ಮೈಸೂರು: ಕೆ ಆರ್ ಎಸ್ ರಸ್ತೆಯಲ್ಲಿ 12 ಆಸ್ಪತ್ರೆಗಳು ನಿರ್ಮಾಣವಾಗಿದ್ದು, ಇದರಿಂದ ಐದು ಜಿಲ್ಲೆಗಳ ಸುಮಾರು 77 ಲಕ್ಷ ಜನರು ಪ್ರಯೋಜನ ಪಡೆದು ಕೊಳ್ಳುತ್ತಿದ್ದಾರೆ. ಈ ಆಸ್ಪತ್ರೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣಕರ್ತರಾಗಿದ್ದು ಕೆ ಆರ್ ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದು ಸೂಕ್ತವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆ ಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವಂತೆ ಕೋರಿ ಸ್ಥಳೀಯ ಶಾಸಕ ಕೆ ಹರೀಶ್ ಗೌಡ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿದ್ದಾರೆ. ಆ ಪತ್ರದಲ್ಲಿ ವಿವಿಧ ಆಸ್ಪತ್ರೆಗಳ ನಿರ್ಮಾಣಕ್ಕಾಗಿ ಸಿದ್ದರಾಮಯ್ಯ ನೀಡಿರುವ ಅನುದಾನದ ವಿಚಾರ ಪ್ರಸ್ತಾಪಿಸಿದ್ದಾರೆ ಎಂದರು.
ರಾಜ್ಯ ಸರ್ಕಾರದ ನಡಾವಳಿ ಪ್ರಕಾರ ವೃತ್ತ, ರಸ್ತೆ, ಉದ್ಯಾನವನಕ್ಕೆ ಹೆಸರಿಡಲು ತೀರ್ಮಾನ ಕೈಗೊಳ್ಳಲಾಗುತ್ತದೆ. ಇದರ ಪ್ರಕಾರವೇ ಮಹಾನಗರ ಆಯುಕ್ತರು ಪಾಲಿಕೆ ಸ್ಥಾಯಿ ಸಮಿತಿಗೆ ಕಳುಹಿಸಿದ್ದಾರೆ. ಸ್ಥಾಯಿ ಸಮಿತಿ ಈ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಇದಕ್ಕೆ ಕೆಲ ಸಂಘ ಸಂಸ್ಥೆಯವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.
ಕೆ ಆರ್ ಎಸ್ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂದು ನಾಮಕರಣ ಮಾಡಿಲ್ಲ. ಈ ಬಗ್ಗೆ ಎಲ್ಲಿಯೂ ಉಲ್ಲೇಖವಾಗಿಲ್ಲ. ಮಾಜಿ ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದಾರೆ. ಕಟುವಾಗಿ ಟೀಕೆ ಮಾಡುತ್ತಾ ಬಂದಿದ್ದವರು, ಅಪರೂಪಕ್ಕೆ ಸಿದ್ದರಾಮಯ್ಯ ಹೆಸರಿಟ್ಟರೆ ತಪ್ಪೇನು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಬಿಜೆಪಿಯವರ ಹಿಡನ್ ಅಜೆಂಡಾ ಅರ್ಥ ಮಾಡಿಕೊಂಡು ಅವರು ಹೇಳಿದ್ದಾರೆ ಎಂದರು.
ಬಿಜೆಪಿಯವರಿಗೆ ಬರೀ ವಿರೋಧ ಮಾಡುವುದನ್ನು ಬಿಟ್ಟರೇ ಬೇರೇನೂ ಗೊತ್ತಿಲ್ಲ. ನಾಥುರಾಂ ಗೋಡ್ಸೆ ರಸ್ತೆ ಎಂದು ಹೆಸರಿಡಲಾಗಿದೆ. ನರೇಂದ್ರ ಮೋದಿ ಸ್ಟೇಡಿಯಂ ಇದೆ. ಜೈಲಿಗೆ ಹೋಗಿ ಬಂದಿರುವ ಅಮಿತ್ ಶಾ ಹೆಸರಿನಲ್ಲೂ ರಸ್ತೆ ಇದೆ. ಇದಕ್ಕೆಲ್ಲಾ ಬಿಜೆಪಿಯವರು ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಪಡಿಸಿರು.
ಪ್ರತಾಪ್ ಸಿಂಹ ಹತ್ತು ವರ್ಷಗಳ ಬಳಿಕ ನಿಜ ಹೇಳಿದ್ದಾರೆ. ಅವರು ಎಲ್ಲಾದರೂ ಸಿಕ್ಕಿದರೆ ಕಾಫಿ ಕೊಡಿಸುವೆ. ನಿಜ ಹೇಳಿರುವ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.