ಬೆಂಗಳೂರು: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅಪಾರ ಜ್ಞಾನ, ದೂರದೃಷ್ಟಿಯ ಆಲೋಚನೆ ಹಾಗೂ ಸಮರ್ಥ ನಾಯಕತ್ವವು ಭಾರತದ ನೆಲದಲ್ಲಿ ಅವರನ್ನು ಅಮರವಾಗಿಸಲಿದೆ.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರದ ಯೋಜನೆಗಳಿಗೆ ಅವರಿಂದ ದೊರೆತ ಮಾರ್ಗದರ್ಶನ ಹಾಗೂ ಬೆಂಬಲವನ್ನು ಸ್ಮರಿಸಲೇಬೇಕು. ಯುಪಿಎ ಸರ್ಕಾರದ ಆಹಾರ ಹಕ್ಕು ಕಾಯ್ದೆಯು ನಮ್ಮ ನಾಡಿನ ಪ್ರಗತಿಯ ಹಾದಿಗೆ ಹೊಸ ಆಯಾಮ ಕಲ್ಪಿಸಿಕೊಟ್ಟಿದೆ.
ಮಾತಿಗಿಂತ ಕೃತಿ ಲೇಸೆಂಬ ನುಡಿಗಟ್ಟಿಗೆ ಅನ್ವರ್ಥದಂತೆ ಬದುಕಿದ ಓರ್ವ ಮುತ್ಸದ್ದಿ ನಾಯಕನನ್ನು ಕಳೆದುಕೊಂಡ ಭಾರತವಿಂದು ಬಡವಾಗಿದೆ. ಮೃತರ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗ ಮತ್ತು ಕೋಟ್ಯಂತರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ತಮ್ಮ ಸಂತಾಪದಲ್ಲಿ ಹೇಳಿದ್ದಾರೆ.
ಈಶ್ವರ ಖಂಡ್ರೆ ಸಂತಾಪ:
ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ (92) ಅವರ ನಿಧನಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ಸೂಚಿಸಿದ್ದಾರೆ.
ಡಾ. ಮನಮೋಹನ ಸಿಂಗ್ ಅವರು, ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಮೂಲಕ ಭಾರತದ ಆರ್ಥಿಕ ಸುಧಾರಣೆಯ ಶಿಲ್ಪಿ ಎಂದೇ ಖ್ಯಾತರಾಗಿದ್ದರು. ದೇಶದದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿದ್ದರು. ಅವರ ನಿಧನದಿಂದ ಭಾರತ ಸಜ್ಜನ ರಾಜಕಾರಣಿ ಮತ್ತು ಉತ್ತಮ ಆಡಳಿತಗಾರರನ್ನು ಕಳೆದುಕೊಂಡಿದೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಮಾಹಿತಿ ಹಕ್ಕು ಕಾಯಿದೆಯ ಮೂಲಕ ಜನ ಸಾಮಾನ್ಯರಿಗೆ ಸರ್ಕಾರದಿಂದ ಮಾಹಿತಿ ಪಡೆಯುವ ಹಕ್ಕು ನೀಡಿದ, ಶಿಕ್ಷಣದ ಹಕ್ಕು ಕಾಯಿದೆ ಜಾರಿಗೆ ತಂದು ಯಾರೊಬ್ಬರೂ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗದಂತೆ ಕಾಳಜಿ ವಹಿಸಿದ ಮುತ್ಸದ್ದಿ ಡಾ. ಮನಮೋಹನಸಿಂಗ್ ಅವರ ದೂರದರ್ಶಿತ್ವದ ನಿರ್ಧಾರಗಳು ಅವರನ್ನು ಸದಾ ಸ್ಮರಿಸುವಂತೆ ಮಾಡುತ್ತವೆ ಎಂದೂ ಅವರು ಹೇಳಿದ್ದಾರೆ.
ಮಾಜಿ ಪ್ರಧಾನಿಯವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಡಾ. ಸಿಂಗ್ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಬಂಧು ಮಿತ್ರರು ಹಾಗೂ ಅಪಾರ ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ರಿಜರ್ವ್ ಬ್ಯಾಂಕ್ ಗೌವರ್ನರ್ ಆಗಿ, ವಿಶ್ವ ವಿದ್ಯಾಲಯಗಳ ಹಣಕಾಸು ಆಯೋಗದ ಅಧ್ಯಕ್ಷರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಹಣಕಾಸು ಸಚಿವರಾಗಿ ನಂತರ 2004ರಿಂದ 2014ರವರೆಗೆ ಪ್ರಧಾನಮಂತ್ರಿಗಳಾಗಿ ಭಾರತವನ್ನು ಮುನ್ನಡೆಸಿದ ಡಾ. ಮನಮೋಹನಸಿಂಗ್ ಅವರ ನಿಧನದಿಂದ ಈ ದೇಶ ಒಬ್ಬ ಮೇಧಾವಿ ಅರ್ಥಶಾಸ್ತ್ರಜ್ಞರನ್ನು ಕಳೆದುಕೊಂಡಿದೆ ಎಂದು ಅವರು ಶೋಕಿಸಿದ್ದಾರೆ.