ಮಹಾಭಾರತ ಯುದ್ಧದಲ್ಲಿ ಹೋರಾಡಿ ಸತ್ತವರು ಬಡವರ ಮಕ್ಕಳು, ಸಂತ್ರಸ್ತರಾದವರು ಸಾಮಾನ್ಯ ಪ್ರಜೆಗಳು. ಹಾಗೆಯೇ ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ರಾಜಕೀಯ ಪಕ್ಷಗಳ ಮೇಲಾಟದಲ್ಲಿ ಅನುಕೂಲ ಕಾಣದೆ, ಅಭಿವೃದ್ಧಿ ಹೊಂದದೆ ತೊಂದರೆಗೆ ಒಳಗಾಗುವವರು ಬಹುಸಂಖ್ಯಾತ ಪ್ರಜೆಗಳೇ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಈ ರಾಜಕೀಯ ಎನ್ನುವುದೇ ಚದುರಂಗದಾಟ. ಆಳುವ ಪಕ್ಷ ಹಾಗೂ ವಿರೋಧ ಪಕ್ಷಗಳ ನುರಿತ ಆಟಗಾರರು ಗೆಲುವಿನ ಲೆಕ್ಕಾಚಾರದಲಿ ತಮ್ಮ ಆಟದ ಕಾಯಿ ಎನ್ನುವ ಅಸ್ತ್ರಗಳನ್ನು ಪ್ರಯೋಗಿಸುತ್ತಲೇ ಇರುತ್ತಾರೆ. ಪ್ರತಿಪಕ್ಷದವರು ಯಾವ ಅಸ್ತ್ರದಿಂದ ಹೇಗೆ ಪ್ರಹಾರ ಮಾಡುತ್ತಾರೆ, ಅದಕ್ಕೆ ಆಳುವ ಪಕ್ಷಗಳು ಹೇಗೆ ಪ್ರತ್ಯಾಸ್ತ್ರ ಹೂಡಿ ರಕ್ಷಣಾತ್ಮಕವಾಗಿ ತಂತ್ರಗಾರಿಕೆ ಮಾಡುತ್ತಾರೆ ಎನ್ನುವುದರ ಮೇಲೆ ರಾಜಕೀಯದಾಟ ರಂಗೇರುತ್ತದೆ. ಪ್ರೇಕ್ಷಕ ಪ್ರಜೆಗಳು ಈ ಚದುರಂಗದಾಟದ ನಾಟಕವನ್ನು ನೋಡುತ್ತಾ ಮರುಕವನ್ನೋ ಇಲ್ಲಾ ಮನರಂಜನೆಯನ್ನೋ ಪಡೆಯುತ್ತಾ ಮೂಕ ಪ್ರೇಕ್ಷಕರಾಗುತ್ತಾರೆ. ಮಾಧ್ಯಮಗಳು ರಣರೋಚಕವಾಗಿ ಉಪ್ಪು ಕಾರ ಹುಳಿ ಬೆರೆಸಿ ರಸದೌತಣವನ್ನು ಹಂಚುತ್ತಾ, ಟಿಆರ್ಪಿ ಮೂಲಕ ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಲೇ ಇರುತ್ತಾರೆ.
ಈಗ ಕರ್ನಾಟಕ ರಾಜ್ಯದ ರಾಜಕೀಯದ ಚದುರಂಗದಾಟ ರಂಗು ಪಡೆದುಕೊಂಡಿದೆ. ತಿರುವುಗಳ ಮೇಲೆ ತಿರುವುಗಳು ತೀವ್ರ ಆಸಕ್ತಿಯನ್ನು ಕೆರಳಿಸುತ್ತಿವೆ. ಪ್ರತಿಪಕ್ಷಗಳು ಆಳುವ ಪಕ್ಷದ ಮೇಲೆ ವಾಲ್ಮೀಕಿ ನಿಗಮದ ಭ್ರಷ್ಟಾಚಾರದ ಅಸ್ತ್ರ ಪ್ರಯೋಗ ಮಾಡಿ ಇಡಿ ಸಹಾಯದಿಂದ ನಾಗೇಂದ್ರ ಎನ್ನುವ ಸಚಿವರ ತಲೆದಂಡ ಪಡೆದು ಜೈಲಿಗೆ ಕಳುಹಿಸಿದರು. ಇದಕ್ಕೆ ಪ್ರತಿಯಾಗಿ ಆಳುವ ಸರಕಾರ ಪ್ರತಿಪಕ್ಷದ ಮೇಲೆ ದೇವರಾಜ ಅರಸು ಟರ್ಮಿನಲ್ ನಿಗಮದಲ್ಲಾದ ಹಗರಣ ಹೊರತಂದು ಆ ನಿಗಮದ ಅಧ್ಯಕ್ಷರನ್ನೇ ಜೈಲಿಗಟ್ಟಿ ಸೇಡು ತೀರಿಸಿಕೊಂಡರು.
ತದನಂತರ ಪ್ರತಿಪಕ್ಷಗಳು ನೇರವಾಗಿ ಮುಖ್ಯಮಂತ್ರಿಯ ಮೇಲೆ ಮುಡಾ ಹಗರಣದ ಪ್ರಹಾರ ಮಾಡಿದರು. ಆರೋಪ ಪ್ರತ್ಯಾರೋಪಗಳಿಗೆ ಜನರು ಸಾಕ್ಷಿಯಾದರು. ಈ ಮುಡಾ ಅಸ್ತ್ರಕ್ಕೆ ಆಳುವ ಪಕ್ಷವು ಕರೋನಾ ಹಗರಣಾಸ್ತ್ರವನ್ನು ಪ್ರಯೋಗಿಸಿ ತನಿಖೆಗೆ ಆದೇಶಿಸಿತು. ಪ್ರತಿಪಕ್ಷಗಳನ್ನು ಹಣಿಯಲು ಅವರ ಶಾಸಕ ಮುನಿರತ್ನನ ಹನಿಟ್ರ್ಯಾಪ್ ಪ್ರಕರಣವನ್ನು ಹೊರಗೆ ತಂದು ಆ ಶಾಸಕನನ್ನು ಸರಕಾರ ಜೈಲಿಗೆ ಕಳುಹಿಸಿದರೆ, ಆಳುವ ಸರಕಾರದ ಶಾಸಕ ವಿನಯ್ ಕುಲಕರ್ಣಿಯ ರೇಪ್ ಪ್ರಕರಣವನ್ನು ಪ್ರತಿಪಕ್ಷಗಳು ಬಹಿರಂಗಪಡಿಸಿದವು.
ಇಲ್ಲಿಗೆ ಮುಡಾ ಹಗರಣ ತೀವ್ರತೆ ಕಳೆದುಕೊಂಡಿತು. ವಾಲ್ಮೀಕಿ ಹಗರಣದ ರೂವಾರಿಗೆ ಬೇಲ್ ಸಿಕ್ಕಾಯಿತು. ಈಗ ಪ್ರತಿಪಕ್ಷವು ತಮ್ಮ ಫೇವರಿಟ್ ಕೋಮುದ್ವೇಷಾಸ್ತ್ರ ಬಳಕೆಗೆ ಮುಂದಾಯಿತು. ಹಳೇ ಹುಬ್ಬಳ್ಳಿ ಕೇಸ್ ವಾಪಸಾತಿ ಪ್ರಕರಣವನ್ನು ಮುನ್ನಲೆಗೆ ತಂದು ಅಲ್ಪಸಂಖ್ಯಾತರ ಓಲೈಕೆ ಎಂದು ಎದೆ ಬಾಯಿ ಬಡಿದು ಕೊಳ್ಳತೊಡಗಿತು.
ಸರಕಾರಕ್ಕೆ ಈಗ ಸಮಾಧಾನವಾಯ್ತು. ಈ ಕೋಮು ಅಸ್ತ್ರವನ್ನು ಆಳುವ ಪಕ್ಷವೇ ವಿಪಕ್ಷಗಳ ಕೈಗೆ ಕೊಟ್ಟಿತು. ಯಾಕೆಂದರೆ ಮುಡಾ ಅಸ್ತ್ರದ ತೀವ್ರತೆ ಕಡಿಮೆ ಮಾಡಬೇಕಿತ್ತು. ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳಬೇಕಿತ್ತು. ಹೀಗಾಗಿ ಹಳೇ ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತರು ಮಾಡಿದ ಗಲಾಟೆಯ ಸಮಯದಲ್ಲಿ ಮುಸ್ಲಿಂ ಸಮುದಾಯದವರ ಮೇಲೆ ದಾಖಲಾದ ಕೇಸುಗಳನ್ನು ವಾಪಸ್ ಪಡೆಯುವ ನಿರ್ಧಾರವನ್ನು ಸರಕಾರ ಉದ್ದೇಶ ಪೂರ್ವಕವಾಗಿಯೇ ಮಾಡಿತು. ಈಗ ಪ್ರತಿಪಕ್ಷಗಳ ಕಾಕದೃಷ್ಟಿ ಮುಡಾದಿಂದ ಮುಸ್ಲಿಂ ಕಡೆಗೆ ಬದಲಾಯಿತು. ಸರಕಾರಕ್ಕೆ ಇದೇ ಬೇಕಾಗಿತ್ತು.
ಆ ಪಕ್ಷದ ಸರಕಾರ ಇದ್ದಾಗ ಹಾಕಲಾದ ಕೇಸುಗಳನ್ನು ಈ ಪಕ್ಷದ ಸರಕಾರ ಅಧಿಕಾರಕ್ಕೆ ಬಂದಾಗ ಹಿಂಪಡೆಯುವುದು ಹಾಗೂ ಈ ಪಕ್ಷದವರು ಅಧಿಕಾರದಲ್ಲಿದ್ದಾಗ ಹಾಕಲಾದ ಕೇಸುಗಳನ್ನು ಆ ಪಕ್ಷದವರು ಸರಕಾರ ರಚಿಸಿದಾಗ ತೆರುವುಗೊಳಿಸುವುದು.. ಮೊದಲಿನಿಂದ ನಡೆದುಕೊಂಡು ಬಂದ ಪರಂಪರೆಯಾಗಿದೆ. ಮುಡಾ ವಾಲ್ಮೀಕಿ ಹಗರಣಗಳಿಂದ ವಿಪಕ್ಷಗಳು, ಮಾಧ್ಯಮಗಳು ಹಾಗೂ ಜನರ ಗಮನವನ್ನು ಕೇಸು ವಾಪಸಾತಿ ಪ್ರಕರಣದತ್ತ ತಿರುಗಿಸಲು ಈ ಪರಂಪರೆಯನ್ನು ಸಿದ್ದರಾಮಯ್ಯನವರ ಸರಕಾರ ಬಳಸಿತು. ಸಧ್ಯಕ್ಕೆ ಅವರು ಅಂದುಕೊಂಡಂತೆ ಆಗುತ್ತಿದೆ. ಪ್ರತಿಪಕ್ಷಗಳು ಹಾದಿ ಬೀದಿಯಲ್ಲಿ ನಿಂತು ಮುಸ್ಲಿಂ ತುಷ್ಟೀಕರಣ ಅಂತಾ ತಾರಕ ಸ್ವರದಲ್ಲಿ ಬಾಯಿ ಬಡಿದುಕೊಳ್ಳುತ್ತಿವೆ.
ಕಾಲಕಾಲಕ್ಕೆ ರಾಜ್ಯದಲ್ಲಿ ಹೋರಾಟ, ಪ್ರತಿಭಟನೆ, ಗಲಾಟೆ, ಗಲಭೆಗಳು ಸಂಭವಿಸುತ್ತಲೇ ಇರುತ್ತವೆ. ಆಗ ಪೊಲೀಸರು ಕೇಸುಗಳನ್ನು ದಾಖಲಿಸುತ್ತಾರೆ. ಹಾಗೆ ಮಾಡುವಾಗ ಸುಳ್ಳು ಕೇಸು ದಾಖಲಾಗಿದ್ದರೆ, ಕೇಸು ದಾಖಲಿಸುವಾಗ ತಪ್ಪು ಸೆಕ್ಷನ್ ಹಾಕಿದ್ದರೆ ಅಂತಹ ಕೇಸುಗಳನ್ನು ಹಿಂಪಡೆಯಲು ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗುತ್ತದೆ. ಸರಕಾರವು ಗೃಹ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸುತ್ತದೆ. ಮನವಿ ಮಾಡಲಾದ ಕೇಸುಗಳನ್ನು ಪರಿಶೀಲಿಸಿ ಕೆಲವು ಕೇಸುಗಳನ್ನು ವಾಪಸ್ ಪಡೆಯಲು ಉಪಸಮಿತಿಯು ಸರಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಆ ಶಿಫಾರಸ್ಸು ಆಧರಿಸಿ ಸರಕಾರವು ಕೇಸುಗಳನ್ನು ವಾಪಸ್ ಪಡೆಯಲು ನಿರ್ಧರಿಸಿ ಕೋರ್ಟಿಗೆ ಮನವಿ ಮಾಡಿಕೊಳ್ಳುತ್ತದೆ. ನ್ಯಾಯಾಲಯಕ್ಕೆ ಮನವರಿಕೆಯಾದರೆ ಆಯಾ ಪ್ರಕರಣಗಳಲ್ಲಿ ಭಾಗಿಯಾದವರನ್ನು ಖುಲಾಸೆ ಮಾಡಬಹುದು ಇಲ್ಲವೇ ವಿಚಾರಣೆ ಮುಂದುವರೆಸಬಹುದಾಗಿದೆ.
ಈ ಬಾರಿಯೂ ಸಹ ಸರಕಾರದ ಮುಂದೆ 56 ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಮನವಿಗಳು ಬಂದಿದ್ದವು. ಸಚಿವ ಸಂಪುಟದ ಉಪಸಮಿತಿಯು ಕೇಸುಗಳನ್ನು ಪರಿಶೀಲಿಸಿ 43 ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಿತು. ಅದರಲ್ಲಿ ಹಳೆ ಹುಬ್ಬಳ್ಳಿಯ ಗಲಭೆಯದ್ದೂ ಒಂದು.
2022 ಎಪ್ರಿಲ್ 16 ರಂದು ಕಿಡಿಗೇಡಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯದ ಕುರಿತು ಅವಮಾನಕಾರಿ ಪೋಸ್ಟ್ ಹಂಚಿಕೊಂಡಿದ್ದ. ಅದರಿಂದ ಸಿಟ್ಟಿಗೆದ್ದ ಮುಸ್ಲಿಂ ಯುವಕರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆಗೆ ಮುಂದಾದರು. ಪೊಲೀಸರ ಅಸಹಕಾರದಿಂದ ರೊಚ್ಚಿಗೆದ್ದು ಕಲ್ಲು ತೂರಾಟ ಮಾಡಿ ಕೆಲವು ವಾಹನಗಳನ್ನು ಜಖಂ ಮಾಡಲಾಯ್ತು. ಕೆಲವು ಪೊಲೀಸರಿಗೂ ಗಾಯಗಳಾದವು. ಈ ಕೇಸಲ್ಲಿ ಮುಸ್ಲಿಂ ಸಮುದಾಯದ 150 ಮಂದಿಯ ಮೇಲೆ ಕೇಸ್ ದಾಖಲಿಸಲಾಯ್ತು. ಗಲಾಟೆಯಲ್ಲಿ ಕಲ್ಲೆಸೆದ ಬಹುತೇಕ ಕಿಡಿಗೇಡಿಗಳು ಪರಾರಿಯಾಗಿದ್ದರು. ಸಿಕ್ಕವರನ್ನು ಹಿಡಿದು ಪೊಲೀಸರು ಬಂಧಿಸಿ ಕೇಸ್ ದಾಖಲಿಸಿದ್ದರು. ಅಂಜುಮನ್ ಇಸ್ಲಾಂ ಎನ್ನುವ ಸಂಸ್ಥೆಯು ಈ ಪ್ರಕರಣವನ್ನು ವಾಪಸ್ ಪಡೆಯಬೇಕೆಂದು ಸಚಿವ ಸಂಪುಟದ ಉಪಸಮಿತಿಗೆ ಮನವಿ ಮಾಡಿತ್ತು. ಪರಿಶೀಲಿಸಿದ ಸಮಿತಿ ಕೇಸ್ ವಾಪಸ್ ಪಡೆಯಲು ನಿರ್ಧರಿಸಿತು.
ಇಷ್ಟು ಸಾಕಾಗಿತ್ತು ಬಿಜೆಪಿ ಪಕ್ಷದವರಿಗೆ. “ಸರಕಾರ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ, ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ, ಮುಸ್ಲಿಂ ಭಯೋತ್ಪಾದಕರ ಮೇಲಿನ ಕೇಸುಗಳನ್ನು ಹಿಂಪಡೆಯುತ್ತಿದೆ, ಕಾಂಗ್ರೆಸ್ ಭಯೋತ್ಪಾದಕ ಬೆಂಬಲಿತ ಪಕ್ಷ” ಎಂದೆಲ್ಲಾ ಆರೋಪಿಸಿ ಪ್ರತಿಭಟನೆಗೆ ಇಳಿದು ತನ್ನ ಮುಸ್ಲಿಂ ವಿರೋಧಿ ಮತಾಂಧತೆಯನ್ನು ಪ್ರದರ್ಶಿಸಿ ಮುಸ್ಲಿಂ ಸಮುದಾಯದ ವಿರುದ್ಧ, ಆಳುವ ಸರಕಾರದ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಪೂರ್ವಯೋಜಿತ ಕಾರ್ಯವನ್ನು ಆರಂಭಿಸಿತು.
ಈ ಬಿಜೆಪಿಗರಿಗೆ ಸರಕಾರ ಹಿಂಪಡೆದ 43 ಪ್ರಕರಣಗಳಲ್ಲಿ ಮುಸ್ಲಿಂ ಗಲಭೆ ಪ್ರಕರಣ ಮಾತ್ರ ಅತ್ಯಂತ ಮುಖ್ಯವಾಗಿ ಬಾಕಿ ಪ್ರಕರಣಗಳನ್ನು ಮರೆಮಾಚಲಾಯ್ತು. ಆ ಬಾಕಿ ಪ್ರಕರಣಗಳಲ್ಲಿ ರೈತ ಹೋರಾಟಗಾರರ, ಕನ್ನಡ ಪರ ಹೋರಾಟಗಾರರ, ಮಹಿಳಾ ಪ್ರತಿಭಟನಾಕಾರರ ಹಾಗೂ ವಿದ್ಯಾರ್ಥಿಗಳ ವಿರುದ್ಧದ ಪ್ರಕರಣಗಳೂ ಇದ್ದವು. ಇದೇ ಬಿಜೆಪಿ ಪಕ್ಷದ ನಾಯಕರಾದ ಸಿ.ಟಿ.ರವಿ, ವಿ.ಸೋಮಣ್ಣನವರ ಮನವಿಯ ಮೇರೆಗೆ ಹಿಂಪಡೆದ ಪ್ರಕರಣಗಳೂ ಇದ್ದವು. ಆದರೆ ಇಸ್ಲಾಮೋಫೋಬಿಯಾ ಪೀಡಿತ ಬಿಜೆಪಿಗರಿಗೆ ಮುಸ್ಲಿಂ ಸಮುದಾಯದವರ ಮೇಲಿನ ಕೇಸು ಹಿಂಪಡೆತವೇ ಅವರ ಕೋಮುಸೌಹಾರ್ದತಾ ಭಂಗ ಅಜೆಂಡಾಕ್ಕೆ ಅಗತ್ಯವಾಗಿತ್ತು. ಹೀಗಾಗಿ ಮುಡಾ, ವಾಲ್ಮೀಕಿ ಹಗರಣಗಳೆಲ್ಲವನ್ನೂ ಬದಿಗಿಟ್ಟು ಮುಸ್ಲಿಂ ವಿರೋಧಿ ಪ್ರತಿಭಟನೆಯನ್ನು ಕೈಗೆತ್ತಿಕೊಳ್ಳಲಾಯ್ತು.
ಇಷ್ಟಕ್ಕೂ ಈ ಬಿಜೆಪಿ ಪಕ್ಷದ ಸರಕಾರ ಅಧಿಕಾರದಲ್ಲಿದ್ದಾಗ ಮಾಡಿದ್ದೇನು? ಎಂಎಲ್ಸಿ ನಾಗರಾಜ್ ಯಾದವ್ ರವರು ಹೇಳುವಂತೆ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಒಟ್ಟು 380 ಪ್ರಕರಣಗಳನ್ನು ಹಿಂಪಡೆಯಲಾಯ್ತು. ಅದರಲ್ಲಿ 180 ಕ್ಕೂ ಹೆಚ್ಚು ಕೋಮು ಪ್ರಕರಣಗಳಿದ್ದವು. ಸಂಘ ಪರಿವಾರದ ಮಿಲಿಟೆಂಟ್ ಅಂಗವಾದ ಭಜರಂಗದಳದ ಕಾರ್ಯಕರ್ತರ ಮೇಲಿನ ಕೇಸುಗಳನ್ನು ಇದೇ ಬಿಜೆಪಿ ಸರಕಾರ ವಾಪಸ್ ಪಡೆದಿತ್ತು. ಇದನ್ನೆಲ್ಲಾ ಮರೆಮಾಚಿ ಈಗ ಹಳೆ ಹುಬ್ಬಳ್ಳಿಯ ಪ್ರಕರಣವನ್ನು ನೆನಪಿಸಿಕೊಂಡು ಕೋಮುದ್ವೇಷವನ್ನು ಹರಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.
ಆಯ್ತು.. ಕಾಂಗ್ರೆಸ್ ಮುಸ್ಲಿಂ ಸಮುದಾಯವನ್ನು ಓಲೈಸಲೆಂದೇ ಮುಸ್ಲಿಂ ಯುವಕರ ಮೇಲಿರುವ ಪ್ರಕರಣಗಳನ್ನು ಹಿಂಪಡೆದಿದೆ ಎಂದುಕೊಳ್ಳೋಣ. ಹಾಗಾದರೆ ಈ ಬಿಜೆಪಿ ಭಜರಂಗಿಗಳ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದದ್ದು ಹಿಂದೂ ಸಮುದಾಯದ ಓಲೈಕೆಗೋ ಅಥವಾ ಹಿಂದುತ್ವವಾದಿ ಉಗ್ರ ಸಂಘಟನೆಗಳ ಸಮರ್ಥನೆಗೋ?
ಇದನ್ನೂ ಓದಿ- ಕಾಂಗ್ರೆಸ್ ಪಕ್ಷದಲ್ಲೊಬ್ಬ ಆರ್.ಎಸ್.ಎಸ್ ಶಾಸಕ
ಘಟನೆ ಯಾವುದೇ ಇರಲಿ, ಸಮುದಾಯಗಳು ಯಾವುದೇ ಆಗಿರಲಿ, ಕಾನೂನಿನ ಉಲ್ಲಂಘನೆ ಮಾಡಿದರೆ ಅದು ಶಿಕ್ಷಾರ್ಹ ಆಗಲೇಬೇಕು. ಕ್ರಿಮಿನಲ್ ಎಲಿಮೆಂಟ್ ಗಳಲ್ಲಿ ಧರ್ಮವನ್ನು ಪರಿಗಣಿಸಲೇ ಬಾರದು. ಆದರೆ ಇಡೀ ರಾಜಕೀಯವೇ ಜಾತಿ ಧರ್ಮಾಧಾರಿತವಾದಾಗ ಈ ಓಲೈಕೆಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತವೆ. ಪೊಲೀಸರ ಆತ್ಮಸ್ಥೈರ್ಯವನ್ನು ಕುಂದಿಸುತ್ತವೆ. ನ್ಯಾಯಾಂಗದ ಮೇಲೆ ಅವಿಶ್ವಾಸವನ್ನು ಹೆಚ್ಚಿಸುತ್ತವೆ. ಗಲಭೆಕೋರರಿಗೆ ಪ್ರೇರಣೆಯನ್ನೂ ಕೊಡುತ್ತವೆ. ಹೀಗಾಗಿ ರಾಜಕೀಯ ನಾಯಕರುಗಳು ಕ್ರಿಮಿನಲ್ ಗಳ ರಕ್ಷಣೆಗೆ ಯಾವತ್ತೂ ಬೆಂಬಲ ನೀಡಬಾರದು. ಅಪರಾಧಿಕ ಕೃತ್ಯಗಳಲ್ಲಿ ಸಿಲುಕಿದವರು ಅಮಾಯಕರೋ ಇಲ್ಲಾ ಅಪರಾಧಿಗಳೋ ಎಂದು ನಿರ್ಧರಿಸಲೆಂದೇ ನ್ಯಾಯಾಂಗ ವ್ಯವಸ್ಥೆ ಇದೆ. ರಾಜಕೀಯ ಪ್ರೇರಿತವಾಗಿ ಸುಳ್ಳು ಕೇಸುಗಳನ್ನು ಹಾಕಿದ್ದೇ ಆಗಿದ್ದರೆ ಸಂಬಂಧಿಸಿದ ಪೊಲೀಸರನ್ನೂ ವಿಚಾರಣೆಗೊಳಪಡಿಸಿ ಶಿಕ್ಷಿಸುವ ಕಾರ್ಯವನ್ನು ನ್ಯಾಯಾಂಗ ಮಾಡಬೇಕಿದೆ. ನ್ಯಾಯಾಂಗದ ಕಾರ್ಯದಲ್ಲಿ ಶಾಸಕಾಂಗದ ಹಸ್ತಕ್ಷೇಪ ನಿಲ್ಲಬೇಕಿದೆ.
ಏನೇ ಆದರೂ ರಾಜಕೀಯದ ಚದುರಂಗದಾಟಕ್ಕೆ ಕೊನೆಮೊದಲಂತೂ ಇಲ್ಲವೇ ಇಲ್ಲ. ಮಹಾಭಾರತ ಯುದ್ಧದಲ್ಲಿ ಹೋರಾಡಿ ಸತ್ತವರು ಬಡವರ ಮಕ್ಕಳು, ಸಂತ್ರಸ್ತರಾದವರು ಸಾಮಾನ್ಯ ಪ್ರಜೆಗಳು. ಹಾಗೆಯೇ ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ರಾಜಕೀಯ ಪಕ್ಷಗಳ ಮೇಲಾಟದಲ್ಲಿ ಅನುಕೂಲ ಕಾಣದೆ, ಅಭಿವೃದ್ಧಿ ಹೊಂದದೆ ತೊಂದರೆಗೆ ಒಳಗಾಗುವವರು ಬಹುಸಂಖ್ಯಾತ ಪ್ರಜೆಗಳೇ. ಈ ಆಳುವ ಹಾಗೂ ವಿರೋಧ ಪಕ್ಷಗಳನ್ನು ಅದಲು ಬದಲು ಮಾಡುವ ಓಟಿನ ಅಧಿಕಾರವನ್ನು ಮಾತ್ರ ಸಂವಿಧಾನ ಪ್ರಜೆಗಳಿಗೆ ಕೊಟ್ಟಿದೆ. ಪ್ರಜೆಗಳಿಂದ ಆರಿಸಿ ಬಂದ ಪ್ರಭುಗಳು ಮತ್ತೆ ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ಆರಂಭಿಸುವುದು ಮತ್ತದೇ ಚದುರಂಗದಾಟವನ್ನೇ. ಮತದಾನದ ದಿನದವರೆಗೂ ಇವರ ಬೃಹನ್ನಾಟಕವನ್ನು ಮೂಕ ಪ್ರೇಕ್ಷಕರಾಗಿ ಪ್ರಜೆಗಳು ವೀಕ್ಷಿಸುವುದು ಹಾಗೂ ಆಟಗಾರರನ್ನು ಬದಲಾಯಿಸುವುದು ಇಷ್ಟೇ ನಡೆಯುತ್ತಾ ಬಂದಿದೆ. ಆಟಗಾರರು ಬದಲಾಗುತ್ತಾರೆ. ಚದುರಂಗದ ಪಟ್ಟುಗಳು ಬದಲಾಗುತ್ತವೆ. ರಾಜ ಮಂತ್ರಿಗಳು ಬಿದ್ದೇಳುತ್ತಾರೆ. ಆದರೆ ಬಹುಸಂಖ್ಯಾತ ಪ್ರೇಕ್ಷಕ ಪ್ರಜೆಗಳು ಇದ್ದಲ್ಲೇ ಇರುತ್ತಾರೆ. ಪ್ರಭುತ್ವ ಗೆಲ್ಲುತ್ತದೆ, ಪ್ರಜೆಗಳು ಸೋಲುತ್ತಾರೆ. ಇದೇ ಪ್ರಜಾಪ್ರಭುತ್ವ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ರಂಗಕರ್ಮಿಗಳು
ಇದನ್ನೂ ಓದಿ-ಜಿ ಎನ್ ಸಾಯಿಬಾಬಾ ಸಾವು: ಪ್ರಭುತ್ವ ನಡೆಸಿದ ಘನ ಘೋರ ಕ್ರೌರ್ಯ