ಭಾರತೀಯ ಅಂಚೆ ಇಲಾಖೆಯು ತನ್ನ ‘ಬುಕ್ ಪೋಸ್ಟ್’ ಸೇವೆಯನ್ನು ಯಾವುದೇ ಮುನ್ಸೂಚನೆಯಿಲ್ಲದೆ ಡಿಸೆಂಬರ್ 18ರಂದು ಅಧಿಕೃತವಾಗಿ ನಿಲ್ಲಿಸಿದೆ ಎಂದು ವರದಿಯಾಗಿದೆ. ಈ ದಿಢೀರ್ ಬೆಳವಣಿಗೆಯ ಬಾಧಕದ ಕುರಿತು ಪುಸ್ತಕ ಪ್ರಿಯರು, ಮಾರಾಟಗಾರರು ಮತ್ತು ಪ್ರಕಾಶಕರು ಕನ್ನಡ ಪ್ಲಾನೆಟ್‌ನೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಜೀರುಂಡೆ ಪ್ರಕಾಶನದ ಧನಂಜಯ ಮತ್ತು ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆಯವರ ಅನಿಸಿಕೆಗಳು ಇಲ್ಲಿವೆ.
ಪುಸ್ತಕಗಳ ಓದು ಮಾಹಿತಿಗಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಸಂಬಂಧ ಹೊಂದಿರುವುದರಿಂದ ಓದುಗರು ಮತ್ತು ಮಾರಾಟಗಾರರ ನಡುವೆ ಉತ್ತಮ ಕೊಡು ಕೊಳ್ಳುವಿಕೆಯ ಸಂಬಂಧ ಹೊಂದಿರ ಬೇಕಾಗಿರುತ್ತದೆ. ಹಾಗಾಗಿಯೇ ಪುಸ್ತಕಗಳ ಮಾರಾಟವನ್ನು ನಾವು ಸಂಪೂರ್ಣ ಕಮರ್ಶಿಯಲ್ ಆಗಿ ನೋಡಲಾಗುವುದಿಲ್ಲ.
ಓದುಗರಿಗೆ ಪುಸ್ತಕಗಳ ಪರಿಚಯವಾಗುವುದು ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಅವು ಬಹಳ ಬೇಗ ಓದುಗರ ಕೈ ಸೇರುವುದು. ಇತ್ತೀಚಿನ ದಿನಗಳಲ್ಲಿ ಕೊರಿಯರ್ ಸೌಲಭ್ಯ ಹೆಚ್ಚಾಗಿರುವುದು ನಿಜವೇ ಆದರೂ, ಎಲ್ಲಾ ಕೊರಿಯರ್ ನವರೂ ಭಾರತದ ಎಲ್ಲ ಪ್ರದೇಶಗಳಿಗೆ ಸೇವೆ ನೀಡುತ್ತಾರೆ ಎಂಬುದು ಅಸಾಧ್ಯ. ಹಾಗೆ ಎಲ್ಲ ಪ್ರದೇಶಗಳಿಗೆ ಸೇವೆ ನೀಡಬಲ್ಲ ನಂಬಿಕೆಗೆ ಅರ್ಹವಾದ ಏಕೈಕ ಮಾರ್ಗವೆಂದರೆ ಅದು ಇಂಡಿಯಾ ಪೋಸ್ಟ್ ಮಾತ್ರ.
ಕಾಗದದ ಬೆಲೆ, ಮುದ್ರಣದ ಬೆಲೆ, ತಾಂತ್ರಿಕವರ್ಗದವರ ಗೌರವ ಧನ ಎಲ್ಲವೂ ಹೆಚ್ಚಾಗಿ ಈಗ ಪುಸ್ತಕದ ಬೆಲೆಯನ್ನೂ ಅನಿವಾರ್ಯ ಹೆಚ್ಚಿಸುವ ಸಂದರ್ಭ ಬಂದಿದೆ. ಪ್ರಕಾಶಕರು, ಮಾರಾಟಗಾರರು ಓದುಗರಿಗೆ ರಿಯಾಯಿತಿ ನೀಡಿ ಅದರ ಹೊರೆ ಕೊಂಚ ಕಮ್ಮಿ ಮಾಡುತ್ತಿದ್ದಾರೆ.
ಆದರೆ ಇದೀಗ ಇಂಡಿಯಾ ಪೋಸ್ಟ್ ಕಡಿಮೆ ಖರ್ಚಿನಲ್ಲಿ ಪುಸ್ತಕಗಳನ್ನು ತಲುಪಿಸಲು ಇರುವ ದಾರಿಯನ್ನೂ ಕಿತ್ತುಕೊಂಡಿದೆ. ಸಾಗಣೆ ವೆಚ್ಚ ಕಡಿಮೆ ಇರುವ ಕಾರಣದಿಂದ ನಾವು ಮಾರಾಟಗಾರರು ಅದರ ಹೊರೆಯನ್ನು ನಮ್ಮ ಮೇಲೆಯೇ ಹಾಕಿಕೊಂಡು ಓದುಗರಿಗೆ ಉಚಿತವಾಗಿ ರವಾನೆ ಮಾಡುತ್ತಿದ್ದೆವು. ಈಗ ಅನಿವಾರ್ಯವಾಗಿ ಓದುಗರಿಗೆ ಸಾಗಣೆ ವೆಚ್ಚ ಹಾಕಲೇಬೇಕಾಗಿ ಬಂದಿದೆ. ಇದರಿಂದ ಓದುಗರು ಪುಸ್ತಕಕ್ಕಿಂತ ಸಾಗಣೆ ವೆಚ್ಚ ಹೆಚ್ಚು ಎಂದುಕೊಂಡು ಖರೀದಿ ಸಾಮರ್ಥ್ಯದಿಂದ ದೂರವಾಗುವ ಸಮಸ್ಯೆ ತಂದೊಡ್ಡಿದೆ.
ಇದು ಸಾಮಾಜಿಕ ಜಾಲತಾಣ ಯುಗವಾದ್ದರಿಂದ ಹೊಸ ಪುಸ್ತಕಗಳ ಬಗ್ಗೆ ಮಾಹಿತಿಗಾಗಿ ಹೆಚ್ಚಿನ ಓದುಗರು ಪುಸ್ತಕದ ಅಂಗಡಿಗೆ ಹೋಗಿಯೇ ನೋಡಬೇಕೆಂದೇನಿಲ್ಲ…ವಾಟ್ಸಪ್, ಫೇಸ್ ಬುಕ್, ಇನ್ ಸ್ಟ್ರಾ ಗ್ರಾಂಗಳಲ್ಲಿ ಪ್ರಕಾಶಕರು, ಲೇಖಕರು ಮಾಹಿತಿ ನೀಡುತ್ತಾರೆ. ಪುಸ್ತಕಗಳ ಮಾಹಿತಿ ಪಡೆದ ಹೆಚ್ಚಿನ ಓದುಗರು ಪುಸ್ತಕಗಳನ್ನು ಕೊಳ್ಳಲು ಪುಸ್ತಕ ಮಳಿಗೆ ಹುಡುಕಿಕೊಂಡು ಹೋಗ ಬೇಕಾದ ಅಗತ್ಯವಿಲ್ಲ ಬದಲಿಗೆ ಫೋನ್ ಪೆ / ಗೂಗಲ್ ಪೇ ಗಳ ಮೂಲಕ ಹಣ ಕಳಿಸಿ ಪುಸ್ತಕ ಆರ್ಡರ್ ಮಾಡಿದರೆ ಪ್ರಿಂಟೆಡ್ ಪೋಸ್ಟ್ ಮೂಲಕ ಪುಸ್ತಕ ಕಳಿಸಲು ಅನುಕೂಲವಾಗುತ್ತಿತ್ತು…ಮತ್ತೆ ಹಳ್ಳಿಮೂಲೆಗಳಿಗೂ ಪೋಸ್ಟಲ್ ಸೇವೆ ಇರುವುದರಿಂದ ಪುಸ್ತಕ ಮಾರಾಟಗಾರರು ಇದನ್ನೇ ಅವಲಂಬಿಸಿಕೊಂಡಿದ್ದರು. ಆದರೀಗ ಪ್ರಿಂಟೆಡ್ ಬುಕ್ ಪೋಸ್ಟ್ ಸೇವೆ ರದ್ದು ಪಡಿಸಿರುವುದರಿಂದ ಪುಸ್ತಕ ವ್ಯಾಪಾರಿಗಳಿಗೆ, ಓದುಗರಿಗೆ, ಲೇಖಕರು, ಪ್ರಕಾಶಕರು ಎಲ್ಲರಿಗೂ ತೊಂದರೆ ಆಗಿದೆ.
ಸಂಬಂಧ ಪಟ್ಟವರು ಪುಸ್ತಕ ಮಾರುಕಟ್ಟೆಯ ಇಂತಹ ಹಲವು ಸಮಸ್ಯೆಗಳನ್ನು ಪರಿಗಣಿಸಿ ಪರ್ಯಾಯ ಮಾರ್ಗ ನೀಡಲಿ.
ಕನ್ನಡ ಪುಸ್ತಕೋದ್ಯಮದ ಚಟುವಟಿಕೆಗಳಿಗೆ ಭಾರೀ ಹಿನ್ನಡೆಯಾಗಿದೆ – ಪುಸ್ತಕಗಳನ್ನು ಓದುಗರಿಗೆ ತಲುಪಿಸಲು ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು ಕಂಡುಕೊಂಡ ಒಂದು ಮಹತ್ವದ ಮಾರ್ಗಎಂದರೆ ಪೋಸ್ಟ್ ಮೂಲಕ ಪುಸ್ತಕ ಕಳಿಸುವುದು…ಆದ್ದರಿಂದಲೇ ಬರಿ ಎರಡು ರೂಪಾಯಿಗೆ ಒಪನ್ ಬುಕ್ ಪೋಸ್ಟ್ ಮೂಲಕ ಪುಸ್ತಕ ಕಳಿಸುವ ಅವಕಾಶವನ್ನು ಅಂಚೆ ಇಲಾಖೆ ಕಲ್ಪಿಸಿತ್ತು. ಆನಂತರ ಪ್ರಿಂಟೆಡ್ ಬುಕ್ ಪಾರ್ಸೆಲ್ ಸೇವೆಯು ವ್ಯಾಪಕವಾಗಿ ಪುಸ್ತಕಗಳ ರವಾನೆಗೆ ಬಳಕೆಯಾಗುತಿತ್ತು. ಈಗ ಈ ಸೇವೆಯನ್ನು ಸ್ಥಗಿತಗೊಳಿಸಿರುವುದರಿಂದ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳಿಗೆ ಪುಸ್ತಕ ಓದುಗರಿಗೆ ತಲುಪಿಸಲು ಬೇರೆ ಸರಳ ದಾರಿಗಳಿಲ್ಲ. ಪುಸ್ತಕ ಪ್ರಕಟಣೆಯ ಹಲವು ಸಂಕಷ್ಟದ ಜೊತೆ ಈ ಸಮಸ್ಯೆಯು ಉದ್ಭವಿಸಿದ್ದು ಒಟ್ಟಾರೆ ಇವೆಲ್ಲವುಗಳಿಂದ ಕನ್ನಡ ಪುಸ್ತಕೋದ್ಯಮದ ಚಟುವಟಿಕೆಗಳಿಗೆ ಭಾರೀ ಹಿನ್ನಡೆಯಾಗಿದೆ-ಅಕ್ಷತಾ ಹುಂಚದಕಟ್ಟೆ, ಅಹರ್ನಿಶಿ ಪ್ರಕಾಶನ.