ಜಾತಿ ಗಣತಿ: ತೆಲಂಗಾಣದ ಮಾದರಿ ಅಳವಡಿಸಿಕೊಳ್ಳಲು ಪ್ರಧಾನಿ ಮೋದಿಗೆ ಖರ್ಗೆ ಸಲಹೆ

Most read

ನವದೆಹಲಿ: ಜಾತಿ ಗಣತಿಯಲ್ಲಿ ತೆಲಂಗಾಣದ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಮೀಸಲಾತಿ ಮೇಲಿನ ಶೇ. 50 ರಷ್ಟು ಮಿತಿಯನ್ನು ತೆಗೆದುಹಾಕಬೇಕು, ಪರಿಚ್ಛೇದ 15(5) ತಕ್ಷಣ ಜಾರಿಗೆ ತಂದು ಎಸ್‌ಸಿ, ಎಸ್‌ಟಿ, ಮತ್ತು ಒಬಿಸಿ ಸಮುದಾಯಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಮೋದಿ ಅವರಿಗೆ ಪತ್ರ ಬರೆದಿರುವ ಖರ್ಗೆ, ಜಾತಿ ಗಣತಿ ವಿಚಾರವಾಗಿ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದೂ ಮನವಿ ಮಾಡಿಕೊಂಡಿದ್ದಾರೆ.
ಸಮಾಜದಲ್ಲಿ ಹಿಂದುಳಿದವರು, ತುಳಿತಕ್ಕೊಳಗಾದವರು ಮತ್ತು ಅಳಿವಿನ ಅಂಚಿನಲ್ಲಿರುವ ವರ್ಗಗಳಿಗೆ ಅವರ ಹಕ್ಕುಗಳನ್ನು ನೀಡುವ ಜಾತಿ ಜನಗಣತಿಯಂತಹ ಪ್ರಕ್ರಿಯೆಯನ್ನು ನಡೆಸುವುದನ್ನು ಯಾವುದೇ ರೀತಿಯಲ್ಲಿ ವಿಭಜನೆ ಎಂದು ಪರಿಗಣಿಸಲಾಗುವುದಿಲ್ಲ, ಪರಿಗಣಿಸಲೂಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ನಮ್ಮ ದೇಶದ ಜನರು ವಿಶಾಲ ಹೃದಯದವರು, ಅಗತ್ಯವಿದ್ದಾಗ ಎಲ್ಲರೂ ಒಗ್ಗಟ್ಟಾಗುತ್ತಾರೆ, ಅದಕ್ಕೆ ಪಹಲ್ಗಾಮ್‌ ಘಟನೆಯನ್ನು ವಿರೋಧಿಸಿ ಒಂದಾಗಿರುವುದೇ ಸಾಕ್ಷಿ ಎಂದು ಪತ್ರದಲ್ಲಿ ಖರ್ಗೆ ತಿಳಿಸಿದ್ದಾರೆ.

More articles

Latest article