- ನವೀನ್ ಸೂರಿಂಜೆ
ದಲಿತ/ ನಾಗ ಪರಂಪರೆ/ ಬುದ್ದೀಸಂನ ಪ್ರತಿಪಾದಕಿ ಆರತಿಯ ರಕ್ತವೇ ಚಿನ್ನವಾಯಿತು ! ಪ ರಂಜಿತ್ ನಿರ್ದೇಶನದ ‘ತಂಗಲಾನ್’ ಸಿನೇಮಾದ ಕತೆಯಿದು. ಸಿನೇಮಾದ ಮೊದಲಾರ್ಧದಲ್ಲಿ ‘ನಾಗ ಪರಂಪರೆಯ ನಾಯಕಿ, ಬೌದ್ದಧರ್ಮದ ಅನುಯಾಯಿ ಆರತಿಯ ರಕ್ತ ಚಿನ್ನವಾಗುತ್ತದೆ’ ಎಂದು ತಂಗಲಾನ್ ತನ್ನ ಮಕ್ಕಳಿಗೆ ತನ್ನ ಪೂರ್ವಜರ ಕತೆಯನ್ನು ಹೇಳುವ ಸಂದರ್ಭದಲ್ಲಿ ಹೇಳುತ್ತಾನೆ. ಪೂರ್ವಜರು ತಂಗಲಾನ್ ಗೆ ಹೇಳಿದ್ದ ಜನಪದ ಕತೆಯಾಗಿ ಅದು ಅವನ ಮಕ್ಕಳಿಗೂ ದಾಟಿಸುತ್ತಾನೆ. ಆದರೆ ಚಿತ್ರದ ಕೊನೆಗೂ ಬ್ರಿಟೀಷರ ಜೊತೆ ಹೋರಾಡುವ ಸಂದರ್ಭದಲ್ಲೂ ಆರತಿಯ ನೆತ್ತರು ನೆಲಕ್ಕೆ ಬಿದ್ದ ನಂತರ ನಿಜವಾದ ಚಿನ್ನ ಪತ್ತೆಯಾಗುತ್ತದೆ ಎಂದೇ ಪ ರಂಜಿತ್ ಕತೆ ಹೇಳುತ್ತಾರೆ. ಎರಡನೇ ಬಾರಿಯೂ ಕಲ್ಪನೆಯ ಕತೆ ಆರತಿಯ ಅಗತ್ಯ ಇತ್ತೇ ? ಬ್ರಿಟೀಷರ ಎಂಟ್ರಿಯ ಬಳಿಕ ದಲಿತರ ನಿಜವಾದ ಹೋರಾಟ ತೋರಿಸಬಹುದಿತ್ತಲ್ಲವೇ ಎಂಬ ಪ್ರಶ್ನೆಗಳು ಏಳಬಹುದು.
ಇಂತದ್ದೊಂದು ಅವಶ್ಯಕತೆ ತಂಗಲಾನ್ ಚಿತ್ರಕ್ಕಿತ್ತು ! ಈ ನೆಲ, ಜಲ, ಸಂಪತ್ತು ನಮಗೆ ಸೇರಿದ್ದು ಎಂದು ಹೇಳಬೇಕಾದರೆ ಇತಿಹಾಸದ ಜೊತೆ ಜನಪದವನ್ನೂ ಹೇಳಬೇಕಾಗುತ್ತದೆ. ಬ್ರಾಹ್ಮಣ್ಯವು ಮೊದಲು ಮಾಡಿದ ಕೆಲಸವೇ ಅದು. ದಲಿತ, ಶೂದ್ರರ ಜನಪದವನ್ನು ತಿರುಚಿ ತಮ್ಮದೇ ದೇವರ ಕತೆಯನ್ನು ನೆಲದ ಮಣ್ಣಿಗೆ ಜೋಡಿಸಿದ್ದು ! ಹಾಗಾಗಿ ಈಗಲೂ ಪಾಂಡವರು ನಡೆದಾಡಿದ, ರಾಮ ಕೃಷ್ಣರು ಓಡಾಡಿದ ಸ್ಥಳಗಳು ನಮ್ಮ ನಾಡಿನ ಮೂಲೆಮೂಲೆಯಲ್ಲಿದೆ ! ಬುದ್ದ, ಬೌದ್ದ ಬಿಕ್ಕುಗಳು ಓಡಾಡಿದ, ಆರಾಧಿಸಲ್ಪಟ್ಟ ಕುರುಹುಗಳಿಗೆ ಹಿಂದೂ ದೇವರ ಕಿರೀಟ ಇಡಲಾಗಿದೆ. ಕೆಜಿಎಫ್ ನಲ್ಲಿ ಆಗಿರುವುದು ಅದೇ !
ಕೆಜಿಎಫ್ ಸಮೀಪದ ಮುಳಬಾಗಿಲಿನ ಆವನಿ ಬೆಟ್ಟದ ಹತ್ರ ಸೀತಿ ಬೆಟ್ಟ ಇದೆ. ಸೀತೆ ಬೆಟ್ಟವನ್ನು ಸೀತಿ ಬೆಟ್ಟ ಎಂದು ಜನಪದರು ಕರೆಯುತ್ತಾರೆ. ಇಲ್ಲಿ ಲವಕುಶರನ್ನು ಸೀತೆ ಸಾಕುತ್ತಿದ್ದಳೆಂದೂ, ಅವನಿ ಬೆಟ್ಟದ ಬಂಡೆಗಳ ಮಧ್ಯೆ ಇರುವ ನೀರಿನ ತೊರೆ ಆಕೆ ಬಟ್ಟೆ ಒಗೆಯುವ ಸ್ಥಳವೆಂದೂ ಪ್ರತೀತಿ ಇದೆ. ಕೆಜಿಎಫ್ ದೊಡ್ಡೂರು ಕರಪನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ಯಾಟರಾಯನ ಬೆಟ್ಟದಲ್ಲಿ ರಾಮ, ಲಕ್ಷ್ಮಣ ಮತ್ತು ಸೀತೆ ವಾಸಿಸುತ್ತಿದ್ದರು. ಅಲ್ಲಿ ಈಗಲೂ, ಆಗಲೂ ಯಥೇಚ್ಚ ಜಿಂಕೆಗಳಿವೆ. ಸೀತೆಗೆ ಜಿಂಕೆ ಕಂಡು ಆಸೆಯಾಗುತ್ತದೆ. ಸೀತೆಗಾಗಿ ರಾಮ ಜಿಂಕೆಯನ್ನು ಅಟ್ಟಿಸಿಕೊಂಡು ಹೋಗಿ ಬೇಟೆಯಾಡುತ್ತಾನೆ. ಬಾಣ ತಾಗಿದ ಚಿಂಕೆಯ ರಕ್ತ ಭೂಮಿಯೊಳಗೆ ಹೋಗಿ ಚಿನ್ನವಾಗುತ್ತದೆ ಎಂಬ ಜನಪದ ಕತೆ ಈಗಲೂ ಕೆಜಿಎಫ್ ನಲ್ಲಿದೆ ಎಂದು ಕೆಜಿಎಫ್ ನಿವಾಸಿಯಾಗಿರುವ ರಂಗಕರ್ಮಿ ಅಚ್ಯುತರವರು ಹೇಳುತ್ತಾರೆ.
ಕೆಜಿಎಫ್ ಒಂದು ಕಾಲದಲ್ಲಿ ಬುದ್ದೀಸಂ ನ ನಾಡು ಎಂಬುದಕ್ಕೆ ಹಲವಾರು ದಾಖಲೆಗಳು ಆಗಾಗ ಸಿಗುತ್ತದೆ. ಕೆಜಿಎಫ್ ನ ಚಿನ್ನಕ್ಕೂ ರಾಮಾಯಣಕ್ಕೂ ವ್ಯವಸ್ಥಿತವಾಗಿ ಕತೆ ಜೋಡಿಸಲಾಗಿದೆ. ರಾಮಾಯಣದ ಚಿನ್ನದ ಜಿಂಕೆಗೂ, ಜಿಂಕೆಯ ರಕ್ತ ಚಿನ್ನವಾಗುವುದಕ್ಕೂ ಸಂಬಂಧ ಕಲ್ಪಿಸಿ ಬುದ್ದನ ನೆಲದಲ್ಲಿ ಬ್ರಾಹ್ಮಣ್ಯದ ಕತೆಯನ್ನು ಜನಪದವನ್ನಾಗಿಸಲಾಗಿದೆ. ಚಿನ್ನದ ಗಣಿಯ ಉದ್ಯೋಗ ಸೇರಿದಂತೆ ಹಲವು ಲಾಭಗಳನ್ನು ಮಾತ್ರ ಮೇಲ್ವರ್ಗಗಳು ಪಡೆಯದೇ ಅದನ್ನು ಸಾಂಸ್ಕೃತಿಕವಾಗಿಯೂ ಅವರದ್ದಾಗಿಸಿಕೊಂಡಿದ್ದಾರೆ. ಅದನ್ನು ಮರಳಿ ಪಡೆಯುವ ಭಾಗವಾಗಿಯೇ ಪ ರಂಜಿತ್ ದಲಿತ ಪರಂಪರೆಯ ಆರತಿಯ ರಕ್ತದ ಕತೆಯನ್ನು ಹೇಳಲೇಬೇಕಾಗಿದೆ.
ಬುದ್ದೀಸಂ/ ದಲಿತ ಸಾಂಸ್ಕೃತಿಕ ಅಸ್ಮಿತೆಯು ಸುಖಾಸುಮ್ಮನೆ ವೈದಿಕೀರಣಗೊಂಡಿಲ್ಲ ! ಅದಕ್ಕೊಂದು ಹಿನ್ನಲೆಯಿದೆ. ಅದನ್ನೂ ಪ ರಂಜಿತ್ ಬಹಳ ಸೂಕ್ಷ್ಕವಾಗಿ ತಂಗಲಾನ್ ನಲ್ಲಿ ಅಳವಡಿಸಿಕೊಂಡಿದ್ದಾರೆ.
ತಮಿಳುನಾಡಿನಿಂದ ‘ಪರಯ್ಯ’ ದಲಿತ ಸಮುದಾಯವನ್ನು ಚಿನ್ನದ ಗಣಿಗಾರಿಕೆಗೆಂದು ಕೆಜಿಎಫ್ ಕರೆದುಕೊಂಡು ಬಂದ ಬ್ರಿಟೀಷರು ಬ್ರಾಹ್ಮಣರನ್ನೂ ಕರೆದುಕೊಂಡು ಬರುತ್ತಾರೆ. ಬ್ರಾಹ್ಮಣರಿಗೆಂದೇ ಪ್ರತ್ಯೇಕವಾಗಿ ಒಂದೂ ಊರನ್ನೇ ನಿರ್ಮಿಸಲಾಗುತ್ತದೆ. ಆ ಊರಿನ ಹೆಸರು ದೇವರಾಯ ಸಮುದ್ರ ! ಈ ಊರು ಈಗಲೂ ಮುಳಬಾಗಿಲು ತಾಲೂಕಿನಲ್ಲಿದೆ. ಇಲ್ಲಿ ಆಗ ಬ್ರಾಹ್ಮಣರು ಮಾತ್ರ ವಾಸಿಸುತ್ತಿದ್ದರು. ಈಗಲೂ ಅಲ್ಲಿ ಬ್ರಾಹ್ಮಣರು ಬಹುಸಂಖ್ಯಾತರು. ಬ್ರಿಟೀಷರು ಈ ಬ್ರಾಹ್ಮಣರನ್ನು ಸೂಪರ್ ವೈಸರ್ ಗಳನ್ನಾಗಿ ನೇಮಿಸಿಕೊಂಡಿದ್ದರು. ಅಂದು ಬ್ರಿಟೀಷರ ಜೊತೆ ಗಣಿ ಮೇಲ್ವಿಚಾರಣೆಗೆಂದು ಬಂದ ಬ್ರಾಹ್ಮಣರ ಮಕ್ಕಳು ಸ್ವಾತಂತ್ರ್ಯ ಬಂದ ಬಳಿಕ ಕೆಜಿಎಫ್ ಗಣಿ ಯೂನಿಟ್ ನ ಇಂಜಿನಿಯರ್ ಗಳಾದರು. ಬ್ರಿಟೀಷರ ಜೊತೆ ಬಂದ ದಲಿತ ಗಣಿ ಕಾರ್ಮಿಕರ ಮಕ್ಕಳು ಗಣಿ ಕಾರ್ಮಿಕರ ಮಕ್ಕಳಾಗಿಯೇ ಉಳಿದರು !
ಈ ಕಾಲಘಟ್ಟ ಕೆಜಿಎಫ್ ನ ದಲಿತ ಸಾಂಸ್ಕೃತಿಕ ಪರಂಪರೆ, ಬುದ್ದಿಸಂ ಅನ್ನು ವ್ಯವಸ್ಥಿತವಾಗಿ ನಾಶ ಮಾಡಿತ್ತು. ನಾಗ ಬುಡಕಟ್ಟು/ದಲಿತ ನಾಯಕಿಯ ರಕ್ತವೇ ಚಿನ್ನವಾಗಿರುವ ಕತೆ ನಿಧಾನಕ್ಕೆ ರಾಮನ ಬಾಣದಿಂದ ಗಾಯಗೊಂಡ ಜಿಂಕೆಯ ರಕ್ತವೇ ಚಿನ್ನವಾಯಿತು ಎಂದು ಕತೆಯಾಗಿ ಬದಲಾಯಿತು. ಆರ್ಥಿಕ, ರಾಜಕೀಯ, ಸಾಮಾಜಿಕ ಅಧಿಕಾರದ ಜೊತೆಗೆ ಸಾಂಸ್ಕೃತಿಕ ಅಧಿಕಾರವನ್ನೂ ಬ್ರಾಹ್ಮಣ್ಯವು ಕೈವಶ ಮಾಡಿಕೊಳ್ಳುವುದು ಅಂದರೆ ಹೀಗೆ ! ಅದನ್ನು ಮರಳಿ ಪಡೆಯುವುದು ಎಂದರೆ ತಂಗಲಾನ್ ನಂತಹ ಕತೆಯ ಸಿನೇಮಾ !
ಬ್ರಿಟೀಷರು ಬರುವ ಮೊದಲು ಚೋಳರು ಮತ್ತು ಟಿಪ್ಪು ಸುಲ್ತಾನ್ ಚಿನ್ನದ ಗಣಿಗಾರಿಕೆ ಮಾಡಿದ್ದರು. ಟಿಪ್ಪು ಹೊರತುಪಡಿಸಿ ಉಳಿದ ರಾಜರುಗಳ ಕಾಲದಲ್ಲಿ ಚಿನ್ನದ ಭೂಮಿಗಾಗಿ ದಲಿತ/ ಬುಡಕಟ್ಟು ಜನರ ಜೊತೆ ಯುದ್ದಗಳಾಗುತ್ತದೆ. ರಾಜರು ಬ್ರಾಹ್ಮಣರ ಅನತಿಯಂತೆ ಬುದ್ದೀಸಂ ನಾಶ ಮಾಡಿದರು. ಅಂದೂ ಹಲವು ದಲಿತರು ರಾಜರ ಜೊತೆ ನಿಂತು ಚಿನ್ನದ ಭೂಮಿ ರಾಜರ ಕೈಗೆ ಹೋಗುವಂತೆ ಮಾಡಿದರು. ಹಾಗಾಗಿಯೇ ದಲಿತರು ಬುದ್ದನ ಜೊತೆಗೆ ಭೂಮಿ, ಸಂಪತ್ತು ಕಳೆದುಕೊಂಡರು ಎಂದು ಕತೆ ಹೇಳುತ್ತದೆ. ಬ್ರಿಟೀಷರ ಆಳ್ವಿಕೆಯ ಸಂದರ್ಭದಲ್ಲೂ ಕೆಜಿಎಫ್ ನ ಚಿನ್ನದ ಗಣಿಯಲ್ಲಿ ದಲಿತರು ಜೀತ ಮಾಡಿ ಬ್ರಿಟೀಷರಿಗೆ ಚಿನ್ನದ ಅಗೆದುಕೊಟ್ಟರು. ಅದು ನಮ್ಮದೇ ಸಂಪತ್ತು ಎಂಬ ಭಾವನೆ ಅವರಿಗೆ ಬರಬೇಕಾದರೆ ಆರತಿ ಪ್ರತ್ಯಕ್ಷಳಾಗಬೇಕಾಯಿತು. ಆರತಿ ಪ್ರತ್ಯಕ್ಷಳಾಗುವುದು ಎಂದರೆ ದಲಿತ ಪ್ರಜ್ಞೆ ಬರುವುದು ಎಂದರ್ಥ!
ರಾಜರ ಕಾಲದಲ್ಲಿ ದಲಿತರ ಪರವಾಗಿದ್ದ ಬುದ್ದೀಸಂ, ನಾಗ ಪರಂಪರೆ ಬಲಿಯಾಯಿತು. ಬ್ರಿಟೀಷರ ಆಳ್ವಿಕೆಯ ಸಂದರ್ಭದಲ್ಲಿ ದಲಿತರ ಹಕ್ಕುಗಳಿಗಾಗಿ ಕಮ್ಯೂನಿಸ್ಟರು ಹೋರಾಟ ಮಾಡಿ ಬ್ರಿಟೀಷರ ಗುಂಡಿಗೆ ಬಲಿಯಾದರು. ಸ್ವಾತಂತ್ರ್ಯ ನಂತರ ಆರ್ ಪಿಐ, ದಲಿತ ಸಂಘರ್ಷ ಸಮಿತಿ, ದ್ರಾವಿಡ ಕಳಗಂ ಸಂಘಟನೆಗಳು ಪ್ರತ್ಯೇಕವಾಗಿ ಗಣಿ ಕಾರ್ಮಿಕ ದಲಿತರಿಗಾಗಿ ಹೋರಾಟ ಆರಂಭಿಸಿದವು. ಕಮ್ಯೂನಿಸ್ಟ್ – ಅಂಬೇಡ್ಕರ್ – ಪೆರಿಯಾರ್ ಸಿದ್ದಾಂತದ ಹೋರಾಟಗಳು ನಡೆದವು. ಚಿನ್ನದ ಗಣಿಯನ್ನು ಮುಚ್ಚುತ್ತೇವೆ ಎಂದು ಸರ್ಕಾರ ಘೋಷಿಸಿದಾಗ ‘ದಲಿತ ಕಾರ್ಮಿಕರೇ ಒಟ್ಟಾಗಿ ಗಣಿ ನಡೆಸಲಿ. ನಾವು ಅದಕ್ಕೆ ಬೇಕಾದ ವೇದಿಕೆ ಸಿದ್ದಪಡಿಸೋಣಾ’ ಎಂಬ ಪ್ರಸ್ತಾಪವನ್ನು ವಿಜೆಕೆ ನಾಯರ್ ಮುಂದಿಟ್ಟಿದ್ದರು. ನೆಲದ ಸಂಪತ್ತಿನ ಸಮಾನ ಹಂಚಿಕೆಗಾಗಿ ಹೋರಾಡಬೇಕಿದ್ದ ಈ ಮೂರೂ ಸಂಘಟನೆಗಳು ಒಂದಾಗಿ ಕೆಂಪು-ನೀಲಿ-ಕಪ್ಪು ಬಣ್ಣದ ಒಂದೇ ಬಾವುಟ ಹಿಡಿದಿದ್ದೇ ಆಗಿದ್ದಲ್ಲಿ ಇಂದಿಗೂ ಕೆಜಿಎಫ್ ಗಣಿ ಮುಚ್ಚುತ್ತಿರಲಿಲ್ಲ, ಬದಲಿಗೆ ದಲಿತರ ವಶವಾಗುತ್ತಿತ್ತು.
ತಂಗಲಾನ್ ಚಿತ್ರದ ಕ್ಲೈಮ್ಯಾಕ್ಸ್ ಅದನ್ನೇ ಹೇಳುತ್ತದೆ. “ನಾವು ಈ ನೆಲ, ಸಂಪತ್ತನ್ನು ಉಳಿಸಬೇಕಾದರೆ ನಾವು ಒಟ್ಟಾಗಿರಬೇಕು. ಹಾಗಾಗಿ ಒಟ್ಟಾಗಿ ಉಳಿಸೋಣಾ” ಎಂದು ಆರತಿಯು ಬ್ರಿಟೀಷರ ಜೊತೆಗಿದ್ದ ತಂಗಲಾನ್ ಗೆ ಹೇಳುತ್ತಾಳೆ. ಬ್ರಿಟೀಷರು ಮತ್ತೆ ಬಂದಾಗ ಎಲ್ಲಾ ದಲಿತ ಹೋರಾಟಗಾರರು ಒಂದಾಗಿ ಸಿಂಹ ಘರ್ಜನೆ ಮಾಡುತ್ತಾರೆ ! ತಂಗಲಾನ್ ಸಿನೇಮಾದ ಕೊನೆಯ ಈ ದೃಶ್ಯ ಭವಿಷ್ಯದ ಭಾರತದ ಆಶಯವನ್ನು ವ್ಯಕ್ತಪಡಿಸುತ್ತದೆ !