ಬಿಜೆಪಿ ಅವಧಿಯಲ್ಲಿ ಸಾಲು ಸಾಲು ಭ್ರಷ್ಟಾಚಾರ: ಭೋವಿ ನಿಗಮ ಹಗರಣದಲ್ಲಿ ಮೊದಲ ಬಂಧನ

Most read

ಇತ್ತ ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಮತ್ತಿತರ ಹಗರಣಗಳನ್ನು ಪ್ರಸ್ತಾಪಿಸಿ ಬಿಜೆಪಿ ಸಾಲು ಸಾಲು ಪ್ರತಿಭಟನೆ ಮಾಡುತ್ತಿದೆ. ಅತ್ತ ಬಿಜೆಪಿ ಅವಧಿಯ ನಡೆದ ಹಗರಣಗಳ ತನಿಖೆ ತೀವ್ರಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ, ರಾಜ್ಯ ಭೋವಿ ನಿಗಮದ ಕೋಟ್ಯಂತರ ರು. ಅವ್ಯವಹಾರ ಪ್ರಕರಣ ಸಂಬಂಧ ನಿಗಮದ ಕಚೇರಿ ಅಧೀಕ್ಷಕ ಪಿ.ಡಿ.ಸುಬ್ಬಪ್ಪರನ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

2021-22ನೇ ಸಾಲಿನಲ್ಲಿ ಬೋವಿ ಸಮುದಾಯದ ಉದ್ಯಮಿಗಳಿಗೆ ನಿಗಮವು ನೀಡುವ ಆರ್ಥಿಕ ಸಾಲ ಯೋಜನೆಯಲ್ಲಿ ಕೋಟ್ಯಂತರ ಮೊತ್ತದ ಅಕ್ರಮ ನಡೆದಿದೆ ಎಂದು ಆರೋಪಿಸಿ ಬೆಂಗಳೂರಿನ ಸಿದ್ದಾಪುರ, ಕಲಬುರಗಿ ಜಿಲ್ಲೆಯ ಕಾಳಗಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಈ ಹಗರಣದ ಕುರಿತು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂತ್ರಿ ಶಿವರಾಜ ತಂಗಡಗಿ ಅ‍ವರಿಗೆ ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಸಹ ದೂರು ಕೊಟ್ಟಿದ್ದರು. ಅಕ್ರಮದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರವು, ಕೆಲ ದಿನಗಳ ಹಿಂದೆ ಸಿಐಡಿ ತನಿಖೆಗೆ ಆದೇಶಿಸಿತ್ತು.

ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು ನಿಗಮದ ಅಧೀಕ್ಷಕ ಸುಬ್ಬಪ್ಪರನ್ನು ಬಂಧಿಸಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗೆ 4 ದಿನಗಳು ಕಸ್ಟಡಿಗೆ ಪಡೆದಿದ್ದಾರೆ.

2021-23ವರೆಗೆ ನಿಗಮದ ಕೇಂದ್ರ ಕಚೇರಿಯ ಅಧೀಕ್ಷಕರಾಗಿ ಸುಬ್ಬಪ್ಪ ಕಾರ್ಯನಿರ್ವಹಿಸುತ್ತಿರುವಾಗ, ನಿಗಮದಿಂದ ಆ ಸಮುದಾಯದ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಲು ಸಾಲ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಉದ್ಯಮಶೀಲಾ ಮತ್ತು ನೇರ ಸಾಲ ಯೋಜನೆಗಳಲ್ಲಿ ಆರ್ಥಿಕ ನೆರವು ಕೊಡಿಸುವುದಾಗಿ ನಂಬಿಸಿ ಮಧ್ಯವರ್ತಿಗಳು ಲಕ್ಷಾಂತರ ರೂ. ಪಡೆದು ವಂಚಿಸಿದ್ದರು. ಅಲ್ಲದೆ ಸಾಲ ಮಂಜೂರಾತಿ ಮಾಡಿರುವ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ನಿಗಮದ ಕೋಟ್ಯಂತರ ಹಣವನ್ನು ಅಧಿಕಾರಿಗಳು ನುಂಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಹಗರದಣ ಆರೋಪ ಕೇಳಿ ಬಂದ ಕೂಡಲೇ ಅಧಿಕಾರಿ ಸುಬ್ಬಪ್ಪ, 200ಕ್ಕೂ ಹೆಚ್ಚಿನ ಕಡತಗಳನ್ನು ಕಳವು ಮಾಡಿ ಬಚ್ಚಿಟ್ಟಿದ್ದರು. ಈಗ ಆ ಕಡತಗಳನ್ನು ವಾಪಸ್ ಪಡೆಯಲಾಗುತ್ತಿದೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

More articles

Latest article