ಸಿನೆಮಾ |ಫೆಮಿನಿಸ್ಟ್‌ ಫಾತಿಮಾಳ ಹಾಸಿಗೆ ಮತ್ತು ಪ್ರತಿರೋಧದ ಫ್ಯಾನು!

Most read

ಫೆಮಿನಿಸಂ ಹೋರಾಟದಲ್ಲಿ ಹೆಣ್ಣಿನ ಸ್ವಾತಂತ್ರ್ಯವೆಂದರೆ ನಮಗೆ ನೆನಪಾಗಬೇಕಾದ್ದು ಹೊಸ ವರ್ಷದ ಪಾರ್ಟಿಯಲ್ಲಿ ಕುಡಿದು ತೂರಾಡುವ ಬೆರಳೆಣಿಕೆಯ ಮಹಿಳೆಯರಲ್ಲ; ಸಣ್ಣ ನೆಮ್ಮದಿಯ ನಿದ್ರೆಗಾಗಿ ಹೋರಾಡುತ್ತಿರುವ ಫಾತಿಮಾಳಂತಹ ಕೋಟ್ಯಂತರ ಸ್ತ್ರೀಯರು! –ಮಾಚಯ್ಯ ಎಂ ಹಿಪ್ಪರಗಿ ( `ಫೆಮಿನಿಚ್ಚಿ ಫಾತಿಮಾ’ ಸಿನೆಮಾ ವಿಮರ್ಶೆಯಲ್ಲಿ)

“ನೀನು ಫೆಮಿನಿಸ್ಟಾ?” ಹೀಗೆ ಕೇಳುವಾಗ ಗಂಡ ಉಸ್ತಾದನಿಗಾಗಲಿ; ‘ಹೌದು! ಏನಿವಾಗ?’ ಎನ್ನುವ ಧಾಟಿಯಲ್ಲಿ ಹ್ಞೂಂಗುಟ್ಟುವಾಗ ಮಡದಿ ಫಾತಿಮಾಳಿಗಾಗಲಿ ಫೆಮಿನಿಸಂ ಏನೆಂದರೆಂಬುದೇ ತಿಳಿಯದು. ಆ ಕ್ಷಣಕ್ಕೆ ‘ನನ್ನ ದಬ್ಬಾಳಿಕೆಯಿನ್ನು ನಡೆಯದು’ ಎಂಬ ಅಳುಕು ಉಸ್ತಾದನನ್ನು ಕಾಡುತ್ತಿದ್ದರೆ, ‘ಇನ್ನೂ ನನ್ನಿಂದ ಸಹಿಸಿಕೊಂಡಿರಲು ಸಾಧ್ಯವಿಲ್ಲ’ ಎಂಬ ಅಸಹನೆ ಫಾತಿಮಾಳಲ್ಲಿ ಕುದಿಯುತ್ತಿರುತ್ತದೆ. ಸಮಾಜದ ಈ ಅಳುಕು, ಅಸಹನೆಗಳೆ ಫೆಮಿನಿಸಂನ ನಿಜಾರ್ಥ ಎನ್ನುವ ಸಂದೇಶವನ್ನು ನವಿರುಹಾಸ್ಯದ ಮೂಲಕ ದಾಟಿಸುವ ಮಲೆಯಾಳಂ ಸಿನಿಮಾ `ಫೆಮಿನಿಚ್ಚಿ ಫಾತಿಮಾ’.

ಇದು 2024ರಲ್ಲೆ ತೆರೆಕಂಡಿದ್ದ ಸಿನಿಮಾ. ಆದರೆ ಇತ್ತೀಚೆಗೆ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಹಿಳೆಯರು ಪಾನಮತ್ತರಾಗಿ ತೂರಾಡುತ್ತಿರುವ ದೃಶ್ಯಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಕೆಲವರು ‘ಇದೇನಾ ಫೆಮಿನಿಸಂ? ಇದೇನಾ ಸ್ತ್ರೀ ಸ್ವಾತಂತ್ರ್ಯ?’ ಎಂಬರ್ಥದಲ್ಲಿ ಲೇವಡಿ ಮಾಡಿದರು. ಇಂತಹ ಲೇವಡಿಗಳು ಹೊಸದೂ ಅಲ್ಲ; ಅವುಗಳ ಉದ್ದೇಶ ನಿಗೂಢವೂ ಅಲ್ಲ. ದೊಡ್ಡ ಒಳಿತಿನ ಸಣ್ಣ ಕೆಡುಕನ್ನು ಅನಗತ್ಯವಾಗಿ ದೊಡ್ಡದು ಮಾಡಿ ಬಿಂಬಿಸುವ; ಹಾಗೂ, ದೊಡ್ಡ ಕೆಡುಕಿನ ಸಣ್ಣ ಒಳಿತನ್ನು ದುರುದ್ದೇಶ ಪೂರಕವಾಗಿ ಹೆಮ್ಮೆಯೆಂಬಂತೆ ತೋರಿಸುವ ಇಂತವರು ಮುಂಚಲನೆ ಬಯಸದ ಯಥಾಸ್ಥಿತಿ ವಾದಿಗಳಾಗಿರುತ್ತಾರೆ. ಸಾಮಾಜಿಕ ನ್ಯಾಯದ ಮೀಸಲಾತಿ ವ್ಯವಸ್ಥೆಯನ್ನು, ಜಾತಿ ದೌರ್ಜನ್ಯದ ಪೊಲೀಸ್‌ ಕೇಸುಗಳನ್ನು, ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ಇಂತದ್ದೇ ಲಾಜಿಕ್ಕುಗಳ ಮೂಲಕ ಹೀಗಳೆಯುತ್ತಾ ಬಂದಿದ್ದಾರೆ. ಆ ಮೂಲಕ ಇಂತಹ ಪ್ರಗತಿಪರ ಸಿದ್ದಾಂತ ಅಥವಾ ಕಾಯ್ದೆಗಳು ಸಮಾಜಕ್ಕೆ ಮಾರಕ ಎಂಬ ಅಭಿಪ್ರಾಯ ರೂಪಿಸುವ ಪುರೋಹಿತಶಾಹಿ ಅಜೆಂಡಾ ಅಲ್ಲಿ ಕೆಲಸ ಮಾಡುತ್ತಿರುತ್ತದೆ. ಅಂತವರು ಫೆಮಿನಿಸಂ ಅನ್ನು, ಕುಡಿದು ತೂರಾಡುವ ಮಹಿಳೆಯರ ಜೊತೆ ಸಮೀಕರಿಸುವ ಮುನ್ನ ಈ ಸಿನಿಮಾವನ್ನೊಮ್ಮೆ ನೋಡಬೇಕು.

ಫೆಮಿನಿಚ್ಚಿ ಫಾತಿಮಾ

ಗಂಡಾಳ್ವಿಕೆಯ ಈ ಸಮಾಜದಲ್ಲಿ ಒಬ್ಬ ಮಹಿಳೆ ಯಕಶ್ಚಿತ್‌ ನೆಮ್ಮದಿಯ ನಿದ್ರೆಗಾಗಿ ಹೇಗೆಲ್ಲ ಪರಿತಪಿಸುತ್ತಾಳೆ ಎನ್ನುವ ಕಥೆಯೇ ಈ ಸಿನಿಮಾ. ಹೆಣ್ಣು ಬಯಸುವ ನೆಮ್ಮದಿಯನ್ನು ಇಲ್ಲಿ ಒಂದು ಹಾಸಿಗೆಯ ರೂಪಕದ ಮೂಲಕ ತೋರಿಸಲಾಗಿದೆ. ಸೀದಾಸಾದಾ ಕಥೆಯನ್ನು ಎಲ್ಲಿಯೂ ಬೋರ್‍‌ ಹೊಡೆಸದಂತೆ, ಯಾವುದೂ ಅಸಹಜವೆನಿಸದಂತೆ ಕಟ್ಟಿಕೊಡುವಲ್ಲಿ ನಿರ್ದೇಶಕ ಫಾಸಿಲ್‌ ಮೊಹಮ್ಮದ್‌ ಗೆದ್ದಿದ್ದಾರೆ. ಆ ಮೂಲಕ ಸಿನಿಮಾವನ್ನೂ ಗೆಲ್ಲಿಸಿದ್ದಾರೆ.

ಮನುಷ್ಯನಿಗೆ ನಿದ್ರೆಯೆ ನೆಮ್ಮದಿ. ಆ ನಿದ್ರೆಗೆ ಹಾಸಿಗೆಯೇ ಅಡಿಪಾಯ. ಒರಟು ಮಂಚದ ಮೇಲೆ ಮಲಗಿ ಮೈನೋವಿನಿಂದ ನರಳುವ ಫಾತಿಮಾಳಿಗೆ ಮೆತ್ತನೆಯ ಹಾಸಿಗೆಯ ಮೇಲೆ ಕಣ್ಮುಚ್ಚಿ ನೆಮ್ಮದಿಯಿಂದ ನಿದ್ರೆ ಮಾಡಬೇಕೆನ್ನುವುದು ಸಣ್ಣ ಕನಸು. ಆ ಕನಸಿಗಾಗಿಯೇ ಅವಳ ಹೋರಾಟ. ಮೂರು ಮಕ್ಕಳಾದ ನಂತರ ಗಂಡನ ಲೈಂಗಿಕ ನಿರಾಸಕ್ತಿಗೆ ತುತ್ತಾಗಿ ಪ್ರತ್ಯೇಕವಾಗಿ ಮಕ್ಕಳೊಟ್ಟಿಗೆ ಮಲಗುತ್ತಿದ್ದ ಫಾತಿಮಾಳ ಹಾಸಿಗೆ ಮೇಲೆ ಮಗ ನಿದ್ರೆಯಲ್ಲಿ ಮೂತ್ರ ಮಾಡುತ್ತಾನೆ. ಅದನ್ನು ಒಣಗಿಸಲು ಬಿಸಿಲಿಗೆ ಹಾಕಿದ ವೇಳೆ ನಾಯಿಯೊಂದು ಅದರ ಮೇಲೆ ಗಲೀಜು ಮಾಡುತ್ತದೆ. ಕರ್ಮಠ ಗಂಡನ ಆಣತಿಯಂತೆ ಅದನ್ನು ಶುಚೀಕರಿಸಿ, ನಾಯಿಮುಟ್ಟಿದ ಪಾಪ ಕಳೆಯದೆ ಅದನ್ನು ಒಳಗೆ ತರಲಾಗದೆ, ಗುಜರಿ ವ್ಯಾಪಾರಿಗೆ ದಾನ ಮಾಡುತ್ತಾಳೆ. ಅಲ್ಲಿಂದ ಶುರುವಾಗುತ್ತದೆ ಫಾತಿಮಾಳ ಹಾಸಿಗೆಯ ಹೋರಾಟ. ಬೇಡಿಕೊಂಡರೂ ಗಂಡ ಹೊಸ ಹಾಸಿಗೆ ಕೊಡಿಸುವುದಿಲ್ಲ. ಗೆಳತಿಯ ನೆರವಿನಿಂದ ಕಂತಿನಲ್ಲಿ ಒಂದು ಹೊಸ ಹಾಸಿಗೆ ಖರೀದಿಸಿದಾಗಲೂ, “ಇನ್‌ಸ್ಟಾಲ್‌ಮೆಂಟಲ್ಲಿ ಬಡ್ಡಿಯ ದುರಾಸೆ ಹೆಣೆಯಲಾಗಿದೆ; ಬಡ್ಡಿ ಹಣವೆಂದರೆ ಅದು ಪಾಪದ ಹಣ. ಅಂತಹ ಖರೀದಿಗೆ ಒಪ್ಪುವುದಿಲ್ಲ” ಎನ್ನುವ ಗಂಡ, ಹಾಸಿಗೆಯನ್ನು ವಾಪಾಸು ಕಳಿಸುತ್ತಾನೆ. ಯಾರದೊ ಮನೆಯಲ್ಲಿ ಬಳಸಿ ಮೂಲೆಗೆಸೆದಿದ್ದ ಹಾಸಿಗೆಯನ್ನು ಆಕೆ ತಂದಾಗಲೂ, “ಅದರ ಮೇಲೆ ಹಲವರು ಜೀವಬಿಟ್ಟಿದ್ದಾರೆ. ಅದು ಪಾಪದ  ಹಾಸಿಗೆ” ಎಂದು  ಗಂಡ ನಿರಾಕರಿಸುತ್ತಾನೆ. ಮನುಷ್ಯ ದುರಾಸೆಯ ನೀಚತನಕ್ಕೆ ಫಾತಿಮಾ ವಿಚಿತ್ರ ಬಲಿಪಶುವಾಗುತ್ತಾಳೆ.

ನಟಿ ಶಾಮ್ಲಾ ಹಮ್ಜಾ

ಮನೆಗೆಲಸ, ಮಕ್ಕಳ ಲಾಲನೆ, ಗಂಡನ ಸೇವೆ, ಧಾರ್ಮಿಕ ರಿವಾಜುಗಳ ಪಾಲನೆಯಲ್ಲಿ ತನ್ನದೆಲ್ಲವನ್ನು ಕಳೆದುಕೊಂಡು ತನ್ನವರಿಗಾಗಿ ಬದುಕುವ ಫಾತಿಮಾ ಪ್ರತಿಮನೆಯ ಸ್ತ್ರೀಕುಲದ ದ್ಯೋತಕವಾಗಿ ಗೋಚರಿಸುತ್ತಾಳೆ. ಪಕ್ಕದಲ್ಲಿ ಕೈಗೆಟುಕುವ ಅಂತರದಲ್ಲಿರುವ ಫ್ಯಾನಿನ ಸ್ವಿಚ್‌ ಆನ್‌ ಮಾಡಲು, ಅಡುಗೆ ಮನೆಯಲ್ಲೊ, ಹಿತ್ತಲಿನಲ್ಲೋ ಕೆಲಸ ಮಾಡುವ ಫಾತಿಮಾಳನ್ನು ಕೂಗಿ ಕರೆಯುವ ಗಂಡನ ಸೋಮಾರಿತನವನ್ನು ಆಕೆ ಪತಿಸೇವೆಯ ಸೋಗಿನಲ್ಲಿ ಸೈರಿಸಿಕೊಳ್ಳುತ್ತಾಳೆ. ಆದರೆ  ಅದಕ್ಕೆಲ್ಲ ಪ್ರತಿಯಾಗಿ ಆಕೆ ಕೇಳುವುದು ಕೇವಲ ನೆಮ್ಮದಿಯ ನಿದ್ರೆ; ಒಂದು ಮೆತ್ತನೆಯ ಹಾಸಿಗೆ.  ಅದಕ್ಕಾಗಿ ಫಾತಿಮಾ ನಡೆಸುವ ಹೋರಾಟವು, ಪ್ರತಿ ಹೆಣ್ಣು ಸಣ್ಣಪುಟ್ಟ ನೆಮ್ಮದಿಗಾಗಿ ನಡೆಸುವ ಹೋರಾಟಗಳ ರೂಪಕವಾಗಿ ನೋಡುಗರ ಮನಸ್ಸಿನಲ್ಲಿ ನಿಲ್ಲುತ್ತದೆ.

ಕತೆಯನ್ನು ಇಲ್ಲಿಗೇ ನಿಲ್ಲಿಸಿದ್ದರೆ ಸ್ತ್ರೀವೇದನೆಯ ದುರಂತ ಕಥನವಾಗಿ ಉಳಿದು ಹೋಗುತ್ತಿತ್ತು. ಆದರೆ ಫೆಮಿನಿಸಂ ಹುಟ್ಟುವುದೇ ಶೋಷಣೆಯ ವಿರುದ್ಧದ ಪ್ರತಿರೋಧದಲ್ಲಿ. ಸಂಕಲೆಗಳಿಂದ ಬಿಡುಗಡೆಯ ಬಂಡಾಯ ಕಾಣಿಸದೆ ಹೋದರೆ ಅದು ಫೆಮಿನಿಸಂ ಎನಿಸಿಕೊಳ್ಳುವುದಿಲ್ಲ. ದುಡಿಮೆ ಮತ್ತು ಆರ್ಥಿಕ ಸ್ವಾವಲಂಬನೆಗಳನ್ನು ಬಿಡುಗಡೆಯ ದಾರಿಯಾಗಿ ತೋರಿಸುವ ನಿರ್ದೇಶಕರು ಫಾತಿಮಾಳ ಫೆಮಿನಿಸಂ ಮೂಲಕ ಕಥೆಯನ್ನು ಆಶಾವಾದದ ಕ್ಲೈಮ್ಯಾಕ್ಸ್‌ಗೆ ತಂದು ನಿಲ್ಲಿಸುತ್ತಾರೆ. ಮಕ್ಕಳನ್ನು ಹೆರುವ ಕಾರ್ಖಾನೆಯಾಗಲಾರೆ ಎಂದು ಲೈಂಗಿಕ ಶೋಷಣೆಗೆ ಸವಾಲು ಎಸೆಯುವಲ್ಲಿಂದ ಶುರುವಾಗಿ “ನಿಮಗೂ ಕೈಯಿದೆಯಲ್ಲವೇ, ನೀವೇ ಫ್ಯಾನ್‌ ಸ್ವಿಚ್ಚು ಆನ್‌ ಮಾಡಿಕೊಳ್ಳಿ” ಎಂಬ ಪ್ರತಿರೋಧವಾಗಿ  ಫಾತಿಮಾ ರೂಪಾಂತರಗೊಳ್ಳುತ್ತಾಳೆ. ಎಲ್ಲೆ ಮೀರಿದ ಹತಾಶೆ ಮತ್ತು ಸ್ವಾವಲಂಬನೆಗಳು ಆಕೆಯನ್ನು ಬದಲಾವಣೆಯ ಹಾದಿಗೆ ತಂದು ನಿಲ್ಲಿಸುತ್ತವೆ. ತನ್ನ ಸ್ವಂತ ದುಡಿಮೆಯ ಹಣದಿಂದ ತಾನು ಬಯಸಿದ ನೆಮ್ಮದಿಯನ್ನು, ಅರ್ಥಾತ್‌ ಹಾಸಿಗೆಯನ್ನು ಖರೀದಿಸಿ ತರುತ್ತಾಳೆ. ಅದರ ಮೇಲೆ ಯಾರ ಹಂಗೂ ಇಲ್ಲದೆ ಕಣ್ಮುಚ್ಚಿ ಮಲಗುತ್ತಾಳೆ.

ಫೆಮಿನಿಸಂ ಹೋರಾಟದಲ್ಲಿ ಹೆಣ್ಣಿನ ಸ್ವಾತಂತ್ರ್ಯವೆಂದರೆ ನಮಗೆ ನೆನಪಾಗಬೇಕಾದ್ದು ಹೊಸ ವರ್ಷದ ಪಾರ್ಟಿಯಲ್ಲಿ ಕುಡಿದು ತೂರಾಡುವ ಬೆರಳೆಣಿಕೆಯ ಮಹಿಳೆಯರಲ್ಲ; ಸಣ್ಣ ನೆಮ್ಮದಿಯ ನಿದ್ರೆಗಾಗಿ ಹೋರಾಡುತ್ತಿರುವ ಫಾತಿಮಾಳಂತಹ ಕೋಟ್ಯಂತರ ಸ್ತ್ರೀಯರು!

ನಿರ್ದೇಶಕ ಫಾಸಿಲ್‌ ಮೊಹಮ್ಮದ್

ಇದು ಕೇವಲ ಒಂದು ಊರಿನ, ಒಂದು ರಾಜ್ಯದ, ಒಂದು ದೇಶದ ಅಥವಾ ಒಂದು ಜಾತಿಯ, ಒಂದು ಧರ್ಮದ ಕಥೆಯಲ್ಲ. ಹಾಗೆ ಸೀಮಿತಗೊಳಿಸಿ ನೋಡಲು ಮುಂದಾದರೆ ಅದು ಸಿನಿಮಾಗೆ ಮಾಡುವ ಅಪಚಾರ ಮಾತ್ರವಲ್ಲದೆ; ಮಹಿಳೆಯರ ವೇದನೆಗಳಿಗೆ ಬಗೆಯುವ ದ್ರೋಹವೂ ಹೌದು. ಕೆಲ ವರ್ಷಗಳ ಹಿಂದೆ ಇದೇ ಮಲಯಾಳಂನಲ್ಲಿ ‘ದಿ ಗ್ರೇಟ್‌ ಇಂಡಿಯನ್‌ ಕಿಚನ್‌’ ಎನ್ನುವ ಸಿನಿಮಾ ಬಂದಿತ್ತು. ಅದು ಕೂಡಾ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣೊಬ್ಬಳು ಹೇಗೆ ಅಡುಗೆಮನೆಗೆ ಸೀಮಿತವಾಗಿ ತನ್ನ ಕನಸುಗಳನ್ನು ಕೊಂದುಕೊಳ್ಳುತ್ತಾಳೆ, ಆ ಹತಾಶೆಯಿಂದ ಹೇಗೆ ಬಿಡುಗಡೆಗೆ ಹಾತೊರೆಯುತ್ತಾಳೆ ಎಂಬ ಮನೋಜ್ಞ ಕಥೆ ಹೊಂದಿದ್ದ ಸಿನಿಮಾ. ಆ ಸಿನಿಮಾದ ಕರ್ಮಠ ಹಿಂದೂ ಕುಟುಂಬದ ನಿಮಿಷಾಳ ಪಾತ್ರಕ್ಕೆ ಹೇಗೆ ಪ್ರಾಂತ್ಯ, ಭಾಷೆ, ಧರ್ಮದ ಚೌಕಟ್ಟುಗಳಿಲ್ಲವೋ, ಹಾಗೆಯೇ ಇಲ್ಲಿ ಫಾತಿಮಾಳಿಗೂ ಚೌಕಟ್ಟುಗಳಿಲ್ಲ. ಅವರು ಸಮಸ್ತ ಸ್ತ್ರೀಕುಲದ ರೂಪಕವಷ್ಟೆ.

ತಮ್ಮ ಮೊದಲ ನಿರ್ದೇಶನದಲ್ಲೆ ಫಾಸಿಲ್‌ ಮೊಹಮ್ಮದ್ ಭರವಸೆ ಮೂಡಿಸಿದ್ದರೆ, ಫಾತಿಮಾಳಾಗಿ ತನ್ನ ಎರಡನೇ ಸಿನಿಮಾದಲ್ಲಿ ಶಾಮ್ಲಾ ಹಮ್ಜಾ ಮನೋಜ್ಞವಾಗಿ ಅಭಿನಯಿಸಿ ಇಷ್ಟವಾಗುತ್ತಾರೆ. ಫಾತಿಮಾ ನಟನೆಗಾಗಿ ಅವರಿಗೆ 55ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯೂ ಲಭಿಸಿದೆ. ‘ಮನೋರಮಾ ಮ್ಯಾಕ್ಸ್‌’ ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದು.

ಇಂತಹ ಸಿನಿಮಾಗಳನ್ನು ನೋಡಿದಾಗ, ಒಂದು ಕೊರಗು ಕಾಡಲು ಶುರುವಾಗುತ್ತದೆ. ಪಕ್ಕದ ಮಲಯಾಳಂ, ತಮಿಳು ಇಂಡಸ್ಟ್ರಿಗಳು ಈ ಬಗೆಯ ಅರ್ಥಪೂರ್ಣ, ವೈಚಾರಿಕ ಪ್ರಯೋಗಗಳಿಗೆ ಒಡ್ಡಿಕೊಂಡಿರುವಾಗ, ನಮ್ಮ ಕನ್ನಡ ಇಂಡಸ್ಟ್ರಿಯಲ್ಲೇಕೆ ಇಂತಹ ಪ್ರಯತ್ನಗಳು ಕಾಳುಗಟ್ಟುತ್ತಿಲ್ಲ?

ಮಾಚಯ್ಯ ಎಂ ಹಿಪ್ಪರಗಿ

More articles

Latest article