ಜಾತಿ ಜನಗಣತಿ: ಶಿವಮೊಗ್ಗ ಜಿಲ್ಲೆಯ ಶಾಸಕ, ಮಂತ್ರಿಗಳ ನಿಜವಾದ ಜಾತಿಯ ಹೆಸರು ಪಟ್ಟಿಯಲ್ಲಿ ಇದೆಯೆ?

Most read

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಮತ್ತೊಂದು ಜಾತಿ ಜನಗಣತಿ ಅರ್ಥಾತ್ ಸಾಮಾಜಿಕ ಹಾಗೂ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತಯಾರಿಯಾಗುತ್ತಿದೆ. ಬರುವ ಸೆಪ್ಟೆಂಬರ್ ತಿಂಗಳಿಂದ ಈ ಸಮೀಕ್ಷೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಮಂತ್ರಿ ಶಿವರಾಜ ತಂಗಡಗಿ ಹೇಳಿದ್ದಾರೆ. ಜಾತಿ ಜನಗಣತಿ ನಡೆಸುವಾಗ ಹಿಂದುಳಿದ ವರ್ಗಗಳ ಇಲಾಖೆಯು ಸಿದ್ಧಪಡಿಸಿಕೊಂಡ ಜಾತಿಗಳ ಪಟ್ಟಿಯನ್ನು ಗಣತಿದಾರರು ಮನೆಮನೆಗೆ ಕೊಂಡೊಯ್ದು ಕುಟುಂಬಗಳ ಜಾತಿ, ಉಪಜಾತಿ, ಸಾಮಾಜಿಕ ಮತ್ತು ಶೈಕ್ಷಣಿಕ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ.

ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಮಂತ್ರಿ ಮಧು ಬಂಗಾರಪ್ಪ, ಶಾಸಕರಾದ ಗೋಪಾಲ ಕೃಷ್ಣ ಬೇಳೂರು, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಮುಂತಾದ ಧುರೀಣರು ಪ್ರತಿನಿಧಿಸುವ ಜಾತಿಯ ಹೆಸರೇ ಜಾತಿ ಪಟ್ಟಿಯಲ್ಲಿ ಸರಿಯಾಗಿ ಇಲ್ಲ ಎಂಬುದು ಒಂದು ವಿಪರ್ಯಾಸವಾದರೂ ವಾಸ್ತವ.

ಜಾತಿ ಗಣತಿ 2015ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಅವರ ನೇತೃತ್ವದಲ್ಲಿ ನಡೆದಿತ್ತು. ಈ ಜನಗಣತಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿರುವ ಅಚಾತುರ್ಯ ಬಹಳಷ್ಟು ಜನರ ಗಮನಕ್ಕೇ ಬಂದಿಲ್ಲ. ಜಿಲ್ಲೆಯ ಸಾಗರ, ಸೊರಬ ಮತ್ತು ಹೊಸನಗರ ಮತ್ತು ಶಿಕಾರಿಪುರ ತಾಲ್ಲೂಕುಗಳು ಹಾಗೂ ನೆರೆಯ ಉತ್ತರ ಕನ್ನಡ ಜಿಲ್ಲೆಯ ತಾಲ್ಲೂಕುಗಳಾದ ಸಿದ್ದಾಪುರ ಮತ್ತು ಶಿರಸಿಗಳಲ್ಲಿ ಇರುವ ಹಿಂದುಳಿದ ಪ್ರಮುಖ ಸಮುದಾಯವೆಂದರೆ ʼದೀವರುʼ ಸಮುದಾಯ. ಮೇಲೆ ಹೇಳಿದ ರಾಜಕೀಯ ನಾಯಕರೆಲ್ಲರೂ ಈ ʼದೀವರುʼ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಆದರೆ ಕೆಲವಾರು ದಶಕಗಳ ಹಿಂದೆ ಈ ದೀವರು ಸಮುದಾಯದ ಮುಖಂಡರು ತೆಲುಗು ಮಾತೃಭಾಷೆಯ ʼಈಡಿಗʼ ಜಾತಿಯೊಂದಿಗೆ ರಾಜಕೀಯವಾಗಿ ಗುರುತಿಸಿಕೊಂಡ ಪರಿಣಾಮವಾಗಿ ಇಂದು ಜಾತಿಜನಗಣತಿಯಲ್ಲಿ ʼದೀವರುʼ ಸಂಪೂರ್ಣವಾಗಿ ಕಣ್ಮರೆಯಾಗುವ ಸ್ಥಿತಿ ಬಂದೊದಗಿದೆ. ಇದಕ್ಕೆ ಕಾರಣ ಜಾತಿ ಪಟ್ಟಿಯಲ್ಲಿ ʼದೀವರುʼ ಎಂಬ ಹೆಸರನ್ನೇ ಸರಿಯಾಗಿ ನಮೂದಿಸದಿರುವುದು. ಬದಲಿಗೆ ಅದರಲ್ಲಿ ಇರುವ ಹೆಸರುಗಳು ಎಂದರೆ
ದೀವರ ಮಕ್ಕಳು (Deevara Makkalu)
ದೇವರ ಮಕ್ಕಳು (Devara Makkalu)
ದೇವರ್ (Devar)
ಎಂಬಂತ ಹೆಸರುಗಳನ್ನು ಸೇರಿಸಲಾಗಿದೆ. ಕೇಂದ್ರ ಸರ್ಕಾರದ ಜಾತಿ ಪಟ್ಟಿಯಲ್ಲಿ DEEVAR ಎಂದು ನಮೂದಿಸಿದೆ. ಈ ಕಾರಣದಿಂದ ಸಮುದಾಯದ ಸದಸ್ಯರಲ್ಲಿ ಗೊಂದಲ ಮೂಡಿದೆ. ತಾವು ತಮ್ಮನ್ನು ʼದೀವರುʼ ಎಂದೇ ಕರೆದುಕೊಳ್ಳುತ್ತಾ ಬಂದಿರುವಾಗ ಈಗ ಈ ರೀತಿಯಲ್ಲಿ ತಪ್ಪಾದ ಹೆಸರುಗಳು ಇರುವುದರಿಂದ ಜಾತಿ ಗಣತಿಯಲ್ಲಿ ತಮಗೆ ಅನ್ಯಾಯವಾಗುತ್ತದೆ ಎಂಬ ಅಭಿಪ್ರಾಯ ಸಮುದಾಯದಲ್ಲಿ ಮೂಡಿದೆ. ಈಗ ನಡೆಯುತ್ತಿರುವ ಜಾತಿ ಜನಗಣತಿ ದೀವರು ಸಮುದಾಯಕ್ಕೆ ಕುತ್ತು ತರುತ್ತದೆ ಎಂಬ ಭಾವನೆ ಬಲವಾಗುತ್ತಿದೆ. ಆದರೆ ಈ ಬಗ್ಗೆ ಇದೇ ದೀವರು ಸಮುದಾಯದಲ್ಲಿ ಹುಟ್ಟಿ ಎಲ್ಲಾ ಅವಕಾಶಗಳನ್ನು ಪಡೆದುಕೊಂಡಿರುವ ತಮ್ಮ ನಾಯಕರೇಕೆ ಮೌನ ವಹಿಸಿದ್ದಾರೆ ಎಂಬುದು ಅರ್ಥವಾಗದ ಸಂಗತಿ.

ಒಂದು ಪ್ರಮುಖ ಹಿಂದುಳಿದ ಜಾತಿಯ ಹೆಸರೇ ಸರಿಯಾಗಿ ದಾಖಲಾಗದ ಈ ಸಮಸ್ಯೆಯ ಕುರಿತು ಹಿಂದುಳಿದ ವರ್ಗಗಳ ಇಲಾಖೆಯಾಗಲೀ, ಅದರಲ್ಲಿ ಸೇರಿರುವ ಈ ಸಮುದಾಯಗಳ ಸದಸ್ಯರಾಗಲೀ ಸೂಕ್ತವಾಗಿ ಗಮನ ಹರಿಸಿಲ್ಲದಿರುವುದು ವಿಪರ್ಯಾಸ.

ದಕ್ಷಿಣ ಕನ್ನಡದ ಒಂದು ಹಿಂದುಳಿದ ಸಮುದಾಯವಾದ ʼಬಿಲ್ಲವರುʼ, ಉತ್ತರ ಕನ್ನಡ ಜಿಲ್ಲೆಯ ʼನಾಮಧಾರಿ ನಾಯಕರುʼ ಸಹ ರಾಜಕೀಯವಾಗಿ ʼಈಡಿಗʼರೊಂದಿಗೆ ಗುರುತಿಸಿಕೊಂಡಿದ್ದರೂ ಜಾತಿ ಗಣತಿಯಲ್ಲಿ ಬಿಲ್ಲವರು, ನಾಮಧಾರಿ ನಾಯಕರು ಎಂದೇ ಗುರುತಿಸಿಕೊಂಡಿದ್ದಾರೆ. ಆದರೆ, ಶಿವಮೊಗ್ಗ ಜಿಲ್ಲೆಯ ʼದೀವರುʼ ಸಮುದಾಯ ಮಾತ್ರ ತಮ್ಮ ಮೂಲ ಗುರುತು, ಚಹರೆಯನ್ನೇ ಕೈಬಿಡುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.

ಕುಲಶಾಸ್ತ್ರೀಯ ದಾಖಲೆಗಳು, ಅಧ್ಯಯನಗಳು ಹಾಗೂ ಐತಿಹಾಸಿಕ ಸಂಶೋಧನೆಗಳು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಈ ವಿಶಿಷ್ಟ ಸಂಸ್ಕೃತಿ ಪರಂಪರೆಯ ಸಮುದಾಯವನ್ನು ʼದೀವರುʼ ಜಾತಿ ಎಂದೇ ದಾಖಲಿಸಿವೆ. ಕರ್ನಾಟಕದ ಸರ್ಕಾರ ವಾರ್ತಾ ಇಲಾಖೆಯು 25 ವರ್ಷಗಳ ಹಿಂದೆಯೇ ಈ ಸಮುದಾಯದ ಕುರಿತು ಹೊರತಂದ ಸಾಕ್ಷ್ಯಚಿತ್ರದಲ್ಲಿ ʼದೀವರುʼ ಬುಡಕಟ್ಟು ಎಂದೇ ದಾಖಲಾಗಿದೆ. 11ನೇ ಶತಮಾನದ ಶಾಸನಗಳಲ್ಲಿ ಸಹ ದೀವರುʼ ಎಂಬ ಹೆಸರು ದಾಖಲಾಗಿದೆ. ಆದರೆ ಸರ್ಕಾರದ ಮೀಸಲಾತಿ ಪಟ್ಟಿಯಲ್ಲಿ ʼದೀವರುʼ ಎಂಬ ಹೆಸರು ಇಲ್ಲವಾಗಿದೆ. ಈ ಕಾರಣದಿಂದಾಗಿ ಈ ಭಾಗದಲ್ಲಿ ಜಾತಿ ಪ್ರಮಾಣ ಪತ್ರ ಪಡೆಯುವುದೇ ಈ ಸಮುದಾಯದ ಜನರಿಗೆ ತ್ರಾಸದಾಯಕವಾಗಿದೆ.

ಜಾತಿ ಗಣತಿ ನಡೆದ ಸಂದರ್ಭದಲ್ಲಿ ಸಹ ತಮ್ಮ ಜಾತಿಯನ್ನು ಸರಿಯಾಗಿ ಬರೆಸದ ಪರಿಣಾಮವಾಗಿ 4 ಲಕ್ಷಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿರುವ ʼದೀವರುʼ ಕಳೆದ ಜಾತಿ ಜನಗಣತಿಯಲ್ಲಿ ಕೇವಲ 62 ಸಾವಿರ ಎಂದು ದಾಖಲಾಗಿದ್ದನ್ನು ಗಮನಿಸಬಹುದು.

ಮಾಜಿ ಮುಖ್ಯಮಂತ್ರಿಯಾಗಿದ್ದ, ಎಸ್ ಬಂಗಾರಪ್ಪ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಹಾಲಿ ಮಂತ್ರಿ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯಕ, ಮಾಜಿ ಶಾಸಕ ಹರತಾಳು ಹಾಲಪ್ಪ, ಸ್ವಾಮಿರಾವ್, ಧರ್ಮಪ್ಪ ಹೀಗೇ ರಾಜಕೀಯ ಘಟಾನುಘಟಿಗಳನ್ನು ʼದೀವರುʼ ಸಮುದಾಯ ಕೊಟ್ಟಿದ್ದರೂ ಇವರೆಲ್ಲರೂ ಪ್ರತಿನಿಧಿಸುವ ಜಾತಿಯ ಹೆಸರೇ ಸರಿಯಾಗಿ ʼಜಾತಿ ಪಟ್ಟಿಯಲ್ಲಿ ಇಲ್ಲದೇ ಹೋಗಿರುವುದು ವಿರ್ಯಾಸವಲ್ಲವೆ?

ಈಗ ಈ ಭಾಗದ ʼದೀವರುʼ ತಮ್ಮನ್ನು ಈಡಿಗ ಎಂದು ಬರೆಸುವುದು ಅಭ್ಯಾಸವಾಗಿ ಹೋಗಿದೆ. ಇದರಿಂದಾಗಿ ದೊಡ್ಡ ಇತಿಹಾಸ, ಮತ್ತು ವಿಶಿಷ್ಟ ಸಂಸ್ಕೃತಿ ಹೊಂದಿರುವ ʼದೀವರುʼ ಹೆಸರೇ ನಶಿಸಿ ಹೋಗುವ ಸನ್ನಿವೇಶ ಎದುರಾಗಿದೆ. ಈಗ ಈ ಸಮುದಾಯದ ರಾಜಕೀಯ ಮುಖಂಡರು ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.

More articles

Latest article