ಜಾತಿ ಗಣತಿ -ಸಾಮಾಜಿಕ ಅನ್ಯಾಯದ ಕಥೆಗೆ ನಾಯಕರಾಗದಿರಿ…

Most read

ಚುನಾವಣೆಯ ಪ್ರಣಾಳಿಕೆಯಲ್ಲಿರುವ ಆಶ್ವಾಸನೆಯನ್ನು ಈಡೇರಿಸಲು ಲಿಂಗಾಯತರ- ಒಕ್ಕಲಿಗರ ನಾಯಕರ ವಿರೋಧವೇಕೆ? ತಮ್ಮ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭಯವೇ? ಇದನ್ನು ವಿರೋಧಿಸುತ್ತಲೇ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕುವ ಪ್ರಯತ್ನವೇ? ವರದಿ ಜಾರಿಯಿಂದ ಹಿಂದುಳಿದ ಸಮುದಾಯದ  ಪ್ರಬಲ ನಾಯಕರಾಗಿ ಸಿದ್ದರಾಮಯ್ಯನವರು ಇನ್ನಷ್ಟು ಪ್ರಸಿದ್ಧರಾಗುತ್ತಾರೆ ಎಂಬ ಭಯವೇ? ಇಲ್ಲ ದೀರ್ಘಕಾಲದ ಅಧಿಕಾರ ಕೈ ತಪ್ಪಿ ಹೋಗುತ್ತದೆ ಎಂಬ ಆಂತಕವೇ? ಆಕಾಶ್‌ ಆರ್‌ ಎಸ್.

ಕಾಂಗ್ರೆಸ್ ಪಾಳೆಯದಲ್ಲಿ ಈಗ ರಾಜಕೀಯದ ಕಾವು ಹೆಚ್ಚಾಗಿದೆ. ಚುನಾವಣೆಯ ಪೂರ್ವದಲ್ಲಿ ನೀಡಿದ ಜಾತಿ ಜನಗಣತಿಯ ಸಮೀಕ್ಷೆಯ ಆಶ್ವಾಸನೆಗಳನ್ನು ಈಡೇರಿಸಲು ದುಂಬಾಲು ಬಿದ್ದಿರುವ ಹೈ ಕಮಾಂಡ್‌ಗೆ ಪ್ರಬಲ ಜಾತಿ ಎನಿಸಿಕೊಂಡ ನಾಯಕರೆಲ್ಲಾ ತಮ್ಮ ಜಾತಿಯ ದಾಳವನ್ನು ಉರುಳಿಸಿ ಹಳಗುಣಿ ಮನೆ ಆಟ ಆಡಲು ಶುರು ಮಾಡಿದ್ದಾರೆ.  ಆ ಮೂಲಕ ತಮ್ಮ ರಾಜಕೀಯ ಮೀಸಲನ್ನು ಭದ್ರ ಪಡಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ.

ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಗಳ ಜಾತಿ ಜನಗಣತಿಯ ಸಮೀಕ್ಷೆಯ ದತ್ತಾಂಶ  ಹೊರ ಬೀಳುತ್ತಿದ್ದ ಬೆನ್ನಲ್ಲೆ ಪ್ರಬಲ ಜಾತಿಗಳು ಹಾಗೂ ರಾಜಕೀಯದ ಬಿಲದಲ್ಲಿ ಅಡಗಿದ್ದ ಸೋ ಕಾಲ್ಡ್ ಜಾತ್ಯತೀತ ನಾಯಕರು ಎಚ್ಚೆತ್ತುಕೊಂಡಿದ್ದು, ತಮ್ಮ ಅಸಲಿ ರಾಜಕಾರಣವನ್ನು ಪ್ರದರ್ಶಿಸುತ್ತಿದ್ದಾರೆ. ಜಾತಿ ಜನಗಣತಿ ಸಮೀಕ್ಷೆಗೆ ನಮ್ಮದು ಯಾವುದೇ ವಿರೋಧವಿಲ್ಲ, ರಾಹುಲ್ ಗಾಂಧಿ ಹೇಳಿದಂತೆ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಎದೆ ಸೆಟೆದು ಹೇಳುತ್ತಿದ್ದ ಕಾಂಗ್ರೆಸ್ ನಾಯಕರು  ಈಗ ಜಾರಿ ಮಾಡಲು ಅಡ್ಡಗಾಲು ಹಾಕಿ ನಿಂತಿದ್ದಾರೆ. ಇತ್ತ ಸಿದ್ದರಾಮಯ್ಯ ಪಾಳಯ ವರದಿಯನ್ನು ಜಾರಿ ಮಾಡಿಯೇ ತೀರಬೇಕೆಂದು ಹವಣಿಸುತ್ತಿದ್ದರೆ ಇನ್ನೊಂದು ಕಡೆ ಅದೇ ಪಕ್ಷದ ಡಿ.ಕೆ.ಶಿವಕುಮಾರ್ ಸೇರಿದಂತೆ ವಿರೋಧ ಪಕ್ಷದ ಅನೇಕ ಒಕ್ಕಲಿಗ, ಲಿಂಗಾಯತ ಸಮುದಾಯದ ನಾಯಕರು ಅದರ ವಿರುದ್ಧ ಒಳಗೊಳಗೆ ಕತ್ತಿ ಮಸೆಯುತ್ತಿದ್ದಾರೆ. ಹಾಗಾದರೆ ಪ್ರಬಲ ಸಮುದಾಯ ಎನಿಸಿಕೊಂಡಿರುವ ಈ ಸಮುದಾಯಗಳು ವರದಿಗೆ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ?. ಸಂವಿಧಾನದ ಆಶಯದಂತೆ ನಡೆಯುತ್ತಿದ್ದೇವೆ ಎನ್ನುವವರು ಹೀಗೇಕೆ ಬದಲಾದರು?.

ಕಾಂಗ್ರೆಸ್ ಹೈ ಕಮಾಂಡ್ ರಾಜ್ಯ ಅಧಿಕಾರದ ಗದ್ದುಗೆಗೆ ಸಿದ್ದರಾಮಯ್ಯನವರನ್ನು ಕೂರಿಸಿದ ಕ್ಷಣದಿಂದ ಇಂತಹ ಹಲವಾರು ಪ್ರಸಂಗಗಳು ನಡೆಯುತ್ತಿವೆ. ಎಲ್ಲರೂ ಒಟ್ಟಾಗಿ ಸಾಗಬೇಕೆಂಬ ಸಂದೇಶ ಹೈ ಕಮಾಂಡ್‌ನಿಂದ ರವಾನೆಯಾಗಿದ್ದರೂ ವಿರೋಧದ ಹೊಗೆಯಾಡುವುದು ಇನ್ನೂ ನಿಂತಿಲ್ಲ. ಸಚಿವ ಸಂಪುಟ ಪುನರ್ ರಚನೆ, ಸಿಎಂ ಬದಲಾವಣೆ, ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸ್ವಪಕ್ಷದವರೆ ಹೇಳುತ್ತಾ ವಿರೋಧ ಪಕ್ಷಗಳಿಗೆ ಆಹಾರ ಒದಗಿಸುತ್ತಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ಕತ್ತಿ ಮಸೆಯುತ್ತಿರುವವರಿಗೆ ಇದು ಇನ್ನಷ್ಟು ಸಾಣೆ ಹಿಡಿದಂತೆ ಆಗುತ್ತಿದೆ. ಚುನಾವಣೆಯ ಪ್ರಣಾಳಿಕೆಯಲ್ಲಿರುವ ಆಶ್ವಾಸನೆಯನ್ನು ಈಡೇರಿಸಲು ಪಕ್ಷದ ಲಿಂಗಾಯತರ- ಒಕ್ಕಲಿಗರ ನಾಯಕರ ವಿರೋಧವೇಕೆ?. ತಮ್ಮ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭಯವೇ?. ಇದನ್ನು ವಿರೋಧಿಸುತ್ತಲೆ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕುವ ಪ್ರಯತ್ನವೇ?. ವರದಿ ಜಾರಿಯಿಂದ ಹಿಂದುಳಿದ ಸಮುದಾಯದ  ಪ್ರಬಲ ನಾಯಕರಾಗಿ ಸಿದ್ದರಾಮಯ್ಯನವರು ಇನ್ನಷ್ಟು ಪ್ರಸಿದ್ಧರಾಗುತ್ತಾರೆ ಎಂಬ ಭಯವೇ?. ಇಲ್ಲ, ದೀರ್ಘಕಾಲದ ಅಧಿಕಾರ ಕೈ ತಪ್ಪಿ ಹೋಗುತ್ತದೆ ಎಂಬ ಆಂತಕವೇ?

ಪ್ರಬಲ ಜಾತಿ ಮತ್ತು ಅಧಿಕಾರ:

ಲಿಂಗಾಯತ, ಒಕ್ಕಲಿಗರು ಹಾಗೂ ಬ್ರಾಹ್ಮಣರು ಯಾವುದೇ ಪಕ್ಷ, ಸಿದ್ಧಾಂತ ಇರಲಿ ಸಮುದಾಯದ ಅಧಿಕಾರ ಕ್ಷೀಣಿಸುತ್ತಿದೆ ಎಂದ ಕೂಡಲೆ ಎಲ್ಲಾ ಪಕ್ಷ ಭೇದ ಮರೆತು ಒಟ್ಟಾಗುತ್ತಾರೆ. ಸದಾ ಅಧಿಕಾರದ ಹಪಾಹಪಿಯಲ್ಲಿರುವ ಈ ಸಮುದಾಯ ಎಲ್ಲಾ ವಲಯದಲ್ಲಿ ತನ್ನ ಇರವನ್ನು ಕಾಯ್ದುಕೊಂಡಿದೆ, ಕಾಯ್ದುಕೊಳ್ಳುತ್ತಲೂ ಇದೆ. ಅದರಂತೆಯೇ 2019 ರ ಚುನಾವಣೆ ಸಮೀಪದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನ ಒಕ್ಕಲಿಗ ನಾಯಕರೆಲ್ಲಾ ಸೇರಿ ಶ್ರೀ ನಿರ್ಮಲಾನಂದ ಸ್ವಾಮಿ ಅಧ್ಯಕ್ಷತೆಯಲ್ಲಿ  ಬೆಂಗಳೂರಿನಲ್ಲಿ ಒಕ್ಕಲಿಗ ಸಮಾವೇಶ  ನಡೆಸಿದ್ದು, ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ ಒಕ್ಕಲಿಗ ನಾಯಕರೆ ಈ ರಾಜ್ಯ ಮುಖ್ಯಮಂತ್ರಿಯಾಗಬೇಕೆಂದು ಅಲ್ಲಿ ಕೂಗಿ ಹೇಳಿದ್ದರು. ಲಿಂಗಾಯತರು ಕೂಡ ಯಾವುದೇ ಪಕ್ಷ ಅಧಿಕಾರ ಹಿಡಿದರು ಲಿಂಗಾಯತರೇ ಮುಖ್ಯಮಂತ್ರಿಯಾಗಬೇಕೆಂದು ಮಠ ಮಾನ್ಯಗಳು ಮುಖ್ಯವಾಹಿನಿಯಲ್ಲಿ ಆಹವಾಲು ನೀಡಿದ್ದನ್ನು ಗಮನಿಸಬಹುದು.

ಇನ್ನೂ ಇತಿಹಾಸ ನೋಡುವುದಾರೆ 1947 ರಲ್ಲಿ ಮೈಸೂರು ಸಂಸ್ಥಾನದ ದಿವಾನರಿಂದ  ಹಿಡಿದು ಇಲ್ಲಿಯವರೆಗೂ ಒಟ್ಟು 22 ಮುಖ್ಯಮಂತ್ರಿಗಳನ್ನು ಈ ರಾಜ್ಯ ಕಂಡಿದೆ. ಇದರಲ್ಲಿ ಹೆಚ್ಚಾಗಿ ಒಕ್ಕಲಿಗರು(5), ಲಿಂಗಾಯತರು(14) ಹಾಗೂ ಬ್ರಾಹ್ಮಣರು(2) ಗಳು ಮುಖ್ಯಮಂತ್ರಿಗಳಾಗಿ ಈ ರಾಜ್ಯವನ್ನು ಆಳಿದ್ದಾರೆ. ಆದರೂ ಇನ್ನೂ ದಾಹ ತೀರದೆ ಅಧಿಕಾರದ ಮನ್ನಣೆ ಬಯಸುತ್ತಿದ್ದಾರೆ. ಶೋಷಿತ ಹಾಗೂ ಹಿಂದುಳಿದ ವರ್ಗಗಳು ಅಧಿಕಾರದ ಗದ್ದುಗೆ ಏರುವುದು, ಅವರ ಅಡಿಯಲ್ಲಿ ಕಾರ್ಯ ನಿರ್ವಹಿಸುವುದು ಅವರಿಗೆ ಸಹಿಸಲಾರದ್ದು.

ಸಿದ್ದರಾಮಯ್ಯ ಮತ್ತು ಪ್ರಬಲ ಜಾತಿ

ಹಿಂದುಳಿದ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯ 2 ನೇ ಬಾರಿ ರಾಜ್ಯ ಮುಖ್ಯಮಂತ್ರಿ ಆದಾಗಿನಿಂದ ಪ್ರಬಲ ಸಮುದಾಯಗಳು ಒಂದಲ್ಲ ಒಂದು ರೀತಿಯಲ್ಲಿ ಪಕ್ಷದ ಒಳಗೂ ಹೊರಗೂ ಅವರ ಮೇಲೆ ಎರಗುತ್ತಿದ್ದಾರೆ. ಸಿದ್ದರಾಮಯ್ಯನವರ ಜನಪ್ರಿಯತೆ ಹಾಗೂ ಜನಪರ ಯೋಜನೆಗಳ ಪ್ರಭಾವ ಕಂಡಿದ್ದ ಕಾಂಗ್ರೆಸ್ ಹೈ ಕಮಾಂಡ್ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡುವುದಾಗಿ ನಿರ್ಧರಿಸಿದ ಕೂಡಲೆ ಕಾಂಗ್ರೆಸ್‌ನ ಹುಲ್ಲಿನೊಳಗೆ ಮಲಗಿದ್ದ ಜಾತಿಯ ವಿಷ ಸರ್ಪಗಳು ಹೆಡೆ ಎತ್ತಿ ಬುಸುಗುಡಲು ಶುರುಮಾಡಿದ್ದವು. ಇದನ್ನು ಇಡೀ ರಾಜ್ಯವು ಕುತೂಹಲದಿಂದ ವೀಕ್ಷಿಸಿದೆ. ಆದರೂ ಒಬ್ಬ ಅಹಿಂದ ನಾಯಕ 5 ವರ್ಷಗಳ ಕಾಲ ಯಶಸ್ವಿಯಾಗಿ ರಾಜ್ಯವನ್ನು ಮುನ್ನಡೆಸಿ ಜನಪರ ಕಾರ್ಯಕ್ರಮವನ್ನು ರೂಪಿಸಿದರೂ ತನ್ನ ಮತ್ತೆ ಅಧಿಕಾರವನ್ನು ಪಡೆಯಲು ಹರಸಾಹಸ ಪಡಲೇ ಬೇಕಾಯಿತು. ಅದರ ಮುಂದುವರೆದ ಭಾಗದಂತೆ ಈಗ ಪಕ್ಷದೊಳಗೆ ಸಿದ್ದರಾಮಯ್ಯನವರ ಜನಪರ ಆಲೋಚನೆಗಳಿಗೆ ಮೂಗು ತೂರಿಸುತ್ತಿದ್ದಾರೆ. ಅದರಂತೆ ಪ್ರತಿ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರಿಂದ ಸಿದ್ದರಾಮಯ್ಯ ಬಣ ಮತ್ತು ಡಿ.ಕೆ.ಶಿವಕುಮಾರ್ ಬಣದ ನಡುವೆ ನಡೆಯುತ್ತಿರುವ ಸಂಧಾನವೇ ಸಾಕ್ಷಿಯಾಗಿದೆ. ಸಿದ್ದರಾಮಯ್ಯ ಬಣದ ರಾಜಣ್ಣ, ಪರಮೇಶ್ವರ್, ಸತೀಶ್ ಜಾರಿಕಿಹೊಳಿ ದಲಿತ ಸಮಾವೇಶಕ್ಕೆ ಮುಂದಾದಾಗ ಅದಕ್ಕೆ ಕೊಕ್ಕೆ ಹಾಕುವುದು, ಇತ್ತ ಬಲಪಂಥೀಯ ಹಾಗೂ ಬಿಜೆಪಿ ಹಿಂಬಾಲಕನಾದ ಸದ್ಗುರುವಿನ ಈಶ ಫೌಂಡೇಶನ್ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಅತಿಥಿಯಾಗಿ ಭಾಗವಹಿಸುವುದು, ಒಕ್ಕಲಿಗರು ಲಿಂಗಾಯತರು ಸೇರಿ ಸರ್ಕಾರ ಬೀಳುಸುತ್ತೇವೆ ಎಂದು ಹೇಳಿಕೆ ನೀಡುವುದು, ಇದಷ್ಟೇ ಅಲ್ಲದೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ  ಪಡೆದ ಸಂತಸದಲ್ಲಿ ರಾಜಣ್ಣ ಹಾಸನದಲ್ಲಿ ಸಿದ್ದರಾಮಯ್ಯ ಹೆಸರಿನಲ್ಲಿ ಸಮಾವೇಶ ಕೈಗೊಂಡಾಗ ಡಿ.ಕೆ.ಶಿವಕುಮಾರ್ ಹೈ ಕಮಾಂಡ್‌ನ ಕಿವಿಚುಚ್ಚಿ ಕಾಂಗ್ರೆಸ್ ಸ್ವಾಭಿಮಾನ ಸಮಾವೇಶವೆಂದು ಬದಲಾಯಿಸಿದ್ದು ಎಲ್ಲವೂ ಜಾತಿಯ ಪರಾಕಾಷ್ಠೆಯನ್ನು ಮೆರೆಸುತ್ತಿದೆ.

ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ:

ಕಾಂಗ್ರೆಸ್‌ಗೆ ಸಿದ್ದರಾಮಯ್ಯರ ಹೊರತು ಪರ್ಯಾಯ ನಾಯಕನನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ, ಸೋನಿಯಾಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಗೆ ಆಪ್ತನೂ ಆಗಿರಬಹುದು. ಆದರೆ ವೈಚಾರಿಕವಾಗಿ ಹಾಗೂ ಸೈದ್ಧಾಂತಿಕವಾಗಿ ಗಟ್ಟಿಯಾಗಿರುವ ಸಿದ್ದರಾಮಯ್ಯನವರೆಂದರೆ  ರಾಹುಲ್ ಗಾಂಧಿಗೂ ಇಷ್ಟ.  ರಾಹುಲ್ ಗಾಂಧಿಯ ದೂರದೃಷ್ಟಿಯುಳ್ಳ ಕಾಂಗ್ರೆಸ್ ಕಟ್ಟಲು ರಾಜ್ಯದಲ್ಲಿ ಸಿದ್ದರಾಮಯ್ಯ ಅನಿವಾರ್ಯವಾಗಿದ್ದಾರೆ ಎಂದರೆ ತಪ್ಪಲ್ಲ. ಇನ್ನೂ ಕಾಂಗ್ರೆಸ್‌ಗೆ ಹೇಗೆ ಸಿದ್ದರಾಮಯ್ಯ ಅನಿವಾರ್ಯವೋ, ಸಿದ್ದರಾಮಯ್ಯನವರು ಕೂಡ ಕಾಂಗ್ರೆಸ್ ನಲ್ಲಿ ತನ್ನ ರಾಜಕೀಯದ ಬೆಳವಣಿಗೆಗೆ ಹೆದ್ದಾರಿ ಮಾಡಿಕೊಂಡಿದ್ದಾರೆ. ಯಾಕೆಂದರೆ ತನ್ನ ನಿಲುವು, ಬದ್ಧತೆಯನ್ನು ಸಾರ್ವಜನಿಕರ ಮುಂದೆ ತೆಗೆದುಕೊಂಡು ಹೋಗಲು ಇದಕ್ಕಿಂತ ಉತ್ತಮ ವೇದಿಕೆ ಇಲ್ಲವೆಂಬುದನ್ನು ಅರಿತಿದ್ದಾರೆ. ಅದರಂತೆಯೇ ಈಗ ಅನೇಕ ವಿರೋಧಗಳ ನಡುವೆಯೂ ಒಳಮೀಸಲಾತಿ ಹಾಗೂ ಜಾತಿ ಜನಗಣತಿಗೆ ಜಾರಿಗೆ ಹರಸಾಹಸ ಪಡುತ್ತಿದ್ದಾರೆ. ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿರುವ ಸಿದ್ದರಾಮಯ್ಯನವರು ತನ್ನ ಅವಧಿ ಮುಗಿಯುವುದೊರೊಳಗೆ ಒಳಮೀಸಲಾತಿ ಹಾಗೂ ಜಾತಿ ಜನಗಣತಿಯನ್ನು ಜಾರಿ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಈ ಉದ್ದೇಶದ ಹಿಂದೆ ರಾಜಕೀಯದಿಂದ ದೂರ ಉಳಿದರೂ ರಾಜಕಾರಣಕ್ಕಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ  ಪಂಗಡ ಹಾಗೂ ಅಲ್ಪಸಂಖ್ಯಾತರ ಮತ ಕ್ರೋಢೀಕರಣದ ಬಲವನ್ನು ಪಡೆಯುವ ಲೆಕ್ಕಾಚಾರ ನಡೆಸಲಾಗಿದೆ. ಈ ಮೂಲಕ ರಾಜಕಾರಣದಲ್ಲಿ ತನ್ನ ಛಾಪನ್ನು ಕಾಯ್ದುಕೊಳ್ಳಲು ಬಲವಾದ ಮುದ್ರೆ ಒತ್ತುವ ಚಿಂತನೆಯಲ್ಲಿದ್ದಾರೆ. ಆದರೆ ಕಾಂಗ್ರೆಸ್‌ನ ಜಾತಿವಾದಿಗಳು ಅದನ್ನು ದಮನ ಮಾಡಲು ಆಗಾಗ ಪ್ರಯತ್ನಿಸುತ್ತಿದ್ದಾರೆ.

ಒಟ್ಟಾರೆ ಲಿಂಗಾಯತರು, ಒಕ್ಕಲಿಗರು ಕಾಂಗ್ರೆಸ್‌ನಲ್ಲಿ ಜಾತಿ ಜನಗಣತಿ ವರದಿಯನ್ನು ವಿರೋಧಿಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡರೂ ಒಳಗೊಳಗೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬಾರದೆಂಬ ಅಸೂಯೆ, ಸಿದ್ದರಾಮಯ್ಯ ಅಹಿಂದ ಮತಗಳ ನಾಯಕನಾಗಿ ಶಾಶ್ವತವಾಗಿ ಉಳಿಯುತ್ತಾರೆ ಎಂಬ ಲೆಕ್ಕಾಚಾರಗಳಿವೆ. ಈ ಉದ್ದೇಶದಿಂದ ಕಾಂಗ್ರೆಸ್‌ನೊಳಗಿನ ಜಾತಿಕೋರರು ಮೆಲ್ಲಗೆ ಆಚೆ ಬಂದಿದ್ದಾರೆ. ಏಳು ದಶಕಗಳು ಈ ರಾಜ್ಯವನ್ನು ಒಕ್ಕಲಿಗ, ಲಿಂಗಾಯತ ಹಾಗೂ ಬ್ರಾಹ್ಮಣರು ಆಳ್ವಿಕೆ ಮಾಡಿದರು. ಈಗಲಾದರೂ ಶೋಷಿತ, ಹಿಂದುಳಿದ ಸಮುದಾಯಗಳಿಗೆ ತಮ್ಮ ಸ್ಥಾನವನ್ನು ತ್ಯಾಗ ಮಾಡುವ ಔದಾರ್ಯ ಇಲ್ಲವಾಗಿದೆ.  ಕಡಿಮೆ ಜನಸಂಖ್ಯೆ ಹೊಂದಿದ್ದರೂ ಇಷ್ಟು  ವರ್ಷ ರಾಜ್ಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲಾಗಿತ್ತು. ಈಗ ಅದು ಕೈ ಜಾರಿ ಹೋಗುತ್ತದೆ ಎಂಬ ಆತಂಕದಲ್ಲಿ ಈ ಸಮುದಾಯಗಳು ಬೀದಿಗಿಳಿಯಲು ಸಜ್ಜಾಗಿವೆ. ಆದರೆ ಕಾಂಗ್ರೆಸ್  ಮಾತ್ರ ಇದ್ಯಾವುದಕ್ಕೂ ಸೊಪ್ಪು ಹಾಕದೆ ಶೋಷಿತ ಹಾಗೂ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಕೊಡಿಸಲು ಬದ್ಧವಾಗಬೇಕು. ಆಗ ಮಾತ್ರ ಅವರು ಪ್ರತಿ ಬಾರಿ ಸಂವಿಧಾನವನ್ನು ಕೈಯಲ್ಲಿ ಹಿಡಿದಿದ್ದಕ್ಕೆ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಶತ ಶತಮಾನಗಳಿಂದ  ಈ ದೇಶದ ಕೋಮುವಾದಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಕಾರಣವೆಂಬ ಹಣೆಪಟ್ಟಿ ಕಟ್ಟಿದಂತೆ, ಶೋಷಿತ ಸಮುದಾಯಗಳ ಸಾಮಾಜಿಕ ಅನ್ಯಾಯದ ಕಥೆಗೆ ನಿಮ್ಮನ್ನು ನಾಯಕರನ್ನಾಗಿ ಮಾಡಿ ಬಿಡುತ್ತಾರೆ.

ಆಕಾಶ್.ಆರ್.ಎಸ್

ಪತ್ರಕರ್ತರು

ಇದನ್ನೂ ಓದಿ- ಜಾತಿವಾದಿಗಳ ಹೆಗಲೇರಿದ ಜಾತಿಗಣತಿ ಭೂತ

More articles

Latest article