ಹೊಸದಿಲ್ಲಿ: ಕೇಂದ್ರ ಸರ್ಕಾರದಿಂದ ಮಂಡಿಸಲಾಗುತ್ತಿರುವ 2024-25ನೇ ಆರ್ಥಿಕ ಸಾಲಿನ ಬಜೆಟ್ ಮಂಡನೆಗೂ ಮುನ್ನ ಪೂರ್ವ ಸಮಾಲೋಚನೆಗಳ ಭಾಗವಾಗಿ, ಸಮಾನ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಅನುಕೂಲವಾಗುವಂತೆ ನಿಕಟ ಪಾಲುದಾರರಾಗಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಶಾಸಕಾಂಗದೊಂದಿಗೆ) ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಸಭೆಗಳನ್ನು ನಡೆಸಲಾಗುತ್ತದೆ. ಹೀಗಾಗಿ ಬಜೆಟ್ ಪೂರ್ವ ಚರ್ಚಾ ಸಭೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರ ಬರೆದಿದ್ದಾರೆ.
ಮುಂಬರುವ ಕೇಂದ್ರ ಬಜೆಟ್ 2024-25 (ನಿಯಮಿತ)ಗಾಗಿ ಚರ್ಚೆಗಳ ಮಾಡಲಾಗುತ್ತಿದೆ. ಇದಕ್ಕೆ ನಿಮ್ಮ ಸಲಹೆಗಳು ಮತ್ತು ಆಲೋಚನೆಗಳನ್ನು ಸೂಕ್ತವಾಗಿ ಪಡೆಯಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜೂ.22ರಂದು ಬಜೆಟ್ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಬೆಳಗ್ಗೆ 10.00 ಗಂಟೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಸಭೆಗೆ ಹಾಜರಾಗುವಂತೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಸಭೆಯಲ್ಲಿ ಸೂಕ್ಷ್ಮ-ಆರ್ಥಿಕ ನೀತಿ ಮತ್ತು ಹಣಕಾಸಿನ ಬಲವರ್ಧನೆಗೆ ಗಮನ ಕೊಡಬೇಕಾದ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ನಮ್ಮ ಬೆಳವಣಿಗೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯನ್ನು ಉಳಿಸಿಕೊಳ್ಳಲು ಸವಾಲುಗಳನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯ ಮತ್ತು ಸಹಕಾರದ ಅಗತ್ಯ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ನಿಮ್ಮ ಸಲಹೆಗಳನ್ನು ಎದುರು ನೋಡುತ್ತಿದೆ. ಈ ಸಭೆಯಲ್ಲಿ ಭಾಗವಹಿ ನಿಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಬೇಕು ವಿನಂತಿಸಲಾಗಿದೆ ಎಂದು ಪತ್ರ ಬರೆಯಲಾಗಿದೆ.
ಜೂ.22ರಂದು ರಾಜ್ಯದಲ್ಲಿ ತಮಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳು ನಿಗದಿಯಾಗಿದ್ದರಿಂದ ಪ್ರೀ ಬಜೆಟ್ ಮೀಟಿಂಗ್‌ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನನ್ನ ಬದಲಾಗಿ ನನ್ನ ಸಂಪುಟದ ಸಹೋದ್ಯೋಗಿ ಕಂದಾಯ ಸಚಿವ ಕೃಷ್ಣ ಬೈರೆಗೌಡ ಭಾಗಿಯಾಗಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.