ನೈತಿಕ ಪೊಲೀಸ್ ಗಿರಿ ವಿರುದ್ಧ ಯಾವಾಗಲೂ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನಲ್ಲಿ ನಡೆದಿರುವ ನೈತಿಕ ಪೊಲಿಸ್ ಗಿರಿಯ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ. ಈ ಪ್ರಕರಣದಲ್ಲಿ ಸಿಎಂ ತಮ್ಮ ನಿಲುವು ಪ್ರಕಟಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಪ ಸಂಖ್ಯಾತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆಗಿರುವ ಆರೋಪ ಕೇಳಿ ಬಂದಿದ್ದು, ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಿ, ಪೊಲೀಸರು ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು.
ವಿಭಿನ್ನ ಕೋಮಿನವರು ಒಂದು ರೂಮಿನಲ್ಲಿ ಇದ್ದಾಗ ಅವರ ಮೇಲೆ ಹಲ್ಲೆಯಾಗಿದೆ. ಗ್ಯಾಂಗ್ ರೇಪ್ ಆಗಿದೆ ಅಂತ ಆರೋಪ ಇದೆ. ಈ ಬಗ್ಗೆ ಹಾವೇರಿ ಪೊಲಿಸ್ ವರಿಷ್ಠರ ಜೊತೆ ಮಾತನಾಡಿದ್ದೇನೆ. ಅವರು ಅದನ್ನು ಅಲ್ಲಗಳೆಯುತ್ತಿದ್ದಾರೆ. ಆದರೆ, ತಕ್ಷಣ ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದೇನೆ. ನೈತಿಕ ಪೊಲಿಸ್ ಗಿರಿ ಮಾಡಿದರೆ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದರು. ಈಗ ಅಲ್ಪ ಸಂಖ್ಯಾತ ಮಹಿಳೆಯ ಮೇಲೆಯೇ ದೌರ್ಜನ್ಯ ಆಗಿದೆ. ಅವರಿಗೆ ರಕ್ಷಣೆ ಕೊಡಲು ಆಗುತ್ತಿಲ್ಲ. ಈ ಪ್ರಕರಣ ದಲ್ಲಿ ಎಲ್ಲ ಆಯಾಮದಲ್ಲೂ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.