ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಬೇಡಿಕೆಗಳ ಪರಿಶೀಲಿಸಿ ಸೂಕ್ತ ಕ್ರಮ: ಸಿದ್ದರಾಮಯ್ಯ

Most read

ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ ಹಾಗೂ ಇನ್ನಿತರ ಸೇವಾ ಬೇಡಿಕೆಗಳಿಗೆ ಸಂಬಂಧಿಸಿದಂತೆ ಒಂದು ತಿಂಗಳೊಳಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಬುಧವಾರ ಕೃಷ್ಣಾದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಯೋಗದೊಂದಿಗೆ ಅವರ ಬೇಡಿಕೆಗಳ ಕುರಿತು ಸಭೆ ನಡೆಸಿದರು.

ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳೊಂದಿಗೆ, ಕಾನೂನು ತೊಡಕುಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸಮಗ್ರವಾಗಿ ಸಮಾಲೋಚನೆ ನಡೆಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.


ಸಭೆಯಲ್ಲಿ ಮಾತನಾಡಿದ ನಿಯೋಗದ ಪ್ರತಿನಿಧಿಗಳು 2017ರಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ಮಾಡಿದ ಬಳಿಕ ಸೇವಾ ನಿಯಮಗಳನ್ನು ಪೂರ್ವಾನ್ವಯವಾಗುವಂತೆ ಅನುಷ್ಠಾನಗೊಳಿಸಬಾರದು. ಪದವೀಧರರಾಗಿರುವ 40 ಸಾವಿರಕ್ಕೂ ಹೆಚ್ಚು ಇರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ಆದೇಶ ಹೊರಡಿಸಬೇಕು. ನೇಮಕಾತಿ 7ನೇ ತರಗತಿವರೆಗೆ ಎಂದು ಹೇಳಿ ಈಗ 5ನೇ ತರಗತಿವರೆಗೆ ಎಂದು ಹಿಂಬಡ್ತಿ ನೀಡಲಾಗಿದೆ.


ಆಯಾ ಜಿಲ್ಲಾ ನೇಮಕಾತಿ ಸಮಿತಿಯ ಮಟ್ಟದಲ್ಲಿ ಮುಖ್ಯೋಪಾಧ್ಯಾಯ ಹುದ್ದೆಗಳಿಗೆ ಈ ಮೊದಲು ಮುಂಬಡ್ತಿ ನೀಡಲಾಗುತ್ತಿತ್ತು. ಅದನ್ನು ಕಳೆದ ಮೂರು ವರ್ಷಗಳಿಂದ ನಿಲ್ಲಿಸಲಾಗಿದ್ದು, ಇದನ್ನು ಮುಂದುವರೆಸಬೇಕು.
ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿಯಲ್ಲಿ, ಮುಂಬಡ್ತಿ ಹುದ್ದೆಗಳನ್ನು ಶೇ.50ರಷ್ಟು ನಿಗದಿಪಡಿಸಬೇಕು. ಮುಂಬಡ್ತಿ ಸಂದರ್ಭದಲ್ಲಿ ಸೇವಾ ಜೇಷ್ಟತೆಯನ್ನು ಪರಿಗಣಿಸಬೇಕು ಎಂದು ಶಿಕ್ಷಕರ ಸಂಘದ ನಿಯೋಗ ಮನವಿ ಸಲ್ಲಿಸಿತು.


ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು, ನಸೀರ್‌ ಅಹ್ಮದ್‌, ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ, ಸಾಹಿತಿ ಬರಗೂರು ರಾಮಚಂದ್ರಪ್ಪ, ನಿರಂಜನಾರಾಧ್ಯ, ಇಲಾಖಾ ಪ್ರದಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

More articles

Latest article