ಊರ ಉಸಾಬರಿಯೆಲ್ಲ ಇಲ್ಲಿ ಮಾತಾಗಿ ಕತೆಯಾಗಿ ಚಂದದ ಬರಹದ ರೂಪವನ್ನ ಪಡೆದುಕೊಂಡ ಕೃತಿ ಊರೆಂಬೋ ಊರಲಿ. ಪತ್ರಕರ್ತೆ ರಶ್ಮಿ ಎಸ್ ಅವರು ಬರೆದಿರುವ ಈ ಪುಸ್ತಕದಲ್ಲಿ ಒಟ್ಟು ನಾಲ್ಕು ಭಾಗಗಳಿವೆ. ಅವರೇ ಹೇಳುವ ಹಾಗೆ “ಊರೆಂಬೋ ಊರು ನಾನು ನೆಲೆಯೂರಿದ ಊರುಗಳಲ್ಲ, ನನ್ನೊಳಗೆ ನೆಲೆಯೂರಿದ ಊರುಗಳವು”, ಹುಟ್ಟಿದ ಊರು ಬೀದರ್ ಆದರೆ, ಕೈ ಹಿಡಿದು ನಡೆಸಿದ ಸಿಂದಗಿ, ಕೈ ಹಿಡಿದು ಕೆಲಸ ಕಲಿಸಿದ ಹುಬ್ಬಳ್ಳಿ ಮತ್ತು ಕೊನೆಯ ಭಾಗವಾಗಿ ಕೈ ಬೀಸಿ ಕರೆದ ಕಾಶಿಯ ಒಂದಷ್ಟು ವಿವರಗಳು ನಮಗೆ ಸಿಗುತ್ತವೆ.
ಸಮೃದ್ಧ ಬಾಲ್ಯದ ಸಿಹಿ ಸವಿ ನೆನಪುಗಳು ಈ ಹೊತ್ತಿಗೂ ಆರ್ದ್ರವಾಗಿ ರಶ್ಮಿ ಅವರ ಎದೆಯಂಗಳದಲ್ಲಿ ಜಿನಗುತ್ತಲೇ ಇದೆ. ಜೊತೆಗೆ ಇಷ್ಟು ವರ್ಷಗಳಲ್ಲಿ ಅವರು ಬಾಳಿನಲ್ಲಿ ಕಂಡುಂಡ ಕೆಲ ಅನುಭವಗಳು, ಕಾರುಣ್ಯ, ಕಾಠಿಣ್ಯದ ಭಾವಗಳು ನಮ್ಮೊಳಗೂ ಹಸಿಯಾಗಿ ಕಣ್ಣಂಚನು ಒದ್ದೆ ಮಾಡುತ್ತದೆ. ಇಡೀ ಪುಸ್ತಕದ ತುಂಬ ಅಕ್ಷರಕ್ಷರಗಳಲೂ ಪದ ಪದಗಳಲೂ, ಪದಗಳ ನಡುವಿನ ಮೌನದಲೂ ನಮಗೆ ಕಾಣುವುದು ಅಪ್ಪಟ ಮಾನವೀಯತೆಯ ಹೃದಯ ತುಂಬಿದ ಪ್ರೀತಿ ಮಾತ್ರ. ಅಂತಹ ಕಡು ಪ್ರೀತಿಯ ಸಂಬಂಧಗಳು ಕೆಲವೊಮ್ಮೆ ಆಳದಲ್ಲಿ ಹುಟ್ಟಿಸುವ ತಲ್ಲಣ, ತಾಕಲಾಟಗಳು, ಅರಳಿಸುವ, ಕೆರಳಿಸುವ ನೂರು ಭಾವಗಳು ಎಲ್ಲವೂ ಓದುಗರ ಎದೆಯೊಳಗೇ ಇಳಿಯೋ ಹಾಗೆ ಬರೆಯುತ್ತಾರೆ. ಅವರು ಕೇಳಿದ ಗಜಲ್‍ಗಳು ಹಾಡುಗಳನ್ನ ಅವರ ಬದುಕಿನ ಸಂಗತಿಗಳಿಗೆ ಹತ್ತಿರವಾಗಿಸಿಕೊಳ್ಳೋದು, ಅವರದನ್ನಾಸಿಕೊಳ್ಳೋದು ಹಾಗೆ ಅವರದಾದ ಆ ಭಾವಗಳನ್ನ ಅಷ್ಟೇ ಆಪ್ತವಾಗಿ ಓದುಗರಿಗೆ ದಾಟಿಸುವುದು ಅವರಿಗೆ ಕರಗತ. ಅವರ ಬರವಣಿಗೆ ಇಷ್ಟ ಆಗೋದು ಈ ಕಾರಣಕ್ಕೆ. ಈ ಭಾವಯಾನದಲ್ಲಿ ಪ್ರತಿಯೊಬ್ಬ ಓದುಗರು, ಸಹ ಪಯಣಿಗರೆನಿಸುವ ಭಾವ ಮೂಡಿಸುವುದಕ್ಕೆ ಅವರ ಲೇಖನಗಳು ತುಂಬ ಆತ್ಮೀಯ ಅನಿಸತ್ತೆ.

ಸೌಹಾರ್ದವೆನ್ನುವುದು ಪದವಾಗಿರದೆ ಬದುಕಿನ ರೀತಿಯಾಗಿತ್ತು ಅನ್ನೋದನ್ನ ಮೊದಲ ಭಾಗದ ಬೀದರ್ ಬದುಕಿನ ಬಗ್ಗೆ ಹೇಳ್ತಾ ಹೋಗ್ತಾರೆ. ಯಶೋದೆಯ ಹಾಗೆ ಸಿಕ್ಕ ಮೊಮ್ಮಾ ಅಂತಹ, ತಾಯಾನಂಥ ಜೀವಗಳು ಪ್ರತಿ ನೆರೆಮನೆಯಲ್ಲಿ ಸಿಕ್ಕಿಬಿಟ್ಟರೆ ಬದುಕೆಷ್ಟು ಸಹನೀಯ ಅಂತಾರೆ ಲೇಖಕಿ. ಊರ ನಂಬಿಕೆಗಳು, ಅದರ ಮೇಲೆ ಕಟ್ಟಿಕೊಳ್ಳುವ ಬದುಕಿನ ಸಂಭ್ರಮ ಹೋಳಿರೆ ಹೋಳಿ ಲೇಖನದಲ್ಲಿ ಕಾಣಬಹುದು. ಇಡೀ ಊರಿಗೆ ಊರೇ ಆ ಸಡಗರದಲ್ಲಿ ಒಂದಾಗಿ ಬಿಡತ್ತೆ. ಜಾತಿ, ಧರ್ಮ, ಅಂತಸ್ತು ಯಾವುದೂ ಅಡ್ಡಿಬರದ ಇಂತಹ ಊರಹಬ್ಬಗಳು ಒಟ್ಟಾಗಿ ಬಾಳುವ ತತ್ವವನ್ನು ಮಾತಿನಲಿ ಹೇಳದೆಯೂ ಕಲಿಸುವ ಪರಿ ಅನನ್ಯ. ಜೊತೆಗೆ ಕವಿರಾಜಮಾರ್ಗಕಾರ ಹೇಳುವ “ಕಸವರವೆಂಬುದು ನೆರೆ ಸೈರಿಸಲಾರ್ಪೊಡೆ ಪರವಿಚಾರಮುಮಂ, ಧರ್ಮಮುಮಂ” ಮಾತನ್ನು ಓದದೆಯೂ ಅಕ್ಷರಶಃ ಪಾಲಿಸುತ್ತಿದ್ದ ದಿನಗಳವು. ತನಗಿಂತ ಬೇರೆಯಾಗಿ ಬದುಕುವ ಧರ್ಮದವರನ್ನು ತಾಳಿಕೊಳ್ಳುವ, ಗೌರವಿಸುವ ಮನೋಭಾವ ನಿಧಾನದಲಿ ಮರೆಯಾಗಿ, ಅಸಹನೆ, ಆಕ್ರೋಶ ತುಂಬಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ತಮ್ಮಿಷ್ಟದ ಹಾಗೆ ಬದುಕನ್ನು ಬದುಕುವುದು ದುರ್ಲಭವಾಗುತ್ತಿರುವ ಈ ಕಾಲದಲ್ಲಿ ಇಂತಹ ಓದು ಒಂದು ಸಮಾಧಾನದ ಭಾವವನ್ನು ನಮ್ಮಲ್ಲಿ ಮೂಡಿಸುತ್ತದೆ. ಜೊತೆಗೆ ಹಬ್ಬದ ಸಮಯದಲ್ಲಿನ ಕೊಡು ಕೊಳುವಿಕೆಗಳು, ಕೂಡು ಆಚರಣೆಗಳು, ಸಂಭ್ರಮವನ್ನು ದುಪ್ಪಟ್ಟಾಗಿಸುವ ಚಂದದ ಗಳಿಗೆಗಳ ಸುಖವನ್ನು ನಾವಿಂದು ಕಳೆದುಕೊಳ್ಳುತ್ತಿದ್ದೇವೆ ಎಂಬ ಆತಂಕವೂ ಕಾಡುತ್ತದೆ. ಆದರೂ ಎಲ್ಲವು ನಮ್ಮದು, ಎಲ್ಲರೂ ನಮ್ಮವರು ಅನಿಸುವಂತೆ ಬಾಳಿದ ಬಾಲ್ಯದ ಬಾಳು ರಶ್ಮಿ ಅವರ ಎದೆಯಲ್ಲಿ ಹಚ್ಚ ಹಸಿರಾಗಿ ಇವತ್ತಿಗೂ ಚಿಗುರೊಡೆಯುತ್ತಲೇ ಇರುವುದನ್ನು ಅವರ ಬರಹದಲ್ಲಿ ಕಾಣಬಹುದು.
ಮುಂದಿನ ಭಾಗದಲ್ಲಿ ಬದುಕಿಗೊಂದಷ್ಟು ಭರವಸೆ ತುಂಬಿದ ಕಲ್ಲು ಸಕ್ಕರೆಯಂಥ ಜೀವಗಳ ಬಗ್ಗೆ ಬರೀತಾರೆ. ಮತ್ತೊಂದೆಡೆ, ಬಾಳ ಹಾದಿಯಲ್ಲಿ ಕಲ್ಲೊಗೆದ ಜೀವಗಳ ಕುರಿತೂ ಪ್ರಸ್ತಾಪಿಸ್ತಾರೆ. ಸಕ್ಕರೆ ಕೊಟ್ಟು ಬಾಳನ್ನ ಸಿಹಿಯಾಗಿಸಿಕೊಳ್ಳಲು ಕಲಿಸಿದ ಗದುಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಅಜ್ಜಾರು, ಅಮ್ಮನ ಅಪ್ಪ ಸಿಂದಗಿ ಅಜ್ಜಾರನ್ನ ಲೇಖಕಿ ತುಂಬು ಪ್ರೀತಿಯಿಂದ, ಖುಷಿಯಿಂದ ನೆನಪಿಸಿಕೊಳ್ತಾರೆ. ಅಜ್ಜನ ಜೊತೆ ಸಂತೆ ಸವಾರಿ, ಕತೆಯಾಗುವ ಬಾಲ್ಯ, ನಾಳೆಗಳ ಚಂದದ ಕನಸುಗಳು, ಉದ್ದುದ್ದ ಓಣಿಯ ಒಗ್ಗಟ್ಟಿನ ಜೀವನ ಎಲ್ಲವೂ ಮಾಸದ ನೆನಪು. ಮಕ್ಕಳಿದ್ದಾಗ ಅಜ್ಜ ಅಜ್ಜಿಯ ಊರು, ಮನೆಗೆ ಹೋಗುವುದೆಂದರೆ ಅದೊಂದು ಸ್ವಚ್ಛಂದ ಬದುಕಿನ ಭಾಗ. ಖುಷಿಯ ತೋಟದಲ್ಲರಳುವ ಸಾವಿರದ ಹೂಗಳ ಸಂತೆ. ಬಾಲ್ಯ ಹುಲುಸಾದಷ್ಟು, ಬದುಕನ್ನ ನೋಡುವ, ಅದನ್ನು ಅನುಭವಿಸುವ ಬಗೆ ಶ್ರೀಮಂತವಾದ ಹಾಗೆ. ಹಾಗೆ ಹೇಳುತ್ತಲೇ ಲಾಡುವಿನ ಮಧ್ಯೆ ಲವಂಗ ಸಿಕ್ಕಾಗ ಮುಖ ಕಿವುಚಿಕೊಳುವಂತೆ, ನಾವು ತೆಗೆದುಕೊಳ್ಳುವ ಅವೆಷ್ಟೋ ನಿರ್ಧಾರಗಳು ನಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಕಹಿ ಉಣಿಸಿ ಹೋಗುವ ಜೀವಗಳ ಕುರಿತೂ ಬರೀತಾರೆ. ಆಟವಾಡುತ್ತಲೇ ಬದುಕನ್ನ ಕಟ್ಟಿಕೊಳ್ಳುವ ಗಟ್ಟಿತನದ ಬಗೆಗಿನ ರಶ್ಮಿ ಅವರ ಮಾತುಗಳು ಕೆಲವೊಮ್ಮೆ ಅವರನ್ನು ಅವರೇ ಸಂತೈಸಿಕೊಳುವಂತೆ ಅನಿಸಿದರೂ, ಓದುಗರನ್ನೂ ಸಮಾಧಾನ ಪಡಿಸುವಂತೆಯೂ ಕಾಣುತ್ತವೆ.

ಲೇಖಕಿ ರಶ್ಮಿ ಅವರು ಒಂದಷ್ಟು ವರ್ಷಗಳ ಕಾಲ ಹುಬ್ಬಳ್ಳಿಯಲ್ಲಿ ಪ್ರಜಾವಾಣಿಯ ಪತ್ರಿಕೆಯ ಸಂಪಾದನೆಯ ಹೊಣೆ ಹೊತ್ತವರು. ಹಾಗಾಗಿ ಹುಬ್ಬಳ್ಳಿ ಕೆಲಸ ಕಲಿಸಿದ, ಬಾಳು ಬೆಳಸಿದ ತಾಣವೂ ಹೌದು. ಓದ್ತಾ ಹೋದ್ರೆ, ಹುಬ್ಬಳ್ಳಿಯ ಹೋಳಿಗಿ, ಬದುಕ ವಿಸ್ತರಿಸಿದ ದಾಂಪತ್ಯದ ಮುಖಗಳು, ಗಣೇಶನನ್ನ ಕೂರಿಸುವ ಒಂದು ಕಾಲದ ಹುಬ್ಬಳ್ಳಿಯ ವೈಭವ ಎಲ್ಲವೂ ಎದುರಾಗುತ್ತವೆ. ನಡುವಲ್ಲಿ ಲೇಖಕಿ ಉತ್ತರ ಕರ್ನಾಟಕದಲ್ಲಿನ ಅಳಿವೆಯಂಥ ಪ್ರೀತಿ, ಅಳಿಯದಂಥ ಪ್ರೀತಿ ಬಗ್ಗೆನೂ ಬರೀತಾರೆ. ಬದುಕಿನ ಸಣ್ಣ ಪುಟ್ಟ ಸಂಗತಿಯೊಳಗೆ ದೊಡ್ಡ ತತ್ವ ಅಡಗಿರುವುದನ್ನ ಅಷ್ಟೇ ಸರಳವಾಗಿ, ಹಗೂರಾಗಿ ನಮ್ಮ ಮುಂದೆ ತೆರೆದಿಡ್ತಾರೆ.
ಕಣಕಣದೊಳು, ಅಣುವಾಗಿ ಕಾಡುವ ಕಾಶಿ ಕುರಿತು ಲೇಖಕಿಗೆ ಬಹಳಷ್ಟು ಬೆರಗು. ಅವರು ಹೇಳ್ತಾರೆ, ಎಲ್ಲರೂ ನಿರ್ಮೋಹಿಗಳಾಗೋಕೆ ಕಾಶಿಗೆ ಹೋದ್ರೆ, ನಾನು ಜೀವನವನ್ನ ಮತ್ತೆ ಪ್ರೀತಿಸಬೇಕಿತ್ತು. ಅದಕ್ಕೊಂದು ಸೆಲೆ ಬೇಕಿತ್ತು. ಅದನ್ನ ಹುಡುಕೊಂಡು ಹೊರಟೆ ಅಂತಾ. ಮಣ್ಣಿನ ಕುಡಿಕೆಯೊಳಗಿನ ಕಾಶಿ ಚಾ, ರಸಗಂಗೆ ಹರಿಸುವ ಬನಾರಸಿ ಪಾನು, ಕುಡಿಯಬೇಕೆಂದುಕೊಂಡರೂ ಕುಡಿಯಲಾಗದ ಭಾಂಗ್ ಲಸ್ಸಿ, ಬನಾರಸಿಯ ಟಮಾಟರ್ ಚಾಟ್, ಲಾಂಗ್ಲತಿಯಾ, ಇದೆಲ್ಲದರ ಜೊತೆಗೆ ಮರೆಯದೇ ಬನಾರಸಿಯ ಸೀರೆಯ ಬಗ್ಗೆ ಹೇಳುತ್ತಲೇ ಕಾಶಿಯ ಒಂದು ಬದುಕನ್ನ ತೆರೆದಿಡ್ತಾರೆ. ಹಾಗೆ ತೆರೆದಿಡುತ್ತಲೇ ಮೈ ಮನಗಳ ಸುಳಿಯಲ್ಲಿ ಘಾಟ್‍ಗಳ ಸತ್ಯದರ್ಶನ ಮಾಡಿಸ್ತಾರೆ. ಬದುಕಿನ ಇನ್ನೊಂದೇ ಮುಖ ಅದು. ಮುಖಾಮುಖಿಯಾಗುವುದಷ್ಟು ಸುಲಭವಲ್ಲ. ನಮ್ಮ ಅಹಂಕಾರವನ್ನೆಲ್ಲ ಸುಟ್ಟು ಭಸ್ಮ ಮಾಡುವ ಘಾಟ್‍ಗಳ ನಡುವೆಯೂ, ಬದುಕೆಷ್ಟು ನಶ್ವರ ಎಂಬನಿಸಿಕೆಯ ನಡುವೆಯೂ, ಈ ಲೋಕದಲ್ಲಿ ಶಾಶ್ವತವಾಗಿ ಇರುತ್ತೇವೇನೋ ಎನ್ನುವಂತೆ ಮುಗಿಬಿದ್ದು ಖರೀದಿಸುವ ಮನೋಭಾವ. ಈ ವೈರುಧ್ಯದ ನಡುವೆಯ ನಾಲ್ಕು ದಿನದ ಬಾಳು. ಅಂತಹ ಬಾಳಿನೊಳಗೊಂದು ಉಸ್ತಾದ್ ಬಿಸ್ಮಿಲ್ಲಾಖಾನರಂತಹ ಹಿರಿಯ ಜೀವ. ಬದುಕನ್ನ ಸಹ್ಯಗೊಳಿಸುವ ಆ ಹಿರಿಯ ಜೀವದ ಶಹನಾಯಿ ನಾದ. ಒಟ್ಟಿನಲ್ಲಿ ಕಾಶಿಯೆಂದರೆ ಒಳಹೊರಗಿನ ಪಯಣ ಎನ್ನುತ್ತಾರೆ ರಶ್ಮಿ.
ಊರೆಂಬೋ ಊರಲಿ ಅಲೆಯುವ ತನು ಮನದ ಭಾವ ಲಹರಿಗಳು ಊರ ಉಸಾಬರಿಯ ನೆಪದಲ್ಲಿ ಪುಸ್ತಕ ರೂಪದಲ್ಲಿ ಓದುಗರ ಮುಂದೆ ಬಂದು ನಿಂತಿದೆ. ನಿಮ್ಮೊಳಗದನು ಬರಮಾಡಿಕೊಳ್ಳಿ. ನೇವರಿಸಿ. ಆಂತರ್ಯ ಒಂದಷ್ಟು ಹಸಿಯಾಗಲಿ. ನಿಮಗೆ ಬೇಕಾದ ಗಿಡವೊಂದು ಅಲ್ಲಿ ಚಿಗುರೊಡೆಯಲಿ.
ಸಂಧ್ಯಾ ಮಂಜುನಾಥ್
ಇದನ್ನೂ ಓದಿ – ಪುಸ್ತಕ ವಿಮರ್ಶೆ | ಕಾಲ ಕಟ್ಟಿದ ಕನಸು-ಒಂದು ನೋಟ


