ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿರುಸಿನ ಪ್ರಚಾರ ನಡೆಯುತ್ತಿರುವಾಗಲೇ ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಡೆ ಅನುಭವಿಸಿದೆ.
ಚನ್ನಪಟ್ಟಣ ನಗರಸಭೆಯ ಸದಸ್ಯರಾಗಿದ್ದ ಬಿಜೆಪಿಯ ಏಳು ಸದ್ಯರ ಪೈಕಿ ಆರು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಮುಖಂಡ ಮಾಜಿ ಸಂಸದ ಡಿ.ಕೆ ಸುರೇಶ್ ಅವರ ಸಮ್ಮುಖದಲ್ಲಿ ಇಂದು ಅವರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಚನ್ನಪಟ್ಟಣ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚನ್ನಪಟ್ಟಣ ನಗರಸಭಾ ಬಿಜೆಪಿ ಸದಸ್ಯರಾದ ಚಂದ್ರು, ಮಂಗಳಮ್ಮ, ಮನೋಹರ್, ಕಮಲ, ಜಯಮಾಲ, ಕಸ್ತೂರಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.
2021-22ರಲ್ಲಿ ನಗರಸಭೆಗೆ ನಡೆದ ಚುನಾವಣೆಯಲ್ಲಿ ಇವರೆಲ್ಲರೂ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಒಟ್ಟು 31 ಸದಸ್ಯರ ಪೈಕಿ ಬಿಜೆಪಿಯಿಂದ ಏಳು ಮಂದಿ ಮತ್ತು 16 ಮಂದಿ ಜೆಡಿಎಸ್ನಿಂದ ಆಯ್ಕೆಯಾಗಿದ್ದರು. ಎರಡು ತಿಂಗಳ ಹಿಂದೆ 13 ಮಂದಿ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.