ಸಿನೆಮಾ | ಸು ಫ್ರಮ್ ಸೊ : ಸುಲೋಚನಾ ಫ್ರಮ್ ಸೋಮೇಶ್ವರ

Most read

ರಾಜ್ ಬಿ ಶೆಟ್ಟಿಯವರ ಸಿನೆಮಾಗಳಲ್ಲಿ ನನಗೆ ತುಂಬಾ ಇಷ್ಟವಾದ ಸಿನಿಮಾ ವೈದೇಹಿ ಕಾದಂಬರಿ ಆಧಾರಿತ, “ಅಮ್ಮಚ್ಚಿ ಎಂಬ ನೆನಪು”. ಸ್ತ್ರೀ ಕೇಂದ್ರಿತ ಪಾತ್ರಗಳು, ಕರಾವಳಿಯಲ್ಲಿ ಇನ್ನೂ ಆಳವಾಗಿ ಬೇರೂರಿರುವ ಗಂಡಾಳ್ವಿಕೆ, ಸ್ತ್ರೀ ಶೋಷಣೆ, ಮೌಢ್ಯ ಹೀಗೆ ಎಲ್ಲವನ್ನೂ ಸುತ್ತುವರೆದಿರುವ ಕಥೆ. ಹಾಗೆಯೇ ಗಂಡಿನ ದಬ್ಬಾಳಿಕೆಯಿಂದ ಹೆಣ್ಣೊಬ್ಬಳು ಬೇಸತ್ತು ದಿಟ್ಟತೆಯನ್ನು ತೋರುವ ಕಥೆ.

ಸು ಫ್ರಮ್ ಸೊ ನ ಹಾಸ್ಯ, ಕರಾವಳಿಯಲ್ಲಿ ತುಳು ಸಿನಿಮಾ, ತುಳು ನಾಟಕ ನೋಡುತಿದ್ದ ಬಳಗಕ್ಕೆ ಹೊಸತಲ್ಲ. ದೇವದಾಸ್ ಕಾಪಿಕಾಡ್ ನಾಟಕಗಳು ಈ ರೀತಿಯ ಹಾಸ್ಯವನ್ನು ಮನೆಮನೆಗೆ ತಲುಪಿಸಿದೆ. ಆದರೆ ಇದರ ಪರಿಚಯವಿಲ್ಲದ ಹೊಸ ವೀಕ್ಷಕರಿಗೆ,  ನೋಡುಗರಿಗೆ ಇಲ್ಲಿನ ಹಾಸ್ಯ ತುಂಬಾ ನಗು ತರಬಲ್ಲದು.

ಸು ಫ್ರಮ್ ಸೊ ದಲ್ಲಿ ಕೂಡ ಹಾಸ್ಯದ ಅಬ್ಬರದೊಂದಿಗೆ ತೋರಿ ಬರುವ ಇನ್ನೊಂದು ವಿಷಯ ನಮ್ಮ ಕರಾವಳಿಯಲ್ಲಿ ಇನ್ನೂ ಬಹು ಆಳವಾಗಿ ಬೇರೂರಿರುವ ಸ್ತ್ರೀ ಶೋಷಣೆ, ಮೌಢ್ಯ, ಹಾಗೂ ಮೂಢನಂಬಿಕೆ. ಎಷ್ಟೋ ಕುಟುಂಬಗಳೇ ಈ ಮೌಢ್ಯಕ್ಕೆ, ಮೂಢನಂಬಿಕೆಗೆ ಕಟ್ಟು ಬಿದ್ದು ನಾಶವಾಗಿ ಹೋಗಿವೆ. ಆದರೂ ಒಂದು ಕಡೆ ಬಡ ಕುಟುಂಬಗಳು ಬೇರೆ ದಾರಿ ತೋಚದೆ, ಅಜ್ಞಾನದಿಂದ ಇಂತಹ ಕಟ್ಟುಪಾಡುಗಳಿಗೆ ಮಾರು ಹೋಗಿದ್ದರೆ, ಇನ್ನು ಹಣವಿರುವ ಶ್ರೀಮಂತ, ದುಬೈ, ಮುಂಬೈಯಿಂದ ವರುಷಕ್ಕೊಂದು ಸರಿ ಊರಿಗೆ ಬರುವ  ನಮ್ಮ “ಉಳ್ಳವರ” ವರ್ಗಕ್ಕೆ ಇದೊಂದು ಶೋಕಿಯಾಗಿ ಕೂಡ ಮುಂದುವರೆದಿದೆ. “ಆರ್ ಮಲ್ಲ ಕೋಲ, ಅಷ್ಟ ಮಂಗಲ, ನೇಮ ಮಲ್ಪಾಯೆರ್ (ಅವರು ಭಯಂಕರ ದೊಡ್ಡ ದೈವ ಕೋಲ, ನೇಮ ಮಾಡಿಸಿದರು”) ಎಂದು ಹೆಸರು ಗಳಿಸುವ ಹುಚ್ಚು ಕೂಡ. ಇಲ್ಲವಾದಲ್ಲಿ ಬುದ್ಧಿವಂತರ ಜಿಲ್ಲೆ ಎನ್ನಿಸಿಕೊಂಡ ಈ ಜಿಲ್ಲೆಯಲ್ಲಿ ಈ ಮೌಢ್ಯ ಇನ್ನೂ ಇಷ್ಟು ಅಗಾಧವಾಗಿ ಬೇರೂರಲು  ಬೇರೆ ಯಾವುದೇ ಕಾರಣಗಳಿಲ್ಲ.

ಮಕ್ಕಳಿಗೆ ಜ್ವರ ಬಂದರೆ ತಂತ್ರಿಗಳ ಹತ್ತಿರ ಹೋಗುವುದು, ಮಕ್ಕಳು ಶಾಲೆಯಲ್ಲಿ ಫೇಲಾದರೆ ಇಂದ್ರರ  ಹತ್ತಿರ ಹೋಗುವುದು, ಗಂಡ ಹೆಂಡತಿಗೆ ಜಗಳವಾದರೆ ಅಷ್ಟ ಮಂಗಳ ಮಾಡಿಸುವುದು, ಅಷ್ಟೇಕೆ ಮಾನಸಿಕ ರೋಗದಿಂದ ನರಳುವ ಮನೆಯವರು ಮಾನಸಿಕ ರೋಗ ತಜ್ಞರ ಭೇಟಿ ಒಂದನ್ನು ಬಿಟ್ಟು ಉಳಿದ ಎಲ್ಲ ಕೋಲ, ನೇಮ, ಅಷ್ಟ ಮಂಗಳ, ತಂತ್ರಿ, ಜ್ಯೋತಿಷಿ, ಇಂದ್ರೇರ್.. ಹೀಗೆ ಎಲ್ಲವನ್ನೂ  ಕೈಗೊಳ್ಳುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. 

ಒಂದು -ಎರಡು ದಶಕಗಳ ಹಿಂದೆ ಊರಿನಲ್ಲಿ ಮುಂಬೈಯಿಂದ ಬಂದ ನೂರಾರು ಯುವಕರಿಗೆ ಏಡ್ಸ್ ಆಗಿದ್ದ ಸಂದರ್ಭದಲ್ಲಿ ಈ ಅಷ್ಟ ಮಂಗಳ, ಭೂತ ಕೋಲದವರು, ತಂತ್ರಿ, ಇಂದ್ರರು ಮಾಡಿದ ಹಣಕ್ಕೆ ಲೆಕ್ಕ ಇಲ್ಲ. ಆದರೂ ಕೂಡ ಇದ್ದ ಬದ್ದ ಈ ಎಲ್ಲ “ಈ ಯುವಕರು” ಸಾವಿಗೀಡಾದರು. ಹೀಗಿದ್ದೂ ಮೌಢ್ಯ ಕಡಿಮೆಯಾಗಲಿಲ್ಲ. ಇನ್ನು ನಮ್ಮ ಬಜರಂಗಿಗಳು ಈ ಊರಿನ ಮುಂದಾಳತ್ವ ವಹಿಸಿದ ಮೇಲಂತೂ “ನಾವೆಲ್ಲಾ ಭಯಂಕರ ಹಿಂದೂಗಳು” ಎಂದು ತೋರಿಸಲು ಹೋಗಿ, ಇನ್ನಷ್ಟು ಮೌಢ್ಯವನ್ನೇ ಊರಿನ ಮೇಲೆ ಹೊರಿಸಲಾಯಿತು. ಯಾರೆಲ್ಲ ಮೌಢ್ಯ ನಿರ್ಮೂಲನೆಯ ಬಗ್ಗೆ ಮಾತನಾಡಿದರೋ ಅವರನ್ನು ಕಮ್ಯೂನಿಷ್ಟ್‌ಗಳು, ಎಡಚರರು, ಹಿಂದೂ ವಿರೋಧಿಗಳು ಅಂತ ಬಿಂಬಿಸಲಾಯಿತು. ಇನ್ನೂ ಈ ಟ್ರೆಂಡ್ ಬದಲಾಗಿಲ್ಲ.

ಇದಕ್ಕೆ ತಕ್ಕನಾಗಿ ಕಾಂತಾರ ಎನ್ನುವ ಸಿನಿಮಾ ಕೂಡ ಬಂತು. ನನಗೆ ಕಾಂತಾರ ಸ್ವಲ್ಪ ಮಟ್ಟಿಗೆ ಇಷ್ಟವಾದರೂ ಕೂಡ ತುಂಬಾ ಆಕ್ಷೇಪಣೆಯಿರುವ ಸಿನೆಮಾ ಅದು. ನಮ್ಮ ಭೂತ ಕೋಲ, ದೈವ, ಯಕ್ಷಗಾನ ಇವೆಲ್ಲವೂ ಕೂಡ ನಮ್ಮ ತುಳುನಾಡಿನ ಸಂಸ್ಕೃತಿಯ ಭಾಗ. ಹಾಗಂತ ಅದನ್ನು ಸಂಸ್ಕೃತಿ ಎಂದು ಬಿಂಬಿಸುವ ಬದಲು, ಇದುವೇ ನಮ್ಮ ನ್ಯಾಯ ಪದ್ಧತಿ ಎಂದು ಬಿಂಬಿಸಲು ಹೊರಟರೆ, ಸಾಮಾನ್ಯರು ಇದಕ್ಕೆ ಮತ್ತಷ್ಟು ಜೋತು ಬೀಳುವುದು ಸಹಜ. ಕಾಂತಾರದ ಬಗ್ಗೆ ನನಗಿದ್ದ ದೊಡ್ಡ ಆಕ್ಷೇಪಣೆ ಅದುವೇ: ದಯವಿಟ್ಟು “ದೈವ ಮಾತ್ರ ನ್ಯಾಯ ಒದಗಿಸಬಲ್ಲದು” ಅಂತ ಒಂದು ಮುಖ್ಯ ವಾಹಿನಿ ಸಿನಿಮಾದಲ್ಲಿ ತೋರಿಸಬೇಡಿ. ನಂಬಿಕೆ ಬೇರೆ, ನ್ಯಾಯ ವ್ಯವಸ್ಥೆ ಬೇರೆ. ಇಂತಹ ವಿಷಯಗಳನ್ನು ಮುಖ್ಯ ವಾಹಿನಿ ಸಿನಿಮಾಗಳು ಬಿಂಬಿಸುವುದರಿಂದ ಜನರಿಗೆ “ನಮ್ಮ ನ್ಯಾಯ ವ್ಯವಸ್ಥೆ ಪ್ರಯೋಜನ ಇಲ್ಲ, ನಮ್ಮ ದೈವಗಳು ಮಾತ್ರ ನ್ಯಾಯ ನೀಡುವವರು” ಅನ್ನುವ ಭಾವನೆ ಬೇರೂರಬಹುದು. ಸೌಜನ್ಯ ಪ್ರಕರಣದಲ್ಲೂ ಕೂಡ, ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ಜನ ಹೀಗೆ ಹೇಳುವುದನ್ನು ನೋಡಿದ್ದೇನೆ. ಅವಳು ಮಾಯೆಯಾಗಿ ಬಂದು ಅವರನ್ನು ನೋಡಿಕೊಳ್ಳುತ್ತಾಳೆ. ಇದು ನ್ಯಾಯ ಸಿಗದೇ ನ್ಯಾಯ ವ್ಯವಸ್ಥೆಯಿಂದ ಬೇಸತ್ತು ಹೇಳುವವರ ಮಾತು ಕೂಡ ಆಗಿರಬಹುದು. ಆದರೆ ಇಂತಹ “ಮುಕ್ತಾಯವನ್ನು” ನಾವು, ಒಂದು ನಾಗರೀಕ ಸಮಾಜ ಒಪ್ಪಿಕೊಂಡರೆ, ಇಂತಹ ಪ್ರಕರಣಗಳಿಗೆ ಒಂದು “alternative ರೆಸೊಲ್ಯೂಷನ್”- ಕಂಡುಕೊಳ್ಳುವ ಗೋಜಿಗೆ ನಾವು ಹೋಗಲಾರೆವು. ಇದು ನ್ಯಾಯವ್ಯವಸ್ಥೆಯ ಬೆಳವಣಿಗೆಗೆ ಮಾರಕ.

ಮೇಲಿನ ಎಲ್ಲ ವಿಷಯಗಳನ್ನು ನೋಡಿದರೆ, ಸು ಫ್ರಮ್ ಸೊ, “conclusion” ಮೆಚ್ಚತಕ್ಕದ್ದು. ಇದರಲ್ಲಿ ದೈವ ಬಂದು ಸಮಸ್ಯೆ ಬಗೆಹರಿಸಲ್ಲ. ಆದರೆ ದೈವದ ಭಯ ಇರುವವರನ್ನು ಮಣಿಸಲು ಇದೊಂದೇ ದಾರಿ ಎಂದು ಬಿಂಬಿಸಲಾಗಿದೆ. ದೈವ ಎನ್ನುವುದು absolute abstract ಅಲ್ಲ, ಬದಲಿಗೆ, ನಮ್ಮವರೇ ಅವನ್ನು ಹೇಗೆ ನ್ಯಾಯ ನೀಡಿಸಲು ಉಪಯೋಗಿಸಿದರು ಎನ್ನುವುದನ್ನು ಕೂಡ ತೋರಿಸಲಾಗಿದೆ. ಇಲ್ಲಿ ಭೂತ ಬಂದು ನ್ಯಾಯ ಕೊಡಿಸುವುದಿಲ್ಲ, ಬದಲಿಗೆ, ಅವೆಲ್ಲವೂ ಮನುಷ್ಯ ಕಲ್ಪಿತ, ಮನುಷ್ಯ ನಿರ್ಮಿತ ಅನ್ನುವುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಬಹುಶ: ಇದು ನಮ್ಮ ಪ್ರಸ್ತುತ ಕರಾವಳಿಗೆ ಅವಶ್ಯವೂ ಕೂಡ. ಇದೊಂದು ವಿಷಯದಲ್ಲಿ ಈ ಸಿನೆಮಾವನ್ನು ಮೆಚ್ಚಲೇಬೇಕು.

ಕರಾವಳಿಯಲ್ಲಿ ಬೇರೂರಿರುವ ಬಗೆಬಗೆಯ, ಬಣ್ಣ ಬಣ್ಣದ, ವಿಧ ವಿಧನಾದ ರಾಗದಲ್ಲಿ ಮಾತನಾಡುವ, ಬೆಳಬೆಳಗ್ಗೆ ಟೀವಿಯಲ್ಲಿ ಬರುವ  ನಮ್ಮ ಜೋತಿಷಿಗಳ “ನಿಜವಾದ  ಮುಖವಾಡಗಳನ್ನು” ಕೂಡ ಬಯಲಿಗೆಳೆಯಲಾಗಿದೆ. ಹಾಗೆಯೇ, ಒಂದಿಷ್ಟು body shaming, gender shaming ಇದ್ದರೂ ಕೂಡ, ಅದು ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿರುವ ಸಾಮಾಜಿಕ ಮನಸ್ಥಿತಿ. jeevansathi, matromony .com ವೆಬ್‌ಸೈಟ್ ಗಳತ್ತ ಒಂದು ಸಲ ಕಣ್ಣಾಯಿಸಿದರೆ ತಿಳಿಯುತ್ತೆ ನಮ್ಮ ಸಮಾಜದ ಸಾಮಾಜಿಕ ಮನಸ್ಥಿತಿ : ತೆಳ್ಳನೆ, ಬೆಳ್ಳನೆ ಇರುವ ಸ್ಪುರದ್ರೂಪಿಗಳಿಗೆ ಮಾತ್ರ  ಮದುವೆ ಮಾರ್ಕೆಟ್ಟಿನಲ್ಲಿ  “ಡಿಮ್ಯಾಂಡ್”.

ಇನ್ನೊಂದು ವಿಷಯ ಕುಡಿತ. ಕರಾವಳಿಯವರು ಬಹಳ ಸಭ್ಯರು ಅನ್ನುವ ಯೋಚನೆ ಕರಾವಳಿಯವರ ತಲೆಯಲ್ಲಿ. ಆದರೆ ಇಲ್ಲಿ ನಡೆಯುವ ಮದುವೆ, ಜಾತ್ರೆ, ಮೆಹೆಂದಿ, ತಂಬಿಲ ಇವೆಲ್ಲವೂ ಕುಡಿತಕ್ಕೆ ಹೆಸರುವಾಸಿ. ನಮ್ಮ ದೊಡ್ಡ (ಅಜ್ಜಿ) ಹೇಳುವುದಿತ್ತು, ನಮ್ಮ ಮನೆಯಲ್ಲಿ ಅವರ ಚಿಕ್ಕಂದಿನಲ್ಲಿ ಕುಡಿದ ಗಂಡಸರು ತಲೆ ತಲೆ ಒಡೆದು ಹಾಕದ ಒಂದೇ ಒಂದು ತಂಬಿಲವೂ ಆಗುತ್ತಿರಲಿಲ್ಲ ಎಂದು. ನಮ್ಮ ನೆರೆಹೊರೆಯಲ್ಲಿಯೇ ಕುಡಿತದಿಂದ ಹಾಳಾದ ಕುಟುಂಬಗಳೆಷ್ಟೋ. ಚಿಕ್ಕಂದಿನಲ್ಲಿ ಇದನ್ನು ನೋಡಿ ನೋಡಿ ಬೆಳೆದ ನಾವು, ಕುಡಿತದ ಬಗ್ಗೆ ಎಷ್ಟು ತಿರಸ್ಕಾರ ಬೆಳೆಸಿಕೊಂಡಿದ್ದೇವೆ ಎಂದರೆ, ಇವತ್ತಿಗೂ ಕೂಡ “ಸೋಶಿಯಲ್ ಡ್ರಿಂಕಿಂಗ್” ಕೂಡ ಮಾಡದಷ್ಟು. ಕುಡಿದು ಹೆಂಡತಿ, ಮಕ್ಕಳಿಗೆ ಹೊಡೆದು, ಲಿವರ್ ಫೇಲಾಗಿ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪಿದವರು ಕೂಡ ಅಷ್ಟೇ ಮಂದಿ. ಹಾಗೆಯೇ, ನಮ್ಮ ಕರಾವಳಿಯಲ್ಲಿ ಬೀಡುಬಿಟ್ಟಿರುವ  “ಪೋರ್ನ್ ಅಡಿಕ್ಷನ್” ಬಗ್ಗೆ ಕೂಡ ಈ ಸಿನಿಮಾ ಮುಕ್ತವಾಗಿ ಮಾತನಾಡಿದೆ.

ಹಾಗೆಯೇ ಮನೆಯ ಹೆಂಗಸರು, ಹೆಣ್ಣು ಮಕ್ಕಳು, ಹೆಂಡತಿಯರು ಗಂಡಸರ ಬಗ್ಗೆ ಹೊಂದಿರುವ “ತಿರಸ್ಕಾರ ಭಾವನೆ”. ಇದೂ ಕೂಡ ಕರಾವಳಿಯ ಬಹು ಬಡ ಕುಟುಂಬಗಳಲ್ಲಿ ಚಾಲ್ತಿಯಲ್ಲಿದೆ. ಬೀಡಿ ಕಟ್ಟಿ, ಮಲ್ಲಿಗೆ ಕೃಷಿ ಮಾಡಿ, ಗೇರು ಬೀಜದ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಹಾಗೂ ಹೀಗೋ ಮಕ್ಕಳನ್ನು ಶಾಲೆಗೆ ಕಳಿಸಿದ ಎಷ್ಟೋ ಬಡ ಕುಟುಂಬಗಳಲ್ಲಿ ಹೆಂಗಸರೇ ದಿಟ್ಟೆಯರು, ಧೈರ್ಯವಂತರು. ಸು ಫ್ರಮ್ ಸೊ ದಲ್ಲಿ ಇದನ್ನು ಕೂಡ ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ.

ಕಾಂತರದಲ್ಲಿ ದೈವ, ಭೂತದ ಅಬ್ಬರವಿದ್ದರೂ ಅದರಲ್ಲಿದ್ದ ಅಂತ್ಯ ತಾತ್ವಿಕ ಎಂದೆನಿಸಿರಲಿಲ್ಲ. ಬದಲಾಗಿ ನನಗೆ ಬೇಸರವಾಗಿತ್ತು: ಮತ್ತೆ ಮತ್ತೆ ನಮ್ಮವರು ಇದೇ ಮೌಢ್ಯವನ್ನು ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಬಗ್ಗೆ. ಆದರೆ ಸು ಫ್ರಮ್ ಸೊ, ಹಾಸ್ಯದ ಜೊತೆ ಜೊತೆಗೆ, ನಮ್ಮಲ್ಲಿರುವ ಮೌಢ್ಯ, ಶೋಷಣೆ, ಇನ್‌ಫಿರಿಯಾರಿಟಿ ಕಾಂಪ್ಲೆಕ್ಸ್, ಸಾಮಾಜಿಕ ಮನಸ್ಥಿತಿ, ಮೂದಲಿಕೆ, ಮೂಢನಂಬಿಕೆಯನ್ನು ಬಹಳ ಮುಕ್ತವಾಗಿ ತೋರಿಸಿ ಕರಾವಳಿಯ ಒಳಗುಟ್ಟನ್ನು ಬಯಲಿಗೆಳೆದಿದೆ.

ಆದರೆ ನಾನು ನೋಡಿದ ಪೋಸ್ಟ್‌ ಗಳ ಪ್ರಕಾರ “ಹಾಸ್ಯವೇ ಪ್ರಧಾನ” ಎಂದು ಬಿಂಬಿಸುತ್ತ ಈ ಸಿನಿಮಾ ಈ ಮೇಲಿನ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಎಚ್ಚರಿಸುವಲ್ಲಿ ಸಫಲವಾಗಿದೆಯೋ ಇಲ್ಲವೋ ಎನ್ನುವುದು ಪ್ರಶ್ನೆಯೇ ಸರಿ.  

I Hope Raj B Shetty makes bit more bold movies and brings out more of social issues in a stronger manner from Coastal Belt, since he has the understanding of such issues,  capabilities and talent

ಸುಚಿತ್ರಾ ಎಸ್‌ ಎ

ವಕೀಲರು, ಪ್ರಸ್ತುತ ಜರ್ಮನಿಯ ಮ್ಯೂನಿಚ್‌ ಟೆಕ್ನಿಕಲ್‌ ಯೂನಿವರ್ಸಿಟಿಯಲ್ಲಿ ಪಿ ಎಚ್‌ ಡಿ ಮಾಡುತ್ತಿದ್ದಾರೆ.

ಇದನ್ನೂ ಓದಿ- ಸಿನಿಮಾ |ಕ್ಷೌರ ಮತ್ತು ಸಾಮಾಜಿಕ ಶೋಷಣೆಯ ‌ʼಹೆಬ್ಬುಲಿ ಕಟ್ ʼ

More articles

Latest article