Friday, February 7, 2025

“ಪ್ರೇಮಲೋಕದ ಕ್ಲಿಕ್ಕು-ಕಿಕ್ಕು”

Most read

ಪ್ರೀತಿಯಲ್ಲಿರುವುದು ಒಟ್ಟು ಏಳು ಹಂತಗಳು: ದಿಲ್ಕಶೀ, ಉನ್ಸ್, ಮೊಹಬ್ಬತ್, ಅಕೀದತ್, ಇಬಾದತ್, ಜುನೂನ್ ಮತ್ತು ಮೌತ್.

ಹೀಗೊಂದು ಮಾತು ಅಭಿಷೇಕ್ ಚೌಬೆ ನಿರ್ದೇಶನದ “ದೇಢ್ ಇಶ್ಕಿಯಾ” ಚಿತ್ರದಲ್ಲಿ ಬರುತ್ತದೆ. ದಿಲ್ಕಶೀ ಎಂದರೆ ಆಕರ್ಷಣೆ. ಇದು ಪ್ರೀತಿಯ ಮೊದಲ ಹಂತ. ಉನ್ಸ್ ಎಂದರೆ ಮೋಹ. ಇಂಗ್ಲಿಷಿನಲ್ಲಿ “Calf Love” ಅಂತಾರಲ್ಲ, ಅಂಥದ್ದು. ಆಕರ್ಷಣೆಯ ನಂತರದ ಹಂತವದು. ಒಂಥರಾ ಹುಡುಗಾಟದ ಲೇಪವಿರುವ ಬಾಲಿಶ, ಚೆಲ್ಲುಚೆಲ್ಲಾದ ಕನವರಿಕೆ. ನಂತರದ ಹಂತ ಅಕೀದತ್. ಅಕೀದತ್ ಎಂದರೆ ನಂಬಿಕೆ. ಮುಂದಿನ ಹಂತ ಇಬಾದತ್. ಇಲ್ಲಿರುವುದು ಅಪ್ಪಟ ಆರಾಧನಾ ಭಾವ. ತಾನು ಪ್ರೇಮಿಸುವ ವ್ಯಕ್ತಿಯಲ್ಲಿ ದೈವತ್ವವನ್ನು ಕಾಣುವ ಹಂತ.

ಇಬಾದತ್ತಿನ ನಂತರ ಬರುವುದು ಜುನೂನ್. ಜುನೂನ್ ಎಂದರೆ ತೀವ್ರ ವ್ಯಾಮೋಹ. ಇದನ್ನು ಒಂದು ರೀತಿ ಹುಚ್ಚುತನವೆಂದರೂ ಅಡ್ಡಿಯಿಲ್ಲ. ಈ ಹಂತದಲ್ಲಿರುವ ಪ್ರೇಮಿಗಳು ತಮ್ಮ ಪ್ರೇಮಿ-ಪ್ರೀತಿಯನ್ನು ಪಡೆದುಕೊಳ್ಳಲು ಅದ್ಯಾವ ಸಾಹಸಕ್ಕೂ ಕೈ ಹಾಕಬಲ್ಲವರು. ಕೊನೆಯ ಹಂತ ಮೌತ್ ನದ್ದು. ಮೌತ್ ಪದಕ್ಕೆ ಸಾವು ಎಂಬ ಅರ್ಥವಿದ್ದರೂ ಇಲ್ಲಿ ನಿಜವಾಗಿ ಸಾಯುವುದು ಪ್ರೇಮಿಸುವ ವ್ಯಕ್ತಿಯ ತನ್ನತನ. ನೀನೇ ನನ್ನ ಜಗತ್ತು, ನೀನಿಲ್ಲದೆ ಬಾಳಲಾರೆ ಎಂಬಂತಿನ ಸ್ಥಿತಿ. ಪ್ರೀತಿಯ ವಿವಿಧ ಹಂತಗಳನ್ನು ಸೂಫಿ ಕವಿಗಳು ಹಿಡಿದಿಡುವುದು ಹೀಗೆ.

ಮೇಲೆ ಪಟ್ಟಿ ಮಾಡಿರುವ ಪ್ರೀತಿಯ ಹಂತಗಳು ಈ ಶತಮಾನಕ್ಕೆ ಅನ್ವಯವಾಗಬಲ್ಲದೇ ಎಂದು ನಾವೆಲ್ಲ ಒಮ್ಮೆ ಚರ್ಚೆ ಮಾಡುತ್ತಿದ್ದೆವು. ನಿಜವೇನೆಂದರೆ ಪ್ರೀತಿಯಲ್ಲಿ ಇದು ಸಾಧ್ಯ ಎಂಬುದು ನಮಗೂ ಗೊತ್ತು. ಆದರೆ ಪ್ರೀತಿಯೆಂಬ ಚಂಚಲ ಹಕ್ಕಿಗೆ ಇಂದು ರೆಕ್ಕೆಗಳು ನೂರಾರು. ಬಣ್ಣಗಳು ಸಾವಿರಾರು. “ಲವ್ ಆಜ್ ಕಲ್” ಚಿತ್ರದಲ್ಲಿ ಎರಡು ಪೀಳಿಗೆಯ ಈರ್ವರು ಪುರುಷರು ಪ್ರೀತಿಗೆ ವಿಭಿನ್ನವಾಗಿ ತೆರೆದುಕೊಳ್ಳುವಂತೆ, ಪ್ರೀತಿಯ ಲೌಕಿಕ ಅವತಾರಗಳು ಕಾಲಕಾಲಕ್ಕೆ ಬದಲಾಗುತ್ತಾ ಬಂದಿವೆ. ಜಗತ್ತಿನಲ್ಲಿ ಶಾಶ್ವತವಾಗಿರುವ ಏಕೈಕ ಸಂಗತಿಯೆಂದರೆ ಬದಲಾವಣೆ ಎಂಬುದು ಪ್ರೀತಿಗೂ ಹೊರತಲ್ಲ.

ಇಂಟರ್ನೆಟ್ ಮತ್ತು ಸೋಷಿಯಲ್ ಮೀಡಿಯಾಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿ ಬದಲಾದ ನಂತರ ಪ್ರೀತಿಯ ವಿಚಾರದಲ್ಲೂ ಆಯಾಮಗಳು ಒಂದಿಷ್ಟು ಬದಲಾಗುತ್ತಾ ಸಾಗಿದವು. ಉದಾಹರಣೆಗೆ ಇಂಟರ್ನೆಟ್ ಬಂದ ಹೊಸತರಲ್ಲಿ ಚಂದದ ಒಂದು ಇ-ಮೈಲ್ ಬರೆಯುವುದು ಕೂಡ ನಮ್ಮಲ್ಲಿ ಭಾರೀ ರೋಮಾಂಚನವನ್ನು ತರುತ್ತಿತ್ತು. ನನ್ನ ಬ್ಲಾಗ್ ಬರಹವೊಂದನ್ನು ಓದಿ, ದೂರದ ಸೆನೆಗಲ್ ನಿಂದ ಓದುಗರೊಬ್ಬರು ಪತ್ರ ಬರೆಯುತ್ತಿದ್ದರೆ ಜಗತ್ತು ನಿಜಕ್ಕೂ “ಗ್ಲೋಬಲ್ ವಿಲೇಜ್” ಅಂತೆಲ್ಲ ಅನ್ನಿಸುತ್ತಿತ್ತು. ಇನ್ನು ಬೆಂಕಿಪೊಟ್ಟಣದಂತಿದ್ದ ಸ್ಥಳೀಯ ಸೈಬರ್ ಕೆಫೆಗಳ ಕ್ಯೂಬಿಕಲ್ ಗಳ ಒಳಗೆ ಹರೆಯದ ಮಕ್ಕಳ ಗೇಮಿಂಗ್, ಚಾಟಿಂಗ್, ಬ್ರೌಸಿಂಗ್ ಗಳು ಒಂದು ಕಾಲದಲ್ಲಿ ಬಹಳ ಜೋರಾಗಿಯೇ ನಡೆಯುತ್ತಿದ್ದವು.

ನನ್ನ ಪರಿಚಿತರೊಬ್ಬರು ಸುಮಾರು ಐದು ವರ್ಷಗಳ ಕಾಲ ಓರ್ವ ಆಗಂತುಕ ಅಮೆರಿಕನ್ ವ್ಯಕ್ತಿಯೊಂದಿಗೆ ಪತ್ರವ್ಯವಹಾರವನ್ನು ನಡೆಸುತ್ತಿದ್ದರು. ಯಾವತ್ತೂ ಮುಖತಃ ಭೇಟಿಯಾಗದ ಈ ಇಬ್ಬರು ಪರಸ್ಪರರನ್ನು “ಪೆನ್ ಫ್ರೆಂಡ್ಸ್” ಎಂದು ಬೇರೆ ಕರೆಯುತ್ತಿದ್ದರು. ಇವೆಲ್ಲ ಆ ಕಾಲಕ್ಕೆ ಹೊಸದೇ ಆಗಿತ್ತು. ಆದರೆ ನನಗೆ ನೆನಪಿರುವಂತೆ ಈ ಆನ್ಲೈನ್ ರೊಮ್ಯಾನ್ಸ್ ಎಂಬುದು ಮೊದಲು ಜನಪ್ರಿಯವಾಗಿದ್ದು ಖಾಸಗಿ ಚಾಟ್ ರೂಮುಗಳಲ್ಲಿ. ನಂತರ ಬಂದ ಕೆಲವು ಚಾಟಿಂಗ್ ವೆಬ್ ಸೈಟುಗಳು ಇವುಗಳನ್ನು ಯಾವ ಮಟ್ಟಿಗೆ ಕುಲಗೆಡಿಸಿ ಬಿಟ್ಟವೆಂದರೆ ಅವುಗಳನ್ನು ಬಳಸುವುದಿರಲಿ, ಅವುಗಳ ಬಗ್ಗೆ ಮಾತಾಡುವುದೇ ಮಹಾಪಾಪ ಎಂಬಂತಿನ ದಿನಗಳನ್ನು ನಮ್ಮ ಮುಂದೆ ತಂದಿಟ್ಟಿದ್ದವು.

ಮುಂದಿನ ಹಂತದಲ್ಲಿ ಸ್ಮಾರ್ಟ್‌ಫೋನ್‌ ಗಳ ಆಗಮನದ ನಂತರ ಬಗೆಬಗೆಯ ಆಪ್ ಗಳು ಎಲ್ಲರ ನಡುವೆ ಜನಪ್ರಿಯವಾದವು. ಸಾಮಾಜಿಕ ಜಾಲತಾಣಗಳು ಬಂದ ನಂತರ ದೇಶ-ಭಾಷೆ-ಗಡಿಗಳ ಪರಿವೆಯಿಲ್ಲದೆ ಜನರನ್ನು ಸಂಪರ್ಕಿಸುವುದು, ಹೊಸ ಗೆಳೆಯರನ್ನು ಸಂಪಾದಿಸಿಕೊಳ್ಳುವುದು… ಇತ್ಯಾದಿಗಳು ಒಂದಷ್ಟರ ಮಟ್ಟಿಗೆ ಸುಲಭವಾದವು ಕೂಡ. ಇವುಗಳೇ ಮುಂದೆ ಮತ್ತಷ್ಟು ವಿಕಸಿತ ರೂಪವನ್ನು ಪಡೆದುಕೊಂಡು, ಆಪ್ ಲೋಕದೊಂದಿಗೆ ಜೊತೆಯಾಗಿ ಅಂತರ್ಜಾಲದಲ್ಲಿ ಸಂಗಾತಿಗಳನ್ನು ಕಂಡುಕೊಳ್ಳುವ ಹೊಸದೊಂದು ಬದಲಾವಣೆಗೂ ದಾರಿ ಮಾಡಿಕೊಟ್ಟಂತಾಯಿತು. ಹಿಂದೆ ಪಶ್ಚಿಮದ ದೇಶಗಳಲ್ಲಷ್ಟೇ ಇದ್ದ ಡೇಟಿಂಗ್ ಪರಿಕಲ್ಪನೆಗಳು ಇಂಟರ್ನೆಟ್ ಕ್ರಾಂತಿಯಿಂದಾಗಿ ಭಾರತದಂತಹ ದೇಶಗಳಲ್ಲೂ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಹೀಗೆ.

ವಿಚಿತ್ರವೆಂದರೆ ಡಿಸೆಂಬರ್ 2024 ರಲ್ಲಿ ದ ಗಾರ್ಡಿಯನ್ ಪತ್ರಿಕೆಯು ವರದಿ ಮಾಡಿರುವ ಪ್ರಕಾರ ಜಗತ್ತಿನ ಅತ್ಯಂತ ಜನಪ್ರಿಯ ಡೇಟಿಂಗ್ ಆಪ್ ಗಳನ್ನು ನಡೆಸುತ್ತಿರುವ ಕೆಲ ಸಂಸ್ಥೆಗಳು ಈಗ ಭಾರೀ ನಷ್ಟದ ಹಾದಿಯಲ್ಲಿವೆ. ಈ ಸಂಸ್ಥೆಗಳಿಗೆ ಹೂಡಿಕೆ ಮಾಡಿದವರು ಕಂಗಾಲಾಗಿದ್ದಾರೆ. ಇದರ ಹಿಂದಿನ ಕಾರಣವೇನೆಂದರೆ ಸಂಗಾತಿಗಳನ್ನು ಹುಡುಕಲೆಂದು ಒಂದು ಕಾಲದಲ್ಲಿ ಈ ಆಪ್ ಗಳತ್ತ ನಡೆದುಬಂದ ಬಳಕೆದಾರರು ಇವುಗಳಿಂದ ರೋಸಿಹೋಗಿ, ಇವೆಲ್ಲದಕ್ಕೆ ದೊಡ್ಡದೊಂದು ನಮಸ್ಕಾರ ಹೊಡೆದು ಹೊರಬಂದಿದ್ದಾರೆ. ಸಂಗಾತಿಗಳನ್ನು ಆರಿಸಿಕೊಳ್ಳುವ ವಿಚಾರದಲ್ಲಿ ಈ ಆಪ್ ಗಳು ಬಿತ್ತುವ ಬಣ್ಣಬಣ್ಣದ ಕನಸುಗಳಿಗೂ, ನಿಜ ಜೀವನಕ್ಕೂ ಸಂಬಂಧವೇ ಇಲ್ಲ ಎಂಬ ಕಹಿಸತ್ಯಗಳು ಇವರೆಲ್ಲರನ್ನು ದೊಡ್ಡ ಮಟ್ಟಿನ ನಿರಾಶೆಗೆ ತಳ್ಳಿದೆ.

ಡೇಟಿಂಗ್ ಆಪ್ ಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಭಾರತದ ಮಹಾನಗರಗಳಲ್ಲಿ ನೆಲೆಯಾಗಿರುವ ಯುವಜನರನ್ನೊಮ್ಮೆ ಕೇಳಿ ನೋಡಬೇಕು. ಏಕೆಂದರೆ ಈ ಆಪ್ ಗಳ ದೊಡ್ಡ ಸಂಖ್ಯೆಯ ಬಳಕೆದಾರರು ಈ ವರ್ಗದ ಮಂದಿಯೇ. ನಿಜಾಂಶವೇನೆಂದರೆ ಡೇಟಿಂಗ್ ಆಪ್ ಗಳನ್ನು ಬಳಸಿಕೊಂಡು ಜೀವನ ಸಂಗಾತಿಯನ್ನು ಅಥವಾ ಒಂದೊಳ್ಳೆಯ ಗೆಳೆತನವನ್ನು ಸಂಪಾದಿಸಿ ಕೊಂಡವರ ಸಂಖ್ಯೆಯು ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿಯಿದೆ. ಅಷ್ಟಕ್ಕೂ ಭಾರತೀಯ ಡೇಟಿಂಗ್ ಆಪ್ ಬಳಕೆದಾರರಲ್ಲಿ 85-90 ಪ್ರತಿಶತ ಪುರುಷರೇ ತುಂಬಿಕೊಂಡಿರುವುದರಿಂದ ಸಂಬಂಧಿ ಆಪ್ ಗಳ ಮೂಲೋದ್ದೇಶವೇ ಉಲ್ಟಾ ಹೊಡೆದಿದೆ. ಇನ್ನು ಆಪ್ ಗಳಲ್ಲಿ ತುಂಬಿ ಕೊಂಡಿರುವ ನಕಲಿ ಪ್ರೊಫೈಲುಗಳ ಕತೆಗಳದ್ದಂತೂ ಹೇಳುವುದೇ ಬೇಡ ಎಂಬಷ್ಟು ನಿರಾಶಾದಾಯಕ ಪರಿಸ್ಥಿತಿ.

ಡೇಟಿಂಗ್ ಆಪ್ ಗಳ ಪರಿಸ್ಥಿತಿ ಹೀಗಿರುವಾಗ ಸಂಗಾತಿಗಳ ತಲಾಶೆಯಲ್ಲಿ ಹೊರಟಿರುವ ಲಕ್ಷಗಟ್ಟಲೆ ಬಳಕೆದಾರರು ರೋಸಿ ಹೋಗಿರುವುದರಲ್ಲಿ ಅಚ್ಚರಿಯೇನಿಲ್ಲ. ಬಳಕೆದಾರರು ಹೆಚ್ಚು ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಂಡರೆ, ಹೆಚ್ಚಿನ ಸಂಖ್ಯೆಯ ಸಂಗಾತಿಗಳು ಸಿಗಬಲ್ಲರು ಎಂಬ ಆಮಿಷವು ಬಳಕೆದಾರರ ಖಾಸಗಿ ಮಾಹಿತಿಗಳನ್ನು ಬೀದಿಪಾಲಾಗಿಸಿದೆ. ಹೆಚ್ಚುವರಿ ಹಣ ತೆತ್ತು ಪ್ರೀಮಿಯಂ ಖಾತೆಗಳನ್ನು ತೆರೆದುಕೊಂಡರೆ ಅತ್ಯುತ್ತಮ ಪ್ರೊಫೈಲುಗಳು ಸಿಗಲಿವೆ ಎಂಬ ಮರೀಚಿಕೆ ಕೊಡುಗೆಗಳಿಂದಲೂ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನಗಳಾಗಿಲ್ಲ. ಹೀಗೆ ಸಂಗಾತಿಗಳ ತಲಾಶೆಯಲ್ಲಿ ದಿನ-ವಾರ-ತಿಂಗಳುಗಟ್ಟಲೆ ಒದ್ದಾಡಿದರೂ ಒಂದೇ ಒಂದು ಹೇಳಿಕೊಳ್ಳುವ ಯಶಸ್ಸು ಸಿಗದಿರುವುದು ಈ ಆಪ್ ಬಳಕೆದಾರರನ್ನು ಮತ್ತಷ್ಟು ಕಂಗೆಡಿಸುವಂತೆ ಮಾಡಿದೆ.

ಡೇಟಿಂಗ್ ಆಪ್ ಗಳು ಹೊಸದಾಗಿ ಮಾರುಕಟ್ಟೆಗೆ ಬಂದಾಗ ಎಂತೆಂಥ ಕನಸುಗಳನ್ನು ಜನಸಾಮಾನ್ಯರಿಗೆ ಮಾರಿದವು ಎಂಬುದನ್ನು ನಾವೀಗ ನೆನಪಿಸಿಕೊಳ್ಳಬೇಕು. ಆಯ್ಕೆಗಳು ಹೆಚ್ಚಿದ್ದರೆ ಆರಿಸುವುದು ಸುಲಭ ಎಂಬ ಭ್ರಮೆಯು ಮೊದಲನೆಯದು. ಡೇಟಿಂಗ್ ಆಪ್ ಬಳಕೆದಾರರು ಹೆಚ್ಚಿನ ಆಯ್ಕೆಗಳತ್ತ ನೋಡುವುದರಲ್ಲಿ ತಲ್ಲೀನರಾಗಿ ಬಿಟ್ಟರೇ ಹೊರತು, ಮೆಚ್ಚಿದ ಯಾವುದಾದರೂ ಒಂದು ಆಯ್ಕೆಯು ಬರ್ಖತ್ತಾಗಲಿಲ್ಲ. ಏಕೆಂದರೆ ಇದಕ್ಕಿಂತ ಒಳ್ಳೆಯ ಆಯ್ಕೆಯೊಂದು ಬೇರೆಲ್ಲೋ ಖಂಡಿತ ಇರಬಹುದು ಎಂಬ ಗೊಂದಲದ, ಅಲ್ಪತೃಪ್ತಿಯ ಮನೋಭಾವ ಒಳಗೊಳಗೆ. ವ್ಯಕ್ತಿಗಳು ಬಿಕರಿಯಾಗಲು ಶೋಕೇಸಿನಲ್ಲಿಟ್ಟಿದ್ದ ಚಂದದ ನಿರ್ಜೀವ ವಸ್ತುಗಳಂತೆ ಬದಲಾಗಿಬಿಟ್ಟಿದ್ದೇ ಈ ಹಂತದಲ್ಲಿ. ಆರಿಸಲೂ ಒಂದು ಕ್ಲಿಕ್. ಬೇಡವೆಂದು ಬಿಸಾಕಲೂ ಒಂದೇ ಒಂದು ಕ್ಲಿಕ್!

ನಿಮ್ಮ ಆಸುಪಾಸಿನಲ್ಲಿರುವ ಸ್ಥಳೀಯರನ್ನೇ ನೀವೀಗ ಭೇಟಿಯಾಗಬಹುದು ಎಂಬ ಆಸೆಯನ್ನು ಬಿತ್ತಿದ್ದು ಎರಡನೆಯದು. ಆಪ್ ಗಳಲ್ಲಿ ವಾಸ್ತವಕ್ಕೆ ದೂರ ಮತ್ತು ಪ್ರಾಯೋಗಿಕವಾಗಿ ಅಸಾಧ್ಯವಾಗಿರುವ ಗಂಡು-ಹೆಣ್ಣಿನ ಅನುಪಾತದಲ್ಲಿ ಈ ಆಶಯವು ಇನ್ನಿಲ್ಲದಂತೆ ಮಣ್ಣುಮುಕ್ಕಿಬಿಟ್ಟಿತು. ಎಲ್ಲದಕ್ಕಿಂತ ಮುಖ್ಯವಾಗಿ ಈ ಆಪ್ ಗಳನ್ನು ಬಳಸಿಕೊಂಡು ಬಳಕೆದಾರರು ಬಹಳ ಸುಲಭವಾಗಿ ಸಂಗಾತಿಯನ್ನು, ಹೊಸ ಗೆಳೆತನಗಳನ್ನು ಸಂಪಾದಿಸಬಹುದು ಎಂದು ನೀಡಲಾಗಿದ್ದ ಭರವಸೆಯು ಮೂರನೆಯ ಅಂಶ. ಇದಕ್ಕೆ ವ್ಯತಿರಿಕ್ತವಾಗಿ ಬಳಕೆದಾರರು ನಿರಂತರವಾಗಿ ತಿಪ್ಪರಲಾಗ ಹೊಡೆದ ಹೊರತಾಗಿಯೂ ಏನೇನೂ ಆಗದೆ ಕೈಚೆಲ್ಲಿ ಕೂರಬೇಕಾದ ದಿನಗಳೇ ಹೆಚ್ಚಿದ್ದವು. ಬಹುಷಃ ಈ ಆಪ್ ಗಳಲ್ಲಿ ಹಾಕಿದ್ದ ಐದು ಪ್ರತಿಶತ ಶ್ರಮವನ್ನು ಬಳಕೆದಾರರು ನೈಜ ಬದುಕಿನಲ್ಲಿ ಪ್ರಯತ್ನಿಸಿದ್ದರೂ ಹೊಸ ಗೆಳೆತನಗಳನ್ನು ಸಂಪಾದಿಸಬಹುದಿತ್ತು. ಹೊಸ ಸಂಬಂಧಗಳೂ ದಕ್ಕುವ ಸಾಧ್ಯತೆಗಳಿದ್ದವು. ಅಂತೂ ಡೇಟಿಂಗ್ ಆಪ್ ಗಳು ಬಳಕೆದಾರರನ್ನು ಆನ್‌ಲೈನ್ ಜಂಕಿಗಳನ್ನಾಗಿ ಬದಲಾಯಿಸಿದವೇ ಹೊರತು ಅರ್ಥಪೂರ್ಣ ಸಂಬಂಧಗಳಿಗೆ ಯೋಗ್ಯವಾದ ವ್ಯಕ್ತಿತ್ವಗಳನ್ನಲ್ಲ.

ಡೇಟಿಂಗ್ ಆಪ್ ಗಳನ್ನು ಹಲವು ಕಾಲ ಬಳಸಿರುವ ಬಹುತೇಕ ಮಂದಿ ಈ ವೇದಿಕೆಗಳು ಈಗ ಡೇಟಿಂಗ್ ಆಪ್ ಗಳಾಗಿ ಉಳಿದಿಲ್ಲ ಎಂಬುದನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಾರೆ. ಇವುಗಳಲ್ಲಿ ಮುಖ್ಯವಾಹಿನಿಯಲ್ಲಿರುವ, ಬಲುಜನಪ್ರಿಯ ಆಪ್ ಒಂದಂತೂ ಈಗ “Hook up” ಆಪ್ ಎಂದೇ ಕುಖ್ಯಾತಿಯನ್ನು ಪಡೆದುಕೊಂಡಿದೆ. ಅಂದರೆ ಡೇಟಿಂಗ್ ಹೆಸರಿನಲ್ಲಿ ಕೇವಲ ಅಲ್ಪಕಾಲದ ಲೈಂಗಿಕ ಸುಖವನ್ನಷ್ಟೇ ಆಗಂತುಕರೊಂದಿಗೆ ಪಡೆಯಲು ಸೀಮಿತವಾಗಿರುವ ಒಂದು ಆನ್‌ಲೈನ್ ವೇದಿಕೆ ಎಂದು. ಈ ಕಾರಣಗಳಿಂದಾಗಿ ನಿಜವಾಗಿಯೂ ಹೊಸ ಅರ್ಥಪೂರ್ಣ ಸಂಬಂಧಗಳತ್ತ ಕೈಚಾಚುವ ಹಂಬಲದಲ್ಲಿದ್ದ ಹಲವರಿಗೆ ಇವುಗಳು ಈಗ ಪ್ರಯೋಜನಕ್ಕೆ ಬಾರದಾಗಿವೆ. ಇದಕ್ಕಿಂತ ದೊಡ್ಡ ತಮಾಷೆಯೆಂದರೆ ಇವುಗಳನ್ನು “ಹುಕ್ ಅಪ್” ಆಪ್ ಗಳ ರೂಪದಲ್ಲಾದರೂ ಬಳಸೋಣ ಎಂಬ ಲೆಕ್ಕಾಚಾರದಲ್ಲಿದ್ದ ಕಿಲಾಡಿಗಳಿಗೂ ಇಲ್ಲಿ ದೊಡ್ಡ ಮಟ್ಟಿನ ಯಶಸ್ಸು ಸಿಗದೇ ಇದ್ದಿದ್ದು. ಒಟ್ಟಿನಲ್ಲಿ ಇವುಗಳ ಸಹವಾಸವೇ ಬೇಡ ಎಂದು ಬಳಕೆದಾರರು ಹೀಗೆ ಎದ್ದುಹೋಗಿದ್ದೇ ಈ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳ ನಷ್ಟದ ಹಿಂದಿರುವ ದೊಡ್ಡ ಕತೆ.

ನಿಜವೇನೆಂದರೆ ಮುಕ್ತ ಲೈಂಗಿಕತೆಯ ಪರವಾಗಿ ಮಾತನಾಡುವ ನಮ್ಮ ಕಾಲದ ಅದೆಷ್ಟೋ ಮಂದಿಗೆ ಇಂತಹ ಆಪ್ ಗಳು ತಂದೊಡ್ಡಿರುವ ಗಂಭೀರ ಪರಿಣಾಮಗಳ ಅರಿವಿಲ್ಲ. ದೇಹವು pleasure (ಸುಖ) ಬಯಸುವುದು ಹೌದಾದರೂ, ದೀರ್ಘಕಾಲ ನಮ್ಮ ಜೊತೆ ಉಳಿಯುವುದು intimacy (ಆತ್ಮೀಯತೆಯ ಭಾವ) ಮಾತ್ರ ಎಂಬುದನ್ನು ನಾವು ಮರೆತಿದ್ದೇವೆ. ಮರೆತಿದ್ದೇವೆ ಅನ್ನುವುದಕ್ಕಿಂತಲೂ ಹೆಚ್ಚಾಗಿ ಈ ಸತ್ಯವನ್ನು ಒಪ್ಪಿಕೊಳ್ಳಲು ನಾವು ಅದೇಕೋ ಹಿಂಜರಿಯುತ್ತಲೇ ಇದ್ದೇವೆ. ಮೊದಲು ನಮಗೆ ದೈಹಿಕ ಸುಖವಷ್ಟೇ ಸಾಕು ಎನ್ನುವ ಇಬ್ಬರಲ್ಲಿ ಒಬ್ಬರಿಗೆ ನಂತರ ಈ ಸಂಬಂಧವು ಮಾನಸಿಕ ಹಂತದಲ್ಲೂ ಬೇಕೆನಿಸಿ, ಸಂಬಂಧಗಳಲ್ಲಿ ಬಿರುಕುಗಳುಂಟಾಗುವುದು ನಮಗೆ ಗೊತ್ತೇ ಇದೆ. ಇನ್ನು ವೈವಾಹಿಕ ಬದುಕಿನ ಪರಿಧಿಯಲ್ಲಿ ಗಂಡ-ಹೆಂಡಿರಿಬ್ಬರೂ ಮುಕ್ತ ಲೈಂಗಿಕತೆಯನ್ನು ಒಪ್ಪಿಕೊಳ್ಳುವ ಓಪನ್ ಮ್ಯಾರೇಜ್ ವ್ಯವಸ್ಥೆಯಲ್ಲೂ ಇಂತಹ ಒಪ್ಪಂದಗಳು ನಿರೀಕ್ಷಿತ ಸಮಾಧಾನ-ಸಂತೃಪ್ತಿಗಳನ್ನು ತಂದಂತಿಲ್ಲ.   

ಹೆಚ್ಚಿನ ಮಂದಿಯೊಂದಿಗೆ ಲೈಂಗಿಕ ಸಂಬಂಧಗಳನ್ನಿಟ್ಟುಕೊಳ್ಳುವವರು ಮಾನಸಿಕ ನೆಲೆಯಲ್ಲಿ ದೀರ್ಘಕಾಲಿಕ ಒಬ್ಬಂಟಿತನ-ಖಾಲಿತನದಲ್ಲಿ ಬಳಲುವುದು, ಸಂಬಂಧಗಳಲ್ಲಿ ನಂಬಿಕೆ ಕಳೆದುಕೊಂಡಿರುವುದು, ಆಪ್ತಸಂಬಂಧಗಳ ಭಾಗವಾಗಲು ಹಿಂಜರಿಯುವುದು, ಖಿನ್ನತೆಗೆ ಒಳಗಾಗುವುದು ಇತ್ಯಾದಿಗಳ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿವೆ. ಇದಕ್ಕೆ ಪ್ರೀತಿಯ ತಲಾಶೆ ಎಂಬ ಸಮರ್ಥನೆ ನೀಡಿದರೂ, ಲೈಂಗಿಕ ಸಾಹಸಗಳು ಎಂಬ ಆಧುನಿಕ ಟ್ಯಾಗ್ ಹಾಕಿಕೊಂಡರೂ ಅಂತಿಮ ಪರಿಣಾಮಗಳಲ್ಲಿ ಹೆಚ್ಚಿನ ವ್ಯತ್ಯಾಸಗಳೇನಿಲ್ಲ. ಏಕೆಂದರೆ ಮನುಷ್ಯನೊಬ್ಬನಿಗೆ ಸುಖವೆಂಬುದು ಮುಖ್ಯವಾದರೂ, ಸುಖವೊಂದೇ ಬದುಕಿನ ಅಂತಿಮ ಗುರಿಯಾಗಿರುವುದಿಲ್ಲ. ಸುಖದ ಆಯಸ್ಸು ಕಡಿಮೆ. ಅದು ಬೆನ್ನಟ್ಟಿದಷ್ಟೂ ಬೇಕೆನಿಸುವ ವಿಕ್ಷಿಪ್ತ ಮಾಯಾಜಿಂಕೆ!

ಲೇಖನದ ಮೊದಲಭಾಗದಲ್ಲಿ ಪ್ರೀತಿಯ ಏಳು ಹಂತಗಳ ಬಗ್ಗೆ ಬರೆದಿದ್ದೆ. ಆದರೆ ಮೆಟ್ರೋ ಸಿಟಿಗಳಲ್ಲಿ ಚಾಲ್ತಿಯಲ್ಲಿರುವ ಡೇಟಿಂಗ್ ಆಪ್ ಗಳು ಈ ಹಂತಗಳನ್ನು ಚೆಲ್ಲಾಪಿಲ್ಲಿ ಮಾಡಿ, ಪ್ರೇಮ-ಕಾಮದ ಇಡೀ ಪ್ರಕ್ರಿಯೆಗಳನ್ನು ಫಾಸ್ಟ್ ಫಾರ್ವರ್ಡ್ ಮಾಡಿವೆ. ಹೀಗಾಗಿ ಹಾಯ್-ಹಲೋ ಎಂದು ಶುರುವಾಗುವ ಡ್ರಾಯಿಂಗ್ ರೂಮಿನ ಮಾತುಗಳು ನೇರವಾಗಿ ಬೆಡ್ರೂಮಿನವರೆಗೆ ತಲುಪಿ, ಹಸಿಬಿಸಿ ಪಿಸುಮಾತುಗಳಾಗಲು ಇಂದು ಹೆಚ್ಚಿನ ಸಮಯವೇನೂ ಬೇಕಾಗುವುದಿಲ್ಲ. ನೈತಿಕ-ಅನೈತಿಕಗಳ ನಡುವಿನ ಗೆರೆಯು ಇಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ತೆಳು.

ಅಂತೂ ಈ ಪಾಪಗಳನ್ನು ತೊಳೆದುಕೊಳ್ಳಲು ತಮಗೂ ಒಂದಿಷ್ಟು ಸಮಯಾವಕಾಶ ಬೇಕೆಂಬುದು ಡೇಟಿಂಗ್ ಆಪ್ ಗಳನ್ನು ನಡೆಸುವ ಸಂಸ್ಥೆಗಳ ಮುಖ್ಯಸ್ಥರ ಅಭಿಪ್ರಾಯ. ಏಕೆಂದರೆ ಇವುಗಳು ರಾತ್ರೋರಾತ್ರಿ ಆಗುವಂಥದ್ದಲ್ಲ ಎಂಬುದು ಅವರಿಗೂ ಗೊತ್ತು. ಸದ್ಯದ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಿ, ಬಳಕೆದಾರರ ಮನವೊಲಿಸಿ, ಅವರ ನಂಬಿಕೆಗೆ ಪಾತ್ರರಾಗಿ, ಅವರ ನಿರೀಕ್ಷೆಯ ಫಲಿತಾಂಶಗಳನ್ನೂ ನೀಡಿ, ಲಾಭದ ಹಾದಿಯಲ್ಲಿ ಮರಳಿ ಬರುವುದು ಒಂದು ಕ್ಲಿಕ್ ಮಾತ್ರದಲ್ಲಿ ಸಾಧ್ಯವಿಲ್ಲ. ಹೀಗಾಗಿ ಈ ಸಂಸ್ಥೆಗಳಿಗೆ ಇದು ಅಳಿವು-ಉಳಿವಿನ ಪ್ರಶ್ನೆಯೂ ಹೌದು.

ಪ್ರಸಾದ್‌ ನಾಯ್ಕ್‌, ದೆಹಲಿ 

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

ಇದನ್ನೂ ಓದಿ- http://“ವೈಫೈ ಯುಗದ ಹೈಫೈ ಜೀತ” https://kannadaplanet.com/hi-fi-slavery-in-wifi-age/

More articles

Latest article