ಸಿಎಂ ಕಾರ್ಯಕ್ರಮದಲ್ಲಿ  ಬಿಜೆಪಿ ಕಾರ್ಯಕರ್ತರ ವರ್ತನೆ ಸರಿಯೇ?: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೇಸರ

Most read

 ಬೆಳಗಾವಿ : ಬಿಜೆಪಿ ನಾಯಕರು ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ಸದನದ ಒಳಗೆ ಮತ್ತು  ಹೊರಗೆ ನಿಂದಿಸಿದರೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಲೆಕೊಟ್ಟು ನಾವು ಶಾಂತಿಯಿಂದ ವರ್ತಿಸುತ್ತಿದ್ದೇವೆ. ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾಷಣದ ವೇಳೆ ಬಿಜೆಪಿ ಕಾರ್ಯಕರ್ತರು ಅತಿರೇಕವಾಗಿ ವರ್ತಿಸಿದ್ದು ಸರಿಯಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಳಗಾವಿಯಲ್ಲಿ 25 ಸಾವಿರ ಜನರು ಭಾಗವಹಿಸಿದ್ದ ವಿಭಾಗ ಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಷಣ ಮಾಡುವಾಗ, ಬಿಜೆಪಿ ಕಾರ್ಯಕರ್ತರು ಮಧ್ಯದಲ್ಲಿ ಪ್ರವೇಶಿಸಿ ಕಪ್ಪುಪಟ್ಟಿ ಪ್ರದರ್ಶಿಸುವುದು ಎಷ್ಟರ ಮಟ್ಟಿಗೆ ಸರಿ. ಮುಂದಿನ ದಿನಗಳಲ್ಲಿ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈ ರೀತಿ ಮಾಡಿದರೆ, ನಮ್ಮ ಕಾರ್ಯಕರ್ತರನ್ನು ಅವರು ಸುಮ್ಮನೇ ಬಿಡುತ್ತಾರೆಯೇ ಎಂದು ಪ್ರಶ್ನಿಸಿದರು.

ಇಂತಹ ಘಟನೆಗಳು ಮರುಕಳಿಸಿದರೆ, ನಮ್ಮ ಕಾರ್ಯಕರ್ತರು ಸುಮ್ಮನೆ ಕೂರುವುದಿಲ್ಲ. ನಮ್ಮ ಕಾರ್ಯಕರ್ತರಿಗೂ ರೋಷಾವೇಷ, ಪಕ್ಷದ ಬಗ್ಗೆ ಅಭಿಮಾನ, ಕಾಳಜಿ ಇದೆ. ರಾಜ್ಯಾದ್ಯಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಮಾನಿಗಳು ಇದ್ದಾರೆ. ನಮ್ಮ ಮುಖ್ಯಮಂತ್ರಿಗಳು ಮಾತನಾಡುವಾಗ ಕಪ್ಪು ಬಟ್ಟೆ  ಹಾರಿಸಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರಿಗೆ  ಶೋಭೆ ತರುವುದಿಲ್ಲ ಎಂದರು.‌

 ಆಕಸ್ಮಿಕ ಘಟನೆ:

ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ಮೇಲೆ ಕೈ ಮಾಡಲು ಮುಂದಾದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪೊಲೀಸ್ ಅಧಿಕಾರಿ ಮೇಲೆ ಕೈ ಮಾಡಲು ಮುಂದಾಗಿದ್ದು ಆ ಕ್ಷಣದಲ್ಲಿ ಆ ರೀತಿ ಆಗಿರಬಹುದು. ಆ ಸಂದರ್ಭದಲ್ಲಿ ಆದ ಆಕಸ್ಮಿಕ ಘಟನೆ ಇದಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಸಿದ್ದರಾಮಯ್ಯನವರು ಹಿರಿಯರು, ಅವರು ಅಧಿಕಾರಿಗಳಿಗೆ ಗೌರವ ನೀಡುವ‌ ವಿಷಯದಲ್ಲಿ ತಮ್ಮ ಚೌಕಟ್ಟನ್ನು ಎಂದೂ ಮೀರಿದವರಲ್ಲ. ಆ ಸಂದರ್ಭದಲ್ಲಿ ಅಂತಹ ಘಟನೆ ನಡೆಯಬಾರದಿತ್ತು. ಸಿದ್ದರಾಮಯ್ಯನವರಿಗೆ ಇನ್ನೊಂದು ಹೆಸರೇ ಹಿಂದುಳಿದ ವರ್ಗ, ತುಳಿತಕ್ಕೊಳಗಾದವರ ಧ್ವನಿ ಎನ್ನುತ್ತೇವೆ. ಸಿದ್ದರಾಮಯ್ಯನವರ ದೊಡ್ಡ ಗುಣವನ್ನು ಎಲ್ಲರೂ ಹಾಡಿಹೊಗಳುತ್ತಾರೆ. ಆದರೆ, ಆ ಒಂದು ಘಟನೆ ನಡೆಯಬಾರದಿತ್ತು ಎಂದರು.

 ಮೇ ತಿಂಗಳಲ್ಲಿ ಮೂರು ತಿಂಗಳ ಗೃಹಲಕ್ಷ್ಮಿ ಹಣ:

ಬಾಕಿ ಉಳಿದಿರುವ ಮೂರು ತಿಂಗಳ (ಜನವರಿ, ಫೆಬ್ರವರಿ, ಮಾರ್ಚ್) ಗೃಹಲಕ್ಷ್ಮಿ ಹಣವನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ನೀಡಿದರು.

ಮೂರು ತಿಂಗಳ ಹಣ ಬಿಡುಗಡೆಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದ್ದು, ಒಂದು ವಾರ ಒಂದು ತಿಂಗಳ ಹಣ, ಮತ್ತೊಂದು ವಾರ ಮತ್ತೊಂದು ತಿಂಗಳ ಹಣವನ್ನು ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

More articles

Latest article