ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಸ್ವಾಭಾವಿಕ ಸಾವುಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹಿರಿಯ ಪೊಲೀಸ್ ಆಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಹೊರಡಿಸಿದೆ.
ಧರ್ಮಸ್ಥಳದಲ್ಲಿ ನೂರಾರು ವ್ಯಕ್ತಿಗಳ ಮೃತದೇಹಗಳನ್ನು ಅನಾಥವಾಗಿ ಅಂತಿಮ ಕ್ರಿಯೆಗಳಿಲ್ಲದೆ ಹೂಳಿರುವ ಕುರಿತು ಮೂರು ವಾರಗಳ ಹಿಂದೆ ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು (ಕೇಸ್ ನಂ 39/2025). ಇದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು ಇದರ ತನಿಖೆಯನ್ನು ಅನುಭವಿ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆ ನಡೆಸಬೇಕು ಎಂಬ ಒತ್ತಾಯವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಸರ್ಕಾರಕ್ಕೆ ಪತ್ರದ ಮುಖೇನ ಸಲ್ಲಿಸಿತ್ತು. ಕಳೆದ 20-30 ವರ್ಷಗಳಿಂದ ಧರ್ಮಸ್ಥಳ ಪ್ರದೇಶದಲ್ಲಿ ನಡೆದಿದ್ದ ನೂರಾರು ಅಸಹಜ ಸಾವುಗಳು ರಾಜ್ಯದಲ್ಲಿ ಸಾಕಷ್ಟು ಪ್ರತಿರೋಧವನ್ನು ಹುಟ್ಟುಹಾಕಿದ್ದವು. ಅದರಲ್ಲೂ ವಿದ್ಯಾರ್ಥಿನಿಯರ, ಮಹಿಳೆಯರ ಸಾವುಗಳ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯ ಮಾಡುತ್ತಲೇ ಬಂದಿದ್ದವು.
ಇದೀಗ ಧರ್ಮಸ್ಥಳದಲ್ಲಿ ನಡೆದಿರಬಹುದಾದ ಎಲ್ಲಾ ಅಸಹಜ ಸಾವುಗಳ ತನಿಖೆಗೆ ಆದೇಶಿದಿ ಸರ್ಕಾರ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ, ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದೆ.
ಹಿರಿಯ ಪೊಲೀಸ್ ಅಧಿಕಾರಿಗಳಾದ
೧. ಡಾ. ಪ್ರಣವ್ ಮೊಹಾಂತಿ, ಐಪಿಎ ಪೊಲೀಸ್ ಮಹಾನಿರ್ದೇಶಕರು, ಅಂತರಿಕ ಭದ್ರತಾ ವಿಭಾಗ, ಬೆಂಗಳೂರು.
೨. ಎಂ ಎನ್ ಅನುಚೇತ್, ಐಪಿಎಸ್, ಉಪಪೊಲೀಸ್ ಮಹಾನಿರ್ದೇಶಕರು
೩. ಸೌಮ್ಯಲತ, ಐಪಿಎಸ್, ಉಪಪೊಲೀಸ್ ಆಯುಕ್ತರು
೪. ಜಿತೇಂದ್ರ ಕುಮಾರ್ ದಯಾಮ, ಐಪಿಎಸ್, ಪೊಲೀಸ್ ಅದೀಕ್ಷರು.
ಇವರುಗಳನ್ನು ವಿಶೇಷ ತನಿಖಾ ತಂಡ ಒಳಗೊಂಡಿದೆ.
ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ನನ್ನು ಸಿಬಿಐ ನ್ಯಾಯಾಲಯವು ಖುಲಾಸೆ ಮಾಡಿದ ನಂತರದಲ್ಲಿ ಧರ್ಮಸ್ಥಳದ ಸಾವುಗಳ ಕುರಿತು ನ್ಯಾಯವಿಚಾರಣೆಯೇ ಸ್ಥಗಿತವಾಗಿತ್ತು. ಈ ಸಂದರ್ಭದಲ್ಲಿಯೇ ವ್ಯಕ್ತಿಯೊಬ್ಬ ತಾನು ಹತ್ತಾರು ವರ್ಷಗಳ ಕಾಲ ಧರ್ಮಸ್ಥಳದಲ್ಲಿ ಅನಾಥ ಶವರಗಳನ್ನು ಹೂಳಿರುವುದಾಗಿ,ತನಗೆ ಸೂಕ್ತ ರಕ್ಷಣೆ ಒದಗಿಸಿದರೆ ಹೆಣಗಳನ್ನು ಹೊರತೆಗೆದು ಒಪ್ಪಿಸುವುದಾಗಿ ಮುಂದೆ ಬಂದಿದ್ದರು. ಇದರ ನಂತರದಲ್ಲಿ ರಾಜ್ಯದಾದ್ಯಂತ ಮತ್ತೆ ಧರ್ಮಸ್ಥಳದ ಸಾವುಗಳ ಕುರಿತು ಜನರಿಂದ ಹೆಚ್ಚಿನ ತನಿಖೆಗೆ ಒತ್ತಾಯ ಬಂದಿತ್ತು. ಈ ಪ್ರಕರಣವು ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿಯೂ ಮಾರ್ದನಿಸತೊಡಗಿತ್ತು.