ಲೋಕಸಭೆ ಚುನಾವಣೆ ಫಲಿತಾಂಶ, ಹಗರಣಗಳ ಆರೋಪದ ನಂತರ ಇದೀಗ ಹೈಕಮಾಂಡ್ ಭೇಟಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ದೆಹಲಿಗೆ ತೆರಳಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಲ್ಲವೂ ತೀರ್ಮಾನ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ನಾನು ಹಾಗೂ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದೇವೆ. ಪಕ್ಷ ಹಾಗೂ ಸರ್ಕಾರದ ವಿಚಾರವಾಗಿ ಚರ್ಚೆ ನಡೆಸುತ್ತೇವೆ ಎಂದು ದೆಹಲಿ ಭೇಟಿ ಬಗ್ಗೆ ಹೇಳಿಕೆ ನೀಡಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕೆಲವು ಸಚಿವರ ತಲೆದಂಡವಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ನಂತರ ಅಷ್ಟೊಂದು ರಾಜಕೀಯ ಬೆಳವಣಿಗೆಗಳು ನಡೆದಿರಲಿಲ್ಲ. ಆದರೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ನಾಗೇಂದ್ರ ರಾಜೀನಾಮೆ ನೀಡಬೇಕಾಯಿತು. ಅದಾದ ನಂತರ ಮುಡಾ ಸೇರಿದಂತೆ ಸಾಲು ಹಗರಣಗಳ ಆರೋಪ ಕಾಂಗ್ರೆಸ್ ಸರ್ಕಾರದ ಮೇಲೆ ಕೇಳಿಬಂದಿರುವುದು ಹೈಕಮಾಂಡ್ ಚರ್ಚೆಗೆ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.