ಛಲವಾದಿ ನಾರಾಯಣಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ‘ಭೂ ಕಬಳಿಕೆ’ ದೂರು ಸಲ್ಲಿಕೆ: ಅನರ್ಹಗೊಳಿಸಲು ಕೈ ಎಂಎಲ್​​ಸಿ ನಿಯೋಗ ಆಗ್ರಹ

Most read

ಭೂ ಕಬಳಿಕೆ ಆರೋಪದ ಹಿನ್ನೆಲೆ ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ಸ್ಥಾನದಿಂದ ಅನರ್ಹಗೊಳಿಸುವಂತೆ ಆಗ್ರಹಿಸಿ ಸರ್ಕಾರದ ಚೀಫ್ ವಿಪ್ ಸಲೀಂ ಅಹಮದ್ ನೇತೃತ್ವದ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ. ಭೂ ಕಬಳಿಕೆಯ ದಾಖಲೆಗಳೊಂದಿಗೆ ದೂರು ನೀಡಿರುವ ನಿಯೋಗ, ಬೆಳಕಿನ ವೇಗದಲ್ಲಿ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕು‌. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯಡಿ ತಮ್ಮ ಪ್ರಭಾವ ಬಳಸಿ ಅವರು ಹೊಸಕೋಟೆಯಲ್ಲಿ ಶಾಲೆ ಕಟ್ಟಡ ನಿರ್ಮಾಣಕ್ಕಾಗಿ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ. ಹೀಗಾಗಿ ಅವರನ್ನು ಎಂಎಲ್​​ಸಿ ಸ್ಥಾನದಿಂದ ಅನರ್ಹಗೊಳಿಸುವಂತೆ ಕೋರಿದ್ದಾರೆ.

2002-2004ರಲ್ಲಿ ಛಲವಾದಿ ನಾರಾಯಣಸ್ವಾಮಿ ಕೆಹೆಚ್​ಬಿ ನಿರ್ದೇಶಕರಾಗಿದ್ದಾಗ ಪ್ರಭಾವ ಬಳಸಿ ಅಕ್ರಮವಾಗಿ ಭೂ ಕಬಳಿಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 1986ರಲ್ಲಿ ಹೊಸಕೋಟೆ ಬಳಿ ವೀರೇಂದ್ರ ಸಿಂಗ್ ಮತ್ತು ಇತರರಿಗೆ ಸೇರಿದ ಭೂಮಿಯನ್ನು ಕೆಹೆಚ್​​ಬಿ ಸ್ವಾಧೀನ ಪಡಿಸಿಕೊಂಡಿತ್ತು. 2003ರಲ್ಲಿ ವೀರೇಂದ್ರ ಸಿಂಗ್ ಮತ್ತು ಇತರರ ಉತ್ತರಾಧಿಗಳು ಆ ಭೂಮಿಯನ್ನು ತಮಗೆ ಮರು ಹಸ್ತಾಂತರ ಮಾಡುವಂತೆ ಕೆಹೆಚ್​​ಬಿಗೆ ಮನವಿ ಮಾಡಿದ್ದರು. ಆದರೆ ಕೆಹೆಚ್​​ಬಿ ನಿರ್ದೇಶಕರಾಗಿದ್ದ ನಾರಾಯಣಸ್ವಾಮಿ ಉದ್ದೇಶಪೂರ್ವಕವಾಗಿ ಆ ಅರ್ಜಿಯನ್ನು ಬಾಕಿ ಉಳಿಸಿರುವುದು ಗೋಚರಿಸುತ್ತದೆ ಎಂದು ಆರೋಪಿಸಿದ್ದಾರೆ.

2004ರಲ್ಲಿ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ಆದರ್ಶ ಸಾಮಾಜಿಕ ಹಾಗೂ ಶೈಕ್ಷಣಿಕ ಟ್ರಸ್ಟ್​ನ ಅಧ್ಯಕ್ಷರಾಗಿ ಬಿಡಿ ನಿವೇಶನವನ್ನು ಕೆಹೆಚ್​​ಬಿ ತಮಗೆ ಹಂಚಿಕೆ ಮಾಡುವಂತೆ ಮನವಿ ಸಲ್ಲಿಸುತ್ತಾರೆ. ಈ ಬಿಡಿ ನಿವೇಶನಗಳು (stray site) ವೀರೇಂದ್ರ ಸಿಂಗ್​​ಗೆ ಸೇರಿದ ಭೂಮಿಯಿಂದ ರಚಿಸಲ್ಪಟ್ಟಿತ್ತು. ಮೇ 2004ರಲ್ಲಿ ಕೆಹೆಚ್​​ಬಿ ಶಾಲೆ ನಿರ್ಮಾಣಕ್ಕಾಗಿ ಆದರ್ಶ ಸಾಮಾಜಿಕ ಹಾಗೂ ಶೈಕ್ಷಣಿಕ ಟ್ರಸ್ಟ್​ಗೆ ನಿವೇಶನ ಹಂಚಿಕೆ ಮಾಡುತ್ತದೆ. ಈ ವೇಳೆ ಛಲವಾದಿ ನಾರಾಯಣಸ್ವಾಮಿ ಕೆಹೆಚ್​​ಬಿ ನಿರ್ದೇಶಕರಾಗಿದ್ದು, ನಿವೇಶನ ಹಂಚಿಕೆಯಲ್ಲಿ ತಮ್ಮ ಪ್ರಭಾವ ಬಳಸಿದ್ದಾರೆ ಎಂಬುದು ಕಂಡು ಬರುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಚ್ಚರಿ ಎಂಬಂತೆ ಕೆಹೆಚ್​​ಬಿ ಏಪ್ರಿಲ್ 2005ರಂದು ಎಂಎಲ್​​ಸಿ ಪರವಾಗಿ ಸಿಎ ನಿವೇಶನ ಖರೀದಿಗಾಗಿ ಸಾಲ ಮಾಡಲು ಯಾವುದೇ ಆಕ್ಷೇಪ ಇಲ್ಲ ಎಂಬ ಎನ್​ಒಸಿ ಹೊರಡಿಸುತ್ತದೆ. ಕೆಹೆಚ್​ಬಿ ನಿಯಮದ ಪ್ರಕಾರ ಆ ತರದ ಎನ್​​ಒಸಿ ಹೊರಡಿಸುವ ಅವಕಾಶ ಇಲ್ಲ. ಆದರೆ ತಮ್ಮ ಪ್ರಭಾವ ಬಳಸಿ ಎನ್​ಒಸಿ ಪಡೆದುಕೊಂಡಿದ್ದಾರೆ. ಜುಲೈ 2006ರಂದು ಕೆಹೆಚ್​ಬಿಯು ನಾರಾಯಣಸ್ವಾಮಿಗೆ ನಿವೇಶನ ಕ್ರಯ ಪತ್ರ ಮಾಡಿಕೊಡುತ್ತದೆ. ಶಾಲೆ ನಿರ್ಮಾಣ ಉದ್ದೇಶಕ್ಕಾಗಿ ಹಂಚಿಕೆ ಮಾಡಲಾದ ನಿವೇಶನವನ್ನು ಭೌತಿಕವಾಗಿ ಪರಿಶೀಲಿಸಿದಾಗ ಆ ನಿವೇಶನದಲ್ಲಿ ‘ಆನಂದ್ ಧಂ ಬಿರಿಯಾನಿ’ ಅಂಗಡಿ ನಿರ್ಮಿಸಲು ಬಿಟ್ಟುಕೊಟ್ಟಿರುವುದು ಕಂಡು ಬಂದಿದೆ. ನಿಯಮ ಉಲ್ಲಂಘಿಸಿ ನಾರಾಯಣಸ್ವಾಮಿ ಸಿಎ ನಿವೇಶನದಲ್ಲಿ ವಾಣಿಜ್ಯ ಘಟಕ ನಿರ್ಮಿಸಲು ಅವಕಾಶ ನೀಡಿದ್ದಾರೆ. ಆ ಮೂಲಕ KHB ನಿರ್ದೇಶಕರಾಗಿ ತಮ್ಮ ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ ಸೆಕ್ಷನ್ 13 ಹಾಗೂ ಬಿಎನ್ಎಸ್ 316, 318ರಡಿ ಛಲವಾದಿ ನಾರಾಯಣಸ್ವಾಮಿ ಮೇಲ್ನೋಟಕ್ಕೆ ತಪ್ಪು ಎಸಗಿರುವುದು ಕಂಡು ಬಂದಿದೆ. ಜೊತೆಗೆ KHB ನಿಯಮವನ್ನು ನಿರಂತರವಾಗಿ ಉಲ್ಲಂಘಿಸಿರುವುದು ಕಂಡು ಬರುತ್ತಿದೆ. ಕಳೆದ ಕೆಲ ದಿನಗಳಿಂದ ನೀವು ಬೆಳಕಿನ ವೇಗದಲ್ಲಿ ಕ್ರಮ ಕೈಗೊಂಡಂತೆ ಈ ಪ್ರಕರಣದ ವಿಚಾರದಲ್ಲೂ ಕೂಡಲೇ ಛಲವಾದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೇಂದ್ರ ಆಡಳಿತ ಪಕ್ಷದ ನಾಯಕನೆಂದು ಈ ಪ್ರಕರಣದಲ್ಲಿ ತಾವು ಬೇರೆ ನಿಲುವು ತೆಗೆದುಕೊಳ್ಳಬಾರದು. ಕೂಡಲೇ ನಾರಾಯಣಸ್ವಾಮಿಯನ್ನು ಮೇಲ್ಮನೆ ಸದಸ್ಯ ಸ್ಥಾನ ಹಾಗೂ ವಿಪಕ್ಷ ನಾಯಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯನ್ನು ವಜಾ ಮಾಡಬೇಕು. ಹೌಸಿಂಗ್ ಬೋರ್ಡ್ ನಿರ್ದೇಶಕರಾಗಿದ್ದಾಗ ಸಿಎ ಸೈಟ್ ಪಡೆದುಕೊಂಡಿದ್ದರು. ಆದರ್ಶ ಸ್ಕೂಲ್ ಎಜುಕೇಶನ್​​ ಗ್ರೂಪ್​​ನ ಚೇರಮನ್ ಆಗಿದ್ದರು ಛಲವಾದಿ. ಇದೀಗ ಸಿಎ ಸೈಟ್ ಪಡೆದ ಜಾಗದಲ್ಲಿ ಆನಂದ್ ಧಂ ಬಿರಿಯಾನಿ ನಡೆಯುತ್ತಿದೆ. ಶಿಕ್ಷಣ ಉದ್ದೇಶಕ್ಕಾಗಿ ಪಡೆದಿರುವ ಸಿಎ ಸೈಟ್​ನಲ್ಲಿ ಬಿರಿಯಾನಿ ಹೋಟೆಲ್​ ನಡೆಸುತ್ತಿದ್ದಾರೆ. ಶಿಕ್ಷಣ ಉದ್ದೇಶಕ್ಕೆ ಪಡೆದ ಜಾಗವನ್ನು ಅದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ರಾಜ್ಯಪಾಲರಿಗೆ ಇದನ್ನು ವಿವರವಾಗಿ ತಿಳಿಸಿದ್ದೇವೆ ಎಂದರು.

ಇದೇ ವೇಳೆ ಮಾತನಾಡಿದ ವಕ್ತಾರ ರಮೇಶ್ ಬಾಬು, ಛಲವಾದಿ ನಾರಾಯಣಸ್ವಾಮಿ ವಿಪಕ್ಷ ನಾಯಕನ ಸ್ಥಾನದ ಗಾಂಭೀರ್ಯತೆಗೆ ಧಕ್ಕೆ ತಂದಿದ್ದಾರೆ. ಕಳಂಕಿತರು ಆ ಸ್ಥಾನದಲ್ಲಿ ಇರಬಾರದು. 2002-2005ರ ವರೆಗೆ ಕರ್ನಾಟಕ ಹೌಸಿಂಗ್ ಬೋರ್ಡ್ ನಿರ್ದೇಶಕ ಆಗಿರ್ತಾರೆ. ಅವರ ಸ್ಥಾನ ದುರುಪಯೋಗ ಮಾಡಿಕೊಂಡು ಹೌಸಿಂಗ್ ಬೋರ್ಡ್​​ಗೆ ಭೂಸ್ವಾಧೀನ ಆಗಿದ್ದ ಲ್ಯಾಂಡ್ ಅನ್ನು ತಾವು ಪಡೆಯುತ್ತಾರೆ. ಸ್ಟ್ರೇ ಸೈಟ್ ಬಿಡುಗಡೆ ಮಾಡಿ ಅಂತ ಮೂಲ ಜಮೀನು ಮಾಲೀಕರು ಹೌಸಿಂಗ್ ಬೋರ್ಡ್​ಗೆ ಅರ್ಜಿ ಹಾಕ್ತಾರೆ. ಆಗ ಬೋರ್ಡ್ ನಿರ್ದೇಶಕರಾಗಿದ್ದ ಛಲವಾದಿ ನಾರಾಯಣಸ್ವಾಮಿ 2004 ರಲ್ಲಿ ತಮಗೇ ಆ ಸಿಎ ಸೈಟ್ ನೀಡಿ ಎಂದು ಅರ್ಜಿ ಹಾಕಿಕೊಳ್ತಾರೆ. ತಾವೇ ನಿರ್ದೇಶಕರಾಗಿದ್ದರೂ ಕೂಡ ಕಾನೂನು ಬಾಹಿರವಾಗಿ ಇದನ್ನು ಪಡೆಯುತ್ತಾರೆ. ಆದರ್ಶ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರಾಗಿದ್ದುಕೊಂಡು ಸಿಎ ಸೈಟ್ ಪಡೆಯುತ್ತಾರೆ ಎಂದಿದ್ದಾರೆ.

ಐದು ವರ್ಷದಲ್ಲಿ ಶಾಲೆಯ ಕಟ್ಟಡ ಕಟ್ಟಬೇಕು ಎಂಬ ಕಂಡೀಷನ್ ಮೇಲೆ ಹೌಸಿಂಗ್ ಬೋರ್ಡ್ ನಿವೇಶನ ನೀಡ್ತಾರೆ. ಇದೇ ನಿವೇಶನವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಶಾಲೆ ಕಟ್ಟುವ ಬದಲು ಟೆಲಿ ಕಮ್ಯುನಿಕೇಷನ್ ಆ್ಯಂಡ್ ಪಬ್ಲಿಕ್ ಸರ್ವೀಸ್ ಕಂಪನಿ ಹೆಸರಿಗೆ ಈ ಜಾಗವನ್ನು ಮಾರ್ಪಾಡು ಮಾಡ್ತಾರೆ. ಸೇಲ್ ಡೀಡ್ ಆಗುವ ಮೊದಲೇ ಈ ರೀತಿ ಮಾರ್ಪಾಡು ಮಾಡಿರುತ್ತಾರೆ. ಯಾವಾಗ ಟೆಲಿ ಕಮ್ಯುನಿಕೇಷನ್​​ನಲ್ಲಿ ಛಲವಾದಿ ನಾರಾಯಣಸ್ವಾಮಿ ಎಕ್ಸ್​ಪರ್ಟ್ ಆದ್ರೋ ಅವರೇ ಹೇಳಬೇಕು ಎಂದು ಲೇವಡಿ ಮಾಡಿದರು.

More articles

Latest article