ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ ಬಲವರ್ಧನೆಗೆ ಕೇಂದ್ರ ಭರವಸೆ: ಡಾ. ಪುರುಷೋತ್ತಮ ಬಿಳಿಮಲೆ

Most read

ನವದೆಹಲಿ: ಮೈಸೂರಿನಲ್ಲಿರುವ ಕೇಂದ್ರ ಭಾರತೀಯ ಭಾಷಾ ಸಂಸ್ಥೆಯ (ಸಿಐಐಎಲ್) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಪ್ರತ್ಯೇಕಿಸಲಾಗುವುದು. ಈ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ನೀಡಬೇಕಿರುವ ಎಲ್ಲಾ ಆರ್ಥಿಕ ಸಹಕಾರವನ್ನು ಒದಗಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ ನೀಡಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಣ್ಯರ ನಿಯೋಗದೊಂದಿಗೆ ಸಂಸತ್ ಭವನದಲ್ಲಿ ಸಭೆ ನಡೆಸಿ ಈ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರ ಭಾರತೀಯ ಭಾಷಾ ಸಂಸ್ಥೆಯ ಆಡಳಿತ ವ್ಯಾಪ್ತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಮರ್ಪಕ ಕಾರ್ಯಚಟುವಟಿಕೆಗಳಿಗೆ ಕಾಯಕಲ್ಪವು ಅಗತ್ಯವಿದ್ದು, ಈ ಕೇಂದ್ರದ ಆಡಳಿತ ವ್ಯವಸ್ಥೆಯನ್ನು ಮೇಲ್ದರ್ಜೆಗೆರಿಸಲು ನೆರವು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದರು.

ಕೇಂದ್ರ ಭಾರತೀಯ ಭಾಷಾ ಸಂಸ್ಥೆಯನ್ನು ಮತ್ತಷ್ಟು ತಂತ್ರಜ್ಞಾನ ಸ್ನೇಹಿಯಾಗಿಸಬೇಕಾದ ಅನಿವಾರ್ಯತೆ ಇದೆ ಎಂದು ಪ್ರಧಾನ್ ಅವರೇ ಹೇಳಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರವು ಬೆಂಗಳೂರಿನಲ್ಲಿ ಈ ಸಂಸ್ಥೆಯ ತಂತ್ರಜ್ಞಾನ ಕಚೇರಿಯನ್ನು ತೆರೆಯಲು ಸೂಚಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಶಾಸ್ತ್ರೀಯ ಕನ್ನಡ ಸ್ಥಾನಮಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಸಲಹೆಗಳು ಅವಶ್ಯಕವಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕುರಿತಂತೆ ಸಲಹೆಗಳನ್ನು ನೀಡಿದಲ್ಲಿ ಅವುಗಳ ಅನುಷ್ಠಾನದ ಕುರಿತಂತೆ ಕ್ರಮವಹಿಸಲಾಗುವುದು ಎಂದು ಪ್ರಧಾನ್ ಅವರು ತಿಳಿಸಿದ್ದಾರೆ ಎಂದು ಬಿಳಿಮಲೆ ಹೇಳಿದ್ದಾರೆ.

ಕನ್ನಡ ಕಡ್ಡಾಯಕ್ಕೆ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರದ ನಿರ್ದೇಶನ:

ಕನ್ನಡ ಭಾಷಾ ಕಲಿಕಾ ಅಧಿನಿಯಮದ ಅನುಸಾರ ಕನ್ನಡವನ್ನು ಕಡ್ಡಾಯವಾಗಿ ಕಲಿಸಲು ರಾಜ್ಯದ ಎಲ್ಲಾ ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ಮುಂದಿನ ಒಂದು ವಾರದೊಳಗೆ ಅಗತ್ಯ ನಿರ್ದೇಶನ ನೀಡುತ್ತೇನೆ ಎಂದು ಪ್ರಧಾನ್ ಭರವಸೆ ನೀಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

More articles

Latest article