ಬೆಂಗಳೂರು: ಬ್ರಿಟಿಷರ ಪರ ನಿಂತು, ಮಾತೃಭೂಮಿಗೆ ದ್ರೋಹ ಬಗೆದವರು ದೇಶಪ್ರೇಮಿಗಳಾಗಲು ಸಾಧ್ಯವಿಲ್ಲ. ಸ್ವತಂತ್ರ ಚಳುವಳಿಯ ವಿರುದ್ಧ ನಿಂತವರನ್ನು ದೇಶದ ಜನ ಒಪ್ಪಿಕೊಳ್ಳಲು ಸಾಧ್ಯವೇ ಎಂದು ಕಾಂಗ್ರೆಸ್ ಮುಖಂಡ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಈ ಸಂಬಂಧ ಸ್ಪಷ್ಟನೆ ನೀಡಿದ್ದು, ಸಾವರ್ಕರ್ ಕ್ಷಮಾಪಣಾ ಪತ್ರ ಬರೆದರೇ, ಶ್ಯಾಮ ಪ್ರಸಾದ್ ಮುಖರ್ಜಿ ಕ್ವಿಟ್ ಇಂಡಿಯಾ ಚಳುವಳಿಯಲ್ಲೇ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದರು.
ದೇಶದ ಜನ ಸಾಮಾನ್ಯರು ಗಾಂಧಿಯವರನ್ನ ಮಹಾತ್ಮರನ್ನಾಗಿ ಕರೆದಾಗ,ಮಹಾತ್ಮರನ್ನೇ ಕೊಂದು ಸಿಹಿ ಹಂಚುವ ವಿಕೃತ ಮನಸ್ಥಿತಿಯನ್ನು ಈ ದೇಶದ ನೆಲ ಒಪ್ಪುವುದಿಲ್ಲ.
ಜಗತ್ತು ಅಹಿಂಸೆಯ ಪ್ರತಿಪಾದಕನನ್ನು ಅಪ್ಪಿ, ಒಪ್ಪಿಕೊಂಡು ಗೌರವ ಸಲ್ಲಿಸುತ್ತಿದೆಯೇ ಹೊರತು ಕೊಂದವರನ್ನಲ್ಲ, ಕೊಂದು ಸಮರ್ಥಿಸಿದವರನ್ನಲ್ಲ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ, ಭಾರತ ಇಬ್ಭಾಗ ಆಗಲು ಮಹಾತ್ಮಾ ಗಾಂಧಿ ಕಾರಣವೇ ಅಲ್ಲ.!
ಮಹಾತ್ಮಾ ಗಾಂಧಿ ಅವರನ್ನು ಕೊಲ್ಲುವುದಕ್ಕೂ, ಭಾರತ ಇಬ್ಭಾಗ ಆಗುವುದಕ್ಕೂ ಮೂಲ ಕಾರಣವೇ ಅಲ್ಲ…! ಭಾರತವನ್ನು ಇಬ್ಭಾಗ ಮಾಡಲು ಮೊಟ್ಟ ಮೊದಲ ಬೇಡಿಕೆ ಇಟ್ಟಿದ್ದೇ ಸಾವರ್ಕರ್ ಹೊರತು ಮಹಾತ್ಮಾ ಗಾಂಧಿ ಅವರಲ್ಲ..! ಎಂದಿದ್ದಾರೆ.
1935-37ರ ಅಹಮದಾಬಾದ್ ಹಿಂದೂ ಮಹಾಸಭಾದ ಸಭೆಯಲ್ಲಿ ದ್ವಿರಾಷ್ಟ್ರ ಸಿದ್ದಾಂತ ಪ್ರತಿಪಾದಿಸಿದ್ದೇ ಸಾವರ್ಕರ್. ಗಾಂಧಿಯವರನ್ನು ಆರು ಬಾರಿ ಕೊಲ್ಲಲು ವಿಫಲ ಯತ್ನ ನಡೆಸಲಾಗಿದೆ.
ಹಿಂದೂ -ಮುಸ್ಲಿಂ ಐಕ್ಯತೆಯನ್ನು ಪ್ರತಿಪಾದಿಸುತ್ತಲೇ, ಶ್ರೇಣಿಕೃತ ವ್ಯವಸ್ಥೆಯ ವಿರುದ್ಧ, ಅಸ್ಪೃಶ್ಯತೆಯ ವಿರುದ್ಧ ಹೋರಾಟ ನಡೆಸಿದ್ದರಿಂದಲೇ ಗಾಂಧಿಯನ್ನು ಕೊಂದಿದ್ದು ಕಟು ಸತ್ಯ. ಇತಿಹಾಸವನ್ನು ತಿರುಚುವುದರಿಂದ ಸತ್ಯ, ಸುಳ್ಳಾಗುವುದಿಲ್ಲ ಎಂದು ಸಂಘ ಪರಿವಾರ ಮತ್ತು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

