ಇಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಭಾರತದ ಸಂವಿಧಾನದ 341ನೇ ವಿಧಿಗೆ 3 ನೇ ಖಂಡ ಸೇರಿಸಿ ಸಂವಿಧಾನ ತಿದ್ದುಪಡಿ ಮಾಡಿ ಒಳಮೀಸಲಾತಿ ಜಾರಿಯಾಗುವಂತೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲು ಸಚಿವ ಸಂಪುಟ ಮಹತ್ವದ ನಿರ್ಣಯ ಕೈಗೊಂಡಿದೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್ ಸಿ ಮಹದೇವಪ್ಪ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದರೊಂದಿಗೆ . ಈ ಮೂಲಕ ಬಹುದಿನಗಳಿಂದ ಜೀವಂತವಾಗಿರುವ ಒಳ ಮೀಸಲಾತಿ ವಿವಾದಕ್ಕೆ ಈಗ ಕರ್ನಾಕಟದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿಗ್ ಟ್ವಿಸ್ಟ್ ಕೊಟ್ಟಿದೆ.
ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಿದಲ್ಲಿ ಮಾತ್ರವೇ ಮೀಸಲಾತಿ ವರ್ಗೀಕರಣ ಸಾಧ್ಯವಿದೆ. ಈ ಹಿಂದೆ ಆಂದ್ರ ಪ್ರದೇಶದ ಸಂದರ್ಭದಲ್ಲಿ UPA ಸರ್ಕಾರ ನೇಮಿಸಿದ್ದ ದೆಹಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಉಷಾ ಮೆಹ್ರಾ ನೇತೃತ್ವದ ಆಯೋಗವೂ ಸಂವಿಧಾನ ತಿದ್ದುಪಡಿಯ ಶಿಫಾರಸು ಸಲ್ಲಿಸಿತ್ತು. ಸಂವಿಧಾನದ 341ನೇ ವಿಧಿಗೆ ಹೊಸದಾಗಿ 3 ನೇ ಕಂಡಿಕೆಯನ್ನು ಸೇರಿಸಿ ಒಳಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯಕ್ಕೆ ನೀಡಬೇಕು ಎಂದು ಅದು ಶಿಫಾರಸು ಮಾಡಿತ್ತು.
“ನಾವು ಎಲ್ಲಾ 101 ಪರಿಶಿಷ್ಟ ಜಾತಿಗಳ ಹಿತವನ್ನು ಕಾಪಾಡಲು ಬದ್ಧರಾಗಿದ್ದೇವೆ. ಇದಕ್ಕಾಗಿ ಇದುವರೆಗೆನ ಎಲ್ಲಾ ಬೆಳವಣಿಗೆಗಳನ್ನು, ದಾಖಲೆಗಳನ್ನು ಕ್ರೂಢೀಕರಿಸಿ, ಯಾವುದೇ ಜಾತಿಯನ್ನು ಮೀಸಲಾತಿಯಿಂದ ಹೊರಕ್ಕಿಡುವ ಪ್ರಶ್ನೆಯೇ ಇಲ್ಲದೇ, ಆರ್ಟಿಕಲ್ 341 (3) ರಚಿಸಿ ಎಂದು ಕೇಂದ್ರಕ್ಕೆ ಶಿಫಾರಸು ಮಾಡುತ್ತಿದ್ದೇವೆ”. – ಡಾ.ಎಚ್ ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು
“ಕಳೆದ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರವು ತರಾತುರಿಯಲ್ಲಿ ಕ್ಯಾಬಿನೆಟಟ್ ಉಪಸಮಿತಿ ರಚಿಸಿ ಅದರ ಮೂಲಕ ಶಿಫಾರಸು ಮಾಡಿತ್ತು. ಸದಾಶಿವ ಆಯೋಗದ ವರದಿ ಅಪ್ರಸ್ತುತ ಎಂದಿತ್ತು” ಎಂದು ಸಚಿವರು ಆರೋಪಿಸಿದರು.
ಬಿಜೆಪಿ ಮತ್ತು ಸಂಘಪರಿವಾರ ದಲಿತ ಸಮುದಾಯಳನ್ನು ಓಲೈಸುವ ದೃಷ್ಟಿಯಿಂದ ತಾವು ಒಳಮೀಸಲಾತಿ ಪರ ಎಂಬಂತೆ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿದ್ದವು. ಇತ್ತೀಚೆಗೆ ನೆರೆ ರಾಜ್ಯದ ಮಾದಿಗ ಮುಖಂಡ ಮಂದಕೃಷ್ಣ ಮಾದಿಗ ಅವರನ್ನು ಪ್ರಧಾನಿ ಮೋದಿ ಅಪ್ಪಿಕೊಳ್ಳುವ ಒಂದು ಹೈಡ್ರಾಮಾ ಕೂಡಾ ನಡೆದಿತ್ತು. ಆದರೆ ಕಳೆದ ಹತ್ತು ವರ್ಷಗಳಿಂದಲೂ ಒಳಮೀಸಲಾತಿಯ ಚೆಂಡು ಕೇಂದ್ರ ಸರ್ಕಾರದ ಕೋರ್ಟಿನಲ್ಲೇ ಇತ್ತೆಂಬುದು ವಾಸ್ತವ. ಕೇಂದ್ರ ಸಂವಿಧಾನ ತಿದ್ದುಪಡಿ ತಂದರಷ್ಟೇ ಒಳಮೀಸಲಾತಿ ಕಲ್ಪಿಸಲು ಸಾಧ್ಯ. ಹೀಗಿರುವಾಗ ಯಾಕೆ ಆರೆಸ್ಸೆಸ್ ಮತ್ತು ಬಿಜೆಪಿ ಕೇವಲ ಬಾಯಲ್ಲಿ ಒಳಮೀಸಲಾತಿ ಮಂತ್ರ ಜಪಿಸುತ್ತಿವೆ ಎಂಬುದು ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯ ಸಚಿವ ಸಂಪುಟ ಕೈಕೊಂಡಿರುವ ತೀರ್ಮಾನ ಬಹಳ ಮಹತ್ವ ಪಡೆದಿದೆ.
ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇರುವ 101 ಜಾತಿಗಳ ಪೈಕಿ ಪರಸ್ಪರ ದ್ವೇಷ, ವಿರೋಧ, ವೈಮನಸ್ಯ ಇಲ್ಲದಂತೆ ಪರಿಶಿಷ್ಟರೊಳಗಿನ ಸ್ಪೃಶ್ಯ ಜಾತಿಗಳು, ಅಸ್ಪೃಶ್ಯ ಜಾತಿಗಳು, ಎಡಗೈ ಜಾತಿಗಳು, ಬಲಗೈ ಜಾತಿಗಳು ಮತ್ತು ಅಲೆಮಾರಿ ಸಮುದಾಯಗಳು ನ್ಯಾಯಯುತ ಪಾಲು ಪಡೆಯಲು ಮೀಸಲಾತಿ ವರ್ಗೀಕರಣ ಅಥವಾ ಒಳಮೀಸಲಾತಿ ಜಾರಿಯಾಗಬೇಕಿರುವುದು ಅನಿವಾಯರ್ಯ ಎಂದು ಸಾಮಾಜಿಕ ತಜ್ಞರ ಅಭಿಪ್ರಾಯವಾಗಿದೆ. ನ್ಯಾ.ಸದಾಶಿವ ಆಯೋಗವೂ ಇದನ್ನೇ ತಿಳಿಸಿತ್ತು. ಆದರೆ ಈ ಆಯೋಗದ ವರದಿಯ ಕುರಿತು ಅಪಸ್ವರ ಮತ್ತು ತಕರಾರುಗಳನ್ನು ಸಹ ಕೆಲವರು ತೆಗೆದಿದ್ದರು. ಇದೀಗ ನ್ಯಾ.ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಯೋಗಿಸಿರುವ ದೊಡ್ಡ ಅಸ್ತ್ರವಾಗಿದೆ.