Sunday, September 8, 2024

ಕ್ರಿಶ್ಚಿಯಾನಿಟಿ, ಶಿಕ್ಷಣ ಸೇವೆ ಮತ್ತು ಜೆರೋಸಾ..

Most read

ತುಂಬಾ ಹಿಂದೆ ಚಿಂತಕ ದಿ. ಡಾ. ಮುರಾರಿ ನಿ ಬಲ್ಲಾಳ ಅವರು ಕೆಲ ಮಂದಿ ಧರ್ಮದ ಅಮಲನ್ನು ಮುಗ್ಧಜನರಲ್ಲಿ ತುಂಬಿ ವ್ಯವಸ್ಥಿತವಾಗಿ ಅವರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂಬ ಕಳವಳವನ್ನು ವ್ಯಕ್ತಪಡಿಸಿದ್ದರು. ಯಾವುದೇ ಕೆಲಸವಿಲ್ಲದೆ ಬೀದಿ ಅಲೆಯುವ ಮಂದಿಗಳ ಬಗ್ಗೆ ಈ ಮಾತು ಅನ್ವಯವಾಗಿದ್ದರೆ ಅದನ್ನು ಸ್ವಲ್ಪ ನಿರ್ಲಕ್ಷ್ಯ ಮಾಡಬಹುದಿತ್ತು. ಆದರೆ, ಮುಂದಿನ ಭವಿಷ್ಯವನ್ನು ರೂಪಿಸಿ ಕೊಳ್ಳುತ್ತಿರುವ ಎಳೆಯ ವಿದ್ಯಾರ್ಥಿಗಳ ಕಡೆಯಿಂದ ಈ ಧರ್ಮದ ಅಮಲಿನ ಘಾಟು ಬರತೊಡಗಿದರೆ ಅದು ಅಪಾಯದ ಮುನ್ಸೂಚನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊನ್ನೆ ಮಂಗಳೂರಿನ ಜೆರೋಸಾ ಕಾಲೇಜಿನ ಪ್ರಕರಣ ಈ ಕುರಿತಂತೆ ಅನೇಕರ ಕಳವಳಕ್ಕೆ ಕಾರಣವಾಗಿದೆ. ಮುಸಲ್ಮಾನ ಕ್ರಿಶ್ಚಿಯನ್ನರಿಂದ ಯಾವ ಕಾರಣಕ್ಕೂ ಓಟು ಬೀಳದು. ಆ ಬಗ್ಗೆ ಯೋಚಿಸಿ ಯಾವುದೇ ಪ್ರಯೋಜನವಿಲ್ಲ. ಆದರೆ, ಬಹುಸಂಖ್ಯಾತ ಹಿಂದೂಗಳ ಓಟು ಉಂಟಲ್ಲ. ಯಾವುದೋ ಸಂಗತಿಯ (ಬಹುತೇಕ ಭಾವನಾತ್ಮಕ) ನೆಪದಲ್ಲಿ ಓಟು ಕೊಡದ ಅಲ್ಪಸಂಖ್ಯಾತರನ್ನೇ ಗುರಿಯಾಗಿಸಿ ಅದನ್ನು ಧ್ರುವೀಕರಣಗೊಳಿಸಿದರೆ ಅಷ್ಟೆ ಸಾಕು ಎಂಬ ಲೆಕ್ಕಾಚಾರ ಕೆಲವರದು.

ಕಳೆದಭಾರಿಯ ಚುನಾವಣಾ ಸಮಯದಲ್ಲಿ ಹಿಜಾಬ್ ಸುದ್ದಿಯಾಗಿ ಕರಾವಳಿಯಲ್ಲಿ ಫಲ ಕೊಟ್ಟಿತು. ಈಗ ಗುರುದೇವ ರವೀಂದ್ರನಾಥ ಟಾಗೋರರ ಕವಿತೆಯ ಪಠ್ಯವೊಂದರ ನೆಪದಲ್ಲಿ ಕ್ರಿಶ್ಚಿಯನ್ನರ ಮೇಲೆ ಮತಾಂತರ ಮತ್ತು ಹಿಂದೂ ಭಾವನೆಗೆ ಧಕ್ಕೆ ಎಂಬ ಹುಯಿಲನ್ನ ಹಬ್ಬಿಸಲಾಗುತ್ತಿದೆ. ಅದೂ ಸರಿಯೇ, ಯಾವಾಗಲೂ ಮುಸಲ್ಮಾನರನ್ನೇ ಟಾರ್ಗೆಟ್ ಮಾಡಿದರೆ ತಿಂದದ್ದೇ ತಿಂದು ಅದು ಇಷ್ಟದ ಭಕ್ಷ್ಯವಾದರೂ ಬೋರ್ ಹೊಡೆಸೋಲ್ವಾ.. ಅದಕ್ಕೆ ಫಾರ್ ಎ ಚೇಂಜ್ ಎಂದು ಈ ಭಾರಿಯ ಸರದಿ ಕ್ರಿಶ್ಚಿಯನ್ನರದ್ದು. ಬೊಬ್ಬೆ ಹೊಡೆಯುವವರು ಕಲಿತದ್ದು, ಅವರ ನಾಯಕರುಗಳು, ಅವರ ಮಕ್ಕಳು ಹೋಗುತ್ತಿರುವುದು, ಅವರ ಸಂಬಂಧಿಕರು ಹೋಗುತ್ತಿರುವುದೆಲ್ಲ ಇದೇ ಕ್ರಿಶ್ಚಿಯನ್ ಮ್ಯಾನೇಜ್ ಮೆಂಟಿನ ಸ್ಕೂಲಿಗೇ. ಆದರೂ ಹಿಂದೂ ಧರ್ಮ ಅಪಾಯದಲ್ಲಿದೆ. ಹಾಗಾಗಿ ಜನರಿಗೆ ಧರ್ಮರಕ್ಷಣೆಯ ಗುತ್ತಿಗೆ ಹೊತ್ತ ಪ್ರಪಂಚದ ಏಕೈಕ ಪಾರ್ಟಿಗೇ ನೀವು ಮೊರೆಹೋಗದಿದ್ದರೆ ಉಳಿಗಾಲವಿಲ್ಲ ಎಂಬ ಮೆಸೇಜು ಜನರಿಗೆ ಹೋಗಬೇಕಲ್ಲ ವಿಷಯ ಇಷ್ಟೆ. ಅದಕ್ಕಾಗೇ ಈ ಎಲ್ಲ ಹೈಡ್ರಾಮಾಗಳು ಬೇರೇನಿಲ್ಲ.

ನಮ್ಮ ಮೆಚ್ಚಿನ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರು ತನ್ನ ಚಿಗುರು ಮೀಸೆಯ ಪ್ರಾಯದಲ್ಲಿ ತಂದೆಯೊಂದಿಗೆ ಆಸ್ತಿ ಪಾಲು ಬೇಕೆಂದು  ಹಿರಿಯರನ್ನೆಲ್ಲ ಕರೆದು ರಂಪಾಟ ಮಾಡಿದ್ದರಂತೆ (ಅವರೇ ಸಂದರ್ಶಗಳಲ್ಲಿ ಹೇಳಿಕೊಂಡಿದ್ದು) ಕಾರಣ ಎಲ್ಲೋ ಹಳ್ಳಿಯಲ್ಲಿ ಕುರಿ ಮೇಯಿಸಿಕೊಂಡಿದ್ದ ಹುಡುಗ ಚೂರುಪಾರು ವಿದ್ಯೆ ಕಲಿತು ನಂತರ ಲಾಯರ್ ಓದಲು ಮನಸ್ಸು ಮಾಡಿದ್ದೇ ಇದಕ್ಕೆಲ್ಲ ಕಾರಣ. ಅದನ್ನ ಅವರ ತಂದೆ ಯಾವುದೋ ಐಯ್ನೋರಲ್ಲಿ ಕೇಳಿದಾಗ ಅದೆಲ್ಲಾ ನಿಮ್ಮಂತವರಿಗೆ ಆಗುವಂತಾದ್ದಲ್ಲಪ್ಪಾ ಅಂತ ಅವರು ಹೇಳಿದ್ದನ್ನೇ ತಲೆಗೆ ತೆಗೆದುಕೊಂಡ ಸಿದ್ದರಾಮಯ್ಯರ ತಂದೆ ಮಗನ ವಕೀಲಿ ವೃತ್ತಿಯ ಆಸೆಗೆ ಸಮ್ಮತಿಸದಿದ್ದುದೇ ಈ ರಂಪಾಟಕ್ಕೆಲ್ಲ ಮೂಲ ಕಾರಣ.  ಸುಮಾರು 1975 ನೇ ಇಸವಿಯಲ್ಲಿ ನನ್ನ ದೊಡ್ಡಣ್ಣನನ್ನ ನನ್ನ ತಂದೆ ಹೈಸ್ಕೂಲಿಗೆ ಸೇರಿಸುವಾಗ ಹಿಂದಿಯ ಬದಲು ಸಂಸ್ಕೃತವನ್ನು ಆಯ್ಕೆ ಮಾಡಿದ್ದಕ್ಕೆ ಅಲ್ಲಿನ ಮುಖ್ಯಸ್ಥರು ಮೇಲಿನ ರೀತಿಯಲ್ಲೇ ಇದು ನಿಮಗೆಲ್ಲ ಆಗೋದಿಲ್ಲ.. ಅಂತಲೇ ಹೇಳಿದ್ದರಂತೆ. ನಂತರ ಉಳಿದ ಅಣ್ಣಂದಿರು, ನಾನು, ತಂಗಿ ಎಲ್ಲರೂ ಸಂಸ್ಕೃತವನ್ನೇ ಆಯ್ದು ಕೊಂಡದ್ದು ಬೇರೆ ವಿಚಾರ.

ಸಾವಿರಾರು ವರ್ಷಗಳಿಂದ ಒಂದು ವರ್ಗದ ಮಂದಿ “ಇದು ನಿಮಗೆಲ್ಲ ಆಗದ ವಿಚಾರ..” ಎಂದು ಹೇಳುತ್ತಲೇ ಉದ್ದೇಶ ಪೂರ್ವಕವಾಗಿ ಒಂದು ಬೃಹತ್ ಸಮೂಹವನ್ನು ಸಾಕ್ಷರ ಜಗತ್ತಿನಿಂದ ಹೊರಗಿಟ್ಟಿತ್ತು. ಈ ಸಾಮಾಜಿಕ ಬೇಧಗಳ ತಡೆಯನ್ನು ಮೀರಿ ಸಾರ್ವತ್ರಿಕವಾಗಿ ಎಲ್ಲರನ್ನು ಸಾಕ್ಷರತೆಯ ತೆಕ್ಕೆಗೆ ಎಳೆದು ತಂದಂತಹ ಕೀರ್ತಿ ಈ ದೇಶದಲ್ಲಿ ಇದ್ದರೆ ಅದು ಕ್ರಿಶ್ಚಿಯಾನಿಟಿ ಸಮುದಾಯದ್ದು. ಇದೇ ಕಾರಣಕ್ಕೆ ನಾರಾಯಣ ಗುರುಗಳು ವಿದ್ಯೆಗೆ ಕಾರಣರಾದ ಬ್ರಿಟಿಷರೇ ನನ್ನ ಗುರುಗಳು ಎಂದಿದ್ದರು. ನಮ್ಮ ಕನ್ನಡದ ರಾಷ್ಟ್ರಕವಿ ಕುವೆಂಪುರವರು ಬ್ರಿಟಿಷರು ಬಾರದಿರುತ್ತಿದ್ದರೆ ನಾನು ಯಾವುದೋ ಮೌಢ್ಯದ ಕೊಚ್ಚೆಯಲ್ಲಿ ಮುಳುಗಿರುವ ಹಂದಿಯಂತಿರುತ್ತಿದ್ದೆ ಎಂಬ ಮಾರ್ಮಿಕ  ನುಡಿಯನ್ನು ಹೇಳಿದ್ದು ಇದೇ ಹಿನ್ನೆಲೆಯಲ್ಲಿ.

ಮೊಂಡು ಸನಾತನವಾದಿಗಳೇ ಆಗಾಗ ಪ್ರಸ್ತಾಪಿಸುವ ’ಕರ್ಮಫಲ ಸಿದ್ಧಾಂತ”ದ ಪರಿಕಲ್ಪನೆ  ಎಷ್ಟು ದಿಟವೋ ಗೊತ್ತಿಲ್ಲ. ಆದರೆ ಬ್ರಿಟಿಷರ ಹೆಸರಲ್ಲಿ ಭಾರತದಲ್ಲಿ ಅಧಿಪತ್ಯ ಸ್ಥಾಪಿಸಿದ ಕ್ರಿಶ್ಚಿಯಾನಿಟಿಯು ತನ್ನ ಅನೇಕ ಸುಧಾರಣಾ ಕ್ರಮಗಳ ಮುಖಾಂತರ ಮೇಲು ಕೀಳಿನ ಬೇಧಗಳಿಗೇ ಜೋತು ಬಿದ್ದಿದ್ದಂತ ಮನು ಶಾಸನಾಧಾರಿತ ಬ್ರಾಹ್ಮಣ್ಯದ ತಲೆ ಮೊಟಕಿದ್ದು ಮಾತ್ರ ಸುಳ್ಳಲ್ಲ. ಶತಮಾನಗಳ ಕಾಲ ಆಳಿದ ಮೊಗಲರು, ನಿಜಾಮರು, ಸುಲ್ತಾನರಂತಹ ಮುಸಲ್ಮಾನ ಅರಸೊತ್ತಿಗೆಯ ವಿರುದ್ಧ ಯಾವತ್ತೂ ಸಿಡಿದಿರದಿದ್ದ ಭಾರತ ಬ್ರಿಟಿಷರೆಂಬ ಕ್ರಿಶ್ಚಿಯಾನಿಟಿಯ ವಿರುದ್ಧ ಅವರನ್ನು ದೇಶದಿಂದಲೇ ಓಡಿಸುವ ಸಲುವಾಗಿ ಟೊಂಕ ಕಟ್ಟಿ ನಿಂತದ್ದು ಅವರ ಎಲ್ಲರನ್ನೂ (ತಳ ಸಮುದಾಯ ಮತ್ತು ಸ್ತ್ರೀಯರು) ಸಮಾನವಾಗಿ ಕಾಣುವ ಜಾತ್ಯತೀತ ಸಿದ್ಧಾಂತ ಮತ್ತು ಮೌಢ್ಯ ವಿರೋಧಿ ನಿಲುವುಗಳೇ ಮುಖ್ಯ ಕಾರಣ ಎಂಬ ವಾದವಿದೆ. ಗೌರವಾನ್ವಿತ ಪಂಡಿತ್ ಸಮುದಾಯದ ಬ್ರಾಹ್ಮಣರಾಗಿಯೂ ಕೂಡ ಸಂಪ್ರದಾಯವಾದಿಗಳು ನೆಹರೂ ಅವರ ಹೆಸರನ್ನು ಕೇಳಿದಾಕ್ಷಣ ಕಿಡಿ ಕಾರುವುದು ಹಾಗು ಕೀಳಾಗಿ ಅವಮಾನಿಸುವುದಕ್ಕೆ ನೆಹರೂರವರ ಇದೇ ಮನುಸಿದ್ಧಾಂತಕ್ಕೆ ವಿರುದ್ಧವಿರುವ ಜಾತ್ಯತೀತ ನಿಲುವುಗಳೇ  ಕಾರಣ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಕೋಟ ವಾಸುದೇವ ಕಾರಂತ ಎಂಬ ಬ್ರಾಹ್ಮಣ್ಯ ಪರ ಲೇಖಕರು (ದಿವಂಗತರು) ಇದನ್ನು ನೇರವಾಗಿ ಯಾವ ಮುಚ್ಚುಮರೆಯಿಲ್ಲದೇ ತಮ್ಮ ಪುಸ್ತಕಗಳಲ್ಲಿ ಹೇಳಿಕೊಂಡಿದ್ದಾರೆ.


ಸಾಮಾನ್ಯವಾಗಿ ಆಯಾ ಧರ್ಮಗಳು ಹೇಳುವ ಅವುಗಳ ಭೋದನೆಯ ಪ್ರಭಾವವನ್ನು ಆ ಧರ್ಮದ ಜನರಲ್ಲಿ ಕಾಣಬಹುದು. ಇದಕ್ಕೆ ಅಪವಾದಗಳು ಕೂಡ ಸಾಕಷ್ಟಿವೆ (ಭೌದ್ಧ ಧರ್ಮಾನುಯಾಯಿಗಳು ಹಿಂಸೆಯನ್ನೇ ಮಾಡಲಾರರು ಎಂದೇನಿಲ್ಲ) ಕ್ರಿಶ್ಚಿಯನ್ನರಲ್ಲಿ ಯೇಸುವಿನ ಭೋಧನೆಗಳಾದ ಸೇವೆ ಹಾಗು ಸಹಕಾರವನ್ನು ಈ ರೀತಿಯಲ್ಲಿ ಸಾಮಾನ್ಯವಾಗಿ ಕಾಣಬಹುದು. ಮದರ್ ತೆರೇಸಾರಿಂದ ಹಿಡಿದು ಸಾಮಾನ್ಯ ನರ್ಸ್ ಗಳವರೆಗೆ ರೋಗಿಗಳು ಮತ್ತು  ಅಶಕ್ತರ ಸೇವೆಯಲ್ಲಿ ತೊಡಗಿಸಿಕೊಂಡ ಕ್ರಿಶ್ಚಿಯನ್ನರ ಸಂಖ್ಯೆ ಇತರರಿಗಿಂತ ದೊಡ್ಡದು. ಶಿಕ್ಷಣವನ್ನು ಹಂಚುವುದರಲ್ಲಿ ಇವರಿಗೆ ಯಾವ ತಾರತಮ್ಯದ  ತೊಡರುಗಳು ಎಂದೂ  ಕಾಣಿಸದು. ಈ ಕಾರಣಕ್ಕೆ ಅವರು ಹೋದಲ್ಲೆಲ್ಲ ಯಾವುದೇ ಬೇಧವೆಣಿಸದೇ ಶಿಕ್ಷಣಕ್ಕೆ ಮಹತ್ವವನ್ನು ನೀಡುತ್ತಾ ಹೋದರು. ಬ್ರಿಟಿಷರು ಸಾರ್ವತ್ರಿಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರೆ ಬಾಸೆಲ್ ಮಿಷನ್ ನಂತಹ ಜರ್ಮನ್ ಮಿಷನರಿಗಳು ತಾವಿದ್ದೆಡೆ ಸಾರ್ವಜನಿಕ ಶಾಲೆಗಳನ್ನು ತೆರೆದರು. ದಕ್ಷಿಣ ಕನ್ನಡ ಸಂಪೂರ್ಣ ಸಾಕ್ಷರತೆ ಹಾಗು ವಿದ್ಯಾವಂತರ ಜಿಲ್ಲೆ ಎಂಬ ಹೆಗ್ಗಳಿಕೆಯ ಹಿಂದೆ ಜರ್ಮನಿಯ ಬಾಷೆಲ್ ಮಿಷನರಿಗಳ ಸೇವಾ ಮನೋಭಾವದ ಕೊಡುಗೆ ತುಂಬಾ ದೊಡ್ಡದು.

ಈ ಬಗ್ಗೆ ಮಾತೆತ್ತಿದರೆ (ಉದಾಹರಣೆಗೆ ಜೆರೋಸಾ ಪ್ರಕರಣದ ಕುರಿತು) ಶಾಸಕರಿಂದ ಹಿಡಿದು ಕೆಲ ಕೃತಘ್ನ ಜನರು ಕ್ರಿಶ್ಚಿಯನ್ ಶಾಲೆಗೆ ಮಕ್ಕಳನ್ನು ಕಳುಹಿಸಬೇಡಿ ಬದಲು ಹಿಂದೂ ಶಾಲೆಗೆ ಕಳುಹಿಸಿ ಎಂದು ಮೀಡಿಯಾದೆದುರು ಜಾಲತಾಣಗಳಲ್ಲಿ ಬೊಬ್ಬಿಡುತ್ತಿದ್ದಾರೆ. ಆದರೆ, ಒಂದು ವಿಚಾರ ತಿಳಿದಿರಲಿ ಇಂದಿನ ಶೈಕ್ಷಣಿಕ ಸಂದರ್ಭಕ್ಕೂ ಹಾಗು ನೂರು ವರ್ಷ ಅಲ್ಲ ಕೇವಲ ಐದಾರು ದಶಕಗಳ ಹಿಂದಿನ ಶೈಕ್ಷಣಿಕ ಸಂದರ್ಭಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇವತ್ತು ಅನಕ್ಷರಸ್ಥ ಕೂಲಿ ಕೆಲಸಕ್ಕೆ ಹೋಗುವಾತನೂ ಕೂಡ ನನ್ನ ಮಗ ಓದಬೇಕು ಅದೂ ಇಂಗ್ಲಿಷ್ ಮೀಡಿಯಮ್ ನಲ್ಲಿ ಓದಿ ಮುಂದೆ ಏನೋ ಆಗಬೇಕು ಎಂದು ಕನಸು ಕಾಣುತ್ತಾನೆ. ಅದಕ್ಕಾಗಿ ಸಾಲ ಮಾಡಿಯಾದರೂ ಡೊನೇಷನ್ ಕಟ್ಟುತ್ತಾನೆ. ಟ್ಯೂಷನ್ ಗೆ ಕಳುಹಿಸುತ್ತಾನೆ. ಹಿಂದೆ ಸಾರ್ವತ್ರಿಕವಾಗಿ ಇರದಿದ್ದ ವಿದ್ಯೆಯ ಅವಶ್ಯಕತೆಯ ಅರಿವು ಇವತ್ತು ಎಲ್ಲರಲ್ಲೂ ಬಂದಿರುವುದರಿಂದ  ವಿದ್ಯಾಸಂಸ್ಥೆಗಳು ಪ್ರತಿವರ್ಷ ನಾಯಿಕೊಡೆಗಳಂತೆ ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿವೆ. ಇದೇ ಕಾರಣಕ್ಕೆ ವಿದ್ಯೆ ಎನ್ನುವುದು ಇವತ್ತು ಅತೀ ದೊಡ್ಡ ವ್ಯವಹಾರವಾಗಿ ಮಾರ್ಪಟ್ಟಿದೆ.

ಆದರೆ ತುಂಬಾ ಹಿಂದೆ ಹೋಗುವುದು ಬೇಡ ತೀರಾ 50-60 ರ ದಶಕಗಳಲ್ಲಿ ವಿದ್ಯೆ ನಮ್ಮಂತವರಿಗಲ್ಲ, ನಾವು ಧನಿಗಳ ಕೂಲಿ ಮಾಡಿಕೊಂಡೇ ನೆಮ್ಮದಿಯಲ್ಲಿ ಇದ್ದೇವೆ, ಮಕ್ಕಳನ್ನು ವಿದ್ಯೆ ಕಲಿಸಲು ವರ್ಷಪೂರ್ತಿ ಶಾಲೆಗೆ ಕಳುಹಿಸುವ ಬದಲು ಯಜಮಾನರ ಮನೆಯಲ್ಲೋ, ಸ್ವಲ್ಪ ಕಾಸಿದ್ದರೆ ಬೆಂಗಳೂರೋ ಬೊಂಬಾಯಿಗೋ ಕಳಿಸಿ ದುಡಿದರೆ ನಮಗೂ ಅನುಕೂಲ ಎಂದುಕೊಳ್ಳುವ ಹೆತ್ತವರೇ ಹೆಚ್ಚಿದ್ದರು. ಇನ್ನು ಹೆಣ್ಣು ಮಕ್ಕಳಿಗಂತೂ ಬೇಗ ಮದುವೆ ಮಾಡಿಕೊಟ್ಟರೆ ಸಾಕು ಹೇಗೂ ಮನೆ ಕೆಲಸ ಕಲ್ತಿದ್ದಾಳಲ್ಲ ವಿದ್ಯೆ ವೇಸ್ಟ್ ಎನ್ನೋ ಭಾವನೆ ಇತ್ತು.

ಈ ವಿದ್ಯೆ ಅನ್ನ ಕೊಟ್ಟೀತೇ.. ಅದು ನಮ್ಮಂತವರಿಗೆ ಯಾವ ಪ್ರಯೋಜಕ್ಕೂ ಬಾರದು ಎಂಬ ವಾತಾವರಣ ಇದ್ದ ಆ ಸಮಯದಲ್ಲಿ ಶಾಲೆಗಳನ್ನು ಕಟ್ಟಿ ಹೆತ್ತವರ ಮನವೊಲಿಸಿ ಕಾಡಿ ಬೇಡಿ ವಿದ್ಯಾರ್ಥಿಗಳನ್ನು ಶಾಲೆಗೆ ತಂದವರಿಗೂ ಇವತ್ತಿನ ಎಲ್ ಕೆ ಜಿ, ಯೂ ಕೆಜಿ ಅಡ್ಮಿಷನ್ ಗೂ ಲಕ್ಷ ಲಕ್ಷ ಫೀಸು ಪೀಕೋ ವಿದ್ಯಾ ದಂಧೆಯ ಕಾಲಕ್ಕೂ ಬಹಳಷ್ಟು ವ್ಯತಾಸವಿದೆ. ಎಲ್ಲರಿಗೂ ವಿದ್ಯೆಗೆ ಅವಕಾಶ ಒದಗಿಸಿದ ಕ್ರಿಶ್ಚಿಯನ್ ಮಿಷನರಿಗಳು ಹಿಂದೂಗಳ ಜಾತೀಯತೆ ಸಮಸ್ಯೆಯನ್ನು ಮನಗಂಡು ಬ್ರಾಹ್ಮಣೇತರರೊಂದಿಗೆ ಬೆರೆಯಲು ಒಪ್ಪದ ಬ್ರಾಹ್ಮಣ ಹುಡುಗಿಯರಿಗಾಗೇ ಪ್ರತ್ಯೇಕ ಶಾಲೆಗಳನ್ನು ತೆರೆದದ್ದು ಕೂಡ ಇದೆ. ಒಂದೂವರೆ ಶತಮಾನದ ಹಿಂದೆಯೇ ಬ್ರಾಹ್ಮಣ ಹೆಣ್ಣುಗಳಿಗೆಂದೇ ಜರ್ಮನ್ ಮಿಷನರಿಗಳು ಮಂಗಳೂರಲ್ಲಿ ಶಾಲೆಯನ್ನು ತೆರೆದಿದ್ದರು. ಜರ್ಮನಿಯಿಂದ ಫಾದರ್ ಹೆಬಿಕ್ ರೊಂದಿಗೆ ಬಂದಿದ್ದ ಮಿಷನರಿಗಳಿಬ್ಬರ ಪತ್ನಿಯರಾದ ಶ್ರೀಮತಿ ಲೆನ್ಹರ್ ಹಾಗು ಶ್ರೀಮತಿ ಗ್ರೆನರ್ ಎನ್ನುವವರು ಮಂಗಳೂರಿನ ಬ್ರಾಹ್ಮಣ ಹೆಮ್ಮಕ್ಕಳ ಶಾಲೆಯ ಮೊದಲ ಶಿಕ್ಷಕಿಯರಾಗಿ ಕಾರ್ಯ ನಿರ್ವಹಿಸಿದ ದಾಖಲೆಯಿದೆ.

ಇವತ್ತು ಜಾಲತಾಣಗಳಲ್ಲಿ ಇತಿಹಾಸ ಗೊತ್ತಿಲ್ಲದ ಮಂದಿ ಕ್ರಿಶ್ಚಿಯನ್ ಶಾಲೆ ಬಹಿಷ್ಕರಿಸಿ ಎಂದು ಕರೆ ನೀಡುತ್ತಿದ್ದಾರೆ. ಅದೂ ಸತ್ಯವೇ. ವಿದ್ಯೆ ವ್ಯಾಪಾರೀಕರಣಗೊಂಡಿರುವ ಇವತ್ತಿನ ಸಮಯದಲ್ಲಿ ಇದೊಂದು ವ್ಯಾವಹಾರಿಕ ತಂತ್ರದ ಭಾಗ ಎಂದುಕೊಂಡರೂ ಕೂಡ ತಪ್ಪೇನಿಲ್ಲ. ಕ್ರಿಶ್ಚಿಯನ್ ಶಾಲೆಗಳಲ್ಲಿ ಮತಾಂತರ ನಡೆಯುತ್ತಿದೆ ಎಂದು ದೂರುತ್ತಿದ್ದಾರೆ. ಯಾವುದೇ ಕ್ರಿಶ್ಚಿಯನ್ ವಿದ್ಯಾಸಂಸ್ಥೆ ತೆಗೆದುಕೊಳ್ಳಿ ಅಲ್ಲಿ ಕಲಿಯುವವರಲ್ಲಿ 80 % ಹಿಂದೂಗಳೇ ಇರುತ್ತಾರೆ. ಹಾಗಾದರೆ, ಐವತ್ತು ಅರವತ್ತು ವರ್ಷಗಳಿಂದ ಶಾಲೆ ಕಲಿತ ಲಕ್ಷಾಂತರ ಹಿಂದುಗಳಲ್ಲಿ ಮತಾಂತರ ಆದವರೆಷ್ಟು ಹೇಳಲು ಸಾಧ್ಯವೇ? ಒಂದು ವೇಳೆ ಆಗಿದ್ದೇ ನಿಜವಿದ್ದರೆ ವಿದ್ಯೆಯ ಜೊತೆಗೆ ಆರೋಗ್ಯ ಸೇವೆಯನ್ನೂ ಒದಗಿಸುವ ಕ್ರಿಶ್ಚಿಯನ್ನರು ದೇಶದಲ್ಲಿ ಖಂಡಿತಾ ಅಲ್ಪಸಂಖ್ಯಾತರಾಗಿ ಉಳಿಯುತ್ತಲೇ ಇರಲಿಲ್ಲ.

ಇದನ್ನೂ ಓದಿ- ಪೋಷಕರಿರಬೇಕು ಎಚ್ಚರದಿಂದ; ಮಕ್ಕಳನು ಕಾಪಾಡಿ ಮತಾಂಧರಿಂದ

ಶಾಲೆಯ ಅವರ ಕುಂಕುಮ ಬಳೆ ಮೊದಲಾದ ನಿಬಂಧನೆಗಳು ಅತಿರೇಕದ್ದು ಅನಿಸಿದರೂ (ಕ್ರಿಶ್ಚಿಯನ್ನರು ಮದುವೆಯಲ್ಲಿ ಅವರದಲ್ಲದ ಸಂಪ್ರದಾಯವಾದರೂ ಹಿಂದೂಗಳಂತೆ ಕರಿಮಣಿ ಕಟ್ಟುತ್ತಾರೆ. ಹಿಂದೂ ದೇಗುಲಗಳೆದುರು ಇರುವ ಗರುಡಗಂಬದ ರಚನೆಯ ಅನುಕರಣೆಯನ್ನು ಅವರು ಕೆಲ ಚರ್ಚುಗಳೆದುರು ಕೂಡ ಸ್ಥಾಪಿಸುವುದುಂಟು. ಎಲ್ಲರಲ್ಲೂ ಇರುವಂತೆ ತಮ್ಮದೇ ಶ್ರೇಷ್ಟ ಎಂಬ ಭಾವನೆ ಅವರಲ್ಲಿ ಇದೆಯೋ ತಿಳಿಯದು. ಆದರೆ ಅತೀ ಜಿಗುಟುತನ ಇರಲಾರದು) ಯಾವುದೋ ಸ್ವಾರ್ಥ ರಾಜಕೀಯದ ತೆವಲುಗಳಿಗಾಗಿ ಅದೂ ವಿದ್ಯಾರ್ಥಿಗಳ ಈ ಅಂತಿಮ ಪರೀಕ್ಷಾ ಸಮಯದಲ್ಲಿ ಎಳೆಯ ಮಕ್ಕಳ ಮನದಲ್ಲಿ ಧರ್ಮದ ಸೋಂಕನ್ನು ತುಂಬಿ, ಪ್ರಚೋದಿಸುವ ಸಲುವಾಗಿ ಆ ಎಳೆಯರ ಕೈಗಳಿಗೆ ಕೇಸರಿ ಬಾವುಟ ಕೊಟ್ಟು ಜೈ ಶ್ರೀರಾಮ ಸ್ಲೋಗನ್ ಕೂಗಿಸಿ (ನಾಳೆ ಈ ಮಕ್ಕಳು ಇದೇ ಸ್ಕೂಲಿಗೆ ಅದೇ ಮುಖವನ್ನು ಹೊತ್ತು ಹೋಗುವಾಗ ಈಗ ಪ್ರಚೋದಿಸುವ ರಾಜಕಾರಣಿಗಳು ಜೊತೆಯಲ್ಲಿ ಬರುವರೇ..?) ಅವರ ಭವಿಷ್ಯವನ್ನು ಹಾಳುಗೆಡವುದನ್ನು ಸ್ವಯಂ ಶ್ರೀರಾಮನೂ ಕೂಡ ಖಂಡಿತ ಒಪ್ಪಲಾರ.

ಶಂಕರ್ ಸೂರ್ನಳ್ಳಿ

ಲೇಖಕರು

More articles

Latest article