ಚನ್ನಪಟ್ಟಣ ಉಪಚನಾವಣೆ; JDS ಮುಖಂಡರು, ಕಾರ್ಯಕರ್ತರ ಜತೆ ಹೆಚ್.ಡಿ.ಕುಮಾರಸ್ವಾಮಿ ಸಭೆ

Most read

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಪಕ್ಷದ ಕಾರ್ಯಕರ್ತರು, ಮುಖಂಡರ ಜತೆ ಸಮಾಲೋಚನೆ ನಡೆಸಿದರು.

ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸದಲ್ಲಿ ಈ ಸಭೆ ನಡೆಸಿದ ಕುಮಾರಸ್ವಾಮಿ ಅವರು; ಅಭ್ಯರ್ಥಿ ಆಯ್ಕೆ ಸೇರಿದಂತೆ ಜೆಡಿಎಸ್ -ಬಿಜೆಪಿ ಮೈತ್ರಿಕೂಟ ಒಮ್ಮತವಾಗಿ ಚುನಾವಣೆ ಎದುರಿಸುವ ಬಗ್ಗೆ ಚರ್ಚೆ ನಡೆಸಿದರು.

ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದು ಮುಖ್ಯವಲ್ಲ. ಅಭ್ಯರ್ಥಿ ಯಾರೇ ಆದರೂ ಅವರು ಎನ್ ಡಿಎ ಅಭ್ಯರ್ಥಿ ಆಗಿರುತ್ತಾರೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಎಲ್ಲರೂ ಒಮ್ಮತವಾಗಿ, ಒಗ್ಗಟ್ಟಾಗಿ ಕೆಲಸ ಮಾಡಬೇಕು. ಮೈತ್ರಿ ಅಭ್ಯರ್ಥಿ ಗೆಲ್ಲಬೇಕು ಎನ್ನುವುದು ನಮ್ಮೆಲ್ಲರ ಗುರಿ ಆಗಬೇಕು ಎಂದು ಮುಖಂಡರಿಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದರು ಕೇಂದ್ರ ಸಚಿವರು.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಪ್ರಮುಖ ಮುಖಂಡರೆಲ್ಲ ಹೋಗಿ ಖುದ್ದು ಭೇಟಿ ಮಾಡಿ ಮುಕ್ತವಾಗಿ ಚರ್ಚಿಸಿ ಎಂದು ಮುಖಂಡರಿಗೆ ಸೂಚಿಸಿದ ಕುಮಾರಸ್ವಾಮಿ ಅವರು; ಯೋಗೇಶ್ವರ ಅವರನ್ನು ಎಲ್ಲಾ ಹಂತಗಳಲ್ಲಿಯೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಅವರ ಮಾರ್ಗದರ್ಶನ ಪಡೆಯಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಮುಂದಿನ ವಾರ ನಾನು ಮತ್ತೆ ಬೆಂಗಳೂರಿಗೆ ಬರುತ್ತೇನೆ. ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಹಾಗೂ ಬಿಜೆಪಿಯ ರಾಜ್ಯ, ರಾಷ್ಟ್ರೀಯ ನಾಯಕರ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಸೇರಿದಂತೆ ಚನ್ನಪಟ್ಟಣ ಕ್ಷೇತ್ರದ ಎಲ್ಲಾ ಪ್ರಮುಖ ನಾಯಕರು, ನೂರಾರು ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಿದ್ದರು.

More articles

Latest article