ಚಾಮರಾಜನಗರ | ರೈತ ಮುಖಂಡರ ಮೇಲೆ ಬಿಜೆಪಿ’ಗರಿಂದ ದಾಳಿ

Most read

ರೈತ ವಿರೋಧಿ ನಿಲುವನ್ನು ತೋರುತ್ತಿರುವ ಬಿಜೆಪಿ ಮತ್ತದರ ಮೈತ್ರಿಕೂಟದ ವಿರುದ್ಧ ರೈತ ಸಮುದಾಯವನ್ನು ಉಳಿಸಿ ಎಂಬ ಅಭಿಯಾನವನ್ನು ರಾಜ್ಯವ್ಯಾಪಿಯಾಗಿ ನಡೆಯುತ್ತಿದೆ. ಈ ಅಭಿಯಾನ ಚಾಮರಾಜನಗರದ ಬೀದಿಗಳಲ್ಲಿ ಮುಗಿಸಿ ತೆರಳುತ್ತಿದ್ದ ರೈತ ಮುಖಂಡರ ಮೇಲೆ ಬಿಜೆಪಿ ಬೆಂಬಲಿಗರು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಈ ಕುರಿತು ಪತ್ರಿಕಾ ಹೇಳಿ ಬಿಡುಗಡೆ ಮಾಡಿರುವ ರಾಜ್ಯ ರೈತ ಸಂಘ, ಕಳೆದ ಒಂದು ವಾರದಿಂದ ಕರ್ನಾಟಕ ರಾಜ್ಯ ರೈತ ಸಂಘದ ಕಡೆಯಿಂದ “ಬಿಜೆಪಿ ಮತ್ತು ಮೈತ್ರಿ ಪಕ್ಷಗಳನ್ನು ಸೋಲಿಸಿ – ರೈತ ಸಮುದಾಯವನ್ನು ಉಳಿಸಿ ಎಂಬ ಅಭಿಯಾನವನ್ನು ರಾಜ್ಯವ್ಯಾಪಿಯಾಗಿ ನಡೆಸುತ್ತಿದ್ದೇವೆ. ಏಪ್ರಿಲ್ 17ರಂದು ಅಮೃತ ಭೂಮಿಯಲ್ಲಿರುವ ಪ್ರೊ. ನಂಜುಂಡಸ್ವಾಮಿಯವರ ಸಮಾಧಿ ಬಳಿ ರೈತ ಸಂಕಲ್ಪ ಸ್ವೀಕರಿಸಿ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ರಾಜ್ಯದ 130 ವಿಧಾನ ಸಭಾ ಕ್ಷೇತ್ರಗಳಲ್ಲಿ ಅಭಿಯಾನ ಪ್ರಾರಂಭವಾಗಿದೆ. ರೈತ ಕಾರ್ಯಕರ್ತರು “ರೈತರ ಸಾಲ ಮನ್ನಾ ಮಾಡದ, ರೈತರ ಬೆಳೆಗೆ ಎಂ ಎಸ್ ಪಿ ನೀಡದ, ಬರದಿಂದ ರೈತರು ಕಂಗೆಟ್ಟಿದ್ದರೂ ಬಿಡಿಗಾಸ ಪರಿಹಾರ ನೀಡದ ಕೇಂದ್ರದ ಬಿಜೆಪಿ ಮತ್ತು ಮೈತ್ರಿ ಪಕ್ಷಗಳಿಗೆ ಮತ ನೀಡುವುದಿಲ್ಲ” ಎಂಬ ಪ್ರತಿಜ್ಞೆ ಸ್ವೀಕರಿಸುತ್ತಿದ್ದಾರೆ. ರೈತರ ಈ ಅಭಿಯಾನ ರೈತವಿರೋಧಿ, ಕಾರ್ಪೋರೇಟ್ ಸಾಕು ನಾಯಿಯಾಗಿರುವ ಬಿಜೆಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇಂದು ಚಾಮರಾಜನಗರದ ಬೀದಿಗಳಲ್ಲಿ ಪ್ರಚಾರ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಚಾರ ಬಿರುಸಿನಿಂದ ನಡೆದು, ಅದನ್ನು ಮುಕ್ತಾಯಗೊಳಿಸಿಕೊಂಡು ರೈತ ಸಂಘದ ಕಛೇರಿಗೆ ಮುಖಂಡರು ಹಿಂದುರುಗುತ್ತಿದ್ದಾಗ ಏಕಾಏಕಿ ದಾಳಿ ಮಾಡಿರುವ ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ, ರೈತ ಸಂಘದ ಮುಖಂಡರಾದ ಮಹೇಶ್ ಪ್ರಭು ಅವರ ಮೇಲೆ ದಾಳಿ ಮಾಡಿದ್ದಾರೆ. ಬಿಜೆಪಿಯ ಈ ಗುಂಡಾಗಿರಿಯನ್ನು ಎಲ್ಲಾ ಪ್ರಜ್ಞಾವಂತರು ತೀವ್ರವಾಗಿ ಖಂಡಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.

ನಮ್ಮ ಅಭಿಯಾನವನ್ನು ನಾವು ಮತ್ತಷ್ಟು ಬಿರುಸುಗೊಳಿಸುತ್ತೇವೆ. ಈ ಬಾರಿ ರೈತರೆಲ್ಲರೂ ಕೂಡಿ ಈ ದ್ರೋಹಿ ಪಕ್ಷಗಳಿಗೆ ಸರಿಯಾದ ರೀತಿಯಲ್ಲಿ ಓಟಿನ ಏಟನ್ನು ನೀಡುತ್ತೇವೆ. ಎರಡನೇ ಸುತ್ತಿನ ಮತದಾನ ನಡೆಯಲಿರುವ ಉತ್ತರ ಭಾಗದ ಕ್ಷೇತ್ರಗಳಲ್ಲೂ ಈ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರೆಸುತ್ತೇವೆ. ರೈತಕುಲದ ಈ ಹೋರಾಟಕ್ಕೆ ತಮ್ಮೆಲ್ಲರ ಸಹಕಾರವಿರಲಿ ಎಂದು ಮನವಿ ಮಾಡಿಕೊಳ್ಳುತ್ತೇವೆ. ಈ ದಾಳಿಯನ್ನು ತಾವು ತೀವ್ರ ರೀತಿಯಲ್ಲಿ ಖಂಡಿಸಬೇಕೆಂದು ಮತ್ತೊಮ್ಮೆ ನೆನಪಿಸುತ್ತಿದ್ದೇವೆ ಎಂದು ಹೇಳಿದೆ.

More articles

Latest article