ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಪ್ರತಿದಿನ ಸುಮಾರು 2 ಲಕ್ಷ ಮನೆಗಳ ಸಮೀಕ್ಷೆ ನಡೆಯುತ್ತಿದ್ದು, ಇಂದಿನಿಂದ ದಿನವೊಂದಕ್ಕೆ 3 ಲಕ್ಷ ಮನೆಗಳ ಸಮೀಕ್ಷೆ ನಡೆಸುವ ಗುರಿ ಹೊಂದಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಜಾತಿ ಗಣತಿ ಕುರಿತು ಸುದ್ದಿಗೋಷ್ಠಿಯಲ್ಲಿ ವಿವಿರಗಳನ್ನು ಹಂಚಿಕೊಂಡ ಅವರು, ಸಮೀಕ್ಷೆಗೆ ಮತದಾರರು ಗುರುತಿನ ಚೀಟಿ ತೋರಿಸುವ ಅಗತ್ಯವಿಲ್ಲ ಆದರೆ, ಆಧಾರ್ ಗುರುತಿನ ಚೀಟಿಯನ್ನು ತೋರಿಸಬೇಕು. ಮುಖ್ಯಮಂತ್ರಿಗಳ ಸೂಚನೆಯಂತೆ ಸಮೀಕ್ಷೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸುವ ವಿಶ್ವಾಸ ಇದ್ದು, ದೈನಂದಿನ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ. ನಗರದಲ್ಲಿ ಸದ್ಯ ಪ್ರತಿ ದಿನ ಸುಮಾರು 2 ಲಕ್ಷ ಮನೆಗಳ ಸಮೀಕ್ಷೆ ಇಂದಿನಿಂದ ಸುಮಾರು 3 ಲಕ್ಷ ಮನೆ ಗಳ ಸರ್ವೇ ನಡೆಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವ ಗಣತಿದಾರರಿಗೆ ದಿನಕ್ಕೆ 200 ರೂ. ಪ್ರಯಾಣ ಭತ್ಯೆ ನೀಡಲಾಗುತ್ತಿದೆ. ಸಮೀಕ್ಷೆಗೆ ನಿಯೋಜನೆಗೊಂಡವರ ಪೈಕಿ ಆರೋಗ್ಯ ಸಮಸ್ಯೆ, ಬಾಣಂತಿಯರು ಸೇರಿದಂತೆ ವಿವಿಧ ಕಾರಣಗಳಿಗಾಗಿ ಸುಮಾರು 5,500 ಮಂದಿಗೆ ವಿನಾಯಿತಿ ನೀಡಲಾಗಿದೆ. ತಪ್ಪು ಮಾಹಿತಿ ನೀಡಿ ಸಮೀಕ್ಷೆ ಕಾರ್ಯದಿಂದ ತಪ್ಪಿಸಿಕೊಳ್ಳುವವರಿಗೆ ನೋಟಿಸ್ ನೀಡಿ ಇಲಾಖಾ ವಿಚಾರಣೆಗೆ ಒಳಪಡಿಸಲಾಗುವುದು. ಹಾಗೆಯೇ ಸಮೀಕ್ಷೆಯಲ್ಲಿ ಭಾಗವಹಿಸದ ಸಿಬ್ಬಂದಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಬೆಂಗಳೂರಿನಲ್ಲಿ 18 ಸಾವಿರಕ್ಕೂ ಅಧಿಕ ಸಿಬ್ಬಂದಿ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಗರದಲ್ಲಿ ಸುಮಾರು 46 ಲಕ್ಷ ಮನೆಗಳಿಗೆ ಯುಎಚ್‌ಐಡಿ ಅಂಟಿಸಲಾಗಿದ್ದು, ಶೇ.10ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ ಎಂದು ತಿಳಿಸಿದರು.