ಸಿಎಂ ವಿರುದ್ಧ ಪ್ರಾಸಿಕ್ಯೂಶನ್ ಗೆ  ರಾಜ್ಯಪಾಲರು ಸಂವಿಧಾನವನ್ನು ‘ಪಿಕ್ & ಚೂಸ್ & ಯೂಸ್’ ಎಂಬಂತೆ ಬಳಸಬಹುದೇ ?

Most read

ರಾಜ್ಯಪಾಲರು ಒಕ್ಕೂಟ ಸರ್ಕಾರದ ಒಪ್ಪಂದಗಳು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸಂವಿಧಾನದ ‘ಆಯ್ದ’ ಆರ್ಟಿಕಲ್ ಗಳನ್ನು ಬಳಸಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಶನ್ ಗೆ ಕ್ರಮ ಕೈಗೊಳ್ಳುವುದು  ಅಸಾಂವಿಧಾನಿಕವಾಗಿದೆ. ಇದು ಕೇವಲ ಕಾನೂನು/ಸಂವಿಧಾನದ ಜೊತೆಗೆ ರಾಜ್ಯಪಾಲರ ಸಂಘರ್ಷವಾಗಿರದೇ ರಾಜ್ಯಗಳ ಅಸ್ಮಿತೆಯ ಮೇಲೆ ನಡೆಸುವ ಸಂಘರ್ಷ ಎಂದು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕಿದೆ – ನವೀನ್‌ ಸೂರಿಂಜೆ, ಹಿರಿಯ ಪತ್ರಕರ್ತರು

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ರಫೇಲ್ ಯುದ್ಧ ವಿಮಾನ ಖರೀದಿ ಹಗರಣ ಆರೋಪ ಕೇಳಿ ಬಂದಿತ್ತು. ಪ್ರತಿಪಕ್ಷ ಕಾಂಗ್ರೆಸ್ ಮತ್ತಿತರ ಪಕ್ಷಗಳು, ಸಂಘಟನೆಗಳು ರಫೇಲ್ ಯುದ್ಧ ವಿಮಾನ ಖರೀದಿ ಹಗರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದವು. ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಜವಾಬ್ದಾರಿಯುತವಾಗಿ ‘ರಫೇಲ್ ಹಗರಣದಲ್ಲಿ ಪ್ರಧಾನಿ ಪಾತ್ರವಿದ್ದು ಹಗರಣದ ತನಿಖೆಯನ್ನು ಜೆಪಿಸಿ(ಜಂಟಿ ಸಂಸದೀಯ ಸಮಿತಿ) ತನಿಖೆಗೆ ಒಳಪಡಿಸಿ’ ಎಂದು ಆಗ್ರಹಿಸಿದರು. ರಾಷ್ಟ್ರಪತಿಯವರಿಗೆ ಪ್ರಧಾನಿ ವಿರುದ್ಧ ದೂರು ನೀಡಿ ‘ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿ’ ಎಂದು ಕೇಳಿಕೊಂಡು ಪ್ರಜಾತಂತ್ರಕ್ಕೆ ಮಾರಕವಾದಂತಹ ಹೆಜ್ಜೆಯನ್ನು ಪ್ರತಿಪಕ್ಷ ಇಟ್ಟಿಲ್ಲ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಹಾಗೊಂದು ವೇಳೆ ರಾಷ್ಟ್ರಪತಿಯವರು ಮತ್ತು ರಾಜ್ಯಪಾಲರುಗಳು ಸರ್ಕಾರದ ಮುಖ್ಯಸ್ಥರನ್ನು “ತಮ್ಮ ವಿವೇಚನಾಧಿಕಾರ ಬಳಸಿ” ಜೈಲಿಗೆ ಹಾಕುವ ಸಂಪ್ರದಾಯವನ್ನು ಪ್ರಾರಂಭಿಸಿದರೆ ಅರಾಜಕತೆ ಸೃಷ್ಟಿಯಾಗುತ್ತದೆ.

ಮುಖ್ಯಮಂತ್ರಿಗಳ ವಿರುದ್ಧ ನೇರವಾಗಿ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಬಹುದೇ ?

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾವುದೇ ನ್ಯಾಯಾಧಿಕರಣ/ಆಯೋಗ/ಅರೆ ನ್ಯಾಯಿಕ ಸಂಸ್ಥೆ/ಇಲಾಖೆಗಳು ಅಪರಾಧ ಮೊಕದ್ದಮೆಯನ್ನು ದಾಖಲಿಸಿಕೊಂಡಿಲ್ಲ. ಹಾಗಿರುವಾಗ ಪ್ರಾಸಿಕ್ಯೂಶನ್ ಗೆ ಅನುಮತಿ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ಕೊಡುವ ಸಂದರ್ಭದಲ್ಲಿ ಲೋಕಾಯುಕ್ತದಲ್ಲಿ ಬಿಎಸ್ ವೈ ನೇತೃತ್ವದ ಸರ್ಕಾರದ ವಿರುದ್ಧ ಹಲವು ಆರೋಪಗಳಿದ್ದವು. ಸರ್ಕಾರವು ತನಿಖೆ ಮಾಡಲು ಸಹಕರಿಸುತ್ತಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳು ಹೇಳಿಕೆ ನೀಡಿದ್ದರು. ಲೋಕಾಯುಕ್ತ ತನಿಖೆಗೆ ಅಡ್ಡಿಯಾಗುವ ರೀತಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟ ಸ್ಥಿತಿಯಲ್ಲಿ ರಾಜ್ಯಪಾಲರ ಮುಂದೆ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡುವ ಹೊರತು ಬೇರೆ ದಾರಿ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ನೇರ ಭಾಗಿದಾರಿಕೆಗೆ ಸಹಿಗಳ ಸಾಕ್ಷ್ಯಗಳಿತ್ತು. ಆಗ ರಾಜ್ಯಪಾಲರು ವಿವೇಚನಾಧಿಕಾರ ಬಳಸಿದ್ದರು. ಆದರೆ ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ನೇರ ಭಾಗಿದಾರಿಕೆ ಇಲ್ಲ. “ಪ್ರಭಾವ ಬೀರಬಹುದು/ಬೀರುವ ಸಾಧ್ಯತೆ ಇದೆ” ಎಂಬ ಗುಮಾನಿಗಳ ಆಧಾರದಲ್ಲಿ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ನೋಟಿಸ್ ಜಾರಿ ಮಾಡಬಹುದೇ ? ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಬಹುದೇ ?

ಸಂವಿಧಾನದ ಆರ್ಟಿಕಲ್ 163 ಪ್ರಕಾರ ರಾಜ್ಯಪಾಲರು ಸಚಿವ ಸಂಪುಟದ ಸಲಹೆಯಂತೆ ಕಾರ್ಯನಿರ್ವಹಿಸಬೇಕು. ಆರ್ಟಿಕಲ್ 163  “ರಾಜ್ಯಪಾಲನಿಗೆ ನೆರವು ಮತ್ತು ಸಲಹೆಯನ್ನು ನೀಡಲು ಮಂತ್ರಿಮಂಡಲ” ಎಂದು ಹೇಳುತ್ತದೆ. ಅಂದರೆ ಮಂತ್ರಿ ಮಂಡಲದ ಶಿಫಾರಸ್ಸಿನಂತೆ ರಾಜ್ಯಪಾಲರು ನಡೆದುಕೊಳ್ಳಬೇಕು ಎಂದರ್ಥ.

ಸಂವಿಧಾನದ ಆರ್ಟಿಕಲ್ 163(1)  ಅದನ್ನು ಇನ್ನಷ್ಟು ವಿಸ್ತರಿಸಿ “ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ  ರಾಜ್ಯಪಾಲನು, ತನ್ನ ಎಲ್ಲಾ ಪ್ರಕಾರ್ಯಗಳನ್ನು ಅಥವಾ ಅವುಗಳಲ್ಲಿ ಯಾವುದೇ ಪ್ರಕಾರ್ಯವನ್ನು ತನ್ನ ವಿವೇಚನಾನುಸಾರವಾಗಿ ಚಲಾಯಿಸಲು ಅವನನ್ನು ಅಗತ್ಯಪಡಿಸಿರುವಷ್ಟರ ಮಟ್ಟಿಗೆ ಹೊರತು, ತನ್ನ ಪ್ರಕಾರ್ಯಗಳನ್ನು ನಿರ್ವಹಿಸುವಲ್ಲಿ ಅವನಿಗೆ ನೆರವು ಮತ್ತು ಸಲಹೆಯನ್ನು ನೀಡಲು ಮುಖ್ಯಮಂತ್ರಿಯ ನೇತೃತ್ವದಲ್ಲಿ ಮಂತ್ರಿಮಂಡಲ ಇರತಕ್ಕದ್ದು” ಎಂದು ಹೇಳುತ್ತದೆ.

ಆದಾಗ್ಯೂ ರಾಜ್ಯಪಾಲರಿಗೆ ವಿವೇಚನಾಧಿಕಾರ ಬಳಸುವ ಅವಕಾಶವನ್ನೂ ಸಂವಿಧಾನ ನೀಡಿದೆ. ಆರ್ಟಿಕಲ್ 163(2) “ಯಾವುದೇ ವಿಷಯವು ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ರಾಜ್ಯಪಾಲನು ತನ್ನ ವಿವೇಚನಾನುಸಾರ  ಕಾರ್ಯನಿರ್ವಹಿಸಬೇಕೆಂದು ಅವನನ್ನು ಅಗತ್ಯಪಡಿಸಿದ ವಿಷಯವೇ ಅಥವಾ ಅಲ್ಲವೇ ಎಂಬ ಯಾವುದೇ ಪ್ರಶ್ನೆಯು ಉದ್ಭವಿಸಿದರೆ, ರಾಜ್ಯಪಾಲನು ತನ್ನ ವಿವೇಚನೆಗೆ ಅನುಸಾರವಾಗಿ ಕೈಗೊಂಡ ತೀರ್ಮಾನವೇ ಅಂತಿಮವಾದುದಾಗಿರತಕ್ಕದ್ದು ಮತ್ತು ರಾಜ್ಯಪಾಲನು ಕೈಗೊಂಡ ಯಾವುದೇ ಕಾರ್ಯದ ಸಿಂಧುತ್ವವನ್ನು ಅವನು ತನ್ನ ವಿವೇಚನಾನುಸಾರ ಕಾರ್ಯನಿರ್ವಹಿಸಬೇಕಿತ್ತು ಅಥವಾ ಕಾರ್ಯನಿರ್ವಹಿಸಬಾರದಿತ್ತು ಎಂಬ ಕಾರಣದ ಮೇಲೆ ಪ್ರಶ್ನಿಸತಕ್ಕದ್ದಲ್ಲ” ಎಂದು ಸ್ಪಷ್ಟವಾಗಿ ರಾಜ್ಯಪಾಲರಿಗೆ ಸಂವಿಧಾನವು ವಿವೇಚನಾಧಿಕಾರ ನೀಡಿದೆ. ಹಾಗಾದರೆ ರಾಜ್ಯಪಾಲರ ವಿವೇಚನಾಧಿಕಾರ ಎಂದರೆ ಏನು ? “ರಾಜ್ಯಪಾಲರು ವಿವೇಚನಾಧಿಕಾರ ಬಳಸಲು ಪೂರಕವಾಗಿ ಮಂತ್ರಿಮಂಡಲ ಸಲಹೆ ನೀಡಿರಬೇಕು ಅಥವಾ ಮಂತ್ರಿಮಂಡಲದ ಸಲಹೆಯಂತೆ ವಿವೇಚನಾಧಿಕಾರವನ್ನು ಬಳಸಬೇಕು” ಎಂಬ ಅರ್ಥವನ್ನೇ ಆರ್ಟಿಕಲ್ 163(1) ಸ್ಪಷ್ಟವಾಗಿ ಹೇಳುತ್ತದೆ. 

ಸುಪ್ರಿಂ ಕೋರ್ಟ್ ಕೂಡಾ ಈ ಸಂಬಂಧ ಮಹತ್ವದ ತೀರ್ಪು ನೀಡಿದೆ. “ರಾಜ್ಯಪಾಲರು ರಾಜ್ಯದ ಕಾರ್ಯಾಂಗ ಪ್ರಕಾರ್ಯಗಳಲ್ಲಿ ಯಾವುದೇ ಮಹತ್ವದ ಪಾತ್ರ ವಹಿಸುವಂತಿಲ್ಲ” ಎಂದು Nabham Rebia and Bamang Felix v/s Deputy speaker arunachal pradesh ಪ್ರಕರಣದ ತೀರ್ಪಿನಲ್ಲಿ ಉಲ್ಲೇಖಿಸಿದೆ. (ಆಧಾರ : ಜಸ್ಟಿಸ್ ಎಂ ಎಲ್ ಸಿಂಘಲ್ ಪ್ರಕಟಿತ ಭಾರತ ಸಂವಿಧಾನ 2024 ರ ಮರುಮುದ್ರಣದ ಗ್ರಂಥ – ಅನುಚ್ಚೇದ 163 ಯ ವ್ಯಾಖ್ಯಾನ)

ರಾಜ್ಯ ಸರ್ಕಾರವು ರಾಜ್ಯಪಾಲರ ಹೆಸರಿನಲ್ಲಿ ನಡೆಯುತ್ತಿದೆ. ಹಾಗಾಗಿ ಕಾರ್ಯಾಂಗ ವ್ಯಾಪ್ತಿಯ ಆದೇಶಗಳೆಲ್ಲವೂ ರಾಜ್ಯಪಾಲರ ಹೆಸರಿನಲ್ಲಿರುತ್ತವೆ‌. ಯಾವುದೇ ಕಾರ್ಯದರ್ಶಿ ಮಟ್ಟದ ಅಧಿಕಾರಿ ಯಾವುದೇ ಆದೇಶ ಮಾಡುವ ಸಂದರ್ಭದಲ್ಲಿ “ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ” ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಸಹಿ ಹಾಕುತ್ತಾರೆ. ರಾಜ್ಯಪಾಲರ ಹೆಸರಿನಲ್ಲಿ ಸಹಿ ಹಾಕುವ ಅಧಿಕಾರ ರಾಜ್ಯ ಸರ್ಕಾರದ ಸೆಕ್ರೇಟ್ರಿಯೇಟ್‌ ( Secretariat ) ಗೆ ಇದೆ. 

ವ್ಯಕ್ತಿಯೊಬ್ಬರ ಮೇಲೆ ತನಿಖೆ ನಡೆಸುವುದು ಕಾರ್ಯಾಂಗದ ವ್ಯಾಪ್ತಿಯದ್ದಾಗಿದೆ. ಸಂವಿಧಾನದ ಆರ್ಟಿಕಲ್ 166(1) ಪ್ರಕಾರ “ರಾಜ್ಯ ಸರ್ಕಾರದ ಕಾರ್ಯಾಂಗದ ಸಮಸ್ತ ಕಾರ್ಯವು ರಾಜ್ಯಪಾಲನ ಹೆಸರಿನಲ್ಲಿ ನಡೆಯುತ್ತದೆಯೆಂದು ವ್ಯಕ್ತವಾಗತಕ್ಕದ್ದು” ಎಂದು ಹೇಳುತ್ತದೆ. 

ಸಂವಿಧಾನದ ಆರ್ಟಿಕಲ್ 166(1) ರ ಅರ್ಥ ಏನೆಂದರೆ  ರಾಜ್ಯಪಾಲರು ತಾನೇ ಸಹಿಗಳನ್ನು ಹಾಕಿಕೊಂಡು ನೇರವಾಗಿ ಕಾರ್ಯಾಂಗದ ಆಡಳಿತ ಮಾಡುವಂತಿಲ್ಲ. ಕಾರ್ಯಾಂಗದ ಸೆಕ್ರೆಟ್ರಿಯೇಟ್ ಮೂಲಕ ಆಡಳಿತ ನಡೆಸಬೇಕು. ಕಾರ್ಯಾಂಗಕ್ಕೆ ಮುಖ್ಯಮಂತ್ರಿಗಳು ಮುಖ್ಯಸ್ಥರಾಗಿದ್ದು, ಸಚಿವ ಸಂಪುಟ ಮುಖ್ಯಮಂತ್ರಿ ಹುದ್ದೆಯೊಂದಿಗೆ ಅಂತರ್ಗತವಾಗಿರುತ್ತದೆ. ಹಾಗಾಗಿ ಸಚಿವ ಸಂಪುಟ ಅಥವಾ ಮುಖ್ಯಮಂತ್ರಿ ಸಲಹೆಯಂತೆ ರಾಜ್ಯಪಾಲರು ಕಾರ್ಯನಿರ್ವಹಣೆ ಮಾಡತಕ್ಕದ್ದು. 

ಸಂವಿಧಾನದ ಆರ್ಟಿಕಲ್ 163(1)(2)ಮತ್ತು 166(1) ಅನ್ನು ಜೊತೆಗೇ ಓದಿ ಅದರ ಜೊತೆ ಸುಪ್ರಿಂ ಕೋರ್ಟ್ Jp Bansal v/s state of rajastan ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಓದಬೇಕು. “ಸಂವಿಧಾನಕ್ಕೆ ಅವಶ್ಯಕತೆಯಿದ್ದಾಗ ರಾಜ್ಯಪಾಲರ ಹೆಸರಿನಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಆ ಕೃತ್ಯವನ್ನು ಕೈಗೊಳ್ಳಬೇಕು. ಅಂತಹ ಕೃತ್ಯವು ರಾಜ್ಯಕ್ಕೆ ಸಂಬಂಧಿಸಿದ್ದಾಗಿರಬೇಕು. ಮಂತ್ರಿಮಂಡಲದ ಮಂತ್ರಿಗಳು ಸಲಹಾಗಾರರು ಮತ್ತು ರಾಜ್ಯದ ಮುಖ್ಯಸ್ಥರಾಗಿರುತ್ತಾರೆ. ಮಂತ್ರಿ ಮಂಡಲದ ಸಹಾಯ/ಸಲಹೆಗಳೊಂದಿಗೆ ರಾಜ್ಯಪಾಲರು ಕೆಲಸ ಮಾಡಬೇಕು” ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಹಾಗಾಗಿ ಮಂತ್ರಿಮಂಡಲ ಸಲಹೆ/ಶಿಫಾರಸ್ಸು ಮಾಡದೆಯೇ ಕಾನೂನು ಸುವ್ಯವಸ್ಥೆ /ತನಿಖೆ/ ಸರ್ಕಾರದ ಕೆಲಸದಲ್ಲಿ  ರಾಜ್ಯಪಾಲರು ಹಸ್ತಕ್ಷೇಪ ಮಾಡಬಹುದೇ? ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದೆಯೇ ಎಂದರೆ  ಸಂವಿಧಾನದ ಆರ್ಟಿಕಲ್ 163(2) ಅನ್ನು ಮಾತ್ರ ಓದಿದರೆ ರಾಜ್ಯಪಾಲರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡುವ ಅಧಿಕಾರ ಇರುವಂತೆ ಕಾಣಬಹುದು. ಆದರೆ ಸಂವಿಧಾನದ ಹಕ್ಕುಗಳು ಎನ್ನುವುದು ‘ಪಿಕ್, ಚ್ಯೂಸ್ & ಯೂಸ್’ ಎನ್ನುವಷ್ಟು ದುರ್ಬಲವಲ್ಲ. ಆರ್ಟಿಕಲ್ 163 ರ ಜೊತೆಗೇ 163(2) ಓದುತ್ತಾ, ಆರ್ಟಿಕಲ್ 166(1) ಮತ್ತು Nabham Rebia and Bamang Felix v/s Deputy speaker arunachal pradesh ಮತ್ತು Jp Bansal v/s state of rajastan  ತೀರ್ಪುಗಳನ್ನೂ ಓದಬೇಕಾಗುತ್ತದೆ. 

ಹಾಗಾಗಿ ರಾಜ್ಯಪಾಲರು ಒಕ್ಕೂಟ ಸರ್ಕಾರದ ಒಪ್ಪಂದಗಳು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸಂವಿಧಾನದ ‘ಆಯ್ದ’ ಆರ್ಟಿಕಲ್ ಗಳನ್ನು ಬಳಸಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಶನ್ ಗೆ ಕ್ರಮ ಕೈಗೊಳ್ಳುವುದು  ಅಸಾಂವಿಧಾನಿಕವಾಗಿದೆ. ಇದು ಕೇವಲ ಕಾನೂನು/ಸಂವಿಧಾನದ ಜೊತೆಗೆ ರಾಜ್ಯಪಾಲರ ಸಂಘರ್ಷವಾಗಿರದೇ ರಾಜ್ಯಗಳ ಅಸ್ಮಿತೆಯ ಮೇಲೆ ನಡೆಸುವ ಸಂಘರ್ಷ ಎಂದು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕಿದೆ.

ನವೀನ್‌ ಸೂರಿಂಜೆ

ಹಿರಿಯ ಪತ್ರಕರ್ತರು, ಲೇಖಕರು.

ಇದನ್ನೂ ಓದಿ- ಸಂಕಷ್ಟದಲಿರುವ ಜನರು; ಹಗರಣಗಳ ಹಿಂದೆ ನಾಯಕರು

More articles

Latest article