ಮತಯಂತ್ರದಿಂದ ಮೋಸ ಸಾಧ್ಯವೇ?

Most read

2019ರ ಅಸೆಂಬ್ಲಿ ಚುನಾವಣೆ ಮತ್ತು 2024 ರ ರಾಷ್ಟ್ರೀಯ ಚುನಾವಣೆಯ ನಡುವೆ  5 ವರ್ಷಗಳಲ್ಲಿ 32 ಲಕ್ಷ ಹೊಸ ಮತದಾರರು ಸೇರ್ಪಡೆಯಾದರು. ಆದರೆ 2024 ರ ಲೋಕಸಭೆ ಮತ್ತು ಅಸೆಂಬ್ಲಿ ಚುನಾವಣೆಯ ನಡುವೆ ಕೇವಲ 5 ತಿಂಗಳಲ್ಲಿ 40 ಲಕ್ಷ ಮತದಾರರು ಸೇರ್ಪಡೆಯಾದರು. ಇದು ಹೇಗೆ ಸಾಧ್ಯ?!- ಶ್ರೀನಿವಾಸ ಕಾರ್ಕಳ

ಮಹಾರಾಷ್ಟ್ರ, ಸೋಲಾಪುರದ ಮರಕಡವಾಡಿ ಗ್ರಾಮ ಇತ್ತೀಚೆಗೆ ದೇಶದಾದ್ಯಂತ ವಿಶೇಷ ಸುದ್ದಿಯೊಂದಕ್ಕೆ ಕಾರಣವಾಯಿತು. ಯಾಕೆ ಗೊತ್ತೇ? ಮಹಾರಾಷ್ಟ್ರದ ವಿಧಾನಸಭೆಗೆ ಇತ್ತೀಚೆಗೆ ಚುನಾವಣೆ ನಡೆಯಿತಷ್ಟೇ?  ಮಾಲಶಿರಸ್‌ ಅಸೆಂಬ್ಲಿ ಕ್ಷೇತ್ರಕ್ಕೆ ಸೇರಿದ ಈ ಮರಕಡವಾಡಿ ಗ್ರಾಮದ ಮತದಾರರಲ್ಲಿ ಬಹುತೇಕರು ಮಹಾವಿಕಾಸ್‌ ಅಗಾಡಿ (ಕಾಂಗ್ರೆಸ್‌ + ಎನ್‌ ಸಿ ಪಿ (ಶರದ್‌ ಪವಾರ್)‌ + ಶಿವಸೇನೆ (ಉದ್ಧವ್) ಬೆಂಬಲಿಗರು. ಬಿಜೆಪಿ ಬೆಂಬಲಿಗರು ಕಡಿಮೆ. ಚುನಾವಣೆಯಲ್ಲಿ ಎನ್‌ ಸಿ ಪಿ ಉಮೇದುವಾರ ಉತ್ತಮರಾವ್‌ ಜಂಕಾರ್‌ ಅವರೇನೋ ಗೆದ್ದರು. ಆದರೆ ಮರಕಡವಾಡಿಯಲ್ಲಿ ಅವರಿಗೆ ಸಿಕ್ಕಿದ್ದು ಚಲಾಯಿತ ಸುಮಾರು 1900 ಪೈಕಿ ಕೇವಲ 843 ಮತಗಳು. ಬಿಜೆಪಿ ಉಮೇದುವಾರ ರಾಮ್‌ ಸತ್ಪುತೆಯವರಿಗೆ 1003 ಮತಗಳು ಸಿಕ್ಕವು. ಇದು ಸಾಧ್ಯವೇ ಇಲ್ಲ, ಇಲ್ಲೇನೋ ಗೋಲ್ಮಾಲ್‌ ನಡೆದಿದೆ ಎನ್ನುವುದು ಗ್ರಾಮಸ್ಥರ ಗುಮಾನಿ. ಈ ಹಿನ್ನೆಲೆಯಲ್ಲಿ ಮತ ಪತ್ರದ ಮೂಲಕ ಮತ್ತೊಮ್ಮೆ ಚುನಾವಣೆ ನಡೆಸುವುದು, ಆಗ ಫಲಿತಾಂಶ ಏನು ಬರುತ್ತದೆ ನೋಡೋಣ ಎಂದು ಅವರೆಲ್ಲ ನಿರ್ಧರಿಸಿ ಮತದಾನಕ್ಕೆ ಒಂದು ದಿನವನ್ನೂ ನಿಗದಿಪಡಿಸಿದರು. ಆದರೆ ಸರಕಾರ ಅಲ್ಲಿ ಕರ್ಫ್ಯೂ ಹೇರಿ ಮತದಾನ ನಡೆಯದಂತೆ ನೋಡಿಕೊಂಡಿತು. ಇದರಿಂದ ಜನರ ಗುಮಾನಿ ಇನ್ನಷ್ಟು ಹೆಚ್ಚಿತು. ಈಗ ಮಹಾರಾಷ್ಟ್ರದ ಅನೇಕ ಗ್ರಾಮಗಳಲ್ಲಿ ಇವಿಎಂ (ಮತಯಂತ್ರ) ವಿರುದ್ಧ ಅಭಿಯಾನ ಶುರುವಾಗಿದೆ.

ಇದಕ್ಕೆಲ್ಲ ಕಾರಣ ಏನು ಗೊತ್ತೇ? ಚುನಾವಣಾ ವಿಶ್ಲೇಷಣೆಗಳನ್ನು ದಶಕ ದಶಕಗಳಿಂದ ಮಾಡಿಕೊಂಡು ಬಂದ ತಜ್ಞರ ಪ್ರಕಾರ ಚುನಾವಣಾ ಫಲಿತಾಂಶಗಳಲ್ಲಿ ಒಂದು ʼಪ್ಯಾಟರ್ನ್‌ʼ (ನಿರ್ದಿಷ್ಟ ಕ್ರಮ) ಎನ್ನುವುದು ಇರುತ್ತದೆ. ಅಂದರೆ ಆಡಳಿತ ವಿರೋಧಿ ಅಲೆ ಇದ್ದಾಗ, ಅಧಿಕಾರದಲ್ಲಿ ಇದ್ದ ಪಕ್ಷ ಅಧಿಕಾರಕ್ಕೆ ಮರಳುವುದು ಬಹಳ ಕಡಿಮೆ. ಕೆಲವೊಮ್ಮೆಯಂತೂ ಅಧಿಕಾರಕ್ಕೆ ಮರಳುವುದೇ ಇಲ್ಲ. ಒಂದು ವೇಳೆ ಮರಳಿದರೂ ಅತ್ಯಲ್ಪ ಬಹುಮತವಷ್ಟೇ ಸಿಕ್ಕೀತು. ಅಲ್ಲದೆ, ಮತದಾರರನ್ನು ಮಾತನಾಡಿಸಿದಾಗ ಮುಂದಿನ ಫಲಿತಾಂಶ ಏನಾಗಬಹುದು ಎಂಬ ಒಂದು ಸುಳಿವೂ ಸಿಗುತ್ತಿರುತ್ತದೆ.

ಬೆಚ್ಚಿಬೀಳಿಸಿದ ಹರ್ಯಾನ ಮತ್ತು ಮಹಾರಾಷ್ಟ್ರ ಚುನಾವಣಾ ಫಲಿತಾಂಶ!

ಆದರೆ ಇತ್ತೀಚಿನ ಹರ್ಯಾನ ಮತ್ತು ಮಹಾರಾಷ್ಟ್ರ ಚುನಾವಣೆಗಳು ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಚುನಾವಣಾ ಪಂಡಿತರನ್ನು ಬೆಚ್ಚಿಬೀಳಿಸಿದವು. ಪ್ರತಿಯೊಂದು ಚುನಾವಣಾ ಸಮೀಕ್ಷೆಯೂ ಹರ್ಯಾನದಲ್ಲಿ ಕಾಂಗ್ರೆಸ್‌ ಭಾರೀ ಅಂತರದಿಂದ ಗೆಲ್ಲಲಿದೆ ಎಂದು ಹೇಳಿತ್ತು. ಆದರೆ ಅಲ್ಲಿ ಮೂರನೆ ಬಾರಿಗೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಏರಿತು. ಈ ಫಲಿತಾಂಶವನ್ನು ನಂಬುವುದು ಕಾಂಗ್ರೆಸ್‌ ಗೆ ಮಾತ್ರವಲ್ಲ ಸ್ವತಃ ಬಿಜೆಪಿಗೂ ಸಾಧ್ಯವಾಗಲಿಲ್ಲ ಎಂದು ಕೆಲವರು ಹೇಳುವುದಿದೆ.

ಮಹಾರಾಷ್ಟ್ರದಲ್ಲಿಯಂತೂ ಎರಡು ಕಾರಣಗಳಿಗೆ ಈ ಫಲಿತಾಂಶಗಳನ್ನು ನಂಬುವುದೇ ಅಸಂಭವ ಎಂಬಂತಾಯಿತು. ಮೊದಲನೆಯದಾಗಿ, ಉದ್ಧವ್‌ ಅವರ ಸರಕಾರವನ್ನು ವಾಮಮಾರ್ಗದಿಂದ ಉರುಳಿಸಿದ ಬಳಿಕ ಮಹಾರಾಷ್ಟ್ರದಲ್ಲಿ ಉದ್ಧವ್‌ ಅವರ ಪರವಾಗಿ ಅನುಕಂಪದ ಅಲೆ ಉಂಟಾಗಿತ್ತು. ಸರಕಾರ ಉರುಳಿಸಿದ ಬಿಜೆಪಿ ವಿರುದ್ಧ ಆಕ್ರೋಶವೂ ಹೆಚ್ಚಿತ್ತು. ಎರಡನೆಯದಾಗಿ ಶರದ್‌ ಪವಾರ್‌ ಅವರ ಎನ್‌ ಸಿ ಪಿಯು ಮಹಾರಾಷ್ಟ್ರದಲ್ಲಿ ಅತ್ಯಂತ ಬಲಶಾಲಿ ಪಕ್ಷ. ಕಾಂಗ್ರೆಸ್‌ ಕೂಡಾ ಆಳ ಬೇರುಗಳನ್ನು ಹೊಂದಿರುವ ಪಕ್ಷ. ಈ ಹಿನ್ನೆಲೆಯಲ್ಲಿಯೇ ಲೋಕಸಭಾ ಚುನಾವಣೆಯಲ್ಲಿ ಮಹಾ ವಿಕಾಸ ಅಗಾಡಿ ಭಾರೀ ಜಯ ದಾಖಲಿಸಿತ್ತು (48 ರಲ್ಲಿ 29).

ಆದ್ದರಿಂದ, ಅಸೆಂಬ್ಲಿ ಚುನಾವಣೆಯಲ್ಲಿ ಮಹಾವಿಕಾಸ್‌ ಅಗಾಡಿ ಅಧಿಕಾರ ಹಿಡಿಯುವುದು ಖಚಿತ ಎಂದು ಸಮೀಕ್ಷೆಗಳೂ ಹೇಳಿದ್ದವು. ಮಹಾಯುತಿಯಿರಲೀ (ಬಿಜೆಪಿ + ಶಿವಸೇನೆ (ಶಿಂಧೆ) = ಎನ್‌ ಸಿ ಪಿ (ಅಜಿತ್‌ ಪವಾರ್), ಮಹಾವಿಕಾಸ ಅಗಾಡಿ ಇರಲೀ ಯಾರೇ ಅಧಿಕಾರ ಹಿಡಿದರೂ ಅಲ್ಪ ಬಹುಮತವಷ್ಟೇ ಇರಲಿದೆ ಎನ್ನಲಾಗಿತ್ತು. ಆದರೆ ಫಲಿತಾಂಶ ಬಂದಾಗ ಮಹಾಯುತಿ ಗೆದ್ದುದು ಮಾತ್ರವಲ್ಲ, 288 ರಲ್ಲಿ 230 ಸೀಟುಗಳನ್ನು ಪಡೆದುಕೊಂಡಿತ್ತು! 144 ಸಂಖ್ಯೆಯನ್ನು ದಾಟಲಿದೆ ಎಂದುಕೊಂಡಿದ್ದ ಮಹಾವಿಕಾಸ ಅಗಾಡಿ ಗೆದ್ದುದು ಕೇವಲ 53 ಸೀಟುಗಳನ್ನು. ʼಇದನ್ನು ನಂಬುವುದು ನನಗೂ ಕಷ್ಟವಾಯಿತುʼ ಎಂದು ಚುನಾವಣಾ ಪಂಡಿತ ಯೋಗೇಂದ್ರ ಯಾದವ್‌ ಕೂಡಾ ಹೇಳಿಬಿಟ್ಟರು.

ಇವಿಎಂ ವಿರುದ್ಧ ಹೆಚ್ಚಿದ ವಿರೋಧ

ಇದರ ಬೆನ್ನಿಗೇ ಇವಿಎಂ ವಿರುದ್ಧ ಮತ್ತೆ ಮಾತುಗಳು ಕೇಳಿಬಂದವು. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ‌ʼನಮಗೆ ಮತಪತ್ರಗಳ ಮೂಲಕ ಚುನಾವಣೆ ಬೇಕು, ಇವಿಎಂ ಬೇಡ, ನಮಗೆ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಮತ ಚಲಾಯಿಸಿದ್ದಾರೆ, ಅವೆಲ್ಲ ಎಲ್ಲಿ ಹೋದವು?ʼ ಎಂದು ಗಂಭೀರವಾಗಿ ಪ್ರಶ್ನಿಸಿದರು. ಸುಪ್ರೀಂ ಕೋರ್ಟ್‌ ವಕೀಲ ಮಹಮದ್‌ ಪ್ರಾಚಾ, ಅಡ್ವೋಕೇಟ್‌ ಭಾನು ಪ್ರತಾಪ್ ಮತ್ತಿತರರು ಇವಿಎಂ ಬಗ್ಗೆ ದೀರ್ಘ ಕಾಲದಿಂದ ಹೋರಾಟ ಮಾಡುತ್ತಲೇ ಇದ್ದಾರೆ. ʼನಾನು ಇವಿಎಂ ಮೂಲಕವೇ ಅಧಿಕಾರಕ್ಕೇರಿದರೂ ಸರಿಯೇ ನಾನು‌ ಎಂದೆಂದಿಗೂ ಇವಿಎಂ ವಿರುದ್ಧವೇʼ ಎಂದು ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಸ್ಷಷ್ಟವಾಗಿ ಹೇಳಿದ್ದಾರೆ.

ಇವಿಎಂ ವಿಷಯದಲ್ಲಿ ಎರಡು ಅಭಿಪ್ರಾಯಗಳಿವೆ. ಮೊದಲನೆಯದು ಅದನ್ನು ದುರುಪಯೋಗ ಪಡಿಸಬಹುದು ಎನ್ನುವುದು. ಎರಡನೆಯದು ಹಾಗೆ ಮಾಡುವುದು ಅಸಾಧ್ಯ ಎನ್ನುವುದು. ಮೊದಲನೆಯದರಲ್ಲಿ ಹೊಸ ವಿಷಯವೇನೂ ಇಲ್ಲ. ಮತಯಂತ್ರವನ್ನು ತಿರುಚುವುದು ಅಸಾಧ್ಯ ಎಂದು ಚುನಾವಣಾ ಆಯೋಗ ಏನೇ ಹೇಳಲಿ, ಅದೊಂದು ಯಂತ್ರ. ಅದನ್ನು ತಯಾರಿಸಿದ್ದು ಮನುಷ್ಯ. ಅದರ ಮೂಲಕ ಆಟವಾಡುವುದು ಸಾಧ್ಯವಿರುವುದೂ ಮನುಷ್ಯನಿಗೇ. ಅಮೆರಿಕಾದ ಖ್ಯಾತ ಉದ್ಯಮಿ ಟೆಸ್ಲಾದ ಎಲನ್‌ ಮಾಸ್ಕ್‌ ಕೂಡಾ ಮತಯಂತ್ರ ತಿರುಚುವುದು ಸಾಧ್ಯ ಎಂದಿದ್ದಾರೆ. ಅನೇಕ ತಜ್ಞರೂ ಈ ಮಾತನ್ನು ಹೇಳಿದ್ದಾರೆ. ಜಗತ್ತಿನ ಅನೇಕ ರಾಷ್ಟ್ರಗಳು ಇವಿಎಂ ತ್ಯಜಿಸಿ ಪೇಪರ್‌ ಬ್ಯಾಲಟ್‌ ಗೆ ಮರಳಿವೆ. ಒಂದು ಕಾಲದಲ್ಲಿ ಬಿಜೆಪಿ ನಾಯಕ ನರೇಂದ್ರ ಮೋದಿಯವರೇ ಇವಿಎಂ ವಿರುದ್ಧ ಮಾತನಾಡಿದ್ದರು. ಬಿಜೆಪಿ ನಾಯಕ ಜಿ ವಿ ಎಲ್‌ ನರಸಿಂಹ ರಾವ್ ಇವಿಎಂ ವಿರುದ್ಧ ಪುಸ್ತಕ ಕೂಡಾ ರಚಿಸಿದ್ದರು.

ಕಾಗದದ ಬ್ಯಾಲೆಟ್‌ ನಲ್ಲಿ ನಾವು ಯಾರಿಗೆ ಮತ ಚಲಾಯಿಸಿದ್ದೇವೆ, ಅದು ಯಾರಿಗೆ ಹೋಗಿದೆ ಎನ್ನುವುದು ನೂರಕ್ಕೆ ನೂರು ಖಾತ್ರಿ ಇರುತ್ತದೆ. ಅಲ್ಲದೆ ಬೇಕಾದಾಗ ಮತ್ತೆ ಅದನ್ನು ತೆಗೆಸಿ ಎಣಿಕೆ ನಡೆಸಬಹುದು. ಆದರೆ, ಮತಯಂತ್ರದ ಮೂಲಕ ನಾವು ಚಲಾಯಿಸಿದ ಮತ ನಾವು ಇಷ್ಟಪಟ್ಟ ಉಮೇದುವಾರರಿಗೇ ಹೋಗಿದೆ ಎನ್ನುವುದಕ್ಕೆ ಖಾತ್ರಿ ಏನು? ಅಲ್ಲದೆ, ವಿವಿಪ್ಯಾಟ್‌ ಸ್ಲಿಪ್‌ ಗಳನ್ನು ಹೊಂದಿಸಿ ನೋಡುವ ವ್ಯವಸ್ಥೆಯೂ ಇಲ್ಲ. ವಿವಿಪ್ಯಾಟ್‌ ಸ್ಲಿಪ್‌ ಗಳನ್ನು ಎಣಿಕೆ ಮಾಡಲು ಚುನಾವಣಾ ಆಯೋಗ ಒಪ್ಪುತ್ತಿಲ್ಲ ಮಾತ್ರವಲ್ಲ, ಸುಪ್ರೀಂ ಕೋರ್ಟ್‌ಗೆ ಕೂಡಾ ಇದು ಅತ್ಯಗತ್ಯ ಅನಿಸಿಲ್ಲ.

ಇವಿಎಂ ದುರುಪಯೋಗ ಪಡಿಸಬಹುದೇ?

ಮತಯಂತ್ರವನ್ನು ಹ್ಯಾಕ್‌ ಮಾಡುವುದು ಸಾಧ್ಯವಿಲ್ಲ. ಯಾಕೆಂದರೆ ಹ್ಯಾಕ್‌ ಮಾಡಲು ಇಂಟರ್‌ ನೆಟ್‌ ಸಂಪರ್ಕ ಇರಬೇಕು. ಆದರೆ ಇವಿಎಂ ಅನ್ನು ಮ್ಯಾನಿಪ್ಯುಲೇಟ್‌ ಮಾಡುವುದು ಸಾಧ್ಯವಿದೆ ಎಂದು ಅನೇಕ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಈ ಕುರಿತು ʼದ ಕ್ವಿಂಟ್‌ʼ ಅಂತರ್ಜಾಲ ಮಾಧ್ಯಮ ಒಂದು ಕುತೂಹಲಕರ ವರದಿ ಪ್ರಕಟಿಸಿದೆ. ಚುನಾವಣಾ ಆಯೋಗಕ್ಕಾಗಿ ಇವಿಎಂ ತಯಾರಿಸುವ ಕೆಲಸವನ್ನು ಎಲೆಕ್ಟ್ರಾನಿಕ್‌ ಕಾರ್ಪೋರೇಶನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ECIL)ಮಾಡುತ್ತದೆ. ಅದು ಇದಕ್ಕಾಗಿ ಗುತ್ತಿಗೆಯಲ್ಲಿ ಇಂಜೀನಿಯರ್‌ ಗಳನ್ನು ನೇಮಿಸಿಕೊಳ್ಳುತ್ತದೆ. ಅಂತಹ ಒಬ್ಬ ಇಂಜೀನಿಯರ್‌ ರನ್ನು ಮಾತನಾಡಿಸಿದಾಗ, ʼನಾವು ಗುತ್ತಿಗೆಯಲ್ಲಿ ಕೆಲಸ ಮಾಡುವುದನ್ನು ಬಹಿರಂಗಪಡಿಸಬಾರದು ಎಂಬ ಒತ್ತಡ ನಮ್ಮ ಮೇಲಿದೆ, ನಾವು ಇವಿಎಂ ಅನ್ನು ತಯಾರಿಸಬಲ್ಲೆವು ಮಾತ್ರವಲ್ಲ, ಸಿಂಬಲ್‌ ಲೋಡಿಂಗ್‌ ಯುನಿಟ್ (SL‌U) ಮೂಲಕ ಅದನ್ನು ಹ್ಯಾಕ್‌ ಮಾಡಬಲ್ಲೆವು ಕೂಡಾʼ ಎಂದಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ 

ಇಷ್ಟೆಲ್ಲ ಆದ ಮೇಲೂ ಬಿಜೆಪಿ ಚುನಾವಣೆ ಗೆಲ್ಲುತ್ತಿರುವುದು ಇವಿಎಂ ದುರುಪಯೋಗದ ಮೂಲಕ ಎನ್ನಲು ನಮ್ಮಲ್ಲಿ ಬಲವಾದ ಸಾಕ್ಷ್ಯಾಧಾರಗಳಿಲ್ಲ. ಆದರೆ ಚುನಾವಣಾ ರಿಗ್ಗಿಂಗ್‌ (ಚುನಾವಣಾ ಮೋಸ)  ಮತಯಂತ್ರದ ಮೂಲಕವೇ ನಡೆಯಬೇಕಿಲ್ಲ ಅಲ್ಲವೇ?. ಮುಕ್ತ ಮತ್ತು ನ್ಯಾಯಸಮ್ಮತ (ಫ್ರೀ ಅಂಡ್‌ ಫೇರ್‌) ಚುನಾವಣೆಗೆ ಅವಕಾಶ ಇಲ್ಲ ಎಂಬಲ್ಲಿಂದಲೇ ಈ ರಿಗ್ಗಿಂಗ್‌ ಶುರುವಾಗುತ್ತದೆ. ಚುನಾವಣೆ ಮುಕ್ತ ಮತ್ತು ನ್ಯಾಯ ಸಮ್ಮತವಾಗಬೇಕಾದರೆ ಅಲ್ಲಿ ಲೆವೆಲ್‌ ಪ್ಲೇಯಿಂಗ್‌ ಫೀಲ್ಡ್‌ (ಸಮಾನ ಅವಕಾಶ) ಇರಬೇಕಾಗುತ್ತದೆ. ಅದು ಇದೆಯೇ? ಬಿಜೆಪಿಯ ಬಳಿಯಲ್ಲಿ ಚುನಾವಣಾ ಬಾಂಡ್‌ ಮತ್ತಿತರ ಮಾರ್ಗದ ಸಾವಿರಾರು ಕೋಟಿ ರುಪಾಯಿ ಇದೆ, ಸರಕಾರಿ ಯಂತ್ರ ಇದೆ, ಪಕ್ಷಪಾತದಿಂದ ನಡೆದುಕೊಳ್ಳುವ ಚುನಾವಣಾ ಆಯೋಗವೂ ಇದೆ, ಅನುಕೂಲಕರವಾಗಿ ನಡೆದುಕೊಳ್ಳುವ ನ್ಯಾಯಾಂಗವೂ ಇದೆ (ನಮ್ಮ ಪ್ರಧಾನಿಗಳು ಅದೆಷ್ಟು ಬಾರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿಲ್ಲ? ಅವರ ಮೇಲೆ ಆಯೋಗ ಕ್ರಮ ಜರುಗಿಸಿತೇ? ಪ್ರಧಾನಿಗಳಿಂದಲೇ ನಿಯುಕ್ತರಾದ ಆಯುಕ್ತರು ಪ್ರಧಾನಿಯ ವಿರುದ್ಧವೇ ಕ್ರಮ ಜರುಗಿಸಿಯಾರೇ?). ಇತರ ಪಕ್ಷಗಳಲ್ಲಿ ಈ ಯಾವುವೂ ಇಲ್ಲ (ಲೋಕಸಭಾ ಚುನಾವಣಾ ಸಮಯ ಕಾಂಗ್ರೆಸ್‌ ನ ಬ್ಯಾಂಕ್‌ ಖಾತೆಯನ್ನು ಕೂಡಾ ಸ್ತಂಭನಗೊಳಿಸಲಾಗಿತ್ತು). ಅಂದ ಮೇಲೆ ಎಲ್ಲಿಯ ನ್ಯಾಯ ಸಮ್ಮತ ಚುನಾವಣೆ?

ರಿಗ್ಗಿಂಗ್‌ ಗೆ ಇವೆ ನೂರಾರು ದಾರಿ

ಇವಿಎಂ ದುರುಪಯೋಗ ನಡೆಯುತ್ತಿದ್ದರೂ ಅದು ಕೇವಲ 10% ಅಷ್ಟೇ. 90% ದಷ್ಟು ರಿಗ್ಗಿಂಗ್‌ ಇತರ ಮಾರ್ಗಗಳಿಂದ ನಡೆಯುತ್ತದೆ ಎನ್ನುವುದನ್ನು ಮಹಾರಾಷ್ಟ್ರದ ಅಸೆಂಬ್ಲಿ ಚುನಾವಣೆ ಮತ್ತು ಉತ್ತರಪ್ರದೇಶದ ಉಪಚುನಾವಣೆಗಳು ತೋರಿಸಿಕೊಟ್ಟಿವೆ. ವಿಶ್ಲೇಷಕರ ಪ್ರಕಾರ ಅವು ಸ್ಥೂಲವಾಗಿ ಹೀಗಿವೆ.

1. ಫಾರ್ಮ್‌ ನಮೂನೆ 7ಸಿ ಬಳಸಿಕೊಂಡು, ಎದುರಾಳಿಗಳ ಮತದಾರರ ಹೆಸರುಗಳನ್ನು ತೆಗೆದುಹಾಕುವುದು. ಈ ವಿಷಯದಲ್ಲಿ ಬಲವಾದ ಸಾಕ್ಷ್ಯಾಧಾರಗಳನ್ನು ಆಪ್‌ ಪಕ್ಷದ ಕೇಜ್ರಿವಾಲ್‌ ಈಗಾಗಲೇ ಬಹಿರಂಗಪಡಿಸಿದ್ದು ಚುನಾವಣಾ ಆಯೋಗಕ್ಕೆ ದೂರು ಕೂಡಾ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿಯಂತೂ ಈ ಕುತಂತ್ರದ ಮಾಹಿತಿ ಬೆಚ್ಚಿಬೀಳಿಸುವಂತಿದೆ.‌ 2019ರ ಅಸೆಂಬ್ಲಿ ಚುನಾವಣೆ ಮತ್ತು 2024 ರ ರಾಷ್ಟ್ರೀಯ ಚುನಾವಣೆಯ ನಡುವೆ  5 ವರ್ಷಗಳಲ್ಲಿ 32 ಲಕ್ಷ ಹೊಸ ಮತದಾರರು ಸೇರ್ಪಡೆಯಾದರು. ಆದರೆ 2024 ರ ಲೋಕಸಭೆ ಮತ್ತು ಅಸೆಂಬ್ಲಿ ಚುನಾವಣೆಯ ನಡುವೆ ಕೇವಲ 5 ತಿಂಗಳಲ್ಲಿ 40 ಲಕ್ಷ ಮತದಾರರು ಸೇರ್ಪಡೆಯಾದರು. ಇದು ಹೇಗೆ ಸಾಧ್ಯ?! ಕರ್ನಾಟಕದಲ್ಲಿಯೂ ಈ ಕುತಂತ್ರವನ್ನು ಯತ್ನಿಸಿದ್ದು ಸಕಾಲದಲ್ಲಿ ಸಂಬಂಧ ಪಟ್ಟ ಎನ್‌ ಜಿ ಒ ದ ಮಂದಿ ಸಿಕ್ಕಿಹಾಕಿಕೊಂಡ ಕಾರಣ ಬಿಜೆಪಿಯ ಯತ್ನ ವಿಫಲವಾದುದನ್ನು ಮರೆಯದಿರೋಣ.

 2. ಐಡಿ ತಪಾಸಣೆಯ ನೆಪದಲ್ಲಿ ಪೊಲೀಸರನ್ನು ಬಳಸಿಕೊಂಡು ಅಲ್ಪಸಂಖ್ಯಾತ ಮತದಾರರು ಮತಗಟ್ಟೆಗಳಿಗೆ  ಬರದಂತೆ ಮಾಡುವುದು. ಉತ್ತರಪ್ರದೇಶದ ಉಪಚುನಾವಣೆಯಲ್ಲಿ ಇತ್ತೀಚೆಗೆ ಪೊಲೀಸರು ಬಂದೂಕು ತೋರಿಸಿ ಒಂದು ನಿರ್ದಿಷ್ಟ ಸಮುದಾಯದ ಮತದಾರರನ್ನು ಬೆದರಿಸಿದ್ದು ವರದಿಯಾಗಿತ್ತು.

3. ಮತದಾನ ಮುಗಿದ ಬಳಿಕ ಶೇಕಡಾ ಮತ ಚಲಾವಣೆಯ ಅಂಕಿ ಅಂಶವನ್ನು ಹೆಚ್ಚಿಸುತ್ತಾ ಹೋಗುವುದು. ಇದು ಅನೇಕ ಗುಮಾನಿಗಳಿಗೆ ಕಾರಣವಾಗಿದ್ದು, ಇದನ್ನು ಮಾಜಿ ಚುನಾವಣಾ ಆಯುಕ್ತ ಎಸ್‌ ವೈ ಖುರೇಷಿಯವರೂ ಪ್ರಶ್ನಿಸಿದ್ದಾರೆ.

ಪ್ರಜಾತಂತ್ರದ ವ್ಯವಸ್ಥೆಯೊಂದರಲ್ಲಿ ಚುನಾವಣೆಗೆ ಬಹಳ ಮಹತ್ವದ ಸ್ಥಾನವಿದೆ. ಆದರೆ ಚುನಾವಣೆ ನ್ಯಾಯ ಸಮ್ಮತವಾಗಿ ನಡೆದು ಸಂಸದೀಯ ಪ್ರಜಾತಂತ್ರ ಬಲಗೊಳ್ಳುವಂತಾಗಬೇಕಾದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲ ಪಕ್ಷಗಳಿಗೂ ಚುನಾವಣಾ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಮೂಡುವಂತಿರಬೇಕು. ಹಾಗೆ ನಂಬಿಕೆ ಮೂಡುವಂತೆ ಮಾಡುವ ಜವಾಬ್ದಾರಿ ಸಂಪೂರ್ಣವಾಗಿ ಚುನಾವಣಾ ಆಯೋಗದ್ದಾಗಿದೆ.

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿ- ಭಾಗ 2 |ಮತಯಂತ್ರಗಳ ದುರುಪಯೋಗ ತಡೆಯುವುದು ಸಾಧ್ಯವೇ?

More articles

Latest article