ಇತ್ತೀಚಿಗೆ MP ಶಂಕರ್ ಅವರ ಜನ್ಮದಿನದ ಪ್ರಯುಕ್ತ ಸತ್ಯ ಹರಿಶ್ಚಂದ್ರ ಸಿನಿಮಾದ “ಕುಲದಲ್ಲಿ ಕೀಳು ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲು ಯಾವುದೋ ” ಹಾಡು ನನ್ನ ಮನವನ್ನು ಪುಳಕಿತ ಗೊಳಿಸಿತು. ಕಾರಣ 60 ರ ದಶಕದಲ್ಲಿಯೇ ಈ ಹಾಡು ʼಮದುವೆಗೂ ಮತ್ತು ಮಸಣಕ್ಕೂ ಈ ಹಾಡು ಅನ್ವಯಿಸುತ್ತೆʼ ಎನ್ನುವ ಹಂಸಲೇಖ ಅವರ ಮಾತುಗಳು ನನ್ನನ್ನು ಎಚ್ಚರಗೊಳಿಸಿತ್ತು. ಜಾತಿ ಮತ್ತು ಜಾತ್ಯತೀತದ ಅರ್ಥ ಈ ಹಾಡಿನ ಸಾರ. ಇಡೀ ಮನುಷ್ಯ ಕುಲವೇ ಎಚ್ಚರಗೊಂಡು ನಾವೆಲ್ಲಾ ಮಾನವರು ಮತ್ತು ಭಾರತೀಯರು ಎಂಬ ಕರೆಗಂಟೆಯೊಂದಿಗೆ ನಮ್ಮ ಹೊಸತನದ ಬದುಕು ಸಾಗಬೇಕೇ ವಿನಹ ಜಾತಿಯ ವಾರೆ ನೋಟದೊಂದಿಗಲ್ಲ.
ಈ ಪೀಠಿಕೆ ಏಕೆಂದರೆ ಪ್ರಕೃತಿಯಲ್ಲಿ ಒಂದು ಹೆಣ್ಣು ಒಂದು ಗಂಡು ಎಂದು ಸೃಷ್ಟಿಯಾಗಿದ್ದೇವೆ. ಗಂಡು ಹೆಣ್ಣಿನ ಮದುವೆ ಎನ್ನುವ ಪವಿತ್ರ ಬಾಂಧವ್ಯ ಮತ್ತೊಂದು ಮಗುವಿನ ಹುಟ್ಟಿಗೆ ಕಾರಣವಾಗಿ ಹೊಸ ಬದುಕಿಗೆ ಕಾರಣವಾಗುತ್ತದೆ. ನಾನು ಸರಿ ಸುಮಾರು 18 ವರ್ಷಗಳಿಂದ ಮ್ಯಾಟ್ರಿಮೋನಿಯಲ್ ಕಾಲಂ ಗಮನಿಸುತ್ತಿದ್ದೇನೆ. ಈಗಿನ ದಿನ ಮಾನದಲ್ಲಿ ಲಿಂಗಾಯತ ಮ್ಯಾಟ್ರಿಮೋನಿ, ಒಕ್ಕಲಿಗ ಮ್ಯಾಟ್ರಿಮೋನಿ, ಬ್ರಾಹ್ಮಣ ಮ್ಯಾಟ್ರಿಮೋನಿ, ಹೀಗೆ ಜಾಹೀರಾತು ವೀಕ್ಷಿಸಿದಾಗ ಏನೋ ಒಂಥರಾ ಮನ ಕಸಿವಿಸಿ ಗೊಂಡಿತು. ಅದೇಕೋ ಗೊತ್ತಿಲ್ಲ ನನಗೆ ದೇವರು, ಜಾತಿ ಗುಂಪುಗಳ ಬಗ್ಗೆ ಮಾತನಾಡುವುದಾಗಲಿ, ಗುಂಪು ಘರ್ಷಣೆ ಮಾಡುವುದಾಗಲಿ ಚಿಕ್ಕಂದಿನಿಂದಲೂ ಒಡ ಮೂಡಲೇ ಇಲ್ಲ. ಇದು ನನಗೆ ದೇವರು ಕೊಟ್ಟ ವರ. ನಾನು ಯೂನಿವರ್ಸಿಟಿಯಲ್ಲಿ ಓದುವಾಗ ಎಲ್ಲರೂ ʼಅವರು ನಿಮ್ಮ ಕುಲಬಾಂಧವರುʼ ಎಂದು ರೇಗಿಸುತ್ತಿದ್ದರು. ಅದನ್ನು ನಾನು ತಮಾಷೆಯಾಗಿ ಸ್ವೀಕರಿಸಿ ಮುನ್ನಡೆದು ಹೋಗುತ್ತಿದ್ದೆ.
ಹೀಗೆ ಒಮ್ಮೆ ತುಂಗಭದ್ರಾ ಜಲಾಶಯದತ್ತ ಹೋಗುವಾಗ ಕರ್ನಾಟಕ ತಮಿಳು ಸಂಘ, ತೆಲುಗು ಸಂಘ ಎಂದು ಗೋಡೆ ಬರಹ ನೋಡಿದಾಗ ಮನ ಮುದುಡುತ್ತಿತ್ತು. ಅರಿಯದ ಕಣಕ್ಕೆ ಜಾತಿಯ ಪಿಡುಗು ಯಾಕೆ ಎಂಬ ಪ್ರಶ್ನೆ ನನ್ನಲ್ಲಿ ಏಳುತ್ತಿತ್ತು.
ವಿಶ್ವ ಮಾನವತೆ ಸಾರಿದ ನಾಡಿನಲ್ಲಿ ಜಾತಿ ಎನ್ನುವ ಪಟಾಕಿ ಯಾಕೆ?. ಇದು ಕೆಲವರಿಗೆ ಸರಿ ಎನಿಸಿದರೂ ಇನ್ನೊಬ್ಬರಿಗೆ ಪ್ರಶ್ನೆಯಾಗಿ ಗೋಚರಿಸುತ್ತೆ.. ಮದುವೆ ಎನ್ನುವ ಮೂರು ಗಂಟಿಗೆ, ಗಂಡು ಹೆಣ್ಣಿನ ಮಿಲನಕ್ಕೆ ಜಾತಿ ಪಿಡುಗು ಸರಿಯಲ್ಲ. ಮದುವೆಗೆ
ಜಾಹೀರಾತುಗಳು ಸುಗಮ ಮಾರ್ಗವಾಗಬೇಕೇ ವಿನಹ ಮ್ಯಾಟ್ರಿಮೋನಿಯಲ್ ಕಾಲಂಗಳ ತರ ಜಾತಿಯನ್ನು ಎತ್ತಿ ಹಿಡಿಯುವುದು ಆಗಬಾರದು.
“ರಾಷ್ಟ್ರೀಯ ಶಿಕ್ಷಣ ನೀತಿ ಸಂಹಿತೆ ” ಜಾರಿಗೋಸ್ಕರ 1985 ರಲ್ಲಿ ಕವಿತಾ ಕೃಷ್ಣಮೂರ್ತಿ ಯವರ ರಾಗ ಸಂಯೋಜನೆ ಯೊಂದಿಗೆ
“ಪೂರಬ್ ಸೆ ಸೂರ್ಯ ಹುವಾ” ಎನ್ನುವ ಜಾಹೀರಾತು ಪ್ರತಿ ಮಕ್ಕಳಿಗೂ ಶಿಕ್ಷಣ ದೊರಕಬೇಕು ಎನ್ನುವ ಜಾಗೃತಿಯನ್ನು ಮೂಡಿಸಿತ್ತು. ಜಾಹೀರಾತು ಮನ ಮುಟ್ಟಿ ಎಲ್ಲರ ಮಕ್ಕಳು ಓದುವ ಹಾಗೆ ಅದು ಮಾಡಿತ್ತು. ಜನರೇಶನ್ ಬದಲಾದ ಹಾಗೆ ಜಾಹೀರಾತುಗಳೂ ಬದಲಾದವು!
ಯಾವ ನದಿಯು ಜಾತಿ ನೋಡಿ ಹರಿಯುತ್ತಿಲ್ಲ… ಯಾವ ಬೆಳಕು ಜಾತಿ ನೋಡಿ ಬೆಳಗಿಲ್ಲ.. ಯಾವ ಗಾಳಿ ಜಾತಿ ನೋಡಿ ಬೀಸಿಲ್ಲ… ಋತುಮಾನಕ್ಕೆ ತಕ್ಕಂತೆ ಹವಾಮಾನದ ವೈಪರೀತ್ಯ ಆಗುವುದೇ ವಿನಃ ಜಾತಿಯಿಂದಲ್ಲ.
ಜಾತಿಯನ್ನು ತೊಲಗಿಸಲೆಂದೇ “ಜಾತಿ ವಿಜಾತಿ ಎನಬೇಡ, ದೇವನೊಲಿದಾತನೆ ಜಾತ ಸರ್ವಜ್ಞ ” ಎನ್ನುವ ನುಡಿಗಟ್ಟೇ ಇದೆ. ಬದಲಾದ ಯುಗದಲ್ಲಿ ಜಾತಿ ಪಟಾಕಿ ಹಚ್ಚುವುದು ಬೇಡ. ಇಂದು ಗಂಡಿಗೆ ಹೆಣ್ಣು ಸಿಗುವುದು ತುಂಬಾ ಕಷ್ಟವಾಗಿದೆ. ಅಂತದ್ದರಲ್ಲಿ ಇನ್ನಾದರೂ ಈ ಜಾತಿ ಪಿಡುಗು ತೊಲಗಲಿ.
ಡಾ. ಕೃಷ್ಣವೇಣಿ ರಾಯದುರ್ಗ
ಉಪನ್ಯಾಸಕರು
ಇದನ್ನೂ ಓದಿ- ಬುಲ್ ಡೋಜರ್ ಅಡಿಯಲ್ಲಿ ನಜ್ಜುಗುಜ್ಜಾಗಿರುವ ಭಾರತದ ಸಂವಿಧಾನ