ಮಹರ್ಷಿ ವಾಲ್ಮೀಕಿ ಎಲ್ಲ ಬುಡಕಟ್ಟುಗಳ ಐಕಾನ್‌ ಆಗಬಲ್ಲರೇ?

Most read

 

ಪರಿಶಿಷ್ಟ ಪಂಗಡದಲ್ಲಿ ಮಹರ್ಷಿ ವಾಲ್ಮೀಕಿ ಮತ್ತು ಬಿರ್ಸಾ ಮುಂಡ ಎಂಬ ಎರಡು ಅಸ್ಮಿತೆಗಳಿವೆ. ಕರ್ನಾಟಕದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 50 ಬುಡಕಟ್ಟುಗಳಿವೆ. 2011 ರ ಜನಗಣತಿಯಂತೆ ಪರಿಶಿಷ್ಟ ಪಂಗಡದ ಜನಸಂಖ್ಯೆ 42,48,987 ಇದೆ. ಇದರಲ್ಲಿ ಕ್ರಮಸಂಖ್ಯೆ 38 ರಲ್ಲಿ ಬರುವ ಒಂದೇ ಸಮುದಾಯದ  ಜನಸಂಖ್ಯೆ 32,96,354 ಇದೆ.  ಉಳಿದ 49 ಬುಡಕಟ್ಟುಗಳ  ಜನಸಂಖ್ಯೆ 9,52,633 ರಷ್ಟಿದೆ.

ಈ 50 ಬುಡಕಟ್ಟುಗಳಲ್ಲಿ ಮಹರ್ಷಿ ವಾಲ್ಮೀಕಿ ಮತ್ತು ಬಿರ್ಸಾ ಮುಂಡ ಎಂಬ ಎರಡು  ಅಸ್ಮಿತೆಗಳಿವೆ. ಆದರೆ ಪ್ರಸ್ತುತ ಕರ್ನಾಟಕ ಸರ್ಕಾರವು ಮಹರ್ಷಿ ವಾಲ್ಮೀಕಿ ಅವರನ್ನು ಪರಿಶಿಷ್ಟ ಪಂಗಡದ ಅಸ್ಮಿತೆ ಅಥವಾ ಐಕಾನ್ ಆಗಿ ಪರಿಗಣಿಸಿದಂತಿದೆ. ಆದರೆ  ಮಹರ್ಷಿ ವಾಲ್ಮೀಕಿ ಅವರನ್ನು ಉಳಿದ 49 ಸಮುದಾಯಗಳು ತಮ್ಮ ಅಸ್ಮಿತೆಯ ನಾಯಕ ಎಂದು ಒಪ್ಪಿಕೊಂಡಿದ್ದಾರೆಯೇ? ಎನ್ನುವ ಪ್ರಶ್ನೆ ಗಾಢವಾಗಿ ಕಾಡಲಾರಂಭಿಸಿದೆ. ಏಕೆಂದರೆ ಪರಿಶಿಷ್ಟ ಪಂಗಡದಲ್ಲಿರುವ ಅರಣ್ಯಾಧಾರಿತ ಮೂಲ ಆದಿವಾಸಿಗಳು ಮಹರ್ಷಿ ವಾಲ್ಮೀಕಿಯವರಿಗಿಂತ ಬಿರ್ಸಾ ಮುಂಡಾ ಅವರನ್ನೇ ತಮ್ಮ ನಾಯಕ ಮತ್ತು ಅಸ್ಮಿತೆ ಎಂತಲೇ ನಂಬಿಕೊಂಡಿದ್ದಾರೆ.

ಯಾಕೆ ಈ ಪ್ರಶ್ನೆ ಉದ್ಭವಿಸುತ್ತಿದೆ ಎಂದರೆ ಪ್ರತಿ ವರ್ಷ ಕರ್ನಾಟಕ ಸರ್ಕಾರವು, ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಯ ವತಿಯಿಂದ, ಪರಿಶಿಷ್ಟ ಪಂಗಡದ 50 ಬುಡಕಟ್ಟುಗಳ ಕಾರ್ಯಕ್ರಮವಾಗಿ ʼಮಹರ್ಷಿ ವಾಲ್ಮೀಕಿ ಜಯಂತಿʼ ಕಾರ್ಯಕ್ರಮವನ್ನು ಮಾಡುತ್ತಾ ಬರುತ್ತಿದೆ. ಮತ್ತು ಈ ಈ 50 ಬುಡಕಟ್ಟುಗಳಲ್ಲಿ ಸಾಧನೆ ಮಾಡಿರುವವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ ಎನ್ನುವುದು ಎಲ್ಲರ ನಂಬಿಕೆಯೂ ಹೌದು, ಸರ್ಕಾರದ ಭಾವನೆಯೂ ಹೌದು. ಆದರೆ ಈ ಪ್ರಶಸ್ತಿ ನೀಡಲು ರಚಿಸುವ ಸಮಿತಿಯಲ್ಲಿ ಬಹುತೇಕ ಒಂದೇ ಸಮುದಾಯದ ಪ್ರಾತಿನಿಧ್ಯತೆ ಹೆಚ್ಚಾಗಿಯೇ ಇರುತ್ತದೆ. ಪ್ರಶಸ್ತಿಗಳು ಲಭಿಸುವುದು ಕೂಡ ಬಹುತೇಕ ಒಂದೇ ಸಮುದಾಯಕ್ಕೆ ಎನ್ನುವುದು ತೆರೆದ ಪುಸ್ತಕ.

ಹಾಗೊಮ್ಮೆ ಈ ಒಂದು ಸಮುದಾಯ ಹೊರತುಪಡಿಸಿ ಇತರ 49 ಸಮುದಾಯಗಳಲ್ಲಿ, ಅದರಲ್ಲೂ ಮೂಲ ಆದಿವಾಸಿಗಳಿಗೆ ಈ ಪ್ರಶಸ್ತಿ ಸಿಕ್ಕಿದೆ ಎಂದರೆ ಅದೊಂದು ಕ್ರಾಂತಿಯೇ ಸರಿ. ಹಾಗೆಂದು ಇತರ ಸಮುದಾಯಗಳಿಗೆ ಪ್ರಶಸ್ತಿ ಸಿಕ್ಕಿಲ್ಲ ಎಂದೇನಿಲ್ಲ. ಈ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಆ ಒಂದೇ ಸಮುದಾಯವನ್ನು ಹೊರತುಪಡಿಸಿ ಉಳಿದ 49 ಸಮುದಾಯಗಳ ಪ್ರತಿನಿಧಿಗಳು ಇದ್ದಾಗ ಮಾತ್ರ ಈ ಪ್ರಶಸ್ತಿ ಪಡೆಯುವುದು ಸಾಧ್ಯವಾಗಿದೆ. ಅದಕ್ಕೆ ನೈಜ ಉದಾರಣೆ  ಎಂದರೆ ಕೊರಗರು, ಜೇನು ಕುರುಬ ಮತ್ತೆ ಇತರೆ ಅಲ್ಲೊಂದು ಇಲ್ಲೊಂದರಂತೆ ಪ್ರಶಸ್ತಿ ಸಿಕ್ಕಿರುವುದನ್ನು ಕಾಣಬಹುದು. ಈ ಆಯ್ಕೆ ಸಮಿತಿಯಲ್ಲಿ ಇತರೆ 49 ಸಮುದಾಯಗಳ ಪ್ರತಿನಿಧಿಗಳು ಇದ್ದಾಗ, ಇದು ನಮ್ಮ ಸಮುದಾಯದ ಪ್ರಶಸ್ತಿ, ಇದಕ್ಕೆ ನಮ್ಮನ್ನು ಮಾತ್ರ ಆಯ್ಕೆ ಮಾಡಬೇಕು, ನಿಮಗೆ ಬೇಕಾದರೆ ಆದಿವಾಸಿ ಅಥವಾ ಬಿರ್ಸಾ ಮುಂಡ ಪ್ರಶಸ್ತಿ ಕೊಡಲು ಸರ್ಕಾರಕ್ಕೆ ಒತ್ತಡ ಹಾಕಿ ಎನ್ನುವ ಚೆರ್ಚೆಗಳು ಬರುತ್ತವಂತೆ.

ಇದರಿಂದ ಸ್ಪಷ್ಟವಾಗುವುದೇನೆಂದರೇ ಮಹರ್ಷಿ ವಾಲ್ಮೀಕಿಯವರು ಹಾಗೂ ಮಹರ್ಷಿ ವಾಲ್ಮೀಕಿಯವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯು ಕೂಡ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 50 ಬುಡಕಟ್ಟುಗಳಲ್ಲಿನ ಒಂದು ಸಮುದಾಯದ ಅಸ್ಮಿತೆಯಾಗಿದೆ. ಹಾಗೆಯೇ ಉಳಿದ 49 ಬುಡಕಟ್ಟು ಹಾಗೂ ಅರಣ್ಯಾಧಾರಿತ ಮೂಲ ಆದಿವಾಸಿಗಳಿಗೆ ಬೇರೆ ಅಸ್ಮಿತೆ ಇದೆ ಎಂಬುದು. ಈ ಗೊಂದಲ ಸರ್ಕಾರಕ್ಕೆ ಗೊತ್ತಿಲ್ಲ ಅಂತೇನಿಲ್ಲ. ಪ್ರಸಕ್ತ ಆಯ ವ್ಯಯದಲ್ಲಿ ವಾಲ್ಮೀಕಿ ಬುಡಕಟ್ಟು ಆಶ್ರಮ ಶಾಲೆ ಎಂಬ ಹೆಸರನ್ನು ವಾಲ್ಮೀಕಿ ಆದಿವಾಸಿ ಬುಡಕಟ್ಟು ಆಶ್ರಮ ಶಾಲೆ ಎಂದು ನಾಮಕರಣ ಮಾಡಿದೆ. ಇದಕ್ಕೂ ಹಿಂದೆ ಶ್ರೀರಾಮುಲು ಅವರು ಸಚಿವರಾಗಿದ್ದಾಗ ಬುಡಕಟ್ಟು ಆಶ್ರಮ ಶಾಲೆ ಎಂಬ ಹೆಸರನ್ನು ವಾಲ್ಮೀಕಿ ಬುಡಕಟ್ಟು ಆಶ್ರಮ ಶಾಲೆ ಎಂದು ಮರುನಾಮಕರಣ ಮಾಡಿದ್ದರು.


ಛಾಯಾಚಿತ್ರ  : SC ರಾಯ್ ಅವರ 
ದಿ ಮುಂಡಾಸ್ ಮತ್ತು ಅವರ ದೇಶದಿಂದ 

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ  ಅರಣ್ಯಾಧಾರಿತ ಅಸಂಘಟಿತ ಮೂಲ ಆದಿವಾಸಿಗಳಿಗೆ ಸರ್ಕಾರದ ಯೋಜನೆಗಳು ಹಾಗೂ ಮೀಸಲಾತಿಯ ಪರಿವೇ ಇಲ್ಲ. ಅರಣ್ಯದ ಮಧ್ಯ ಭಾಗದಲ್ಲಿ ಇರುವ ಇವರು ರಸ್ತೆ, ಕುಡಿಯುವ ನೀರು, ವಿದ್ಯುತ್ ದೀಪಗಳಿಲ್ಲದೆ ಬಡತನದಲ್ಲಿ ಅಪೌಷ್ಟಿಕತೆಯಿಂದಾಗಿ ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಅಕಾಲಿಕ ಮರಣ ಹೊಂದುತ್ತಾ ವರ್ಷದಿಂದ ವರ್ಷಕ್ಕೆ ಜನಸಂಖ್ಯೆಯಲ್ಲಿ ಇಳಿಮುಖವಾಗಿ ಅಳಿವಿನಂಚಿಗೆ ಬಂದು ತಲುಪಿದ್ದಾರೆ.

ಕರ್ನಾಟಕದಲ್ಲಿರುವ ಪರಿಶಿಷ್ಟ ಪಂಗಡದ 3% ಮೀಸಲಾತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗದೆ ಪರಿಶಿಷ್ಟ ಪಂಗಡದಲ್ಲಿರುವ ಬಹುಸಂಖ್ಯಾತ ಒಂದು ಬಲಾಢ್ಯ ಬುಡಕಟ್ಟು ಪಡೆದುಕೊಂಡು 15MLAಗಳು, 3MPಗಳು, ಕುಲಪತಿ, IAS, IPS, IFS, KAS (A ಶ್ರೇಣಿಯಿಂದ & D ವರೆಗಿನ ಬಹುಸಂಖ್ಯಾತ ಹುದ್ದೆಗಳನ್ನು) ಕುಲಸಚಿವರು, ಪ್ರೊಫೆಸರ್ ಹುದ್ದೆಗಳಾದಿಯಾಗಿ ಸರ್ಕಾರಿ ಮತ್ತು ಸರ್ಕಾರೇತರ ಎಲ್ಲಾ ಹುದ್ದೆಗಳನ್ನು ಅನುಭವಿಸುತ್ತಿದ್ದಾರೆ. ಆದರೆ ಪರಿಶಿಷ್ಟ ಪಂಗಡದಲ್ಲಿರುವ ಮೂಲ ಆದಿವಾಸಿಗಳಲ್ಲಿ ಇಂದಿಗೂ ಆಧಾರ್ ಕಾರ್ಡ್, ವೋಟರ್‌ ಐಡಿ, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳಂತಹ ಸರ್ಕಾರಿ ದಾಖಲಾತಿಗಳು ಇಲ್ಲದೆ ಇರುವುದರಿಂದ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಕಾರಣ ಆದಿವಾಸಿಗಳು ತುತ್ತಿನ ಚೀಲ ತುಂಬಿಸಲು, ಕಾಫಿ ಎಸ್ಟೇಟ್‌ಗಳು, ಲೈನ್ ಮನೆಗಳು, ಇಟ್ಟಿಗೆ ಗೂಡುಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಾ ಬದುಕುತ್ತಿದ್ದಾರೆ.

ಕಾಡಿನ ನಡುವಿನಲ್ಲಿ ಜೀವನ ಮಾಡುತ್ತಿರುವುದರಿಂದ ಮೂಲ ಭೂತ ಸೌಲಭ್ಯಗಳ ಕೊರತೆಗಳಿಂದಾಗಿ ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಆಗೊಮ್ಮೆ ಶಿಕ್ಷಣ ಪಡೆದರೂ ಪರಿಶಿಷ್ಟ ಪಂಗಡಕ್ಕಿರುವ 3% ಮೀಸಲಾತಿಯಲ್ಲಿ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗದೆ, ಇತ್ತ ನಗರಗಳಲ್ಲೂ ಇರಲಾಗದೆ ಅತ್ತ  ಹಾಡಿಗಳಿಗೂ ಹೋಗಲಾಗದ ಅತಂತ್ರ ಸ್ಥಿತಿಯಲ್ಲಿ ತೊಳಲಾಡುತ್ತಿದ್ದಾರೆ. ಆದ್ದರಿಂದ ಮೂಲ ಆದಿವಾಸಿ ಬುಡಕಟ್ಟುಗಳ ಮಕ್ಕಳ ಭವಿಷ್ಯಕ್ಕಾಗಿ ಈ ಕಟ್ಟ ಕಡೆಯ ಸಮುದಾಯಗಳ ಉಳಿವಿಗಾಗಿ ಒಳಮೀಸಲಾತಿ ಅತ್ಯಂತ ಅನಿವಾರ್ಯವಾಗಿದೆ.

ಇದರ ಜೊತೆಗೆ ಕೇಂದ್ರ ಸರ್ಕಾರ ಬಿರ್ಸಾ ಮುಂಡಾ ಅವರನ್ನು ಬುಡಕಟ್ಟುಗಳ ನಾಯಕ ಮತ್ತು ಅಸ್ಮಿತೆ ಎನ್ನುವಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇದೇ ರೀತಿಯಲ್ಲಿ  ರಾಜ್ಯ ಸರ್ಕಾರವು  ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಯ ವತಿಯಿಂದ, “ಮಹರ್ಷಿ ವಾಲ್ಮೀಕಿ ಜಯಂತಿಯ ಜೊತೆಗೆ ಮೂಲ ಆದಿವಾಸಿಗಳ ನಾಯಕ ಹಾಗೂ ಅಸ್ಮಿತೆ ಬಿರ್ಸಾ ಮುಂಡಾ ಅವರ ಜಯಂತಿಯನ್ನು ಆಚರಿಸಲಿ. ಅವರ ಹೆಸರಿನಲ್ಲಿ ಉಳಿದ 49 ಸಮುದಾಯಗಳ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಿ ಎಂಬುದು ಪ್ರಸ್ತುತ ಲೇಖನದ ಆಶಯ

ಮುರಳಿ, ಎಚ್‌ ಡಿ ಕೋಟೆ

More articles

Latest article