Sunday, July 14, 2024

ಪೋಷಕರಿರಬೇಕು ಎಚ್ಚರದಿಂದ; ಮಕ್ಕಳನು ಕಾಪಾಡಿ ಮತಾಂಧರಿಂದ

Most read

ಯಾವುದೋ ಒಂದು ಶಾಲೆಯಲ್ಲಿ ಯಾರೋ ಒಬ್ಬ ಶಿಕ್ಷಕಿ “ದೇವರು ಗುಡಿ ಮಸೀದಿ ಮಂದಿರಗಳಲ್ಲಿ ಇಲ್ಲಾ, ಮನುಷ್ಯರ ಮನಸ್ಸಲ್ಲಿರುವುದು” ಎಂದು ಹೇಳಿದ ಕೂಡಲೇ ಧರ್ಮ ಅವನತಿ ಹೊಂದಿದಂತಾಯಿತಾ? ಶಿಕ್ಷಕಿ ಹಾಗೆ ಹೇಳಿದ್ದರು ಅಂದ ಕೂಡಲೇ ಮಕ್ಕಳೆಲ್ಲಾ ಮಂದಿರಗಳಿಗೆ ಹೋಗುವುದನ್ನು ಬಿಟ್ಟು ಬಿಡುತ್ತಾರಾ? ಅಥವಾ ಮಕ್ಕಳ ಪೋಷಕರು ದೇವರ ಪೂಜೆ ನಿಲ್ಲಿಸುತ್ತಾರಾ? ಇದು ಯಾವುದೂ ಸಾಧ್ಯವಿಲ್ಲವಾದರೂ ಧರ್ಮವೇ ನಾಶವಾದಂತೆ ಈ ಕೋಮುವಾದಿಗಳು ಬೀದಿಗಿಳಿದು ಅಬ್ಬರಿಸುವುದರ ಹಿಂದೆ ಇರುವುದು ದೇವರ ಮೇಲಿನ ಭಕ್ತಿಯೂ ಅಲ್ಲ, ಧರ್ಮದ ಮೇಲಿರುವ ಅಭಿಮಾನವು ಅಲ್ಲ. ಕೇವಲ ಜನರ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿ ಮತಾಂಧತೆಯನ್ನು ಕೆರಳಿಸಿ ಮತ ಕ್ರೋಢೀಕರಣ ಮಾಡುವ ಶಡ್ಯಂತ್ರದ ಭಾಗವಷ್ಟೇ – ಶಶಿಕಾಂತ ಯಡಹಳ್ಳಿ, ಪತ್ರಕರ್ತರು

ಮಂಗಳೂರಿನಲ್ಲಿ ಸಂತ ಜೆರೋಸಾ ಎನ್ನುವ ಕ್ರಿಶ್ಚಿಯನ್‌ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದರು ಎನ್ನುವ ಸುದ್ದಿ ಸಂಘಪರಿವಾರಿಗರಿಗೆ ಸಿಟ್ಟು ಉದ್ವೇಗ ಹಾಗೂ ಸಂಭ್ರಮ ತಂದಿದೆ. ಮತೀಯ ಸಾಮರಸ್ಯ ಹಾಳು ಮಾಡಲು ಸದಾ ಕಾಯ್ದು ಕುಳಿತಿರುವ ಈ ಕೇಸರಿಪಡೆ ಕಡ್ಡಿಯನ್ನು ಗುಡ್ಡಮಾಡಿ ಕೋಮು ಸಾಮರಸ್ಯಕ್ಕೆ ಬೆಂಕಿ ಹಚ್ಚಲು ಬೀದಿಗಿಳಿದಿದೆ. ಶಿಕ್ಷಕಿಯು ಮಕ್ಕಳ ಮುಂದೆ “ಶ್ರೀರಾಮನ ವಿರುದ್ಧ, ರಾಮಮಂದಿರದ ವಿರುದ್ಧ  ಮಾತಾಡಿದರಂತೆ, ಹಿಂದೂ ಧರ್ಮವನ್ನು ಅವಮಾನಿಸಿದರಂತೆ, ಕ್ರಿಶ್ಚಿಯನ್ ಧರ್ಮದ ಪರವಾಗಿ ಮಕ್ಕಳಿಗೆ ಪ್ರಚೋದನೆ ಮಾಡಿದರಂತೆ…” ಹೀಗೆ ಅನೇಕ ಗಾಸಿಪ್ ಸುದ್ದಿಗಳು ಕೇಸರಿ ಟ್ರೋಲಿಗರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.

ಹಿಂದೂ ಧರ್ಮವೇ ನಾಶವಾಗಿ ಮುಳುಗಿಯೇ ಹೋಯ್ತೇನೋ ಎನ್ನುವಂತೆ ಕೇಸರಿ ಪಡೆಗಳು ಶಾಲೆಯ ಆವರಣದಲ್ಲಿ ಜಮಾವಣೆಗೊಂಡು ಮಕ್ಕಳು ಹಾಗೂ ಪೋಷಕರನ್ನೂ ಸೇರಿಸಿಕೊಂಡು ಘೋಷಣೆ ಕೂಗತೊಡಗಿದರು. ಕೋಮುವ್ಯಾಧಿ ಶಾಸಕ ವೇದವ್ಯಾಸ್  ಕಾಮತ್ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅಧಿವೇಶನದಲ್ಲಿ ಭಾಗವಹಿಸುವುದು ಬಿಟ್ಟು ಶಾಲೆಯ ಮುಂದೆ ಲೋಕಲ್ ಗೂಂಡಾನಂತೆ ನಿಂತು ಮಕ್ಕಳು ಹಾಗೂ ಪೋಷಕರಲ್ಲಿ ಕೋಮುಭಾವನೆ ಪ್ರಚೋದಿಸುವುದರಲ್ಲಿ ನಿರತರಾದರು. ಶಾಲಾ ಮಕ್ಕಳ ಕೈಗೆ ಕೇಸರಿ ಬಾವುಟ ಕೊಟ್ಟು ಅವರ ಬಾಯಲ್ಲಿ ಜೈಶ್ರೀರಾಂ ಘೋಷಣೆ ಕೂಗಿಸಲಾಯಿತು. ಶಾಲಾ ಮಕ್ಕಳನ್ನು ಅವರು ವಿದ್ಯೆ ಕಲಿಯುವ ಶಾಲೆಯ ವಿರುದ್ಧ, ಪಾಠ ಕಲಿಸುವ ಶಿಕ್ಷಕರ ವಿರುದ್ಧ ಎತ್ತಿಕಟ್ಟುವಲ್ಲಿ ಸಂಘಪರಿವಾರ ಯಶಸ್ವಿಯಾಯಿತು. ಭದ್ರತೆ ಹಾಗೂ ನಿಯಂತ್ರಣಕ್ಕಾಗಿ ಪೊಲೀಸರು ಶಾಲೆಯನ್ನು ಸುತ್ತುವರೆದರು. 

ಮಾಧ್ಯಮಗಳಿಗೆ ವಿದ್ಯಾರ್ಥಿನಿಯಿಂದ ಹೇಳಿಕೆ

ಇಷ್ಟಕ್ಕೂ ಆಗಿದ್ದಾದರೂ ಏನೆಂದರೆ ಶಾಲಾ ಶಿಕ್ಷಕಿ ರವೀಂದ್ರನಾಥ್ ಠಾಗೋರ್ ಅವರ ‘ವರ್ಕ್ ಇಸ್ ವರ್ಶಿಪ್’ ಎಂಬ ಪದ್ಯದ ಮೇಲೆ ಪಾಠ ಮಾಡುತ್ತಿದ್ದಾಗ ಸಂದರ್ಭೋಚಿತವಾಗಿ “ದೈವ, ದೇವರು ಹೃದಯಲ್ಲಿರಬೇಕು. ಗುಡಿ, ಮಸೀದಿ, ಮಂದಿರಗಳಲ್ಲಿ ಅಲ್ಲ” ಎಂದು ಹೇಳಿದರಂತೆ. “ಕೆಲಸವೇ ದೇವರು, ಕಾಯಕವೇ ಕೈಲಾಸ” ಎಂದು ಪಾಠದ ಭಾಗವಾಗಿ ಶಿಕ್ಷಕರು ವಿವರಿಸುವುದು ಅಪರಾಧವಾ? ಇದರಲ್ಲೇನು ತಪ್ಪಿದೆ. ಇದನ್ನು ಅನೇಕ ಸಾಮಾಜಿಕ ಸುಧಾರಕರು ಹೇಳಿದ್ದಾರೆ. ಕುವೆಂಪುರವರೇ “ನೂರು ದೇವರುಗಳ ನೂಕಾಚೆ ದೂರ” ಎಂದು ಬರೆದಿದ್ದಾರೆ. ಬಸವಣ್ಣನವರು ” ಕಲ್ಲು ಮಣ್ಣು ಮರ ಪಂಚಲೋಹದ ದೇವರು ದೇವರಲ್ಲ” ಎಂದು ವಚನ ಬರೆದಿದ್ದಾರೆ. ಆದರೆ ಇಲ್ಲಿ ಈಗ ದೇವರು ಮನದಲ್ಲಿರಲಿ ಎಂದು ಹೇಳಿದ್ದು ಒಬ್ಬ ಕ್ರಿಶ್ಚಿಯನ್ ಶಿಕ್ಷಕಿ ಹಾಗೂ ಅದನ್ನು ಹೇಳಿದ್ದು ಕ್ರಿಶ್ಚಿಯನ್ ಶಾಲೆಯಲ್ಲಿ ಎನ್ನುವುದೇ ಈ ಮತಾಂಧರಿಗೆ ಆಘಾತಕಾರಿ ಎನ್ನಿಸಿತು. ಧರ್ಮದ ಗುತ್ತಿಗೆ ಪಡೆದ ಸಂಘಿಗಳು ಗುಂಪು ಕಟ್ಟಿಕೊಂಡು ಅಲ್ಪಸಂಖ್ಯಾತರ ಶಾಲೆಯ ಮೇಲೆ ದಂಡೆತ್ತಿ ಬಂದು ದಾಳಿಗೆ ಮುಂದಾದರು. ಶಾಲೆಯ ಮಕ್ಕಳು ಹಾಗೂ ಪೋಷಕರಲ್ಲಿ ಕೋಮು ಪ್ರಚೋದನೆಗೆ ಕುಮ್ಮಕ್ಕು ಕೊಟ್ಟರು. ಗೋದಿ ಮಾಧ್ಯಮಗಳು ಇನ್ನಷ್ಟು ಒಗ್ಗರಣೆ ಹಾಕಿ ಸುದ್ದಿ ಪ್ರಸಾರಮಾಡಿದವು. ಶಾಲೆಯ ಆವರಣದಲ್ಲಿ ಸೃಷ್ಟಿಸಲಾದ ಉದ್ವಿಗ್ನತೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಕೇಸರಿ ಪಡೆ ಪ್ರಯತ್ನಿಸಿತು. ಕೊನೆಗೂ ಈ ಕೋಮುಕ್ರಿಮಿಗಳ ದಬ್ಬಾಳಿಕೆಗೆ ಮಣಿದ ಶಾಲಾಡಳಿತ ಅನಿವಾರ್ಯವಾಗಿ ಆ ಶಿಕ್ಷಕಿಯನ್ನು ಅಮಾನತು ಮಾಡಿತು. ಮಾನಸಿಕ ಒತ್ತಡ ತಾಳಲಾಗದೆ ಆ ಶಿಕ್ಷಕಿ ಆಸ್ಪತ್ರೆ ಸೇರಬೇಕಾಯ್ತು. ಆದರೂ ಈ ಮತಾಂಧರ ಆಟಾಟೋಪ ಮುಂದುವರೆಯಿತು.

ಜೈ ಶ್ರೀರಾಂ ಕೂಗುತ್ತಿರುವ ಮಕ್ಕಳು ಹಾಗೂ ಪೋಷಕರು

ಇಷ್ಟಕ್ಕೂ ಸಂತ ಜೆರೋಸಾ ಶಾಲೆಯಲ್ಲಿ ಓದುತ್ತಿರುವವರು ಶ್ರೀಮಂತರ ಮಕ್ಕಳಲ್ಲ. ಬೇರೆ ಖಾಸಗಿ ಶಾಲೆಗೆ ಹೋಲಿಸಿದರೆ ಇಲ್ಲಿ ಫೀಸ್ ತುಂಬಾ ಕಡಿಮೆ. ಹಳೆಯ ಸಂಸ್ಥೆ. ಉತ್ತಮ ಶಿಕ್ಷಣ ಹಾಗೂ ಶಿಸ್ತಿಗೆ ಹೆಸರಾಗಿದೆ. ಶಿಕ್ಷಣ ದಾಸೋಹ ನಿರತ ವಿದ್ಯಾಲಯಕ್ಕೆ ಮತೀಯ ಮಸಿ ಬಳೆಯುವ ಪ್ರಯತ್ನವೇ ಅಮಾನವೀಯ. ಇಲ್ಲಿಯ ಕೆಲವು ವಿದ್ಯಾರ್ಥಿನಿಯರಲ್ಲಿ ಅದೆಷ್ಟು ಧರ್ಮಾಂಧತೆಯ ವಿಷ ಬೀಜ ಬಿತ್ತಲಾಗಿದೆ ಎಂಬುದು ಕೆಲವು ವಿದ್ಯಾರ್ಥಿನಿಯರ ಹೇಳಿಕೆಯಿಂದಲೇ ಗೊತ್ತಾಗುತ್ತದೆ. “ಶಿಕ್ಷಕಿಯರು ಕ್ರಾಸ್ ಹಾಕಿಕೊಂಡು ಬರುತ್ತಾರೆ, ನಮಗೆ ಏನೂ ಹಾಕಬಾರದು ಎಂದು ನಿರ್ಬಂಧಿಸುತ್ತಾರೆ” ಎಂದು ಒಬ್ಬ ವಿದ್ಯಾರ್ಥಿನಿ ಮೀಡಿಯಾ ಮುಂದೆ ಮಾತಾಡುತ್ತಾಳೆ. ಈ ರೀತಿಯ ಅಸಮಾಧಾನ ಇದ್ದಲ್ಲಿ ಈ ಶಾಲೆಗೆ ಯಾಕೆ ಆ ಹುಡುಗಿ ದಾಖಲಾಗಬೇಕು? ತಮ್ಮ ಆಚಾರ ವಿಚಾರಗಳಿಗೆ ಸೂಕ್ತವಾಗುವ ಶಾಲೆಗೆ ಪೋಷಕರು ಸೇರಿಸ ಬಹುದಾಗಿತ್ತಲ್ಲವೇ? ಇದಕ್ಕಿಂತಲೂ ಹೆಚ್ಚಾಗಿ ಈ ಹಿಂದೂ ಧರ್ಮೀಯರಲ್ಲಿ “ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ” ಎಂದು ಗುರುವಿನಲ್ಲಿ ತ್ರಿಮೂರ್ತಿಗಳನ್ನು ಕಾಣಲಾಗುತ್ತದೆ. ಅಂತಹ ಗುರುಗಳ ವಿರುದ್ಧವೇ ವಿದ್ಯಾರ್ಥಿಗಳು ತಿರುಗಿ ಬಿದ್ದರೆ, ಬಾಹ್ಯ ಶಕ್ತಿಗಳು ಗುರುಗಳ ಮೇಲೆ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿದರೆ ಗುರುಶಿಷ್ಯ ಸಂಬಂಧಗಳಿಗೆ ಬೆಲೆ ಎಲ್ಲಿ?

ಆಯ್ತು…ಈ ಸಂಘಿಗಳ ಆರೋಪದಂತೆ ಶಿಕ್ಷಕಿ ಹಿಂದೂ ಧರ್ಮಕ್ಕೆ ಅಪಮಾನ ಆಗುವಂತೆ ಮಾತಾಡಿ ಮಹಾಪರಾಧ ಮಾಡಿದರು ಎಂದು ಕೊಳ್ಳೋಣ. ಅದನ್ನು ಮಕ್ಕಳು ತಮ್ಮ ಪೋಷಕರಿಗೆ ಹೇಳಿದರು ಎಂದು ಕೊಳ್ಳೋಣ. ಆ ಪೋಷಕರು ಹೋಗಿ ದೂರು ಕೊಡಬೇಕಾದದ್ದು ಶಾಲೆಯ ಮುಖ್ಯಸ್ಥರಿಗೇ ಹೊರತು ಈ ಸಂಘಿ ನಾಯಕರುಗಳಿಗಲ್ಲ. ಹೋಗಲಿ ಧರ್ಮಕ್ಕೆ ಅಪಚಾರ ಆಗಿದ್ದರೆ  ಮಾಮೂಲಿನಂತೆ ‘ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆ ಆಗಿದೆ, ಹಿಂದೂಗಳ ಭಾವನೆಗೆ ನೋವಾಗಿದೆ’ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸ ಬಹುದಾಗಿತ್ತು. ಶಿಕ್ಷಣ ಇಲಾಖೆಗೆ ದೂರು ನೀಡಬಹುದಾಗಿತ್ತು. ನ್ಯಾಯಾಲಯಕ್ಕೂ ಹೋಗ  ಬಹುದಾಗಿತ್ತು….

ಆದರೆ, ಹೀಗೆ ಸಾಂವಿಧಾನಿಕ ಕ್ರಮಕ್ಕೆ ಆಗ್ರಹಿಸಿದ್ದರೆ ಈ ಸಂಘಿಗಳಿಗೆ ಪ್ರಚಾರ ಸಿಗುತ್ತಿರಲಿಲ್ಲ, ಸಮಾಜದಲ್ಲಿ ಕೋಮು ಪ್ರಚೋದನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಹಿಂದೂಗಳನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಅಲ್ಪಸಂಖ್ಯಾತರ ವಿರುದ್ಧ ಎತ್ತಿ ಕಟ್ಟಲು ಆಗುತ್ತಿರಲಿಲ್ಲ. ಶಾಲಾ ಮಕ್ಕಳು ಮತ್ತು ಪೋಷಕರನ್ನು ಪ್ರಚೋದಿಸಿ ಜೈ ಶ್ರೀರಾಂ ಹೇಳಿಸಲು ಆಗುತ್ತಿರಲಿಲ್ಲ. ಕೋಮು ಭಾವನೆ ಕೆರಳಿಸದೇ ಇದ್ದರೆ ಸಂಘ ಪರಿವಾರಕ್ಕೆ ಅಸ್ತಿತ್ವವೇ ಇರುವುದಿಲ್ಲ. ಅನ್ಯ ಧರ್ಮದ್ವೇಷ ಬಿತ್ತದೇ ಹೋದರೆ ಬಿಜೆಪಿಗರಿಗೆ ಓಟು ಸಿಕ್ಕುವುದಿಲ್ಲ. ಈ  ಹಿಂದೆಯೂ ಕೂಡಾ ಉಡುಪಿ ಕಾಲೇಜಲ್ಲಿ ಹಿಜಾಬ್ ವಿಷಯ ಮುಂದಿಟ್ಟುಕೊಂಡು ಕಾಲೇಜು ವಿದ್ಯಾರ್ಥಿಗಳನ್ನು ಶಿಕ್ಷಕರು ಹಾಗೂ ಕಾಲೇಜಿನ ವಿರುದ್ಧ ಎತ್ತಿಕಟ್ಟಿದವರೂ ಇದೇ ಸಂಘಿಗಳು. ಇವರ ದ್ವೇಷ ರಾಜಕೀಯಕ್ಕೆ ಬಲಿಯಾಗಿ ವಿದ್ಯೆಯಿಂದಲೇ ದೂರಾದವರು ಹಲವಾರು ಮುಸ್ಲಿಂ ವಿದ್ಯಾರ್ಥಿನಿಯರು. ಧಾರ್ಮಿಕ ಅಸಹನೆ ಬಿತ್ತಲು ವಿದ್ಯಾಲಯಗಳನ್ನು ಟಾರ್ಗೆಟ್ ಮಾಡುತ್ತಿರುವ ಸಂಘಿಗಳು ಶಾಲಾಕಾಲೇಜು ಮಕ್ಕಳ ಮನಸಲ್ಲೂ ಮತಾಂಧತೆಯ ನಂಜು ತುಂಬುತ್ತಿರುವುದು ಅಕ್ಷಮ್ಯ.

ಹಿಂದೂ ಸಂಘಟನೆ ಹಾಗೂ ಪೋಷಕರಿಂದ ಪ್ರತಿಭಟನೆ.

ಇಷ್ಟಕ್ಕೂ ಈ ಸಂಘಿಗಳು ಪ್ರತಿಪಾದಿಸುವ ಹಿಂದೂ ಧರ್ಮ ಇಷ್ಟೊಂದು ದುರ್ಬಲವಾಗಿದೆಯಾ? ಯಾವುದೋ ಒಂದು ಶಾಲೆಯಲ್ಲಿ ಯಾರೋ ಒಬ್ಬ ಶಿಕ್ಷಕಿ “ದೇವರು ಗುಡಿ ಮಸೀದಿ ಮಂದಿರಗಳಲ್ಲಿ ಇಲ್ಲಾ, ಮನುಷ್ಯರ ಮನಸ್ಸಲ್ಲಿರುವುದು” ಎಂದು ಹೇಳಿದ ಕೂಡಲೇ ಧರ್ಮ ಅವನತಿ ಹೊಂದಿದಂತಾಯಿತಾ? ಹೋಗಲಿ ಶಿಕ್ಷಕಿ ಹಾಗೆ ಹೇಳಿದ್ದರು ಅಂದ ಕೂಡಲೇ ಮಕ್ಕಳೆಲ್ಲಾ ಮಂದಿರಗಳಿಗೆ ಹೋಗುವುದನ್ನು ಬಿಟ್ಟು ಬಿಡುತ್ತಾರಾ? ಅಥವಾ ಮಕ್ಕಳ ಪೋಷಕರು ದೇವರ ಪೂಜೆ ನಿಲ್ಲಿಸುತ್ತಾರಾ? ಇದು ಯಾವುದೂ ಸಾಧ್ಯವಿಲ್ಲವಾದರೂ ಧರ್ಮವೇ ನಾಶವಾದಂತೆ ಈ ಕೋಮುವಾದಿಗಳು ಬೀದಿಗಿಳಿದು ಅಬ್ಬರಿಸುವುದರ ಹಿಂದೆ ಇರುವುದು ದೇವರ ಮೇಲಿನ ಭಕ್ತಿಯೂ ಅಲ್ಲ, ಧರ್ಮದ ಮೇಲಿರುವ ಅಭಿಮಾನವು ಅಲ್ಲ. ಕೇವಲ ಜನರ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿ ಮತಾಂಧತೆಯನ್ನು ಕೆರಳಿಸಿ ಮತ ಕ್ರೋಢೀಕರಣ ಮಾಡುವ ಶಡ್ಯಂತ್ರದ ಭಾಗವಷ್ಟೇ. 

ಇದನ್ನೂ ಓದಿ-ಸಂವಿಧಾನ ವಿರೋಧಿ ಕಣ್ಣನ್ ಎನ್ನುವ ಸನಾತನಿ

ಶಾಲೆಯಲ್ಲಿ ಕಲಿಯುವ ಮಕ್ಕಳ ಮನಸ್ಸಲ್ಲೂ ಧಾರ್ಮಿಕ ಅಸಹನೆ ಬಿತ್ತುವ ಕೋಮುವಾದಿಗಳ ಪ್ರಯತ್ನ ಅಪಾಯಕಾರಿಯಾಗಿದೆ. ಈ ಮಕ್ಕಳ ಪೋಷಕರು ಈಗಲೇ ಈ ಕೋಮುವ್ಯಾಧಿಗಳ ಹುನ್ನಾರವನ್ನು ಅರ್ಥ ಮಾಡಿಕೊಂಡು ಎಚ್ಚರಗೊಳ್ಳಬೇಕಿದೆ. ಇಲ್ಲದೇ ಹೋದರೆ ಇವರ ಮಕ್ಕಳು ಕೈಯಲ್ಲಿ ಕೇಸರಿ ಬಾವುಟ ಹಿಡಿದು, ಬೀದಿಗಳಲ್ಲಿ ಘೋಷಣೆ ಕೂಗುತ್ತಾ ತಮ್ಮ ವಿದ್ಯಾಭ್ಯಾಸ ಹಾಗೂ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಕೋಮು  ಪ್ರಚೋದನೆ ಮಾಡುವ ಸಂಘಿ  ನಾಯಕರುಗಳು, ಬಿಜೆಪಿ ಶಾಸಕರುಗಳ ಮಕ್ಕಳು ಮಾತ್ರ ಪ್ರತಿಷ್ಠಿತ ಶಾಲೆಗಳಲ್ಲಿ, ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಿ, ಸಿಕ್ಕ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಉದ್ಧಾರವಾಗುತ್ತಾರೆ. ಹಾಗಾಗಿ ಮತಾಂಧರ ಪ್ರಚೋದನೆಯಿಂದ ಪೋಷಕರು ದೂರ ಇರಬೇಕಾಗಿದೆ. ಧರ್ಮಾಂಧರ ನೆರಳೂ ತಮ್ಮ ಮಕ್ಕಳ ಮೈಮನಸುಗಳ ಮೇಲೆ ಬೀಳದಂತೆ ನೋಡಿಕೊಳ್ಳಬೇಕಿದೆ. ಈ ಕೋಮು ಕಲಹ, ಧಾರ್ಮಿಕ ಅಸಹನೆಗಿಂತಲೂ ತಮ್ಮ ಮಕ್ಕಳ ಭವಿಷ್ಯವೇ ಮುಖ್ಯವೆಂದು ಎಲ್ಲಾ ಪೋಷಕರೂ ಅರಿಯಬೇಕಿದೆ. ಆಗಲೇ ಈ ಸಂಘಪರಿವಾರದ ಶಡ್ಯಂತ್ರಗಳನ್ನು ಸೋಲಿಸಬಹುದಾಗಿದೆ. ಮಕ್ಕಳನ್ನು ಧಾರ್ಮಿಕ ಸಹಿಷ್ಣುಗಳಾಗಿ ಬೆಳೆಸಬೇಕಿದೆ. ಈ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಬೇಕಿದೆ.

ಪೋಷಕರಲ್ಲಿ ಮತೀಯ ದ್ವೇಷವನ್ನು ಪ್ರಚೋದಿಸಿದ್ದಕ್ಕೆ, ಮತಾಂಧ ರಾಜಕೀಯ ಹಿತಾಸಕ್ತಿಗಾಗಿ ಶಾಲೆಯ ಅಪ್ರಾಪ್ತ ಮಕ್ಕಳಿಗೆ ಕೇಸರಿ ಶಾಲು ಹಾಕಿಸಿ, ಕೈಗೆ ಕೇಸರಿ ಬಾವುಟ ಕೊಟ್ಟು ಜೈಶ್ರೀರಾಂ ಘೋಷಣೆ ಕೂಗಿಸಿದ್ದಕ್ಕೆ, ಅಕ್ರಮವಾಗಿ ಗುಂಪು ಕಟ್ಟಿಕೊಂಡು ಬಂದು ಶಾಲಾ ಆವರಣ ಪ್ರವೇಶಿಸಿ ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದಕ್ಕೆ, ಮತೀಯ ಅಸಹನೆಯ ಹೇಳಿಕೆಗಳನ್ನು ಮಾಧ್ಯಮದ ಮೂಲಕ ನೀಡಿದ್ದಕ್ಕೆ, ಗೂಂಡಾಗಿರಿ ಮೆರೆದಿದ್ದಕ್ಕೆ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿಯವರ ಮೇಲೆ ಸರಕಾರ ಕೂಡಲೇ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕಿದೆ. ಶಾಲೆಯಲ್ಲಿ ನಡೆದಿದೆ ಎನ್ನಲಾದ ಘಟನೆಗಳ ಕುರಿತು ಹಾಗೂ ತದನಂತರ ಸೃಷ್ಟಿಸಲಾದ ಮತೀಯ ದ್ವೇಷದ ಕೋಮುಪ್ರಚೋದನೆಯ ಕುರಿತು ಸಮಗ್ರ ತನಿಖೆಗೆ ಸರಕಾರ ಆದೇಶಿಸಬೇಕಿದೆ. ಈ ಧರ್ಮಾಂಧ ಕೋಮುಕ್ರಿಮಿಗಳ ಕೋಮುದ್ವೇಷದ ಪುನರಾವರ್ತನೆಗೆ ನಿಯಂತ್ರಣ ಹಾಕಬೇಕಿದೆ..

ಶಶಿಕಾಂತ ಯಡಹಳ್ಳಿ

ಪತ್ರಕರ್ತರು

More articles

Latest article