ಚನ್ನಪಟ್ಟಣ ಉಪ ಚುನಾವಣೆ: ಕೈ ಮುನ್ನಡೆಸಲು ಯೋಗಿ ಆಗಮನ; ತೆನೆಯ ಭಾರ ಹೊರಲಿರುವವರು ಯಾರು?

Most read

ನಾಮಪತ್ರ ಸಲ್ಲಿಕೆಗೆ ಮೂರು ದಿನ ಮಾತ್ರ ಬಾಕಿ ಉಳಿದಿದ್ದು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಅಖಾಡ ರಂಗೇರುತ್ತಿದೆ. ಇದುವರೆಗೂ ಎನ್ ಡಿಎ ಮತ್ತು ಕಾಂಗ್ರೆಸ್ ತನ್ನ ಉಮೇದುವಾರರನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ.

ಸೋಮವಾರ ಸಂಜೆಯಿಂದ ಎಲ್ಲರ ಕಣ್ಣು ಬಿಜೆಪಿ ಮುಖಂಡ ಮಾಜಿ ಸಿ.ಪಿ. ಯೋಗೇಶ್ವರ್‌ ಅವರತ್ತ ನೆಟ್ಟಿವೆ. ಬಿಜೆಪಿ ಚಿಹ್ನೆಯಿಂದಲೇ ಕಣಕ್ಕಿಳಿಯಬೇಕೆಂಬ ಅವರ ಆಸೆ ಕಮರಿ ಹೋಗಿದೆ. ಈ ಭಾರಿ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಯೋಗೇಶ್ವರ್‌ ಬಿಜೆಪಿ ಮೇಲ್ಮನೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಈಗ ಇತಿಹಾಸ.

ಕುಮಾರಸ್ವಾಮಿ ನಡೆ ಏನು?


ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಉತ್ಸುಕರಾಗಿದ್ದಾರೆ. ಆದರೆ ಕೈ ಅಭ್ಯರ್ಥಿ ಯಾರು ಎನ್ನುವುದರ ಮೇಲೆ ನಿಖಿಲ್ ಸ್ಪರ್ಧೆ ನಿರ್ಧಾರವಾಗಲಿದೆ. ಸ್ಪರ್ಧೆ ಕಠಿಣವಾದರೆ
ಒಕ್ಕಲಿಗರ ಸಂಘದ ನಿರ್ದೇಶಕ ಜಯಮುತ್ತು ಅವರನ್ನು ಕಣಕ್ಕಿಳಿಸಲು ಕುಮಾರಸ್ವಾಮಿ ಯೋಚಿಸಿದ್ದಾರೆ.


ನಿಖಿಲ್‌ ಕಣಕ್ಕಿಳಿಸಲು ಅವರ ತಾಯಿ ಅನಿತಾ ಕುಮಾರಸ್ವಾಮಿ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದು ಮೂರನೇ ಬಾರಿಗೂ ಮುಖಭಂಗ ಆಗುವುದು ಬೇಡ. ನನ್ನ ಮಗನನ್ನು ಬಲಿಪಶು ಮಾಡಬೇಡಿ ಎಂದು ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಸುರೇಶ್‌ ಅಭ್ಯರ್ಥಿಯಾಗದಿದ್ದರೆ ಮರುಚಿಂತನೆ ಮಾಡಬಹುದು ಎಂಬ ಸಲಹೆ ನೀಡಿದ್ದಾರಂತೆ. ಇಂದು ಬೆಂಗಳೂರಿನ ಪಕ್ಷದ ಕಚೇರಿಯಲ್ಲೇ ಸಭೆ ನಡೆಯಲಿದ್ದು ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುತ್ತದೆ.

ಈ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲೂ ಜೆಡಿಎಸ್‌ ಗೆ ಮನಸ್ಸಿಲ್ಲ. ಬಿಟ್ಟುಕೊಟ್ಟರೆ ಬಿಜೆಪಿ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟು, ಜೆಡಿಎಸ್‌ ಅಸ್ತಿತ್ವ ಉಳಿಯುವುದಿಲ್ಲ ಎಂಬ ಆತಂಕ ಕಾಡತೊಡಗಿದೆ.

ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ತಮ್ಮ ಕುಟುಂಬದ ಹಿಡಿತದಿದ ಬಿಟ್ಟುಕೊಡಬಾರದು ಎನ್ನುವುದು ಇವರ ಇಂಗಿತ. ಇದೇ ಕಾರಣಕ್ಕೆ ಅವರು ಕೆಲವು ಬಿಜೆಪಿ ನಾಯಕರು ಕಾಂಗ್ರೆಸ್‌ ಜತೆ ಕೈ ಜೋಡಿಸಿದ್ದು, ಮೈತ್ರಿಕೂಟದ ಆಶಯಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ಮಧ್ಯೆ ಪ್ರವೇಶಿಸಿದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಒಂದು ಹಂತದಲ್ಲಿ ಯೋಗೇಶ್ವರ್‌ ಬೇಕಿದ್ದಲ್ಲಿ ಜೆಡಿಎಸ್‌ ಟಿಕೆಟ್‌ ನಿಂದ ಸ್ಪರ್ಧಿಸಲಿ ಎಂದು ಸಲಹೆ ನೀಡಿದ್ದಾರೆ. ಆದರೆ ಯೋಗಿ ಒಪ್ಪಿಲ್ಲ.

ಮತ್ತೊಂದು ಕಡೆ ಯೋಗೇಶ್ವರ್‌ ತೀರ್ಮಾನದಿಂದ ಎನ್‌ ಡಿಎ ಒಕ್ಕೂಟಕ್ಕೆ ಧಕ್ಕೆ ಉಂಟಾಗಲಿದೆ ಎಂಬ ಆತಂಕ ಮೂಡಿದೆ. ಒಕ್ಕಲಿಗರೇ ನಿರ್ಣಾಯಕರಾಗಿರುವ 2019ರಲ್ಲಿ ಮಂಡ್ಯ ಲೋಕಸಭಾ ಮತ್ತು 2023ರಲ್ಲಿ ರಾಮನಗರ ಕ್ಷೇತ್ರದಿಂದ ನಿಖಿಲ್ ಸೋಲು ಅನುಭವಿಸಿದ್ದಾರೆ. ಮತ್ತೊಮ್ಮೆ ಸೋಲು ಕಂಡರೆ ಹ್ಯಾಟ್ರಿಕ್ ಸೋಲು ಕಾಣಬೇಕಾಗುತ್ತದೆ ಎಂಬ ಭಯವೂ ಇದೆ.

ಯೋಗೇಶ್ವರ್‌ ಕೈ ಅಭ್ಯರ್ಥಿ?


ಯೋಗೇಶ್ವರ್‌ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿವೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ಯೋಗೇಶ್ವರ್‌ ಅವರನ್ನು ಸಂಪರ್ಕಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಯೋಗೇಶ್ವರ್‌ ಅವರೇ ಜೆಡಿಎಸ್‌ ಚಿನ್ಹೆಯ ಮೇಲೆ ಸ್ಪರ್ಧೆ ಮಾಡಲಿ ಎಂಬ ಸಂದೇಶವನ್ನೂ ಕುಮಾರಸ್ವಾಮಿ ರವಾನಿಸಿದ್ದರಾದರೂ ಸೈನಿಕ ಒಪ್ಪಿಗೆ ನೀಡಿಲ್ಲ. ಬಿಜೆಪಿ ಚಿನ್ಹೆಯ ಮೇಲೆ ಅಖಾಡಕ್ಕಿಳಿಯುತ್ತೇನೆಯೇ ಹೊರತು ಯಾವುದೇ ಕಾರಣಕ್ಕೂ ಜೆಡಿಎಸ್‌ ನಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ಆದರೆ ಕಾಂಗ್ರೆಸ್‌ ನಿಂದ ಸ್ಪರ್ಧೆ ಮಾಡುವ ಅವಕಾಶವನ್ನು ಮುಕ್ತವಾಗಿ ಇರಿಸಿಕೊಂಡಿದ್ದಾರೆ.
ಈ ನಿರ್ಧಾರಕ್ಕೆ ಕಾರಣಗಳೂ ಇವೆ. ಕ್ಷೇತ್ರದಲ್ಲಿ ಯೋಗಿ ಹಿಡಿತ ಬಲವಾಗಿದೆ. ಅದರಲ್ಲೂ ಮುಸಲ್ಮಾನ ಮತು ಅಹಿಂದ ವರ್ಗಗಳ ಸಮುದಾಯಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ಕೈ ಅಭ್ಯರ್ಥಿಯಾದರೆ ಗೆಲುವು ಸುಲಭ ಎನ್ನುವುದು ಇವರ ವಾದ.

ಯೋಗೇಶ್ವರ್‌ 1999ರಿಂದಲೂ ಚನ್ನಪಟ್ಟಣದಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. 2004 ಮತ್ತು 2008ರಲ್ಲಿ ಕಾಂಗ್ರೆಸ್‌, 2011ರಲ್ಲಿ ಬಿಜೆಪಿ, 2013ರಲ್ಲಿ ಸಮಾಜವಾದಿ ಪಕ್ಷದಿದಂದ ಗೆಲುವು ದಾಖಲಿಸಿದ್ದರು. ಯೋಗೇಶ್ವರ್‌ ಕಾಂಗ್ರೆಸ್‌ ಸೇರುವ ಆಯ್ಕೆಯನ್ನು ಮುಕ್ತವಾಗಿ ಇರಿಸಿಕೊಂಡಿದ್ದಾರೆ. ಇದುವರೆಗೂ ಅವರು ಕಾಂಗ್ರೆಸ್‌ ಸೇರುವುದಿಲ್ಲ ಎಂದು ಹೇಳಿಲ್ಲ.

ಕಾಂಗ್ರೆಸ್‌ ಅಭ್ಯರ್ಥಿ ಯಾರು ಎನ್ನುವುದು ಇಂದು ತೀರ್ಮಾನವಾಗಲಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋಲು ಕಂಡ ನಂತರ ಡಿ.ಕೆ. ಸುರೇಶ್‌ ಮತ್ತೆ ರಾಜಕೀಯವಾಗಿ ಎದ್ದು ಬರಲು ಹವಣಿಸುತ್ತಿದ್ದಾರೆ. ಡಿಕೆ ಸಹೋದರರು ಚನ್ನಪಟ್ಟಣದಲ್ಲಿ ಪ್ರಚಾರ ನಡೆಸುತ್ತಲೇ ಬಂದಿದ್ದಾರೆ. ಇಂದು ಸಂಜೆಯೊಳಗೆ ಎಲ್ಲವೂ ಸ್ಪಷ್ಟವಾಗಲಿದೆ. ಅಂತಿಮವಾಗಿ ಕಾಂಗ್ರೆಸ್‌ ನಿಂದ ಡಿ.ಕೆ. ಸುರೇಶ್‌ ಇಲ್ಲವೇ ಯೋಗೇಶ್ವರ್ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಜೆಡಿಎಸ್ ಗೊಂದಲದ ಗೂಡಾಗಿದೆ. ಪೈಪೋಟಿ ನೀಡುವ ಅಭ್ಯರ್ಥಿ ಇಲ್ಲದಿರುವುದು ಹಿನ್ನಡೆಯಾದರೂ ಅಚ್ಚರಿ ಪಡಬೇಕಿಲ್ಲ.

More articles

Latest article