Thursday, December 12, 2024

ಉಪ ಚುನಾವಣೆ: ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ, ಕ್ಷೇತ್ರ ಬಿಟ್ಟು ಹೋಗಲು ತಾಕೀತು

Most read

ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಆಯಾ ಕ್ಷೇತ್ರಗಳ ಜಿಲ್ಲಾಡಳಿತಗಳು ಸಜ್ಜುಗೊಂಡಿವೆ. ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ಜಿಲ್ಲಾಡಳಿತಗಳು ಮುನ್ಸೂಚನೆ ನೀಡಿವೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹಾವೇರಿ ಜಿಲ್ಲೆಯ ಶಿಂಗ್ಗಾವಿ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಗಳಿಗೆ ನ.13, ಬುಧವಾರ ಮತದಾನ ನಡೆಯಲಿದೆ.


ಇಂದು ಸಂಜೆ 6ಕ್ಕೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಕ್ಷೇತ್ರದ ಮತದಾರರಲ್ಲದವರು ಇಂದು ಸಂಜೆ 5.30ರ ನಂತರ ಕ್ಷೇತ್ರಗಳನ್ನು ಬಿಟ್ಟು ಹೋಗಬೇಕು. ಮತದಾರರಲ್ಲದವರು ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವಂತಿಲ್ಲ.
ಮೂರೂ ಕ್ಷೇತ್ರಗಳಲ್ಲಿ ನ.12ರ ಮಂಗಳವಾರ ಸಂಜೆ 6 ಗಂಟೆಯಿಂದ ನ.14ರ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೆ ವಿವಿಧ ಷರತ್ತುಗಳನ್ನು ವಿಧಿಸಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ನ.11ರ ಸೋಮವಾರ ಸಂಜೆ 6 ಗಂಟೆಯಿಂದ ನ.14ರ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೆ ಕ್ಷೇತ್ರಗಳಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಸಾಗಾಣೆಯನ್ನು ನಿಷೇಧಿಸಲಾಗಿದೆ.
ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಕ್ಷೇತ್ರದ ಮತದಾರರಲ್ಲದವರು ಅಥವಾ ಕ್ಷೇತ್ರದ ಚುನಾವಣಾ ಗುರುತಿನ ಚೀಟಿ ಇಲ್ಲದವರಿಗೆ ವಾಸ್ತವ್ಯಕ್ಕೆ ಅವಕಾಶ ನೀಡಬಾರದು ಎಂದು ಹೋಟೆಲ್, ರೆಸಾರ್ಟ್ಸ, ಹೋಂ ಸ್ಟೇ ಮತ್ತು ಕಲ್ಯಾಣ ಮಂಟಪಗಳ ಮಾಲೀಕರಿಗೆ ಮಾಹಿತಿ ನೀಡಲಾಗಿದೆ. ಐವರಿಗಿಂತ ಹೆಚ್ಚು ಜನರು ಒಟ್ಟಾಗಿ ಗುಂಪಾಗಿ ಓಡಾಡುವಂತಿಲ್ಲ.
ವಾಹನಗಳ ಮೂಲಕ ಬಹಿರಂಗ ಪ್ರಚಾರ ಮತ್ತು ಧ್ವನಿವರ್ದಕಗಳ ಬಳಕೆಗೆ ಅವಕಾಶ ಇರುವುದಿಲ್ಲ. ಆದರೆ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದು.


ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವ್ಯಕ್ತಿಯೊಬ್ಬರು ಗರಿಷ್ಠ ರೂ. 50 ಸಾವಿರ ನಗದು ಸಾಗಿಸಬಹುದಾಗಿದೆ. ಅದಕ್ಕೂ ಹೆಚ್ಚಿನ ಮೊತ್ತ ಕೊಂಡೊಯ್ಯಬೇಕಾದರೆ ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕು. ಮತದಾರರನ್ನು ಸೆಳೆಯಲು ಹಣ ಮತ್ತು ಇತರೆ ಆಮಿಷ ಒಡುತ್ತಿದ್ದರೆ ದೂರು ದಾಖಲಿಸಲು 1950ಗೆ ಕರೆ ಮಾಡಬಹುದು ಅಥವಾ ಸಿ-ವಿಜಿಲ್ ಆಪ್ ಮೂಲಕ ದೂರು ನೀಡಲು ಅವಕಾಶವಿದೆ. ಇಂದು ಸಂಜೆಯವರೆಗೂ ಬಹಿರಂಗ ಪ್ರಚಾರಕ್ಕೆ ಅವಕಾಶವಿದ್ದು ಮೂರೂ ಪಕ್ಷಗಳ ವರಿಷ್ಠರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

More articles

Latest article