ದರ್ಶನ್ ಬಂಧನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದೇ ಮುಖ್ಯಮಂತ್ರಿ ಸಿದ್ಧರಾಮಯ್ಯ: ಕೊಲೆಯ ಭೀಕರತೆ ಕಂಡು ಏನೆಂದಿದ್ದರು ಗೊತ್ತೇ?

Most read

ಬೆಂಗಳೂರು: ಇಡೀ ರಾಜ್ಯದಲ್ಲೇ ತಲ್ಲಣ ಹುಟ್ಟಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯ ಪ್ರಕರಣವನ್ನು ಭೇದಿಸಿದ ಪೊಲೀಸರು ಘಟನೆಯ ಇಂಚಿಂಚು ಮಾಹಿತಿಯನ್ನು ದರ್ಶನ್ ಬಂಧನದ ಮುನ್ನಾದಿನವೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ವಿವರಿಸಿದ್ದರು ಎಂದು ತಿಳಿದುಬಂದಿದೆ.

ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರುವ ಕುರಿತು ಎಲ್ಲ ಮಾಹಿತಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಪೊಲೀಸರು ಪ್ರತಿಯೊಂದು ವಿಷಯವನ್ನೂ ಬೆಂಗಳೂರು ಪೊಲೀಸ್ ಆಯುಕ್ತರಿಗೆ ವರದಿ ಮಾಡುತ್ತಿದ್ದರು. ಡಿಸಿಪಿ ಗಿರೀಶ್, ಎಸಿಪಿ ಚಂದನ್ ಮತ್ತು ಇನ್ಸ್ ಪೆಕ್ಟರ್ ಗಿರೀಶ್ ನಾಯ್ಕ್ ನೇತೃತ್ವದಲ್ಲಿ ನಡೆದ ತನಿಖೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿತ್ತು. ಪ್ರಕರಣದ ಕುರಿತು ಒಂದೇ ಒಂದು ಮಾಧ್ಯಮಕ್ಕೂ ಈ ಕುರಿತು ಕಿಂಚಿತ್ತೂ ಮಾಹಿತಿ ಇರಲಿಲ್ಲ.

ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿದ್ದ ಪೊಲೀಸ್ ಕಮಿಷನರ್ ದಯಾನಂದ್ ಒನ್ ಟು ಒನ್ ಮಾತುಕತೆ ನಡೆಸಿದ್ದರು. ಕೊಲೆ ಪ್ರಕರಣದ ಕುರಿತಂತೆ ಇದುವರೆಗೆ ಆಗಿರುವ ತನಿಖೆಯನ್ನು ವಿವರಿಸಿದ್ದರು. ಕೆಲವು ಸಾಕ್ಷ್ಯಗಳನ್ನೂ ಸಿಎಂ ಮುಂದಿಟ್ಟಿದ್ದರು. ಅಷ್ಟೇ ಅಲ್ಲದೆ ಪೊಲೀಸರು ಸಂಗ್ರಹಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನೂ ಮುಖ್ಯಮಂತ್ರಿಗಳಿಗೆ ತೋರಿಸಲಾಗಿತ್ತು.

ಪ್ರಕರಣದ ಭೀಕರತೆಯನ್ನು ನೋಡಿ ಆಘಾತಗೊಂಡ ಸಿದ್ಧರಾಮಯ್ಯ, ಇವನೇನು ಮನುಷ್ಯನಾ ರಾಕ್ಷಸನಾ ಎಂದು ಉದ್ಘರಿಸಿದ್ದರು. ಯಾವುದೇ ಕಾರಣಕ್ಕೂ ಯಾರ ಪ್ರಭಾವಕ್ಕೂ ಒಳಗಾಗದೆ ಕೆಲಸ ಮಾಡಿ, ಮೊದಲು ಆತನನ್ನು ಬಂಧಿಸಿ ಎಂದು ಮುಖ್ಯಮಂತ್ರಿಗಳೇ ಸೂಚನೆ ನೀಡಿದ್ದರು ಎಂದು ತಿಳಿದುಬಂದಿದೆ.

ಮರುದಿನ ಮಂಗಳವಾರವೇ ಪೊಲೀಸ್ ಅಧಿಕಾರಗಳ ತಂಡ ಮೈಸೂರಿಗೆ ತೆರಳಿ ನಟ ದರ್ಶನ್ ನನ್ನು ಬಂಧಿಸಿ ಕರೆತಂದಿತ್ತು. ಇತ್ತ ರಾಜರಾಜೇಶ್ವರಿ ನಗರದಿಂದ ಪ್ರಕರಣ ಎ1 ಆರೋಪಿ ಚಿತ್ರನಟಿ ಪವಿತ್ರ ಗೌಡಳನ್ನು ಬಂಧಿಸಲಾಯಿತು.

More articles

Latest article