ಮೈಸೂರು ಮೂಡಾ ಅಕ್ರಮ: ಆಯುಕ್ತ, ಕಾರ್ಯದರ್ಶಿ, ಇಂಜಿನಿಯರ್ ವರ್ಗಾವಣೆ

Most read

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ಸೈಟುಗಳ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮೂಡಾ ಆಯುಕ್ತ, ಕಾರ್ಯದರ್ಶಿ, ಇಂಜಿನಿಯರ್ ಅನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ, ತನಿಖೆಗೆ ಆದೇಶಿಸಿದೆ.

ಅಕ್ರಮದ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮೈಸೂರಿಗೆ ದೌಡಾಯಿಸಿ ಪರಿಶೀಲನೆ ನಡೆಸಿದ ಸಚಿವ ಭೈರತಿ ಸುರೇಶ್, ಮೂಡಾ ಆಯುಕ್ತರಾದ ದಿನೇಶ್ ಕುಮಾರ್ ಜಿ.ಟಿ. ಅವರನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೆ, ಮೂಡಾದ ಕಾರ್ಯದರ್ಶಿ, ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಅವರನ್ನು ಕೂಡ ವರ್ಗಾವಣೆ ಮಾಡಲಾಗಿದೆ ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಸಂಬಂಧ ಇಬ್ಬರು IAS ಅಧಿಕಾರಿಗಳಾದ ವೆಂಕಟಚಲಪತಿ, ಕವಳಗಿ ಇಂದ ತನಿಖೆ ನಡೆಸಿ 4 ವಾರಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.

ಮುಂದಿನ ಒಂದು ತಿಂಗಳು ಮೂಡಾದಲ್ಲಿ ಯಾವುದೇ ಸೈಟ್ ಹಂಚಿಕೆ ಹಾಗೂ ಸಭೆ ಮಾಡುವಂತಿಲ್ಲ. ಹಿಂದೆ ಹಂಚಿಕೆ ಆಗಿರುವ ಎಲ್ಲಾ ಸೈಟ್‌ಗಳನ್ನ ತಡೆ ಹಿಡಿಯಲಾಗಿದೆ ಎಂದು ಸಚಿವರು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಕಾಯಿದೆ 87ರ ಅನ್ವಯ ರದ್ದುಪಡಿಸಲು 2023 ರ ಅಕ್ಟೋಬರ್ 27 ರಂದು ಆದೇಶ ಮಾಡಲಾಗಿದೆ. ಆದರೆ 2020ರಲ್ಲಿ 50-50ರ ಅನುಪಾತ ಜಾರಿಗೆ ಬಂದಿದ್ದು, ಈ ಬಗ್ಗೆ ಸಚಿವ ಸಂಪುಟದ ಅನುಮತಿ ಬೇಕೆಂಬ ನಿಯಮವಿದ್ದರೂ, ಈವರೆಗೆ ಮೂಡಾ ನೀಡಿರುವ ಜಾಗದ ಕುರಿತು ಸಚಿವ ಸಂಪುಟದಲ್ಲಿ ಯಾವುದೇ ತೀರ್ಮಾನವಾಗಿಲ್ಲ. ಇದರಿಂದಾಗಿ ಇದೇ ನಿಯಮದಲ್ಲಿ ಈವರೆಗೂ ಸಾಕಷ್ಟು ಸೈಟ್‌ಗಳನ್ನು ನೀಡಲಾಗಿದೆ. ಆದರೆ ಇದರಲ್ಲಿ ಎಷ್ಟು ಅಕ್ರಮವಾಗಿದೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇದು ಬಿಜೆಪಿ ಅವಧಿಯಲ್ಲಿ ಆಗಿರುವ ಅವ್ಯವಹಾರ ನಾವು ಅಧಿಕಾರಕ್ಕೆ ಬಂದಮೇಲೆ ಕಟ್ಟುನಿಟ್ಟಿನ ಕ್ರಮ ಕೈಕೊಂಡಿದ್ದೇವೆ. ಆದರೆ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ನಾನು ಇಲ್ಲಿಗೆ ಬಂದು ಸಭೆ ನಡೆಸಿ ಮಾಹಿತಿ ತಿಳಿದುಕೊಂಡಿದ್ದೇನೆ. ಇದು 2020ರಲ್ಲಿ ಆಗಿರುವ ಅವ್ಯವಹಾರ ತನಿಖೆಯ ನಂತರ ಪೂರ್ತಿ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.

ವಿಶ್ವನಾಥ್‌ ಅವರು ಯತೀಂದ್ರ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ ಈ ಕ್ಷಣದವರೆಗೂ ಅವರು ಈ ಪ್ರಕರಣದಲ್ಲಿ ಇದ್ದಾರೆ ಎಂಬ ಮಾಹಿತಿ ನಮಗೆ ಬಂದಿಲ್ಲ ಆದರೆ ಯತೀಂದ್ರ ಈಗ ಎಂಎಲ್‌ಸಿ ಆಗಿದ್ದಾರೆ. ಈ ಹಿಂದೆ ಶಾಸಕರಾಗಿದ್ದರು ಇದಕ್ಕೂ ಅವರಿಗೂ ಸಂಬಂಧವಿಲ್ಲ. ಹೆಚ್. ವಿಶ್ವನಾಥ್ ಅವರು ನಮಗಿಂತ ಹಿರಿಯರು. ಯತೀಂದ್ರ ಬಗ್ಗೆ ಹೇಳೋದಕ್ಕೆ ಏನು ಸಾಕ್ಷಿಯಿದೆ? ಅವರ ಹೇಳಿಕೆಯನ್ನ ಆ ದೇವರೇ ಮೆಚ್ಚಬೇಕು. ವಿಶ್ವನಾಥ್ ಅವರ ಬಳಿ ಸಾಕ್ಷಿ ಇದ್ದರೆ ತಂದು ಕೊಡಲಿ ಎಂದು ಸವಾಲು ಹಾಕಿದ್ದಾರೆ.

ಇನ್ನೂ ಮೂಡಾ ದಾಖಲಾತಿಗಳನ್ನ ಪೆನ್ ಡ್ರೈವ್‌ನಲ್ಲಿ ಹಾಕಿ ಕೊಡುವಂತೆ ಕೇಳಿದ್ದ ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಪೆನ್‌ಡ್ರೈವ್ ಸಂಸ್ಕೃತಿ ಇಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ, ವಿಶ್ವನಾಥ್ ಈಗ ಮಾತನಾಡುತ್ತಿದ್ದಾರೆ. ನನ್ನ ಬಳಿ ಸೈಟ್ ಕೊಡಿಸುವಂತೆ ವಿಶ್ವನಾಥ್ ಬಂದಿದ್ದರು. ಅದನ್ನ ನೆನಪು ಮಾಡಿಕೊಳ್ಳಲಿ. ಸುಮ್ಮನೆ ಆರೋಪಗಳನ್ನ ಮಾಡುವುದನ್ನ ನಿಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

More articles

Latest article