ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಾಗಲೇ ಭೂಕುಸಿತ ಸಂಭವಿಸಿ ಅವಾಂತರವೇ ಸೃಷ್ಟಿಯಾಗಿದೆ. ಈಗ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ಮಳೆ ಕೂಡ ಬಿಟ್ಟು ಬಿಡದೇ ಸುರಿಯುತ್ತಿದೆ. ಹೀಗಾಗಿ ಮೊದಲು ಎಲ್ಲೆಲ್ಲಿ ಭೂ ಕುಸಿತವಾಗಿತ್ತೋ ಆ ಪಾಯಿಂಟ್‌ಗಳಲ್ಲಿ ಪರಿಶೀಲನೆ ನಡೆಸುವಂತೆ ಜಿಲ್ಲಾಡಳಿತ ಕಟ್ಟೆಚ್ಚರ ಘೋಷಿಸಿದೆ.
ಮುನ್ನೆಚ್ಚರಿಕೆ ಕಾರ್ಯಕ್ರಮವಾಗಿ, ಈ ಹಿಂದೆ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಎಲ್ಲೆಲ್ಲಿ ಭೂಗುಸಿತ ಸಂಭವಿಸಿತ್ತೋ ಆ ಪಾಯಿಂಟ್ ಗಳಲ್ಲಿ ಜೊತೆಗೆ ಇಡೀ ಘಾಟ್ ರಸ್ತೆಯನ್ನು ಪರಿಶೀಲನೆ ನಡೆಸುವಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಭೆ ನಡೆಸಿದ್ದು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಇದರ ಬೆನ್ನಲ್ಲೇ ಎಸ್‌ಪಿ ವಿಕ್ರಂ ಅಮ್ಟೆ ಸೇರಿದಂತೆ ಅಧಿಕಾರಿಗಳು ಚಾರ್ಮಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಚಾರ್ಮಾಡಿ ಘಾಟಿಯ ಅಲೇಖಾನ್ ಫಾಲ್ಸ್ ಬಳಿ 15 ದಿನಗಳ ಹಿಂದೆ ಭೂಕುಸಿತ ಸಂಭವಿಸಿತ್ತು ಈ ಜಾಗಕ್ಕೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಸಕಲೇಶಪುರ ಶಿರಾಡಿ ಘಾಟ್ನ ದೊಡ್ಡತಪ್ಲು ಬಳಿ ಭೂಕುಸಿತದಿಂದಾಗಿ ಶಿರಾಡಿ ಘಾಟಿ ರಸ್ತೆಯಲ್ಲಿ ಸ್ಥಗಿತಗೊಂಡಿತ್ತು. ಬಿರುಸಿನ ಕಾರ್ಯಚರಣೆ ನಡೆಸಿ ಇಂದು ಬೆಳಿಗ್ಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.