ಬೆಂಗಳೂರು: ಅರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸುವುದಿಲ್ಲ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ. ಹೆಚ್. ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಪರಿಷ್ಕರಣೆ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದರು. ಕಾರ್ಡ್ ಗಳ ಪರಿಷ್ಕರಣೆ ಬಗ್ಗೆ ಮಾಹಿತಿ ನೀಡುತ್ತಿರುವ ಮುನಿಯಪ್ಪ, ಯಾವುದೇ ಅರ್ಹ ಬಿಪಿಎಲ್ ಕಾರ್ಡ್ ಗಳ ರದ್ದು ಮಾಡುವುದಿಲ್ಲ. ಎಪಿಎಲ್ ಕಾರ್ಡ್ ಗಳನ್ನೂ ರದ್ದು ಮಾಡುವುದಿಲ್ಲ. ರಾಜ್ಯದ ಒಟ್ಟು ಬಿಪಿಎಲ್ ಕಾರ್ಡ್ ಗಳು ಶೇ. 66ರಷ್ಟಿವೆ. ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರನ್ನು ಹೊರತುಪಡಿಸಿ ಬೇರೆ ಯಾರೊಬ್ಬರ ಯಾವುದೇ ಕಾರ್ಡ್ ರದ್ದು ಮಾಡುತ್ತಿಲ್ಲ ಎಂದರು. ಒಂದು ವೇಳೆ ಅನರ್ಹಗೊಂಡು ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಅವರನ್ನು ಎಪಿಎಲ್ ಗೆ ಸೇರ್ಪಡೆ ಮಡಲಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ನಿಯಮಗಳ ಅನ್ವಯವೇ ಮಾನದಂಡಗಳ ಪ್ರಕಾರವೇ ಪರಿಷ್ಕರಣೆ ಮಾಡಲಾಗಿದೆ. ಬಿಪಿಎಲ್ ಗೆ ಅನರ್ಹರು ಎಂದು ಕಂಡು ಬಂದಿರುವ ಕಾರ್ಡ್ಗಳನ್ನು ಎಪಿಎಲ್ಗೆ ಬದಲಾವಣೆ ಮಾಡಿದ್ದೇವೆ. ಬಿಪಿಎಲ್ ಗೆ ಅರ್ಹರಿದ್ದೂ ಎಪಿಎಲ್ ಗೆ ಸೇರಿಸಿದ್ದರೆ ಅಂತಹವರಿಗೆ ಬಿಪಿಎಲ್ ಕಾರ್ಡ್ ಮರು ಹಂಚಿಕೆ ಮಾಡುತ್ತೇವೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.