ಮುಡಾ ಹಗರಣ: ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ, ಸಚಿವ ಸಂಪುಟ ಕರೆದ ಸಿಎಂ ಸಿದ್ದರಾಮಯ್ಯ

Most read

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅನುಮತಿ ನೀಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸಂಜೆ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿದ್ದು, ಮುಂದಿನ ಕಾನೂನು ಹೋರಾಟ ಮತ್ತು ಆಡಳಿತದ ಮೇಲೆ ಯಾವುದೇ ಒತ್ತಡ ಬೀಳದಂತೆ ನೋಡಿಕೊಳ್ಳಲು ಇನ್ನು ಹಲವು ವಿಷಯಗಳ ಬಗ್ಗೆ ಚರ್ಚೆಯಾಗಲಿದೆ ಎನ್ನಲಾಗಿದೆ. ಇಂದು ಸಂಜೆ ಐದು ಗಂಟೆಗೆ ಸಚಿವ ಸಂಪುಟ ಸಭೆ ಕರೆಯಲಾಗಿದೆ.

ಈಗಾಗಲೇ ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಕಾನೂನು ಸಲಹೆಗಾರ ಪೊನ್ನಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಬಂದಿದ್ದು, ಹಲವು ವಿಷಯಗಳ ಬಗ್ಗೆ ಚರ್ಚೆಯಾಗಲಿದೆ.

ಟಿ. ಜೆ. ಅಬ್ರಾಹಂ ಎಂಬುವವರು ಮುಡಾ ಬದಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿಯನ್ನು ಕೇಳಿದ್ದರು. ಶನಿವಾರ ರಾಜ್ಯಪಾಲರು ಅನುಮತಿ ನೀಡಿದ್ದಾರೆ.

ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕಡತವನ್ನು ರಾಜ್ಯಪಾಲರ ಕಛೇರಿಯಿಂದ ಕಳಿಸಲಾಗಿದೆ. ಅಲ್ಲದೇ ದೂರುದಾರ ಟಿ. ಜೆ. ಅಬ್ರಾಹಂಗೆ ರಾಜಭವನಕ್ಕೆ ಮತ್ತಷ್ಟು ದಾಖಲೆಗಳ ಜೊತೆ ಬರುವಂತೆ ದೂರವಾಣಿ ಕರೆ ಮಾಡಲಾಗಿದೆ.

‘ನನ್ನ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ರಾಜಭವನಕ್ಕೆ ಬರಲು ರಾಜ್ಯಪಾಲರು ನನಗೆ ಸೂಚನೆ ನೀಡಿದ್ದಾರೆ. ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿಯಾಗಲಿದ್ದೇನೆ’ ಎಂದು ಅಬ್ರಾಹಂ ಇಂದು ಮಾಧ್ಯಮಗಳ ಜೊತೆ ಹೇಳಿಕೊಂಡಿದ್ದಾರೆ.

More articles

Latest article