ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್ ಐಟಿ) ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನೂ ತನಿಖೆಗೊಳಪಡಿಸಲು ನಿರ್ಧರಿಸಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಅದರನ್ವಯ ತನಿಖೆ ನಡೆಯಲಿದೆ.
2012 ರ ಅಕ್ಟೋಬರ್ ನಲ್ಲಿ ಸೌಜನ್ಯ ಅವರ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಇದೀಗ ಅವರ ತಾಯಿ ಕುಸುಮಾವತಿ ತಮ್ಮ ಮೃತ ಪುತ್ರಿಯ ಸಾವು ಕುರಿತು ತನಿಖೆ ನಡೆಸುವಂತೆ ದೂರು ದಾಖಲಿಸಿದ್ದಾರೆ. ಕುಸುಮಾವತಿ ಅವರಿಗೆ ನೀಡಿರುವ ಹಿಂಬರಹದಲ್ಲಿ ಈ ಅರ್ಜಿಯ ಅಂಶಗಳ ಹಿನ್ನೆಲೆಯಲ್ಲಿ ಎಸ್ ಐಟಿಯು ತನಿಖೆ ನಡೆಸುತ್ತಿದ್ದು ತನಿಖೆಯ ಸಂದರ್ಭದಲ್ಲಿ ಪರಿಶೀಲಿಸಿ ಸೂಕ್ತ ರೀತಿಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ದಿನಾಂಕ 9 ಅಕ್ಟೋಬರ್ 2012 ರಂದು ಧರ್ಮಸ್ಥಳದಲ್ಲಿ 17 ವರ್ಷದ ಕುಮಾರಿ ಸೌಜನ್ಯ ಅವರ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು. 2025ರಲ್ಲೂ ಪೊಲೀಸರು ನಿಜವಾದ ಅಪರಾಧಿಗಳನ್ನು ಗುರುತಿಸಿರುವುದಿಲ್ಲ. ಸದ್ಯಕ್ಕೆ, ಎಸ್ ಐಟಿಯು ಚಿನ್ನಯ್ಯ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ.
ಚಿನ್ನಯ್ಯ ಎಂಬ ವ್ಯಕ್ತಿಯು ಮೃತ ದೇಹಗಳನ್ನು ವಿಲೇವಾರಿ ಮಾಡುತ್ತಿದ್ದ ವಿಷಯವು ಧರ್ಮಸ್ಥಳದ ಹಲವಾರು ಜನರಿಗೆ ತಿಳಿದಿದ್ದು, ನನ್ನ ತಂದೆ ಮತ್ತು ಸಹೋದರನಿಗೂ ಈತನ ಕಸುಬಿನ ಬಗ್ಗೆ ಅರಿವಿತ್ತು. ನಾವು ಲಭ್ಯವಿರುವ ಮಾಹಿತಿ ಪ್ರಕಾರ ಚಿನ್ನಯ್ಯನಿಗೆ ಸೌಜನ್ಯ ಳ ಮೇಲೆ ನಡೆದ ಅಪರಾಧಗಳ ಬಗ್ಗೆ ಜ್ಞಾನವಿದ್ದರೂ, ಆ ವಿಷಯವನ್ನು ತನ್ನ ಲಿಖಿತ ದೂರಿನಲ್ಲಿ ಆತ ಎಲ್ಲಿಯೂ ಹೇಳಿರುವುದಿಲ್ಲ. ಜತೆಗೆ ಈತ 2014ರಲ್ಲಿ ಧರ್ಮಸ್ಥಳವನ್ನು ತೊರೆಯಲು ಸೌಜನ್ಯಳ ಸಾವಿನ ನಂತರದ ಘಟನೆಗಳೇ ಕಾರಣವೆಂದು ತಿಳಿದು ಬಂದಿದೆ.
ಧರ್ಮಸ್ಥಳದಲ್ಲಿ ನಡೆದಿರುವ ದೌರ್ಜನ್ಯಗಳ ತನಿಖೆಗಾಗಿ ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ದಿನಾಂಕ 12 ಆಗಸ್ಟ್ ರಂದು ಪಾಂಗಳದಲ್ಲಿರುವ ನಮ್ಮ ಮನೆಗೆ ಭೇಟಿ ನೀಡಿ ನಮ್ಮ ಹೇಳಿಕೆ ಪಡೆದಿದ್ದರು. ನಂತರ ಆಯೋಗವು ಆಗಸ್ಟ್ 13 ರಂದು ಉಜಿರೆಯಲ್ಲಿ ಸಂತ್ರಸ್ತರ ಮುಂದುವರಿದ ವಿಚಾರಣೆಗೆ ಆಗಮಿಸುವಂತೆ ನಮಗೆ ನಿರ್ದೇಶಿಸಿದ್ದರು. ಅದರಂತೆ ಅಂದು ನಾನು ಉಜಿರೆಯಲ್ಲಿದ್ದ ಆಯೋಗದ ಕಚೇರಿಗೆ ಭೇಟಿ ನೀಡಿದ್ದೆ. ಆಗ ನನಗೆ ಅಘಾತಕಾರಿ ಮಾಹಿತಿ ಲಭ್ಯವಾಗಿತ್ತು.
ಇದೇ ಪ್ರಕರಣದ ವಿಚಾರಣೆಗೆ ಬಂದಿದ್ದ ಚಿನ್ನಯ್ಯನ ಸಹೋದರಿ ರತ್ನ ಎಂಬುವರು ಆಯೋಗಕ್ಕೆ ಸ್ಫೋಟಕ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ ಧರ್ಮಸ್ಥಳ ದೇವಸ್ಥಾನದ ಪ್ರಮುಖರೊಬ್ಬರು ಚಿನ್ನಯ್ಯನಿಗೆ 2014 ರಲ್ಲಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಪಟ್ಟಂತೆ ಜೀವ ಬೆದರಿಕೆ ಹಾಕಿದ್ದರು. ಆ ಕಾರಣಕ್ಕಾಗಿಯೇ ಚಿನ್ನಯ್ಯ ಧರ್ಮಸ್ಥಳ ಬಿಟ್ಟು ಓಡಿ ಹೋಗಬೇಕಾಯಿತು. ಸೌಜನ್ಯಳ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಗೆ ಕಾರಣರಾದವರ ಮಾಹಿತಿಯನ್ನು ಚಿನ್ನಯ್ಯ ಬಾಯಿಬಿಟ್ಟರೆ, ಆತ ಯಾವುದೇ ದೇಶದಲ್ಲಿ ಅಡಗಿಕೊಂಡಿದ್ದರೂ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ರತ್ನ ಆಯೋಗಕ್ಕೆ ತಿಳಿಸಿದ್ದರು. ರತ್ನ ಅವರು ಮಾನವ ಹಕ್ಕು ಆಯೋಗಕ್ಕೆ ಮೇಲಿನಂತ ನೀಡಿದ ಹೇಳಿಕೆಯನ್ನು ನಾನೇ ಕೇಳಿಸಿಕೊಂಡಿರುತ್ತೇನೆ.
ಆಗಸ್ಟ್ 24 ರಂದು ‘ಡಿ ಟಾಕ್ಸ್‘ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಚಿನ್ನಯ್ಯ ಅವರ ಜತೆ ನಡೆಸಿದ ಸಂದರ್ಶನ ಪ್ರಸಾರವಾಗಿದ್ದು, ಅದರಲ್ಲಿಯೂ ಆತ ಸ್ಫೋಟಕ ಮಾಹಿತಿ ನೀಡಿದ್ದಾರೆ.
ರವಿ ಪೂಜಾರಿ ಎಂಬಾತ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆಗೆ ಕಾರಣರಾದವರು ಯಾರು ಎನ್ನುವುದನ್ನು ಚಿನ್ನಯ್ಯ ಅವರಿಗೆ ಹೇಳಿರುತ್ತಾನೆ. ಆ ಅಪರಾಧಿಗಳು ಆರಂಭದಲ್ಲಿ ರವಿ ಪೂಜಾರಿಗೆ ಹಣ ನೀಡಿ ನಂತರ ಆತನನ್ನು ಕಚೇರಿಯೊಂದರಲ್ಲಿ ಕೊಂದುಬಿಟ್ಟರು ಎಂದು ಚಿನ್ನಯ್ಯ ಹೇಳಿರುತ್ತಾರೆ. ಸೌಜನ್ಯಳ ಮೇಲೆ ನಡೆದ ದುಷ್ಕೃತ್ಯಕ್ಕೆ ಕಾರಣರಾದಪರ ಬಗ್ಗೆ ರವಿ ಪೂಜಾರಿ ಬಾಯಿ ಬಿಡಬಹುದು ಎಂಬ ಭಯದಿಂದ ಆತನನ್ನು ಕೊಲೆ ಮಾಡಲಾಗಿದೆ ಎಂದು ಚಿನ್ನಯ್ಯ ‘ಡಿ ಟಾಕ್ಸ್‘ ಸಂದರ್ಶನದಲ್ಲಿ ವಿವರಿಸಿದ್ದಾರೆ. ಚಿನ್ನಯ್ಯನ ಅಕ್ಕ ರತ್ನ ಮಾನವ ಹಕ್ಕು ಆಯೋಗಕ್ಕೆ ನೀಡಿದ ದೂರಿನಂತೆಯೇ, ಈತ ಧರ್ಮಸ್ಥಳವನ್ನು ಬಿಡಬೇಕಾದ ಅನಿವಾರ್ಯತೆ ಏಕೆ ಉಂಟಾಯಿತು ಎಂದು ಸಂದರ್ಶನದಲ್ಲಿ ವಿವರಿಸಿದ್ದಾರೆ.
ಚಿನ್ನಯ್ಯ ತನ್ನ ಸಂದರ್ಶನದಲ್ಲಿ ಹೇಳಿರುವ ಇನ್ನೊಂದು ಅಂಶವೆಂದರೆ ಸೌಜನ್ಯಳ ಮೃತದೇಹ ಸಿಕ್ಕ ಸ್ಥಳ ಮಣ್ಣಸಂಕದಲ್ಲಿ ಆತನೇ ಹಲವಾರು ಹಣಗಳನ್ನು ಹೂತು ಹಾಕಿರುವುದಾಗಿ ಹೇಳಿರುತ್ತಾರೆ. ಅಂದರೆ ಸೌಜನ್ಯಳ ಮೃತದೇಹವನ್ನೂ ಆ ಭಾಗದಲ್ಲಿಯೇ ಹೂತು ಹಾಕಿರುವ ಸಂಚು ನಡೆದಿರುವ ಸಾಧ್ಯತೆಯನ್ನು ಚಿನ್ನಯ್ಯನ ಹೇಳಿಕೆ ಸೂಚಿಸುತ್ತದೆ. ಆದ್ದರಿಂದ ಮೇಲಿನ ವಿಷಯಗಳನ್ನು ಚಿನ್ನಯ್ಯ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ನಿಮ್ಮನ್ನು ಬೇಡುತ್ತೇನೆ ಎಂದಿದ್ದಾರೆ. ಅಲ್ಲದೆ ಚಿನ್ನಯ್ಯ ಅವರಿಗೂ ನಾನು ಈ ದೂರನ್ನು ದಾಖಲಿಸುವ ವಿಷಯ ತಿಳಿದಿರುತ್ತದೆ ಎಂದು ಕುಸುಮಾವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.