ಚನ್ನಪಟ್ಟಣ: ಕಾಂಗ್ರೆಸ್ ಸಮಾವೇಶದಲ್ಲಿ ಡಿಕೆಶಿ ವಾಗ್ದಾಳಿ

Most read

ಚನ್ನಪಟ್ಟಣ: ಕ್ಷೇತ್ರದ ಉಪ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಕೆಲವೇ ಗಂಟೆಗಳಿರುವಾಗ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸುತ್ತಿದೆ. ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ದೊಡ್ಡ ಮಳೂರು ಗ್ರಾಮದಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಸಚಿವರು ಮತ್ತು ಶಾಸಕರು ಭಾಗಿಯಾಗಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಶಿವಕುಮಾರ್ ಅವರು, ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ನೀಡಿರುವ ಕೊಡುಗೆಗಳನ್ನು ವಿವರಿಸಿದರು.
ಕನಕಪುರದಲ್ಲಿ 1,500 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಲು ಸಂಸ್ಕರಣಾ ಕೇಂದ್ರ ಸ್ಥಾಪಿಸಿದ್ದೇವೆ. ಈ ಹಿಂದೆ ಕ್ಷೀರ ಭಾಗ್ಯ ಎಲ್ಲವನ್ನೂ ಕೊಟ್ಟಿದ್ದೇವೆ. ಆದರೂ ನಾವು ಮತ್ತೆ ವಿಪಕ್ಷದಲ್ಲಿ ಕೂರುವ ಹಾಗೆ ಆಯಿತು. ನಂತರ ಬಂದ ಬಿಜೆಪಿ ಅವಧಿಯಲ್ಲಿ ಬೆಲೆ ಏರಿಕೆ ಹೆಚ್ಚುತ್ತಾ ಹೋಯಿತು. ರಾಜ್ಯದ ಜನರು ನೆಮ್ಮದಿಯಿಂದ ಜೀವನ ನಡೆಸಲಿ ಎಂದು 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ ಮತ್ತು ಸಮರ್ಥವಾಗಿ ಜಾರಿಗೊಳಿಸಿದ್ಧೇವೆ ಎಂದರು.


ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. 5HP, 10HP ವಿದ್ಯುತ್ ಉಚಿತವಾಗಿ ಕೊಡಲಾಗಿತ್ತು. ಮಕ್ಕಳಿಗೆ ಉಚಿತ CET ತರಬೇತಿ ಕೊಡಬೇಕೆಂದು ಯೋಜನೆ ಮಾಡಿದ್ದೆವು ಎಂದರು. ಜೆಡಿಎಸ್ ಮುಖಂಡರಾದ ದೇವೇಗೌಡರು ಮತ್ತು ಕುಮಾರಸ್ವಾಮಿ ಬಗ್ಗೆ ಮಾತಾಡೋಕೆ ನನಗೆ ಇಷ್ಟ ಇಲ್ಲ. ಆದರೂ ಕೆಲವು ವಿಚಾರಗಳನ್ನು ನಿಮ್ಮ ಬಳಿ ಹೇಳಲೇ ಬೇಕಾಗಿದೆ ಎಂದರು.


ಕಮಲದ ಹೂ ನಂಬಿ ದೊಡ್ಡ ಲೀಡರ್ ಆಗುತ್ತೇನೆ ಎಂದು ಯೋಗೇಶ್ವರ್ ಬಿಜೆಪಿಗೆ ಹೋದರು. ಅದರಿಂದ ಅವರು ಕಳೆದ 2 ಚುನಾವಣೆಯಲ್ಲಿ ಸೋಲುವಂತಾಯ್ತು. ಕಾಂಗ್ರೆಸ್ ಜೊತೆ ಇದ್ದಿದ್ರೆ ಅವರು ಸೋಲುತ್ತಿರಲಿಲ್ಲ. ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಿರಲಿಲ್ಲ. ಈಗ ನಮ್ಮ ಜೊತೆ ಬಂದಿದ್ದಾರೆ ಎಲ್ಲವೂ ಬದಲಾಗಿದೆ. ಕಮಲ ಕೆರೆಯಲ್ಲಿದ್ದರೆ ಚೆನ್ನ, ತೆನೆ ಹೊಲದಲ್ಲಿದ್ರೆ ಚೆನ್ನ. ಕೈ ಅಧಿಕಾರದಲ್ಲಿದ್ರೆ ಚೆನ್ನ ಎಂದು ಯೋಗೇಶ್ವರ್ ಗೆ ಹೇಳಿದ್ದೆ. ಅವರಿಗೆ ಅರ್ಥವಾಗಿ ಕಾಂಗ್ರೆಸ್ ಗೆ ಮರಳಿ ಬಂದಿದ್ದಾರೆ. ಯೋಗೇಶ್ವರ್ ಅವರನ್ನು ಬಳಸಿಕೊಂಡು ಡಾ. ಮಂಜುನಾಥ್ ಅವರನ್ನು ಗೆಲ್ಲಿಸಿಕೊಂಡರು. ಯೋಗೇಶ್ವರ್ ಅವರನ್ನು ಕೈಬಿಟ್ಟರು ಎಂದು ಹೇಳಿದರು.

More articles

Latest article