ಬೆಂಗಳೂರು: ರಾಜ್ಯಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಬೆಂಗಳೂರು ನಗರ ಇಂದು ಸರ್ಕಾರದ ನಿರ್ಲಕ್ಷ್ಯದಿಂದಾಗಿ ‘ಬ್ರಾಂಡ್ ಬೆಂಗಳೂರು’ ಎನ್ನುವ ಹೆಸರನ್ನು ಕಳೆದುಕೊಂಡು ‘ಕಸದ ಬುಟ್ಟಿ’ ಹಾಗೂ ‘ಟ್ರಾಫಿಕ್ ನರಕ’ವಾಗಿ ಮಾರ್ಪಟ್ಟಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಆರೋಪಗಳು:
ನಗರದ ನಾಲ್ಕೂ ದಿಕ್ಕುಗಳಲ್ಲಿ ಸಮರ್ಪಕ ಡಂಪಿಂಗ್ ಯಾರ್ಡ್ಗಳಿಲ್ಲ. ಡಂಪಿಂಗ್ ಯಾರ್ಡ್ಗಾಗಿ ಮೀಸಲಿಟ್ಟ ಜಾಗವನ್ನು ನಿಯಮ ಬಾಹಿರವಾಗಿ ಬೇರೆಯವರಿಗೆ ಹಂಚಿಕೆ ಮಾಡಲಾಗುತ್ತಿದೆ. ಸರ್ಕಾರದ ಇಂತಹ ಬೇಜವಾಬ್ದಾರಿ ತನ ಮುಂದೆ ಬೆಂಗಳೂರಿಗೆ ಶಾಪವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಬಿಬಿಎಂಪಿಯ ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿಗಳ ತೀವ್ರ ಕೊರತೆಯಿದೆ.ಕಂದಾಯ ಇಲಾಖೆಯಲ್ಲಿ 1400 ಹುದ್ದೆಗಳ ಪೈಕಿ ಕೇವಲ 800 ಮಂದಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆಯಲ್ಲಿ 1063 ಹುದ್ದೆಗಳ ಪೈಕಿ 429 ಮಂದಿ ಮಾತ್ರ ಇದ್ದಾರೆ.ಸಿಬ್ಬಂದಿಗಳಿಲ್ಲದೆ ಆಡಳಿತ ಯಂತ್ರ ಕುಸಿದಿದ್ದರೂ, ಸರ್ಕಾರ ಹೊಸ ಪಾಲಿಕೆಗಳನ್ನು ರಚಿಸಲು ಹೊರಟಿರುವುದು ಅವೈಜ್ಞಾನಿಕ ಎಂದು ಅಶೋಕ್ ಟೀಕಿಸಿದರು.
ಇ-ಖಾತಾ ನೀಡುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಬಿಎಂಪಿ ಅಧಿಕಾರಿಯೊಬ್ಬರು ಖಾತಾ ಮಾಡಿಕೊಡಲು 30,000 ರೂ. ಲಂಚ ಪಡೆದು, ಕೆಲಸ ಮಾಡಿಕೊಡದಿದ್ದಾಗ ಹಣವನ್ನು ಫೋನ್-ಪೇ ಮೂಲಕ ವಾಪಸ್ ಮಾಡಿದ ಸಾಕ್ಷ್ಯವನ್ನು ಅಶೋಕ್ ಸದನದಲ್ಲಿ ಪ್ರದರ್ಶಿಸಿದರು. “ಜನರ ನೆಮ್ಮದಿಗೆ ಸರ್ಕಾರ ಬೆಂಕಿ ಹಚ್ಚುತ್ತಿದೆ” ಎಂದು ಅವರು ಕಿಡಿಕಾರಿದರು.
ನಗರದ ರಸ್ತೆ ಗುಂಡಿಗಳಿಂದಾಗಿ ಈಗಾಗಲೇ 12-13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ತನುಶ್ರೀ ಎಂಬ ಬಾಲಕಿಯ ಸಾವು ಸರ್ಕಾರದ ಅಸಹಾಯಕತೆ ಮತ್ತು ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಬೆಂಗಳೂರಿನ ರಸ್ತೆಗಳ ಬಗ್ಗೆ ಬಹಿರಂಗವಾಗಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರೂ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅವರಿಗೆ ಪ್ರತ್ಯುತ್ತರ ನೀಡುವ ಬದಲು ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಅಶೋಕ್ ಆರೋಪಿಸಿದರು.
“ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗುತ್ತಾ ಬಂದರೂ, ಅಭಿವೃದ್ಧಿಯ ಬಗ್ಗೆ ಪರಿಜ್ಞಾನವಿಲ್ಲದೆ ಕೇವಲ ಅಧಿಕಾರ ಹಂಚಿಕೆಯಲ್ಲೇ ಮುಳುಗಿದೆ. ಬೆಂಗಳೂರಿನ ಜನತೆಗೆ ಮೂಲಸೌಕರ್ಯ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.” – ಆರ್. ಅಶೋಕ್, ವಿರೋಧ ಪಕ್ಷದ ನಾಯಕ.

