ನ್ಯಾಯಮೂರ್ತಿಯೊಬ್ಬ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಕಿವಿಮಾತು ಹೇಳುವ ಅನೇಕ ಮಾತುಗಳಿವೆ. ಇದಕ್ಕೆ ತಾನು ಅನುಗುಣವಾಗಿ ನಡೆದುಕೊಂಡಿದ್ದೇನೆಯೇ ಎಂದು ಚಂದ್ರಚೂಡ್ ಅವರು ಆರಾಮವಾಗಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇಶದ ಪ್ರಜಾತಂತ್ರ ವ್ಯವಸ್ಥೆ, ಸಂವಿಧಾನದ ಆಶಯಗಳಿಗೆ ತನ್ನಿಂದ ಹಾನಿಯಾಗಿದೆಯೇ ಎಂದೂ ಅವರು ತನ್ನನ್ನು ತಾನು ಪ್ರಶ್ನಿಸಿ ಕೊಳ್ಳಬೇಕು –ಶ್ರೀನಿವಾಸ ಕಾರ್ಕಳ, ಚಿಂತಕರು.
ಈ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಡಿ ವೈ ಚಂದ್ರಚೂಡ್ ಅವರೇನೂ ಮೊದಲ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಲ್ಲ (ಸಿಜೆಐ). ಅವರಿಗಿಂತ ಮೊದಲು 49 ಮಂದಿ ಸಿಜೆಐ ಆಗಿಹೋಗಿದ್ದಾರೆ. ಚಂದ್ರಚೂಡ್ ಅವರು 50 ನೇ ಸಿಜೆಐ. ಆದರೆ ಚಂದ್ರಚೂಡ್ ಅವರ ಬಗ್ಗೆ ಆಗಿರುವಷ್ಟು ಚರ್ಚೆ ಪ್ರಾಯಶಃ ಈ ಹಿಂದಿನ ಯಾರೊಬ್ಬರ ಬಗ್ಗೆಯೂ ಆಗಿಲ್ಲವೇನೋ.
ಇದಕ್ಕೆ ಕಾರಣಗಳು ಅನೇಕ. ಚಂದ್ರಚೂಡ್ ಅವರು ತುಂಬಾ ಓದಿಕೊಂಡ ಮತ್ತು ಕಾನೂನಿನ ಬಗ್ಗೆ ಅಪಾರ ಜ್ಞಾನ ಹೊಂದಿರುವ ಒಬ್ಬ ಪ್ರತಿಭಾವಂತ. ಹೈಕೋರ್ಟ್ ನಲ್ಲಿ ಕೆಲಸ ಮಾಡುವಾಗ ಭಾರೀ ಭರವಸೆ ಮೂಡಿಸಿದ ಒಬ್ಬ ನ್ಯಾಯಮೂರ್ತಿ. ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಮೂರ್ತಿಯಾಗಿ ಕೆಲಸ ಮಾಡುವಾಗ ಕೂಡಾ ಅವರು ಅನೇಕ ಬಾರಿ ಕಟುವಾದ ಪ್ರಶ್ನೆಗಳ ಮೂಲಕ ಸರಕಾರದ ಬೆವರಿಳಿಸಿದ್ದು ಇದೆ.
ಈ ಹಿಂದೆ ಜಸ್ಟಿಸ್ ಗಳಾದ ದೀಪಕ್ ಮಿಶ್ರಾ, ರಂಜನ್ ಗೊಗೋಯಿ, ಬೊಬ್ಡೆ, ಯು ಲಲಿತ್ ಮೊದಲಾದವರು ಮುಖ್ಯ ನ್ಯಾಯಮೂರ್ತಿಗಳಾಗಿ ಕೆಲಸ ಮಾಡುತ್ತಿದ್ದಾಗ ಅವರುಗಳೆಲ್ಲ ಅನೇಕ ಬಾರಿ ಸರಕಾರಕ್ಕೆ ಅನುಕೂಲವಾಗುವಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡಿತ್ತು. ದೀಪಕ್ ಮಿಶ್ರಾ ವಿರುದ್ಧ ಅವರ ಸಹ ನ್ಯಾಯಮೂರ್ತಿಗಳು ಬಹಿರಂಗ ಪತ್ರಿಕಾಗೋಷ್ಠಿ ನಡೆಸಿದ್ದಕ್ಕೂ ಸುಪ್ರೀಂ ಕೋರ್ಟ್ ಸಾಕ್ಷಿಯಾಗಿತ್ತು. ರಂಜನ್ ಗೊಗೋಯಿಯಂತೂ ಕೊನೆಗೆ ಬಿಜೆಪಿ ಸರಕಾರದ ಆಶೀರ್ವಾದದಿಂದ ರಾಜ್ಯಸಭೆಯ ಸದಸ್ಯ ಕೂಡಾ ಆದರು. ಹೀಗೆ ಸುಪ್ರೀಂ ಕೋರ್ಟ್ ನ ವಿಶ್ವಾಸಾರ್ಹತೆ ಪಾತಾಳ ತಲಪಿತ್ತು.
ನರೇಂದ್ರ ಮೋದಿಯವರು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ತಕ್ಷಣ ದೇಶದ ಪ್ರಜಾತಂತ್ರ ಮತ್ತು ಸಂವಿಧಾನದ ಮೇಲೆ ಭೀಕರ ದಾಳಿ ಆರಂಭವಾಯಿತು. ಕೇಂದ್ರೀಯ ಏಜನ್ಸಿಗಳನ್ನು ವಿಪಕ್ಷಗಳ ಮೇಲೆ ಛೂಬಿಡಲಾಯಿತು. ಸರಕಾರದ ಟೀಕಾಕಾರರನ್ನು ʼದೇಶದ ಟೀಕಾಕಾರರುʼ ಎಂದು ಬಿಂಬಿಸಿ ಜೈಲಿನಲ್ಲಿಡುವ ಕೆಲಸ ಶುರುವಾಯಿತು. ಪ್ರತಿಭಟಿಸುವ ವಿದ್ಯಾರ್ಥಿಗಳ ಮೇಲೆ ಬರ್ಬರ ಪೊಲೀಸ್ ಕಾರ್ಯಾಚರಣೆ ಆರಂಭವಾಯಿತು. ಮಾಧ್ಯಮ ಸ್ವಾತಂತ್ರ್ಯವನ್ನು ಅಪ್ರಸ್ತುತಗೊಳಿಸಿ ಇಡೀ ಮಾಧ್ಯಮಲೋಕ ಸರಕಾರದ ಜೀತದಾಳಿನಂತೆ ಕೆಲಸ ಮಾಡುವಂತೆ ಮಾಡಲಾಯಿತು. ಆಮಿಷ ಅಥವಾ ಧಮಕಿ ಮೂಲಕ ಮಾಧ್ಯಮಗಳನ್ನು ಕೈವಶ ಮಾಡಿಕೊಳ್ಳಲಾಯಿತು.
ಕಾಶ್ಮೀರಿಗಳ ಅಭಿಪ್ರಾಯವನ್ನೇ ಕೇಳದೆ, ಬಲಪ್ರಯೋಗದ ಮೂಲಕ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಮಾಡಲಾಯಿತು. ಸಿಎಎ ಯಂತಹ ಸಂವಿಧಾನ ವಿರೋಧಿ ಕಾನೂನಿನ ಮೂಲಕ ಮತ್ತು ಗೋಹತ್ಯೆಯ ನೆಪದಲ್ಲಿ ಥಳಿತ, ಲಿಂಚಿಂಗ್, ಬುಲ್ ಡೋಜರ್ ನ್ಯಾಯ ಹೀಗೆ ಈ ದೇಶದ ಪ್ರಜೆಗಳೇ ಆದ ಮುಸ್ಲಿಮರನ್ನು ನಿರ್ದಯವಾಗಿ ಬಗ್ಗು ಬಡಿಯಲಾಯಿತು. ಸಿಎಎ ವಿರೋಧಿ ಹೋರಾಟದಲ್ಲಿ ನೂರಾರು ಮಂದಿ ಜೀವ ಕಳೆದುಕೊಂಡರು. ಅನೇಕ ವಿದ್ವಾಂಸರು, ವಿದ್ಯಾರ್ಥಿಗಳು, ಮಾನವಹಕ್ಕುಗಳ ಹೋರಾಟಗಾರರು ಜೈಲು ಸೇರಿದರು. ಸರಕಾರದ ಇಂತಹ ಸರ್ವಾಧಿಕಾರಿ ಕಾರ್ಯಗಳಿಗೆ ಮೂಗುದಾರ ತೊಡಿಸುವ ಸಾಮರ್ಥ್ಯ ಇದ್ದುದು ದೇಶದ ನ್ಯಾಯಾಂಗಕ್ಕೆ ಮಾತ್ರ. ಆದರೆ ಅದೂ ಸರಕಾರದ ಅನ್ಯಾಯಗಳಿಗೆ ಮೂಕಪ್ರೇಕ್ಷಕವಾಗಿತ್ತು.
ನಿರಾಶೆಯ ಕಾಲದಲ್ಲಿ ಸಿಜೆಐ ಆದ ಡಿ ವೈ ಚಂದ್ರಚೂಡ್
ದೇಶದ ಇಂತಹ ಸಂಕಟದ ಹೊತ್ತಿನಲ್ಲಿಯೇ ಚಂದ್ರಚೂಡ್ ಅವರು ಎರಡು ವರ್ಷಗಳ ದೀರ್ಘಕಾಲಕ್ಕೆ ಈ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾದರು. ಇದೇ ನವೆಂಬರ್ 10 ಕ್ಕೆ ಅವರು ಅಧಿಕೃತವಾಗಿ ನಿವೃತ್ತರಾಗುತ್ತಿದ್ದಾರೆ ಕೂಡಾ. ಭಾಷಣ ಮಾಡುವುದನ್ನು ಮತ್ತು ಪ್ರಚಾರದಲ್ಲಿರುವುದನ್ನು ತುಂಬಾ ಇಷ್ಟಪಡುವ ನ್ಯಾಯಮೂರ್ತಿ ಚಂದ್ರಚೂಡ್ ಅವರು ಈ ಹಿಂದಿನ ನ್ಯಾಯಮೂರ್ತಿಗಳು ಹಾಕಿಕೊಟ್ಟ ಸಂಪ್ರದಾಯವನ್ನು ಮುರಿದು, ಅಧಿಕಾರದಲ್ಲಿ ಇರುವಾಗಲೇ ಪತ್ರಿಕಾ ಮಾಧ್ಯಮಗಳ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ತೀರ್ಪುಗಳನ್ನು ಸಮರ್ಥಿಸಿಕೊಂಡದ್ದೂ ಇದೆ (ನ್ಯಾಯಾಧೀಶರ ತೀರ್ಪೇ ಮಾತನಾಡಬೇಕು ಹೊರತು ಅವರು ಮಾತನಾಡಬಾರದು).
ನ್ಯಾ. ಚಂದ್ರಚೂಡ್ ಅವರ ಅಧಿಕೃತ ಕೋರ್ಟ್ ಕಲಾಪ ಇಂದಿಗೆ ಅಂದರೆ ನವೆಂಬರ್ 8, 2024 ರಂದು ಮುಗಿದಿದೆ. ವಿದಾಯ ಸಮಾರಂಭದಲ್ಲಿ “ನಾನೇನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ” ಎಂದೂ ಹೇಳಿದ್ದಾರೆ ಅವರು. ಆದರೆ ನ್ಯಾಯಮೂರ್ತಿಗಳು ತಪ್ಪು ಮಾಡಿದರೆ ಅದರ ಪರಿಣಾಮವೇನು? ಕ್ಷಮಿಸಿದರೆ ಸಂತ್ರಸ್ತರಿಗೆ ನ್ಯಾಯ ಸಿಗುವುದೇ?
ತಾರ್ಕಿಕ ಅಂತ್ಯ ಕಾಣದ ತೀರ್ಪುಗಳು
ಕಳೆದ ಎರಡು ವರ್ಷಗಳಲ್ಲಿ ಅನೇಕ ಮಹತ್ವದ ತೀರ್ಪುಗಳಿಗೆ ಚಂದ್ರಚೂಡ್ ಅವರು ಸಾಕ್ಷಿಯಾಗಿದ್ದಾರೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ಮಹಾರಾಷ್ಟ್ರ ಸರಕಾರವನ್ನು ಕಾನೂನುಬಾಹಿರ ಮಾರ್ಗದಲ್ಲಿ ಉರುಳಿಸಿದ್ದು, ಚುನಾವಣಾ ಬಾಂಡ್, ಗ್ಯಾನವ್ಯಾಪಿ ಮಸೀದಿ ಸಮೀಕ್ಷೆ ಹೀಗೆ ಪ್ರಮುಖ ಅನೇಕ ವಿಚಾರಣೆಗಳನ್ನು ಅವರು ನಡೆಸಿದ್ದಾರೆ. ಆದರೆ, ಅವರ ಬಗ್ಗೆ ಇರುವ ಬಹುದೊಡ್ಡ ಆರೋಪವೆಂದರೆ ಅವರು ಭರವಸೆ ಮೂಡಿಸುವ ರೀತಿಯಲ್ಲಿ ಮಾತನಾಡುತ್ತಾರೆ, ಆದರೆ ಯಾವುದನ್ನೂ ಒಂದು ತಾರ್ಕಿಕ ಅಂತ್ಯಕ್ಕೆ ಒಯ್ಯುವುದಿಲ್ಲ ಎನ್ನುವುದು.
ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಮಾಡಿದ್ದು ಕೇಂದ್ರ ಸರಕಾರದ ಸರಿಯಾದ ಕ್ರಮ, ಸರಕಾರಕ್ಕೆ ಆ ಪೂರ್ಣ ಅಧಿಕಾರ ಇದೆ ಎಂದರು ಸಿಜೆಐ. ಆದರೆ ಆ ಶಿಫಾರಸು ಮಾಡುವಾಗ ಅಲ್ಲಿ ಚುನಾಯಿತ ಸರ್ಕಾರವೇ ಇರಲಿಲ್ಲ. ರಾಷ್ಟ್ರಪತಿಗಳೇ ಶಿಫಾರಸು ಮಾಡಿ, ರಾಷ್ಟ್ರಪತಿಗಳೇ ಆ ಶಿಫಾರಸನ್ನು ಅಂಗೀಕರಿಸಿದ ವಿಲಕ್ಷಣ ಕಾರ್ಯವೊಂದು ಅಲ್ಲಿ ನಡೆಯಿತು. ಆದರೂ ನ್ಯಾ ಚಂದ್ರಚೂಡ್ ಅವರು ಸರಕಾರದ ಪರ ನಿಂತರು. ಚಂದ್ರಚೂಡ್ ಅವರ ಈ ತೀರ್ಪು ದೇಶದ ಫೆಡರಲ್ ಸ್ವರೂಪಕ್ಕೆ ಮಾರಕ. ಇನ್ನು ಮುಂದೆ ಕೇಂದ್ರ ಸರಕಾರವು ಒಂದು ರಾಜ್ಯಸರಕಾರವನ್ನು ಅಮಾನತ್ತಿನಲ್ಲಿಟ್ಟು ಆ ರಾಜ್ಯದ ಬಗ್ಗೆ ತನಗೆ ಇಷ್ಟ ಬಂದ ನಿರ್ಧಾರ ಮಾಡಬಹುದು!
ಚುನಾವಣಾ ಬಾಂಡ್ ಅಕ್ರಮ ಎಂದು ಘೋಷಿಸುವಾಗ ಅದಾಗಲೇ ಆರು ವರ್ಷಗಳು ಕಳೆದಿದ್ದವು. ಬಿಜೆಪಿ ಹಲವು ಸಾವಿರ ಕೋಟಿ ಕಮಾಯಿ ಮಾಡಿಯಾಗಿತ್ತು. ಕೋಟೆ ಸೂರೆಯಾದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿತ್ತು. ಚುನಾವಣಾ ಬಾಂಡ್ ಅಕ್ರಮ ಎಂದ ಚಂದ್ರಚೂಡ್ ಅವರು ಆ ಬಗ್ಗೆ ಎಸ್ ಐ ಟಿ ತನಿಖೆಗೆ ಒಪ್ಪಲಿಲ್ಲ. ಹಾಗಾಗಿ ನಷ್ಟದಲ್ಲಿರುವ ಕಂಪೆನಿಗಳು ನೂರಾರು ಕೋಟಿ ದೇಣಿಗೆ ನೀಡಿದ್ದರ ಹಿಂದಿನ ರಹಸ್ಯ, ಕಾಂಗ್ರೆಸ್ ನಾಯಕ ಜಯರಾಮ ರಮೇಶ್ ಹೇಳುವ ಹಾಗೆ ʼಪ್ರಿಪೆಯ್ಡ್ʼ, ʼಪೋಸ್ಟ್ ಪೆಯ್ಡ್ʼ ಮತ್ತು ʼಪೋಸ್ಟ್ ರೇಡ್ʼ ದೇಣಿಗೆ ಅವ್ಯವಹಾರದ ಸತ್ಯಗಳು ಬಹಿರಂಗವಾಗಲೇ ಇಲ್ಲ.
ಮಹಾರಾಷ್ಟ್ರದಲ್ಲಿ ರಾಜ್ಯಪಾಲರು, ಚುನಾವಣಾ ಆಯೋಗ, ಕೇಂದ್ರಸರಕಾರ ಕೈಜೋಡಿಸಿ ಉದ್ಧವ ಠಾಕ್ರೆ ಸರಕಾರವನ್ನು ಉರುಳಿಸಿದರು. ನ್ಯಾಯಾಲಯಕ್ಕೆ ಹೋದ ಉದ್ಧವ್ ಅವರಿಗೆ ವರ್ಷಗಳ ನಂತರವೂ ಅವರು ಬಯಸಿದ ನ್ಯಾಯ ಸಿಗಲೇ ಇಲ್ಲ. ಶಿಂಧೆ ಸರಕಾರ ಕಾನೂನು ಬಾಹಿರ ಎಂದ ಸಿಜೆಐ ಯವರು ಆ ಕಾನೂನುಬಾಹಿರ ಸರಕಾರ ಮುಂದುವರಿಯಲು ಧಾರಾಳ ಅವಕಾಶ ಮಾಡಿಕೊಟ್ಟರು. ಈಗಾಗಲೇ ಚುನಾವಣೆ ಘೋಷಣೆಯಾಗಿ, ಇನ್ನೇನು ಹೊಸ ಸರಕಾರ ರಚನೆಯಾಗಲಿದ್ದು, ಇನ್ನು ನ್ಯಾಯ ಸಿಕ್ಕಿಯೂ ಪ್ರಯೋಜನ ಇಲ್ಲ.
ಮಹಾರಾಷ್ಟ್ರದಲ್ಲಿ ಉದ್ಧವ್ ಅವರ ಶಿವಸೇನೆ ಮತ್ತು ಶರದ್ ಪವಾರ್ ಅವರ ಎನ್ ಸಿಪಿ ವಿಷಯದಲ್ಲಿ ಚುನಾವಣಾ ಆಯೋಗದ ಸಕ್ರಿಯ ಪೌರೋಹಿತ್ಯದಲ್ಲಿ ನಡೆದುದು ಪ್ರಜಾತಂತ್ರದ ಮೇಲಣ ಸಾಮೂಹಿಕ ಅತ್ಯಾಚಾರ. ನಿಜವಾದ ಪಕ್ಷಗಳು ತಮ್ಮ ಮೂಲ ಚಿಹ್ನೆಯನ್ನೇ ಕಳೆದುಕೊಂಡವು. ಆದರೆ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಕ್ರಿಯಾಶೀಲವಾಗಲೇ ಇಲ್ಲ. ವಿವಾದ ಈಗಲೂ ಮುಂದುವರಿದೆ.
ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಅಪಾರ ಕಾಳಜಿಯ ಮಾತು ಆಡುವ ಈ ಸಿಜೆಐ ಯವರು ಅಧಿಕಾರ ಸ್ವೀಕರಿಸಿದರು, ನಿವೃತ್ತರೂ ಆದರು. ಆದರೆ ಉಮರ್ ಖಲೀದ್, ಗುಲ್ಫಿಶಾ ಫಾತಿಮಾ, ಶರ್ಜಿಲ್ ಇಮಾಮ್, ಖಲೀದ್ ಸೈಫಿ ಮೊದಲಾದವರು ನಾಲ್ಕು ವರ್ಷಕ್ಕೂ ಅಧಿಕ ಕಾಲದಿಂದ ಅತ್ತ ವಿಚಾರಣೆಯೂ ಇಲ್ಲದೆ, ಇತ್ತ ಜಾಮೀನೂ ಇಲ್ಲದೆ, ಈಗಲೂ ಜೈಲಿನಲ್ಲಿದ್ದಾರೆ.
ಅಪಾಯಕಾರಿ ಜ್ಞಾನವಾಪಿ ತೀರ್ಪು
ಎಲ್ಲಕ್ಕಿಂತಲೂ ಮುಖ್ಯವಾಗಿ ಜ್ಞಾನವಾಪಿ ಮಸೀದಿ ವಿಷಯದಲ್ಲಿ ಸಂವಿಧಾನ ಮತ್ತು ಕಾನೂನಿನ ಪರ ನಿಂತು, ಹೀಗೆ ಮಸೀದಿಗಳ ಸಮೀಕ್ಷೆ, ಮಸೀದಿಗಳ ಮೇಲೆ ಹಕ್ಕು ಸ್ಥಾಪನೆ ಆ ಮೂಲಕ ದೇಶದಲ್ಲಿ ಮತೀಯ ಸಂಘಟನೆಗಳು ಅಶಾಂತಿ, ಅಸ್ಥಿರತೆಗೆ ಮುನ್ನುಡಿ ಬರೆಯುವ ಕಾರ್ಯಗಳಿಗೆ ʼಪ್ಲೇಸಸ್ ಆಫ್ ವರ್ಶಿಪ್ ಕಾಯಿದೆʼ ಬಳಸಿಕೊಂಡು ಫುಲ್ ಸ್ಟಾಪ್ ಹಾಕುವ ಸಂಪೂರ್ಣ ಅಧಿಕಾರ ಮತ್ತು ಸುವರ್ಣಾವಕಾಶ ಚಂದ್ರಚೂಡ್ ಅವರಿಗಿತ್ತು. ಆದರೆ ಅವರ ವ್ಯತಿರಿಕ್ತ ನಿಲುವಿನಿಂದ ದೇಶದಾದ್ಯಂತದ ಮಸೀದಿಗಳು ಇಂದು ಅಪಾಯಕ್ಕೆ ಸಿಲುಕುವಂತಾಗಿದೆ. ದಿನಬೆಳಗಾದರೆ ಹಿಂದುತ್ವ ಸಂಘಟನೆಗಳು ಹೊಸ ಹೊಸ ಮಸೀದಿಗಳ ಮೇಲೆ ಹಕ್ಕು ಮಂಡನೆ ಮಾಡುತ್ತಲೇ ಇವೆ.
ಸಂಘಪರಿವಾರ ಮತ್ತು ಮೋದಿ ಸರಕಾರದ ವಿಷಯ ಬಂದಾಗ ಸಿಜೆಐ ಚಂದ್ರಚೂಡ್ ಅವರು ಯಾವತ್ತೂ ದಿಟ್ಟ ನಿಲುವು ತೆಗೆದುಕೊಳ್ಳಲೇ ಇಲ್ಲ ಎಂಬ ಬಹು ದೊಡ್ಡ ಆರೋಪ ಅವರ ಮೇಲಿದೆ. ಅಯೋಧ್ಯಾ ತೀರ್ಪು, ಮಸೀದಿ ಸಮೀಕ್ಷಾ ತೀರ್ಪು, ಬುಲ್ಡೋಜರ್ ಅನ್ಯಾಯದ ಬಗ್ಗೆ ತಾತ್ಸಾರ ಮೊದಲಾದವು ಇದಕ್ಕೆ ಅತ್ಯುತ್ತಮ ಉದಾಹರಣೆ.
ಇತಿಹಾಸ ತಮ್ಮನ್ನು ಹೇಗೆ ನೆನಪಿಸಿಕೊಳ್ಳುತ್ತದೆ ಎಂಬ ಬಗ್ಗೆ ಚಂದ್ರಚೂಡ್ ಅವರಿಗೆ ಕುತೂಹಲ ಇರಬಹುದು. ಆದರೆ ದೇಶದ ನಾಗರಿಕರಾದ ನಮಗೆ ಅಂತಹ ಯಾವ ಕುತೂಹಲವೂ ಇಲ್ಲ. ಯಾಕೆಂದರೆ ವ್ಯರ್ಥಗೊಳಿಸಿಕೊಂಡ ಅವಕಾಶಗಳು, ಮುಂದಿನ ಅನಾಹುತಗಳಿಗೆ ಮಾಡಿಕೊಟ್ಟ ತೀರ್ಪುಗಳು ಹೀಗೆ ಮೇಲೆ ಹೇಳಿದ ಅನೇಕ ಕಾರಣಗಳಿಗೆ ಇತಿಹಾಸ ಅವರನ್ನು ಹೀಗೆ ನೆನಪಿಸಿಕೊಳ್ಳುತ್ತದೆ..
ಇತಿಹಾಸ ಖಂಡಿತಾ ನೆನಪಿಟ್ಟುಕೊಳ್ಳುತ್ತದೆ..
ಹಾಂ. ಇನ್ನೂ ಕೆಲ ಕಾರಣಕ್ಕೆ ಇತಿಹಾಸ ಅವರನ್ನು ನೆನಪಿಸಿಕೊಳ್ಳುತ್ತದೆ. ಅದೇ, ತಾನು ಸಿಜೆಐ ತಾನು ಸೆಕ್ಯುಲರ್ ಆಗಿ ಕಾಣಿಸಿಕೊಳ್ಳಬೇಕು ಎಂಬುದನ್ನು ಮರೆತು, ಕಾವಿ ಉಡುಗೆ ತೊಟ್ಟು ದೇಗುಲ ದರ್ಶನ ಮಾಡಿ ತಮ್ಮ ಧಾರ್ಮಿಕ ಐಡೆಂಟಿಟಿಯನ್ನು ಬಹಿರಂಗ ಪ್ರದರ್ಶನ ಮಾಡುತ್ತಾ ಹೋದುದಕ್ಕೆ, ದೇಗುಲ ಭೇಟಿಯನ್ನೂ ಪ್ರಚಾರಕ್ಕೆ ಬಳಸಿದ್ದಕ್ಕೆ, ಬಾಬರಿ ವಿವಾದ ಪರಿಹಾರಕ್ಕೆ ಮಾರ್ಗದರ್ಶನ ನೀಡುವಂತೆ ದೇವರ ಮೊರೆಹೋದೆ ಎಂದು ಹೇಳಿ ಬೆಚ್ಚಿಬೀಳಿಸಿದ್ದಕ್ಕೆ, ಕಪಟ ಸದ್ಗುರುಗಳನ್ನು ರಕ್ಷಿಸಿದ್ದಕ್ಕೆ. ಎಲ್ಲಕ್ಕಿಂತ ಮುಖ್ಯವಾಗಿ, ಪ್ರಧಾನಿ ನರೇಂದ್ರಮೋದಿಯವರ ಜತೆ ಗಣೇಶ ಪೂಜೆ ಮಾಡಿ, ಫೋಟೋ, ವೀಡಿಯೋ ಮಾಡಿಸಿಕೊಂಡು, ಅದನ್ನು ದೇಶ ವೀಕ್ಷಿಸಿ ʼಸಂಭ್ರಮಿಸುವಂತೆʼ ಮಾಡಿದ್ದನ್ನು ಮರೆಯುವುದಾದರೂ ಹೇಗೆ?
ಇನ್ನೀಗ ನಿವೃತ್ತಿಯ ಸಮಯ. ಧಾರಾಳ ಸಮಯವಿದೆ. ʼನ್ಯಾಯ ನೀಡಿದರೆ ಸಾಲದು, ನ್ಯಾಯ ನೀಡಿದಂತೆ ಅನಿಸಬೇಕು ಕೂಡಾʼ, ʼಸೀಜರ್ ನ ಪತ್ನಿಯ ಮೇಲೆ ಕೂಡಾ ಅನುಮಾನ ಮೂಡುವಂತಿರಬಾರದುʼ ಎಂಬೆಲ್ಲ, ನ್ಯಾಯಮೂರ್ತಿಯೊಬ್ಬ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಕಿವಿಮಾತು ಹೇಳುವ ಮಾತುಗಳಿವೆ. ಇದಕ್ಕೆ ತಾನು ಅನುಗುಣವಾಗಿ ನಡೆದುಕೊಂಡಿದ್ದೇನೆಯೇ ಎಂದು ಚಂದ್ರಚೂಡ್ ಅವರು ಆರಾಮವಾಗಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇಶದ ಪ್ರಜಾತಂತ್ರ ವ್ಯವಸ್ಥೆ, ಸಂವಿಧಾನದ ಆಶಯಗಳಿಗೆ ತನ್ನಿಂದ ಹಾನಿಯಾಗಿದೆಯೇ ಎಂದೂ ಅವರು ತನ್ನನ್ನು ತಾನು ಪ್ರಶ್ನಿಸಿಕೊಳ್ಳಬೇಕು.
ಶ್ರೀನಿವಾಸ ಕಾರ್ಕಳ
ಚಿಂತಕರು
ಇದನ್ನೂ ಓದಿ- ಇತಿಹಾಸದಲ್ಲಿ ದಾಖಲಾಗುವತ್ತ ನ್ಯಾ.ಚಂದ್ರಚೂಡರ ಚಿತ್ತ