ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅನುಮತಿ ನೀಡಿರುವುದನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ಶನಿವಾರ ಪ್ರತಿಭಟನೆ ನಡೆಸಿ ರಾಜಭವನ ಚಲೋ ನಡೆಸಿದೆ.
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಸಂಸದರು ಭಾಗವಹಿಸಿದರು.
ನಂತರ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಿಂದ ರಾಜಭವನದವರೆಗೂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಆಡಳಿತ ಪಕ್ಷದ ನಾಯಕರು ‘ರಾಜಭವನ ಚಲೋ’ ಮೆರವಣಿಗೆ ನಡೆಸುತ್ತಿದರು. ಈ ವೇಳೆ ರಾಜ್ಯಪಾಲರು ತೊಲಗಲಿ ಎಂದು ಘೋಷಣೆ ಕೂಗುವ ಮೂಲಕ ಕಾಂಗ್ರೆಸ್ ನಾಯಕರು ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಜನಾರ್ದನ ರೆಡ್ಡಿ ಅವರ ವಿರುದ್ಧ ತನಿಖೆಗೆ, ಕ್ರಮಕ್ಕೆ ಅನುಮತಿ ನೀಡದ ರಾಜ್ಯಪಾಲರ ತಾರತಮ್ಯ ನೀತಿಯನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು. ನಂತರ ಪಾದಯಾತ್ರೆ ನಡೆಸಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂದರ್ಭದಲ್ಲಿ ಗೆಹ್ಲೋಟ್ ತಮ್ಮ ವಿರುದ್ಧ ತಾರತಮ್ಯ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.