Thursday, July 25, 2024

ಕೇಂದ್ರ ಬಜೆಟ್‌: ವಿಕಸಿತ ಏನಿಲ್ಲ, ಸಂಕುಚಿತವೇ ಎಲ್ಲಾ

Most read

ಇಂದಿನ ಬಿಜೆಪಿ ಸರ್ಕಾರಕ್ಕೆ ಅಂಕಿ ಅಂಶಗಳು ಎಂದರೆ ಅಲರ್ಜಿ ಅನ್ನುವುದು ನಿನ್ನೆಯ (01-02-2024) ಬಜೆಟ್ ನೋಡಿದವರಿಗೆ ಸ್ಪಷ್ಟವಾಗುತ್ತದೆ. ಪ್ರತಿ ಬಾರಿಯೂ ಜನರ ಗಮನವನ್ನು ಅತ್ತ ಇತ್ತ ಸೆಳೆಯುವಲ್ಲಿಯೇ ಸರಕಾರದ ಪ್ರಯತ್ನ. ಇವತ್ತು ಕೂಡ, ನಮ್ಮ ಮಾಧ್ಯಮಗಳು ನಮ್ಮ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಕೆಂಪು ಬಣ್ಣದ ಬಾಹಿ ಖಾತಾ ಬಗ್ಗೆಯೇ ಹೆಚ್ಚಿನ ಮಹತ್ವ ನೀಡುತ್ತಾ, ಅದರ ಕುರಿತು ಹೆಚ್ಚಿನ ಚರ್ಚೆ ನಡೆಸಿದವೆಯೇ ಹೊರತು ನಿಜವಾಗಿಯೂ ಪ್ರಸ್ತುತ ಪಡಿಸಬೇಕಾದ ಆರ್ಥಿಕ ಸ್ಥಿತಿ ಗತಿಯ ಸ್ಥೂಲ ವಿವರಣೆ ಅಲ್ಲ. 

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಮಂಡಿಸಿದರು. ಬರಲಿರುವ ಚುನಾವಣೆಗೆ ಮುಂಚೆ ಮಂಡಿಸಲ್ಪಟ್ಟ ಈ ಬಜೆಟ್ ಒಂದು ಅಲ್ಪಾವಧಿಯ ಹಣಕಾಸು ಯೋಜನೆ. ಲೋಕಸಭೆ ಚುನಾವಣೆ ಬಳಿಕ ಹೊಸ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ. ಹಾಗೆಯೇ ಇದು ಹೊಸ ಸರ್ಕಾರದ ಚುನಾವಣೆಗೆ ಮುನ್ನ ಮಂಡಿಸಲ್ಪಟ್ಟ ಮಧ್ಯಂತರ ಬಜೆಟ್ ಆಗಿರುವುದರಿಂದ ಪ್ರಸ್ತುತ ಸರ್ಕಾರವು ತನ್ನ ಹಿಂದಿನ ವರ್ಷದ ಯೋಜನೆಗಳು, ವೆಚ್ಚಗಳು, ಹಂಚಿಕೆಗಳು, ಖರ್ಚುಗಳನ್ನು ಮತ್ತು ದೇಶದ ಸಂಪೂರ್ಣ ಆರ್ಥಿಕತೆಯ ವಿವರಗಳನ್ನು ಜನರಿಗೆ ಒದಗಿಸಬೇಕಾದ ಬಜೆಟ್. ಆದರೆ ಇದರಲ್ಲಿ ನಾವು ಕಾಣುತ್ತಿರುವುದು ಚುನಾವಣಾ ಗಿಮಿಕ್ ಬಜೆಟ್ ಮಾತ್ರ.    

ಈ ಮಧ್ಯಂತರ ಬಜೆಟ್ ಮಂಡಿಸುತ್ತಾ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಹೇಳಿದ ಮಾತು- “ಇದು ಬಡ ಹಾಗೂ ಮಧ್ಯಮ ವರ್ಗದವರು, ರೈತರು, ಯುವಕರು ಮತ್ತು ಮಹಿಳೆಯರ ಸಬಲೀಕರಣವನ್ನು ಗಮನದಲ್ಲಿಟ್ಟು ಮಂಡಿಸಿರುವ ಬಜೆಟ್ ಹಾಗೂ ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳು ಇವೆ”. ನಿರ್ಮಲ ಸೀತಾರಾಮನ್ ಹೇಳಿಕೆಯ ಪ್ರಕಾರ ಭಾರತದ ಪ್ರಸ್ತುತ ಆರ್ಥಿಕತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಹಣದುಬ್ಬರ ನಿಯಂತ್ರಣದಲ್ಲಿದೆ. ಆದರೆ ಇವತ್ತಿನ ಪ್ರಸ್ತುತ ಆರ್ಥಿಕ ವಾತಾವರಣ ಹಾಗೂ ಸರ್ಕಾರಿ ಅಂಕಿ ಅಂಶಗಳನ್ನು ಗಮನಿಸಿದರೆ ನಿಜಸ್ಥಿತಿ ಬೇರೆಯೇ ಇದೆ ಎಂದು ಅರಿವಾಗುತ್ತದೆ. ಸರ್ಕಾರ ಹೇಗೂ ತಮ್ಮ ವೈಫಲ್ಯದ ಅಂಕಿ ಅಂಶಗಳನ್ನು ಜನರ ಮುಂದೆ ಇಡುವುದಿಲ್ಲ, ಆದರೆ ಇರುವ ಅಂಕಿ ಅಂಶವನ್ನೂ ತಿರುಚಿ ಹೇಳುವ ಪ್ರಯತ್ನಗಳು ಆಗುತ್ತಿವೆ. 

ನಾವಿಂದು ಗಮನಿಸ ಬೇಕಾಗಿರುವುದು ಹಾಗೂ ಅರಿತುಕೊಳ್ಳ ಬೇಕಾಗಿರುವುದು ಇಂದಿನ ಈ ಮಧ್ಯಂತರ ಬಜೆಟ್‌ ನಲ್ಲಿ ಜನಸಾಮಾನ್ಯರಿಗಾಗಿ ಯಾವ ಸವಲತ್ತು ಸೌಲಭ್ಯ ಹಾಗೂ ಆರ್ಥಿಕ ಅಭಿವೃದ್ಧಿ ಯೋಜನೆಗಳಿವೆ ಎಂದು. ಇದು ಮಧ್ಯಂತರ ಬಜೆಟ್ ಆಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ, ನಿರುದ್ಯೋಗಿ ಯುವಕರಿಗೆ ಸರ್ಕಾರ ಕೆಲವು ಪರಿಹಾರಗಳನ್ನು ನೀಡಬೇಕಾಗಿತ್ತು ಮತ್ತು ಹಣದುಬ್ಬರವನ್ನು ಕಡಿಮೆ ಮಾಡುವ ಕ್ರಮಗಳನ್ನು ಸಹ ನೀಡಬೇಕಾಗಿತ್ತು. ಸರ್ಕಾರದ ಅಂಕಿ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಶಿಕ್ಷಣ, ಕೃಷಿ, ಆರೋಗ್ಯ ಮತ್ತು ಸಮಾಜ ಕಲ್ಯಾಣದಂತಹ ಕೆಲವು ಮಹತ್ವದ ಕ್ಷೇತ್ರಗಳಿಗೆ ನಿಗದಿಪಡಿಸಿದ ಮೊತ್ತವನ್ನು ಈ ಸರ್ಕಾರ ಸರಿಯಾಗಿ ಬಳಸಿಕೊಂಡಿಲ್ಲ. ಸರ್ಕಾರವು ಜನರ ಕಲ್ಯಾಣದ ಬಗ್ಗೆ ಗಂಭೀರವಾಗಿಲ್ಲ ಮತ್ತು ಸಮಾಜದ ಬೆಳವಣಿಗೆಯ ಈ ಅಂಶಗಳ ಬಗ್ಗೆ ಚಿಂತಿಸುತ್ತಿಲ್ಲ ಎಂಬುದನ್ನು ಇದು ತೋರಿಸುತ್ತದೆ.

MGNREGA

ಭಾರತವು ಭಾರೀ ಹಣದುಬ್ಬರ, ಯುವ ನಿರುದ್ಯೋಗ, ಯುವಕರ ವಲಸೆ ಸಮಸ್ಯೆಗಳನ್ನು ಎದುರಿಸುತ್ತಿದೆ. ಇತ್ತೀಚೆಗೆ ಹರ್ಯಾಣ ಮತ್ತು ಉತ್ತರ ಪ್ರದೇಶದ ನೂರಾರು ಯುವಕರು ಯುದ್ಧ ಪೀಡಿತ ಇಸ್ರೇಲ್ ನಲ್ಲಿ ಉದ್ಯೋಗಕ್ಕಾಗಿ ಸಾಲುಗಟ್ಟಿ ನಿಂತಿರುವುದನ್ನು ನಾವು ನೋಡಿದ್ದೇವೆ. ಇಂತಹ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಯಾವುದೇ ಘನ ಯೋಜನೆಗಳನ್ನು ಈ ಬಜೆಟ್ ನಲ್ಲಿ ನೀಡಿಲ್ಲ. ಇಂತಹ ಕ್ಲಿಷ್ಟಕರ ಸ್ಥಿಯಲ್ಲೂ ಕೂಡ   MGNREGA-ಯೋಜನೆಗೆ 2022-23 ರಲ್ಲಿ 90,805.92 ಕೋಟಿ ನೀಡಿದ ಸರ್ಕಾರ ಇವತ್ತಿನ ಬಜೆಟ್ ನಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ 86,000 ಕೋಟಿ ಬಜೆಟ್ ಹಂಚಿದೆ. 2014ರ ವೇಳೆಗೆ 100 ದಿನ ಕೆಲಸ ಗ್ಯಾರಂಟಿ ಇದ್ದ MGNREGA-ಯೋಜನೆ, ಈಗ ವರ್ಷದಲ್ಲಿ ಕೇವಲ 48 ದಿನಕ್ಕೆ ಇಳಿಸಲಾಗಿದೆ.

ಪ್ರತಿ ವರ್ಷ ಮೂಲಸೌಕರ್ಯಕ್ಕಾಗಿ ಅಪಾರ ಪ್ರಮಾಣದ ಹಣವನ್ನು ವ್ಯಯಿಸುತ್ತಿದ್ದೇವೆ ಎಂದು ಇವರ ಬಜೆಟ್ ಹೇಳುತ್ತದೆ. ಆದರೆ ಇದರ ಬಗ್ಗೆ ಸರ್ಕಾರದ ಬಳಿ ಯಾವುದೇ ವಿವರಣೆ ಇಲ್ಲ. ಸರ್ಕಾರ ನಿಜವಾಗಿಯೂ ಜನರಿಗೆ, ದೇಶಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆಯೇ ಅಥವಾ ಇದನ್ನು ಬರಿಯ ಕಾಗದದ ಮೇಲೆ ಛಾಪಿಸಲಾಗುತ್ತಿದೆಯೇ? ಇದಕ್ಕೆ ಉತ್ತರ ಹೇಳುವವರು ಯಾರು? 40,000 ಸಾಮಾನ್ಯ ರೈಲುಗಳನ್ನು ವಂದೇ ಭಾರತ್ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸುವುದಾಗಿ ಬಜೆಟ್‌ ನಲ್ಲಿ ಹೇಳಲಾಗಿದೆ. ನಾವು ಕೇಳಬೇಕಾದ ಪ್ರಶ್ನೆಯೆಂದರೆ ಸರ್ಕಾರ ಈಗ ಇರುವ ಸಾಮಾನ್ಯ ದರ್ಜೆ ರೈಲು ಸೌಕರ್ಯದ ಗುಣಮಟ್ಟವನ್ನು ಸುಧಾರಿಸಬೇಕಲ್ಲವೇ?

ವಂದೇ ಭಾರತ್‌ ರೈಲು

ಇನ್ನು ರಾಜ್ಯಗಳಿಗೆ ಸಲ್ಲಬೇಕಾದ ಮೊತ್ತಗಳ ಬಗ್ಗೆ ನೋಡೋಣ:

2023-24ರಲ್ಲಿ ರಾಜ್ಯಗಳಿಗೆ ವರ್ಗಾವಣೆಗಾಗಿ ಕಾಯ್ದಿರಿಸಿದ ಮೊತ್ತ 3,24,641 ಕೋಟಿ. 2024-25ರ ಬಜೆಟ್ ನಲ್ಲಿ ಇದನ್ನು 2,86,787 ಕೋಟಿಗೆ ಇಳಿಸಲಾಗಿದೆ. ರೈತರ ಬವಣೆಗೆ ಸರ್ಕಾರದ ಬಳಿ ಯಾವುದೇ ಪರಿಹಾರವಿಲ್ಲ. 2024ರ ಪರಿಷ್ಕೃತ ಬಜೆಟ್ ನಲ್ಲಿ ರಸಗೊಬ್ಬರ ಸಬ್ಸಿಡಿ 1.89 ಲಕ್ಷ ಕೋಟಿ ನೀಡಲಾಗಿತ್ತು. ಇದಕ್ಕೆ ಹೋಲಿಸಿದರೆ ಇಂದಿನ ಮಧ್ಯಂತರ ಬಜೆಟ್ ನಲ್ಲಿ ಈ ಮೊತ್ತವನ್ನು ಶೇ.13ರಷ್ಟು ಕಡಿತಗೊಳಿಸಲಾಗಿದ್ದು, 2024-25ನೇ ಸಾಲಿಗೆ ರಸಗೊಬ್ಬರ ಸಬ್ಸಿಡಿಗೆ ನೀಡಿರುವ ಮೊತ್ತ – 1.64 ಲಕ್ಷ ಕೋಟಿ ರೂ. ಮಾತ್ರ.

ಇನ್ನು ಶಿಕ್ಷಣದ ಬಗ್ಗೆ ಮಾತನಾಡುವುದಾದರೆ – ಶಿಕ್ಷಣದ ಮೇಲಿನ ವೆಚ್ಚವು 3.2% ಗೆ ಕುಸಿದು ನಿಂತಿದೆ. ಭಾರತದಂತಹ ಯುವ ರಾಷ್ಟ್ರದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾದ ಬಗ್ಗೆ ಸರ್ಕಾರ ತಲೆಕೆಡಿಸಿ ಕೊಳ್ಳುತ್ತಿಲ್ಲ. layoff.fyi  (ಟೆಕ್ ವಲಯವನ್ನು ಟ್ರ್ಯಾಕ್ ಮಾಡುವ ವೆಬ್ಸೈಟ್) ಎನ್ನುವ ಸಂಸ್ಥೆ ನೀಡಿರುವ 2023ರ ವರದಿ ಪ್ರಕಾರ, ಕಳೆದ ವರ್ಷ ಭಾರತವು ಪ್ರಪಚದಲ್ಲೇ ಎರಡನೇ ಅತಿ ಹೆಚ್ಚು ಉದ್ಯೋಗ ಕಡಿತ ಕಂಡಿರುವ ದೇಶವಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದಾಗಿ ಇನ್ನೂ ಕೂಡ ಉದ್ಯೋಗ ಕಡಿತದ ಸಂಭವ ಇದೆ. ಒಟ್ಟು ಬಜೆಟ್ ವೆಚ್ಚದಲ್ಲಿ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ನೀಡಿರುವ ಹಂಚಿಕೆ ಕೂಡ ಕಡಿಮೆ ಮಾಡಲಾಗಿದೆ.

“ಇಂದು ಮಂಡಿಸಲ್ಪಟ್ಟ ಮೋದಿ ಸರ್ಕಾರದ ರೂ 47.66 ಲಕ್ಷ ಕೋಟಿ ಬಜೆಟ್ “ವಿಕಸಿತ ಭಾರತಕ್ಕೆ” ಬಲವಾದ ಅಡಿಪಾಯ ಹಾಕಬಲ್ಲ ಬಜೆಟ್” ಎಂದು ಸರ್ಕಾರದ ಪರ ಇರುವ ಮಾಧ್ಯಮಗಳು ನುಡಿಯುತ್ತಿವೆ. ಈ ಮಾತು ಎಷ್ಟರ ಮಟ್ಟಿಗೆ ಸತ್ಯ – ಈ ರೀತಿ ಹೇಳಿಕೆ ನೀಡುತ್ತಿರುವವರೇ ಇದಕ್ಕೆ ವಿವರಣೆ ನೀಡಬೇಕು. ಬಜೆಟ್ ಅನ್ನುವುದು ಸರ್ಕಾರವು ಜನರಿಗೆ ತನ್ನ ಕೆಲಸ-ಕಾರ್ಯ, ಯೋಜನೆ, ಅಭಿವೃದ್ಧಿ, ವೈಫಲ್ಯಗಳ ಬಗ್ಗೆ ವರದಿ ನೀಡುವುದು, ಹಾಗೂ ಭವಿಷತ್ತಿಗೆ ಬೇಕಾದ ಯೋಜನೆಗಳನ್ನು ಪ್ರಸ್ತಾಪಿಸುವುದು. ನಾವು ನಾಗರಿಕರು ಕೇಳಬೇಕಾದ ಪ್ರಶ್ನೆ, ಇವತ್ತಿನ ಬಜೆಟ್ ಈ ನಿಟ್ಟಿನಲ್ಲಿ ಎಷ್ಟು ಕೆಲಸ ಮಾಡಿದೆ ಎಂದು. 2019 ರಲ್ಲಿ ಹಣಕಾಸು ಸಚಿವರ ಬಜೆಟ್ ಭಾಷಣವು 140 ನಿಮಿಷಗಳಷ್ಟು ಇತ್ತು. ಅದೇ ಇವತ್ತಿನ ಈ ಬಜೆಟ್ ಭಾಷಣವನ್ನು 58 ನಿಮಿಷಗಳಲ್ಲಿ ಮಾಡಿ ಮುಗಿಸಲಾಯಿತು. ಈ ಸರ್ಕಾರವು ಯಾವುದೇ ಚರ್ಚೆ, ಯಾವುದೇ ಪ್ರಶ್ನೆಗಳನ್ನು ಬಯಸುವುದಿಲ್ಲ ಮತ್ತು ಈ ಸರ್ಕಾರದಲ್ಲಿ ಚರ್ಚೆಗಳಿಗೆ ಯಾವುದೇ ಅವಕಾಶವಿಲ್ಲ ಎನ್ನುವುದು ಮತ್ತೊಮ್ಮೆ ಮನದಟ್ಟಾಯಿತು.

ಸುಚಿತ್ರಾ

ರಾಜಕೀಯ ವಿಶ್ಲೇಷಕರು, ವಕೀಲರು

More articles

Latest article