ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ ವೇಳೆ ನಡೆದ ರೋಡ್ ಶೋ ಆಯೋಜಿಸುವಾಗ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಈ ರೋಡ್ ಶೋಗೆ ಕ್ಷೇತ್ರದ ವಿವಿಧ ಭಾಗಗಳಿಂದ 96 ಬಸ್ ಗಳಲ್ಲಿ ಸಾರ್ವಜನಿಕರನ್ನು ಕರೆ ತರಲಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಬಸ್ ಗಳಿಗೆ ಅನುಮತಿ ಪಡೆದಿರಲಿಲ್ಲ. ಆದ್ದರಿಂದ ಬಸ್ ಮಾಲೀಕರು ಮತ್ತು ಆಯೋಜಕರಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಕುರಿತು ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಈ ರೀತಿ ನೋಟಿಸ್ ನೀಡಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ನೋಟಿಸ್ ಕುರಿತು ಖಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಕಾಂಗ್ರೆಸ್ ಸರಕಾರ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಕಿಡಿ ಕಾರಿದ್ದರು. ಇವರ ಅರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖಂಡ ಡಿ.ಕೆ. ಸುರೇಶ್ ಬಸ್ಸುಗಳಲ್ಲಿ ಜನರನ್ನು ಕರೆ ತರಲು ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಅದರ ಲೆಕ್ಕವನ್ನೂ ಕೊಡಬೇಕು. ಇಷ್ಟೂ ಜ್ಞಾನ ಇಲ್ಲದ ಕುಮಾರಸ್ವಾಮಿ ಹೇಗೆ ಸಚಿವರಾದರು? ಕುಮಾರಸ್ವಾಮಿ ಅವರು ಅನೇಕು ಚುನಾವಣೆಗಳನ್ನು ನಡೆಸಿದ್ದಾರೆ. ಅಷ್ಟೂ ಮಾಹಿತಿ ಇಲ್ಲದಿದ್ದರೆ ಪ್ರಧಾನಿ ಮೋದಿ ಅವರಿಂದ ಕೇಳಿ ತಿಳಿದುಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಯೋಗೇಶ್ವರ್ ಅವರನ್ನು ಬಿಜೆಪಿಯವರೇ ತಂತ್ರಗಾರಿಕೆ ಮಾಡಿ ಹೊರ ಹಾಕಿದ್ದಾರೆ. ನಾವು ಷಡ್ಯಂತ್ರ ಮಾಡಿಲ್ಲ ಎಂದು ಹೇಳಿದ ಸುರೇಶ್, ಅಭ್ಯರ್ಥಿ ಆಯ್ಕೆ ಕುರಿತು ಯಾರಿಗೂ ಅಸಮಾಧಾನ ಇಲ್ಲ. ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಬಂದಿದ್ದರು. ಈಗ ಶಿವಕುಮಾರ್ ಮತ್ತು ಯೋಗೇಶ್ವರ ಅವರನ್ನು ನೋಡಿ ಜನ ಮತ ನೀಡಲಿದ್ದಾರೆ ಎಂದರು.