ಚನ್ನಪಟ್ಟಣ ಉಪ ಚುನಾವಣೆ; ದ್ವಂದ್ವದಲ್ಲಿ ಕುಮಾರಸ್ವಾಮಿ; ಯಾರು ಹಿತವರು ಈ ಇಬ್ಬರೊಳಗೆ?

Most read

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗುವುದು ಖಚಿತವಾಗುತ್ತಿದ್ದಂತೆ, ಜೆಡಿಎಸ್‌ ಮುಖಂಡ ಕೇಂದ್ರ ಸಚಿವ ಕುಮಾರಸ್ವಾಮಿ ದ್ವಂದ್ವದಲ್ಲಿ ಮುಳುಗಿದ್ದಾರೆ. ಮುಖಂಡರು ಮತ್ತು ಕಾರ್ಯಕರ್ತರು ನಿಖಿಲ್‌ ಅವರನ್ನೇ ಕಣಕ್ಕಿಳಿಸುವಂತೆ ಒತ್ತಡ ಹೇರುತ್ತಿದ್ದರೆ ಕುಟುಂಬದ ಸದಸ್ಯರು ಜಯಮುತ್ತು ಅವರನ್ನು ಅಭ್ಯರ್ಥಿ ಮಾಡುವಂತೆ ಸಲಹೆ ನೀಡಿದ್ದಾರೆ.

ಬುಧವಾರ ಅತ್ತ ಯೋಗೇಶ್ವರ್‌ ಕೈ ಹಿಡಿಯುತ್ತಿದ್ದಂತೆ ಇತ್ತ ಜೆಪಿ ಭವನದಲ್ಲಿ ಕುಮಾರಸ್ವಾಮಿ ದಿನವಿಡೀ ಸರಣಿ ಸಭೆಗಳನ್ನು ನಡೆಸಿದರಾದರೂ ಗೊಂದಲದಿಂದ ಆಚೆ ಬರಲು ಸಾಧ್ಯವಾಗಿಲ್ಲ. ಕುಮಾರಸ್ವಾಮಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗದೆ ಗೊಂದದಲ್ಲೇ ಮುಳುಗಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ. ಸಭೆಗೂ ಮುನ್ನ ಮಾಜಿ ಪ್ರಧಾನಿ ದೇವೇಗೌಡರು ಕುಮಾರಸ್ವಾಮಿ ಮತ್ತು ನಿಖಿಲ್‌ ಅವರನ್ನು ಕರೆಯಿಸಿಕೊಂಡು ಚನ್ನಪಟ್ಟಣದಲ್ಲಿ ಸ್ಪರ್ಧೆ ಕಠಿಣವಾಗುವ ಸಾಧ್ಯತೆಗಳಿದ್ದು ಕಣಕ್ಕಿಳಿಯದಂತೆ ನಿಖಿಲ್‌ ಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಪಕ್ಷದ ಕಾರ್ಯಕರ್ತರು ಮಾತ್ರ ಯೋಗೇಶ್ವರ್‌ ಗೆ ಪ್ರಬಲ ಪೈಪೋಟಿ ನೀಡಲು ನಿಖಿಲ್‌ ಅವರನ್ನೇ ಹುರಿಯಾಳನ್ನಾಗಿ ಮಾಡಬೇಕು ಎಂದು ಆಗ್ರಹಪಡಿಸುತ್ತಿದಾರೆ. ಸತತ ಎರಡು ಚುನಾವಣೆಗಳಲ್ಲಿ ಸೋಲು ಕಂಡಿರುವ ನಿಖಿಲ್‌ ಅವರೂ ಸಹ ಜಯಮುತ್ತು ಅವರನ್ನು ಅಭ್ಯರ್ಥಿ ಮಾಡಲು ಆಸಕ್ತಿ ಹೊಂದಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರು ದ್ವಂದ್ವದಿಂದ ಹೊರಬಂದಿಲ್ಲ ಎಂದು ಹೇಳಲಾಗುತ್ತಿದೆ.

ಕುಮಾರಸ್ವಾಮಿ ಹತ್ತಾರು ಲೆಕ್ಕಾಚಾರಗಳಲ್ಲಿ ತೊಡಗಿದ್ದಾರೆ. ಯೋಗೇಶ್ವರ್‌ ಪ್ರಬಲ ಅಭ್ಯರ್ಥಿ. ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್‌ ಗೆ ಮತ್ತೊಂದು ಪ್ಲಸ್‌ ಪಾಯಿಂಟ್.‌ ಬಿಜೆಪಿ ಜತೆ ಹೊಂದಾಣಿಕೆ ಇರುವುದರಿಂದ ಜೆಡಿಎಸ್‌ ಗೆ ಮುಸ್ಲಿಂ ಮತಗಳು ಬರುವುದಿಲ್ಲ. ಬಿಜೆಪಿಯ ಒಂದು ಬಣ ತಮ್ಮ ವಿರುದ್ಧ ಕೆಲಸ ಮಾಡಲಿದೆ ಎಂಬ ಸತ್ಯ ಅರಿವಾಗಿದೆ. ಈ ಅಂಶಗಳನ್ನು ಕುರಿತೂ ಅವರು ಆಪ್ತರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ಒಂದು ವೇಳೆ ಈ ಕ್ಷೇತ್ರವನ್ನು ಕಳೆದುಕೊಂಡರೆ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್‌ ಶಾಸಕರೇ ಇಲ್ಲದ ಹಾಗಾಗುತ್ತದೆ. ಹೇಳಿಕೇಳಿ ರಾಮನಗರ ನನ್ನ ಕಾರ್ಯಕ್ಷೇತ್ರ ಎಂದು ಮಾತಿಗೊಮ್ಮೆ ಕುಮಾರಸ್ವಾಮಿ ಹೇಳುತ್ತಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕೂ ಮುನ್ನ ಕುಮಾರಸ್ವಾಮಿ ಜಿಲ್ಲೆಯ ಏಕೈಕ ಶಾಸಕರಾಗಿದ್ದರು. ಈಗ ಆ ಕ್ಷೇತ್ರವನ್ನೂ ಕಳೆದುಕೊಳ್ಳುವ ಭೀತಿ ಆವರಿಸಿದೆ. ಚನ್ನಪಟ್ಟಣದಲ್ಲಿ ಯಾರೇ ಅಭ್ಯರ್ಥಿಯಾದರೂ ಸ್ಪರ್ಧೆ ಕುಮಾರಸ್ವಾಮಿ ಮತ್ತು ಶಿವಕುಮಾರ್‌ ನಡುವೆ ಎನ್ನುವುದು ನಿಕ್ಕಿಯಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ಭಾವ ಡಾ. ಮಂಜುನಾಥ್‌ ಎದುರು ಸೋಲು ಕಂಡ ಸಹೋದರ ಡಿಕೆ ಸುರೇಶ್‌ ಸೋಲಿಗೆ ಸೇಡು ತೀರಿಸಿಕೊಳ್ಳುವದೂ ಸಹ ಡಿಕೆಗೆ ಮುಖ್ಯವಾಗಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಗಳನ್ನಾಗಿ ಮಾಡಿದ್ದ ರಾಮನಗರ ಜಿಲ್ಲೆ ಕೈ ತಪ್ಪಿ ಹೋಗುವ ಭೀತಿ ಆವರಿಸಿದೆ.

ಅಭ್ಯರ್ಥಿ ಆಯ್ಕೆ ಕುರಿತು ಜೆಡಿಎಸ್‌ ಮತ್ತು ಬಿಜೆಪಿ ಸಭೆ ಇಂದು ನಡೆಯಲಿದೆ. ಈ ಕ್ಷೇತ್ರವನ್ನು ಜೆಡಿಎಸ್‌ ಗೆ ಬಿಟ್ಟುಕೊಟ್ಟಿರುವುದರಿಂದ ಅಭ್ಯರ್ಥಿ ಆಯ್ಕೆ ಕುರಿತು ಬಿಜೆಪಿಗೆ ಅಷ್ಟೇನೂ ಪಾತ್ರ ಇರುವುದಿಲ್ಲ. ಯೋಗೇಶ್ವರ್‌ ಕಾರಣಕ್ಕೆ ನೆಲೆ ಕಂಡುಕೊಂಡಿದ್ದ ಬಿಜೆಪಿಗೆ ಈಗ ಚನ್ನಪಟ್ಟಣದಲ್ಲಿ ಯಾವುದೇ ನೆಲೆ ಇಲ್ಲವಾಗಿದೆ. ಹಾಗಾಗಿ ತಲೆಕೆಡಸಿಕೊಳ್ಳುವಂತಹುದೇನೂ ಇಲ್ಲ. ಸೋತರೆ ಸೋಲಿನ ಹೊಣೆ ಕುಮಾರಸ್ವಾಮಿ ಅವರದ್ದೇ ಆಗಿರುತ್ತದೆ ಅಲ್ಲವೇ?

More articles

Latest article