ ಇನ್ನೂ ಕೆಲವು ಮಕ್ಕಳು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.